ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಶಿರಸಿಯಲ್ಲಿ ರವಿವಾರ ಉ.ಕ.ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು 30 ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ,ಕಳೆದ 29 ವರ್ಷಗಳ ಕಾಲ ಉ.ಕ.ಜಿಲ್ಲೆಯಲ್ಲಿ ಅರಣ್ಯಭೂಮಿ ಹೋರಾಟ ನಡೆಸುವ ಮೂಲಕ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಿರಂತರ ಹೋರಾಟ ನಡೆಸಿರುವುದು ಶ್ಲಾಘನೀಯವಾಗಿದೆ.ಆದರೆ ಇಚ್ಚಾಶಕ್ತಿಯ ಕೊರತೆಯಿಂದ ಮಂಜೂರು ಪ್ರಕ್ರಿಯೆ ವ್ಯತ್ಯಯವುಂಟಾಗಿದೆ.ಉಳುವವನೆ ಹೊಲದ ಒಡೆಯ ಕಾನೂನು ಜಾರಿಗೆ ತರುವಾಗಲೂ ಹೋರಾಟ ನಡೆದಿತ್ತು ಅದೇ ರೀತಿ ಅರಣ್ಯಭೂಮಿ ಪಡೆಯಲು ಹೋರಾಟ ನಡೆಸಬೇಕಾಗಿದೆ.ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಹೋರಾಟ ಮುಂದುವರಿಯಬೇಕು ಎಂದು ಹೇಳಿದರು.
ಅರಣ್ಯಭೂಮಿ ಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಈ ಕೆಳಗಿನ ನಿರ್ಣಯವನ್ನು ಅಂಗೀಕರಿಸಲಾಯಿತು
1.ಸರಕಾರದಿಂದ ಅರಣ್ಯವಾಸಿಗಳಿಗೆ ಅನ್ಯಾಯವಾದರೆ ಸಾಂಘಿಕ ಹಾಗೂ ಕಾನೂನಾತ್ಮಕ ಪ್ರಬಲ ಹೋರಾಟದ ಮೂಲಕ ಹಕ್ಕಿಗೆ ಪ್ರಯತ್ನಿಸುವುದು.
2.ಅರಣ್ಯವಾಸಿಗಳ ಸಾಮಾಜಿಕ ಜಾಗೃತಿ ಉಂಟುಮಾಡುವಲ್ಲಿ ಗ್ರಾಮೀಣ ಮಟ್ಟದಲ್ಲಿ ಸಂಘಟಿಸುವುದು.
3.ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಅರಣ್ಯವಾಸಿಗಳಿಗೆ ದೌರ್ಜನ್ಯ ನಡೆದಾಗ ತೀವ್ರಪ್ರತಿರೋಧ ಒಡ್ಡುವುದು.
4.ಈಗಾಗಲೇ ಉಚ್ಚ-ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಬಲ ವಾದವನ್ನು ಮಂಡಿಸುವುದು.
5.ಪ್ರತಿ ಗ್ರಾಪಂ ಮಟ್ಟದಲ್ಲಿ ಅರಣ್ಯವಾಸಿಗಳ ಸಂಘಟನೆ ಮಾಡುವ ಮೂಲಕ ಅರಣ್ಯಹಕ್ಕು ಕಾಯಿದೆ ಮಂಜೂರಿ ಪ್ರಕ್ರಿಯೆ ಶೀಘ್ರವಾಗುವಂತೆ ಸರಕಾರದ ಮೇಲೆ ಒತ್ತಡ ತರುವುದು.
6.ಹಿರಿಯ ಸಮಾಜವಾದಿ ಚಿಂತಕ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಅರಣ್ಯ ಹಕ್ಕು ಹೋರಾಟವನ್ನು ನಡೆಸುವುದು.