ಶಿರಸಿ : ಇತಿಹಾಸ ಪ್ರಸಿದ್ಧ ಕರ್ನಾಟಕದ ಅತಿದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಜಾತ್ರೆಯ ವಿಧಿ ವಿಧಾನಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಜಾತ್ರೆಯು ಮಾರ್ಚ್ 3 ರಿಂದ 11 ರವರೆಗೆ ನಡೆಯಲಿದೆ.
ಶಿರಸಿ ಮಾರಿಕಾಂಬಾ ಜಾತ್ರೆಯು ರಾಜ್ಯದಲ್ಲೇ ಅತಿದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊರರಾಜ್ಯಗಳೂ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನಕ್ಕೆ ಪಾತ್ರರಾಗುತ್ತಾರೆ. ಮಾರ್ಚ್ 3 ರಂದು ರಥದ ಕಳಶ ಪ್ರತಿಷ್ಠಾಪನೆಯಾಗಲಿದ್ದು, ರಾತ್ರಿ ಶ್ರೀ ಮಾರಿಕಾಂಬಾ ದೇವಿಯ ಮದುವೆಯ ವಿಧಿ ವಿಧಾನಗಳು ಜರುಗಲಿವೆ. ಮಾರ್ಚ್ 4 ರಂದು ದೇವಿಯ ರಥೋತ್ಸವ ಜರುಗಲಿದ್ದು, ಶೋಭಾಯಾತ್ರೆ ನಡೆಯಲಿದೆ. ಮಾರ್ಚ್ 5 ರಿಂದ ಸರ್ವಸೇವೆಗಳು ಪ್ರಾರಂಭವಾಗಲಿದ್ದು, ಜಾತ್ರೆ ಕಳೆಗಟ್ಟಲಿದೆ. ಮಾರ್ಚ್ 11 ರಂದು ಬೆಳಿಗ್ಗೆ ಸೇವೆಗಳು ಮುಕ್ತಾಯವಾಗಲಿದ್ದು, ಸಂಜೆ ದೇವಿಯು ಗದ್ದುಗೆಯಿಂದ ನಿರ್ಗಮಿಸುವುದರೊಂದಿಗೆ ಜಾತ್ರಾ ಪ್ರಕ್ರಿಯೆ ಮುಕ್ತಾಯವಾಗಲಿದೆ. ಈಗಾಗಲೇ ಮನರಂಜನಾ ಆಟಗಳು, ನಾಟಕಗಳು, ಯಕ್ಷಗಾನ ಸೇರಿದಂತೆ ಎಲ್ಲಾ ಬಗೆಯ ಮನೋರಂಜನೆಗಳು ಠಿಕಾಣಿ ಹೂಡಿದ್ದು ಜಾತ್ರೆಯ ಸಂಭ್ರಮಕ್ಕೆ ಇನ್ನಷ್ಟು ಮೆರುಗು ಕೊಡಲಿವೆ. ಸುರಕ್ಷತಾ ದೃಷ್ಟಿಯಿಂದ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.