ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶೃಂಗೇರಿ ಶಂಕರಮಠದಲ್ಲಿ 4 ದಿನಗಳ ರಾಜ್ಯ ಹವ್ಯಾಸಿ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೃದಂಗ ಬಾರಿಸುವುದರ ಮೂಲಕ ನಾಟಕೋತ್ಸವ ಉದ್ಘಾಟಿಸಿದ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಆಶಿಸರ ಮಾತನಾಡಿ, ಪ್ರಶಾಂತವಾದ ವಾತಾವರಣದಲ್ಲಿ ಈ ಒಂದು ನಾಟಕೋತ್ಸವಕ್ಕೆ ಚಾಲನೆ ನೀಡಿದ್ದು ಸಂತಸ ತಂದಿದೆ. ಪರಿಸರಕ್ಕೆ ಪೂರಕವಾದ ನಾಟಕದ ಅವಶ್ಯಕತೆ ಇಂದಿನ ದಿನಗಳಲ್ಲಿ ಇದೆ. ಅಪರೂಪದ ಪ್ರಯೋಗಗಳು ಮಲೆನಾಡಿನಲ್ಲಿ ನಡೆಯುತ್ತಿರುವುದು ಒಂದು ಖುಷಿ. ನಾಟಕೋತ್ಸವಕ್ಕೆ ಶುಭ ಅಶಯಗಳನ್ನ ಕೋರುತ್ತೇನೆ. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗಿ ಜಿಲ್ಲೆಯ ವೈವಿಧ್ಯಗಳನ್ನ ಉಳಿಸುವಲ್ಲಿ ಶ್ರಮಿಸುತ್ತೇನೆ ಎಂದರು.
ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ ಆರ್ ಮಾತನಾಡಿ, ಜಿಲ್ಲೆಯಲ್ಲಿ ನಾಟಕ ರಂಗಮಂದಿರಗಳು ಇಲ್ಲದಿರೋದು ಹೌದು, ಆದ್ರೂ ಕೂಡ ಜಿಲ್ಲೆಯ ಸಿದ್ದಾಪುರ ಪ್ರಥಮ ನಾಟಕೋತ್ಸವ ನಡೆಸುವ ಜವಾಬ್ದಾರಿ ತೆಗೆದುಕೊಂಡಿರೋದು ಸಂತಸ. ಕಲೆಯಲ್ಲೇ ಜೀವಿಸಿಕೊಂಡು ಬಂದ ಜಿಲ್ಲೆ ಉತ್ತರ ಕನ್ನಡ. ಹವ್ಯಾಸಿ ನಾಟಕಗಳು ಅಂದ್ರೆ ಪ್ರಬುದ್ಧ ಹಾಗೂ ಅತ್ಯಂತ ಸೂಕ್ಷ್ಮ ಪ್ರಭಾವವನ್ನು ಬೀರಿದ ನಾಟಕಗಳು. ಸಾಂಪ್ರದಾಯಿಕ ನಾಟಕಗಳಲ್ಲಿ ನಟ, ನಟಿಗೆ ಮಾತ್ರ ಪ್ರಾಮುಖ್ಯತೆ ಇದ್ರೆ, ನಮ್ಮ ಹವ್ಯಾಸಿ ನಾಟಕಗಳಲ್ಲಿ ಎಲ್ಲಾ ಕಲಾವಿದರೂ ಹಾಗೂ ತಂತ್ರಜ್ಞರೂ ಕೂಡ ಗುರುತಿಸಲ್ಪಡುತ್ತಾರೆ. ಇದೇ ಹವ್ಯಾಸಿ ನಾಟಕೋತ್ಸವದ ವಿಶೇಷತೆ ಅಂದರು.
ಕಾರ್ಯಕ್ರಮದಲ್ಲಿ ರಾಜ್ಯ ನಾಟಕ ಅಕಾಡೆಮಿ ಸದಸ್ಯರಾದ ಯಶವಂತ ಸರದೇಶಪಾಂಡೆ, ಜೋಸೆಫ್, ಕೆ.ಆರ್ ಪ್ರಕಾಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.