ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ಪದ್ಧತಿ ಜಾರಿಯಲ್ಲಿದ್ದು, ಅದನ್ನು ಕಟ್ಟುನಿಟ್ಟಾ ನಿಷೇಧಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣಿ ಮಂಡಳಿ ಆಗ್ರಹಿಸಿದೆ.
ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಹೈಕೋರ್ಟ ಪ್ರಾಣಿ ಬಲಿಯನ್ನು ನಿಷೇಧಿಸಿ ಆದೇಶ ನೀಡಿದೆ. ಆ ಕಾರಣ ಮಾರ್ಚ್ 10 ರಿಂದ ನಡೆಯಲಿರುವ ಕಾತೂರಿನ ದೇವಿ ಜಾತ್ರೆಯಲ್ಲಿ ಕೋಣ ಸೇರಿದಂತೆ ಯಾವುದೇ ಪ್ರಾಣಿ ಬಲಿಯು ನಡೆಯದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾತೂರಿನ ಮಾರಿಕಾಂಬಾ ದೇವಿಯ ಜಾತ್ರಾ ಸಂದರ್ಭದಲ್ಲಿ ದೇವಾಲಯದ ಸುತ್ತ ಮುತ್ತ ಆವರಣ, ಮುಂಭಾಗ ಮತ್ತು ಜಾತ್ರಾ ಪರಿಸರದಲ್ಲಿ ಪ್ರಾಣಿ ಬಲಿಯಾಗುವುದನ್ನು ಜಿಲ್ಲಾಡಳಿತ ತಡೆಗಟ್ಟುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ದೇವಾಲಯ ಮತ್ತು ಜಾತ್ರಾ ಪರಿಸರಕ್ಕೆ ಯಾವುದೇ ಪ್ರಾಣಿಗಳನ್ನು ಮತ್ತು ಆಯುಧಗಳನ್ನು ತೆಗೆದುಕೊಂಡು ಹೋಗದಂತೆ ಬಿಗಿ ಬಂದೋಬಸ್ತ್ ಮಾಡಬೇಕು ಮತ್ತು ಇಡೀ ರಾತ್ರಿ ವಿದ್ಯುತ್ ದೀಪ ಆರದಂತೆ ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಪ್ರಾಣಿ ಬಲಿಯ ಕುರಿತು ಜನರಲ್ಲಿ ಜಾಗೃತಿಯ ಅವಶ್ಯಕತೆಯಿದ್ದು, ಪ್ರಾಣಿ ಬಲಿ ತ್ಯಜಿಸಿ, ಅಹಿಂಸಾತ್ಮಕ ಪೂಜೆ ಸಲ್ಲಿಸಬೇಕಾಗಿದೆ. ದೇವಾಲಯಗಳು ವಧಾಲಯ ಆಗಬಾರದು ಅದು ದಿವ್ಯಾಲಯ ಆಗಬೇಕು ಎಂದರು. ಜನರಲ್ಲಿ ಪ್ರಾಣಿ ಬಲಿ ಮೌಢ್ಯ ನಿಷೇಧದ ಕುರಿತು ಸರ್ಕಾರ ಮಾಡಬೇಕು. ಸಂವಿಧಾನ ನಂಬುವ ಎಲ್ಲರೂ ಪ್ರಾಣಿ ಬಲಿ ಕೈಬಿಡಬೇಕು ಎಂದು ಆಗ್ರಹಿಸಿದರು.