ಪಾಯಸ
-;1;-
#####
ಲೌಡ್ ಸ್ಪೀಕರ್‍ನಿಂದ “ಮಿನ ಮಿನ ಮೀನಾಕ್ಷೀ……. ಘಮ ಘಮ ಕಾಮಾಕ್ಷಿ” ಹಾಡು ಕಿವಿಗೆ ಬಿದ್ದಕೂಡಲೆ ಸಚಿನ್‍ಗೆ ಎಚ್ಚರವಾಯಿತು. ಒಂದು ಕ್ಷಣ ಎಲ್ಲಿಂದ ಹಾಡು ಬರುತ್ತಿದೆ ಎಂದು ತಿಳಿಯಲಿಲ್ಲ. ನಂತರ ತಿಳಿಯಿತು ಇದು ದೊಡ್ಡ ಬೀದಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಿಂದ ಬರುತ್ತಿದೆ ಎಂದು, ಸಚಿನ್ ಛಂಗನೆ ಹಾಸಿಗೆಯಿಂದ ಎದ್ದ ಹೊದೆದಿದ್ದ ಗೋಣಿಪಾಟಿನ ಚಾದರವನ್ನು ಸರಿಸಿ ಒಂದೇ ಉಸುರಿಗೆ ಹೊರ ಬಂದ. ಆಗಲೇ ಬೀದಿಯಲ್ಲಿ ಜನರ ಓಡಾಟ ಪ್ರಾರಂಭವಾಗಿತ್ತು. ಅವನ ಅಪ್ಪ ತಿಪ್ಪೇಶಿ ರಾತ್ರಿ ಸೇದಿ ಬಿಸಾಡಿದ್ದ ಮೋಟು ಬೀಡಿಯನ್ನು ಅಂಟಿಸಿ ಬುಸು ಬುಸುನೆ ಹೊಗೆ ಬಿಡುತ್ತಿದ್ದರೆ ಅವ್ವ ಹೊನ್ನಿ ತಲೆಯ ಮೇಲೊಂದು,ಸೊಂಟದ ಮೇಲೊಂದು ಬಿಂದಿಗೆಯನ್ನಿಟ್ಟು ರಸ್ತೆಯಿಂದ ಬರುತ್ತಿದ್ದಳು.
“ಎಲ್ಲಿಗೆ ಹೊಂಟೆಯಲ್ಲೋ ಮಗಾ” ನಸುಕಿನಲ್ಲೇ ಎದ್ದು ಮೋರಿಗೆ ಪಿಚಕಾರಿಯಂತೆ ಉಚ್ಚೆ ಹಾರಿಸುತ್ತಿರುವ ಮಗನನ್ನು ಕೇಳಿದಳು.
“ಅವ್ವಾ ಮೈಕ್ ನಿಂದ ಹಾಡಬರ್ತದಲ್ಲ ಅದು ದೇವಸ್ಥಾನದಿಂದಲ್ವಾ” “ಹೌದು ಮಗಾ ಇವತ್ತು ಸುಬ್ಬರಾಯಪ್ಪನ ಹಬ್ಬ(ಚಂಪಾಷಷ್ಠಿ) ಜಾತ್ರೆ ನಡೀತದೆ” ಬಿಂದಿಗೆಯನ್ನು ಕೆಳಗಿಳಿಸುತ್ತ ಹೇಳಿದಳು. ತಿಪ್ಪೇಶಿ ತನಗೂ ಇದಕ್ಕೂ ಸಂಭಂಧ ಇಲ್ಲವೆನ್ನುವಂತೆ ಮೋಟು ಬೀಡಿಯಿಂದ ಹೊಗೆ ಬಿಡುತ್ತಿದ್ದ.
” ಅಂದರೆ ಇವತ್ತು ಭರ್ಜರಿ ಊಟ ಸಿಕ್ತದಲ್ಲ” ಮಗನ ಮಾತಿಗೆ ತಾಯಿಯ ಕರಳು ಚುರಕ್ ಎಂದಿತು. ಬಡತನದಿಂದಾಗಿ ಇದ್ದೊಭ್ಬ ಮಗನಿಗೆ ಎರಡು ಹೊತ್ತು ಹೊಟ್ಟೆತುಂಬಾ ಊಟಹಾಕಲಾಗದ್ದಕ್ಕೆ ನೊಂದುಕೊಂಡಳು. “ಹೌದು ಮಗಾ…..” ಎಂದು ಹೇಳಿ ತಿರುಗುವಷ್ಟರಲ್ಲಿ ಸಚಿನ್ ಮಾಯವಾಗಿದ್ದ ಅಕ್ಕ-ಪಕ್ಕದ ಹುಡುಗರ ದಂಡು ದೇವಸ್ಥಾನದತ್ತ ದೌಡಾಯಿಸಿತ್ತು.
************
ಸಚಿನ್ ಹತ್ತು ವರ್ಷದ ಬಾಲಕ. ಪಟ್ಟಣದ ಒಂದು ತುದಿಯಲ್ಲಿರುವ ಕೊಳಗೇರಿಯಲ್ಲಿ ಅವನ ವಾಸ. ಅಪ್ಪ ತಿಪ್ಪೇಶಿ ಒಳ್ಳೆಯ ಕೆಲಸಗಾರ ಆದರೆ ಸೋಮಾರಿ ಮತ್ತು ಕುಡುಕ.ವಾರದಲ್ಲಿ ಎರಡು-ಮೂರು ದಿನ ಕತ್ತೆಯಂತೆ ದುಡಿದು ಬಂದ ಹಣದಲ್ಲಿ ಉಳಿದ ದಿನ ಕುಡಿದು ಕಾಲಕಳೆಯುತ್ತಿದ್ದ. ಅವ್ವ ಹೊನ್ನಿ ಕೂಲಿಕೆಲಸದ ಜೊತೆಗೆ ನಾಲ್ಕು ಮನೆಯ ಕಸ-ಮುಸುರೆ ಮಾಡುತ್ತಿದ್ದುದರಿಂದ ಮೂರು ಜನರ ಹೊಟ್ಟೆ ತುಂಬುತ್ತಿತ್ತು.ಕೊಳಗೇರಿಯ ಕೆಲವರನ್ನು ಹೋಲಿಸಿದರೆ ತಿಪ್ಪೇಶಿ ಒಳ್ಳಯವನೆ.ಕುಡಿಯಲಿ,ಕುಡಿಯದಿರಲಿ ಅವನು ಹೆಚ್ಚಿಗೆ ಮಾತನಾಡುವುದಿಲ್ಲ. ಹೊನ್ನಿ ಗಲಾಟೆ ಮಾಡಿದರೂ ಅವನು ಉತ್ತರಿಸುವುದಿಲ್ಲ.
ಐ.ಪಿ.ಎಲ್. ಬಿ.ಪಿ.ಎಲ್.ನಂತಹ ಕ್ರಿಕೇಟ್‍ನ ಪ್ರಭಾವದಿಂದ ಹಿಂದಿನ ಬೀರ,ಮಾರ,ಹೆಸರುಗಳು ಮಾಯವಾಗಿ,ಸಚಿನ್,ರಾಹುಲ್ ಮುಂತಾದ ಹೆಸರುಗಳು ಹೆಚ್ಚು ಚಾಲ್ತಿಯಲ್ಲಿ ಬಂದಿದ್ದು, ಹೊನ್ನಿ ತನ್ನ ಮಗನಿಗೆ ಸಚಿನ್ ಎಂದು ಹೆಸರಿಟ್ಟಿದ್ದಳು. ಹೆಸರಿಗೆ ತಕ್ಕಂತೆ ಆಟದಲ್ಲಿ ಮುಂದಿದ್ದ. ಸಚಿನ್ ಕೊಳಗೇರಿಯ ಮಧ್ಯದಲ್ಲಿರುವ ಶಾಲೆಗೆ ಹೋಗುವುದರಲ್ಲಿ ಹಿಂದಿದ್ದ.ಇದ್ದೊಬ್ಬ ಮಾಸ್ತರ್ ಮಕ್ಕಳಿಗೆ ಪಾಠ ಹೇಳುವುದನ್ನು ಬಿಟ್ಟು,ಶಾಲೆಗೆ ಬರದ ಮಕ್ಕಳನ್ನು ಕರೆತರುವುದರಲ್ಲೇ ಕಾಲಕಳೆಯುತ್ತಿದ್ದರು.
ಪಟ್ಟಣದ ತುದಿಯಲ್ಲಿ ಕೊಳಗೇರಿ ಪ್ರಾರಂಭವಾಗುವ ಸ್ಥಳದಲ್ಲಿ ಒಂದು ಸುಬ್ರಹ್ಮಣ್ಯ ದೇವಸ್ಥಾನವಿದೆ.ಪಟ್ಟಣದವರಷ್ಟೆ ಅಲ್ಲ ಪಟ್ಟಣಕ್ಕೆ ಹೊಂದಿಕೊಂಡಿರುವ ಹಳ್ಳಿಯ ಜನರು ಈ ದೇವಾಲಯಕ್ಕೆ ಬರುತ್ತಾರೆ.ನಾಗರಹಾವನ್ನು ಹೊಡೆದವರು,ಹುತ್ತ ಅಗೆದವರು,ಹಾವಿನ ತೊಂದರೆಗೆ ಒಳಗಾದವರು, ಬೇರೆ ಬೇರೆ ಖಾಯಿಲೆಗೆ ಒಳಗಾದವರು,ಜ್ಯೋತೀಷಿಯ ಸಲಹೆ ಮೇರೆಗೋ ಅಥವಾ ಭಯದಿಂದಲೋ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ವರ್ಷಕ್ಕೊಮ್ಮೆ ಬರುವ ಚಂಪಾಷಷ್ಠಿಯಂದುವಿಶೇಷ ಪೂಜೆ,ಪುನಸ್ಕಾರ ನಡೆಯುತ್ತದೆ ಮುಖ್ಯವಾಗಿ ಅನ್ನ ಸಂತರ್ಪಣೆ ಇರುತ್ತದೆ ಮಧ್ಯಾಹ್ನ ಒಂದು ಗಂಟೆಗೆ ಪ್ರಾರಂಭವಾಗುವ ಅನ್ನಸಂತರ್ಪಣೆ ಸಂಜೆ 6-7ಗಂಟೆಯವರೆಗೂ ನಡೆಯುತ್ತದೆ .
ಕೊಳಗೇರಿಯವರಿಗೆ ಆ ದಿನ ಹಬ್ಬದ ಭೋಜನ. ಸಂಜೆ ಐದು ಗಂಟೆಯಾಗುತ್ತಿದ್ದಂತೆ ಮನೆಯಿಂದ ಪಾತ್ರೆ-ಪಗಡೆ ಸಮೇತ ಚಪ್ಪರದ ಒಂದು ಮೂಲೆಯಲ್ಲಿ ಜಮಾಯಿಸುತ್ತಾರೆ.ಅಡುಗೆಯವರು ಅಳಿದುಳಿದ ಅನ್ನ,ಸಾರು,ಪಾಯಸ ಎಲ್ಲವನ್ನು ತಂದು ಸುರಿಯುತ್ತಾರೆ.ಇವರಿಗೆ ಪಂಕ್ತಿ ಭೋಜನವಿಲ್ಲ. ಅದಕ್ಕೆ ಇವರು ತಲೆಕೆಡಿಸಿಕೊಳ್ಳುವುದೂ ಇಲ್ಲ. ಗಂಜಿ,ಮುದ್ದೆ,ರೊಟ್ಟಿ,ಮೀನು ಇವನ್ನೆ ಉಣ್ಣುತ್ತಿದ್ದವರು ಈ ಒಂದು ದಿನ ಪಾಯಸ,ಅನ್ನ,ಸಾಂಬಾರು ಸಿಗುತ್ತಿದ್ದರಿಂದ ಈ ಊಟಕ್ಕೆ ಮುಗಿ ಬೀಳುತ್ತಿದ್ದರು.
***********
2
####
ಸಚಿನ್ ತನ್ನ ಸಹ ಹುಡುಗರ ಜೊತೆಗೆ ದೇವಸ್ಥಾನದ ಹತ್ತಿರ ಬಂದಾಗ ಅಲ್ಲಿ ಕೇಸರಿ ಲುಂಗಿಯನ್ನುಟ್ಟು ಹಳದಿ ಶಾಲು ಹೊದೆದಿದ್ದ ಒಂದಿಷ್ಟು ಮಧ್ಯವಯಸ್ಕರು ಇವರನ್ನು ನೋಡಿ ಏನೋ ಅಪರಾಧವಾಗಿದೆ ಎಂಬಂತೆ “ಏಯ್ ಎಲ್ಲಿಗೆ ಹೋಗ್ತಿರೋ” ಗದರಿಸಿದರು.
“ಸ್ವಾಮಿ ಊಟ ಎಷ್ಟು ಗಂಟೆಗೆ ಶುರುವಾಗ್ತದೆ” ಗುಂಪಿನ ಒಬ್ಬ ಹುಡುಗ ಕೇಳಿದ.
ಗಂಟೆ ಎಂಟಾದರೂ ತಿಂಡಿನೇ ಇನ್ನೂ ಕೊಟ್ಟಿಲ್ಲ ಅಡುಗೆ ಭಟ್ಟ ಇವರಿಗೆ ಊಟ ಬೇಕಂತೆ ಏಯ್ ಹೋಗ್ರಲೇ ಗದರಿದ ಆ ಮಧ್ಯವಯಸ್ಕ.
ಇನ್ನೂ ಕೇಳಿದರೆ ಏನೂ ಸಿಗುವುದಿಲ್ಲ ಎನಿಸಿದ್ದರಿಂದ ಹುಡುಗರು ದೇವಸ್ಥಾನದ ಎದುರಿಗಿರುವ ಬಯಲಿನಲ್ಲಿ ಆಟ ಆಡಲು ಪ್ರಾರಂಭಿಸಿದರು.
***************
ನಗರದ ಗೌಜು-ಗದ್ದಲದ ನಡುವೆಯೂ ಸೂರ್ಯ ದೇವರು ಬಾನಿನಿಂದ ಮೇಲೇರಿದ.ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು”ಎಲ್ಲರೂ ಸಾಲಾಗಿ ಬನ್ನಿ” “ಯಾರೂ ಆತುರ ಪಡಬಾರದು” “ಎಲ್ಲರಿಗೂ ದೇವರ ದರ್ಶನ ಸಿಗುತ್ತದೆ” ಇನ್ನು ಮುಂತಾಗಿ ಮೈಕ್‍ನಲ್ಲಿ ಪದೇ ಪದೇ ಸಾರಲು ಪ್ರಾರಂಭಿಸಿದರು.
ಒಂದಿಷ್ಟು ಪುರೋಹಿತರು ಗರ್ಭಗುಡಿಯಲ್ಲಿ ನಿಂತರೆ,ಒಂದಿಷ್ಟು ಜನ ಹೋಮದ ತಯಾರಿಯಲ್ಲಿ ತೊಡಗಿದ್ದರು. ಆಗಷ್ಟೆ ಪೌರೋಹಿತ್ಯಕ್ಕೆ ಕಾಲಿಟ್ಟ ಒಂದಿಷ್ಟು ಬಾಲಪುರೋಹಿತರು ಅಂಡುಸುಟ ಬೆಕ್ಕಿನ ಹಾಗೆ ಆ ಕಡೆ ಈ ಕಡೆ ಓಡಾಡುತ್ತಿದ್ದರು.
ಜನರು ಭಕ್ತಿ ಪರವಶರಾಗಿ ಬಂಗಾರದಿಂದ ಅಲಂಕೃತನಾದ ಸುಬ್ರಹ್ಮಣ್ಯನನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರು.
ದೇವಸ್ಥಾನದ ಅನತಿ ದೂರದಲ್ಲಿ ಅಡುಗೆ ಚಪ್ಪರವನ್ನು ಹಾಕಲಾಗಿತ್ತು. ದೊಡ್ಡ ದೊಡ್ಡ ಒಲೆಯ ಮೇಲೆ ತರತರಹದ ಪಾತ್ರೆಗಳನ್ನು ಇಡಲಾಗಿತ್ತು ಯಜ್ಞೇಶ್ವರನು ಹೋಮಕುಂಡದಲ್ಲಿ ಧೂಮ ರೂಪನಾಗಿದ್ದರೂ ಅಡುಗೆಮನೆಯಲ್ಲಿ ಪ್ರಜ್ವಲಿಸುತ್ತಿದ್ದನು.
ಸಚಿನ್ ಆಟದ ಬೈಲಿನಲ್ಲಿದ್ದರೂ ಅವನ ಕಣ್ಣೆಲ್ಲ ಅಡುಗೆ ಚಪ್ಪರದ ಮೇಲಿತ್ತು. ಯಾವಾಗ ಪೂಜೆ ಮುಗಿಯುವುದೋ, ಯಾವಾಗ ಪಾಯಸದ ಊಟ ಸಿಗುವುದೋ ಎಂಬ ಕಾತರ ಕಾಣುತ್ತಿತ್ತು ಅವನ ಕಣ್ಣಲ್ಲಿ.
ಅಂತಹ ಮೂರ್ನಾಲ್ಕು ಹುಡುಗರು ಅಡುಗೆ ಚಪ್ಪರದ ಸಮೀಪಕ್ಕೆ ಹೋಗಿ ಅಲ್ಲಿರುವ ಅಡುಗೆ ಭಟ್ಟರ ಹತ್ತಿರ ಉಗಿಸಿಕೊಂಡು ಬಂದಿದ್ದರು.
ಹತ್ತಾರು ಬಾರಿ ಇದು ಪುನರಾವರ್ತನೆಯಾದಾಗ ಬಿಸಿನೀರು ಹಾಕುತ್ತೇನೆ ಎಂಬ ಬೆದರಿಕೆಯನ್ನು ಆ ಭಯೋತ್ಪಾದಕ ಭಟ್ಟರು ಹಾಕಿದ್ದರು.
ಇಂತಹದ್ದಕ್ಕೆಲ್ಲ ಜಗ್ಗದ ಆ ಹುಡುಗರು ಭಟ್ಟರು ಬಾಯಿ ತೆರಯುವಷ್ಟರಲ್ಲಿ ಸಾಕಷ್ಟು ದೂರ ಓಡಿಬಿಡುತ್ತಿದ್ದರು ಹೀಗಾಗಿ ಬಿಸಿನೀರು ಇರಲಿ ಭಟ್ಟರ ಬಯ್ಗುಳವೂ ಅವರಿಗೆ ತಾಗುತ್ತಿರಲಿಲ್ಲ.
************
ಗಂಜಿಯನ್ನು ಕಾಯಿಸಿ ನಿನ್ನೆಯ ದಿನ ತಂದು ಸುಟ್ಟಿದ್ದ ಮೀನಿನ ತುಂಡಿನೊಂದಿಗೆ ಒಂದು ತಟ್ಟೆಗೆ ಹಾಕಿ ಗಂಡನ ಮುಂದಿಟ್ಟ ಹೊನ್ನಿ “ಈ ಹುಡುಗ ಎಲ್ಲಿ ಹಾಳಾಗಿ ಹೋದ” ಎಂದು ತಲೆಬಾಗಿಲಿಗೆ ಬಂದು ಇಣಕಿ ನೋಡಿದಳು. ಅಲ್ಲೆಲ್ಲೂ ಅವನ ಸುಳಿವು ಕಾಣದಾದಾಗ “ಗಂಜಿ ಕುಡಿದು ಅವನು ಎಲ್ಲಿದ್ದಾನೆ ಎಂದು ನೋಡಿ ಎಳಕಂಡು ಬನ್ನಿ ಗಂಜಿ ಕುಡಿದು ಹೋಗಲಿ” ಗಂಡನಿಗೆ ತಾಕೀತು ಮಾಡಿದಳು.
ಮೀನಿನ ತುಂಡನ್ನು ಹಲ್ಲಿನಲ್ಲಿ ಕಚ್ಚಿ ತುಂಡು ಮಾಡಿ ತಿನ್ನುತ್ತ ಗಂಜಿ ಸುರಿಯುತ್ತಿದ್ದ ತಿಪ್ಪೇಶಿ ಗಡ್ಡಕ್ಕೆ ಹಿಡಿದಿದ್ದ ಗಂಜಿಯ ಅಗಳನ್ನು ಒರೆಸಿಕೊಂಡು “ದೇವಸ್ಥಾನದತ್ತರ ಇರ್ತಾನೆ ಬರ್ತಾನೆ ಬಿಡು”ಉದಾಸೀನದಿಂದ ನುಡಿದ.
ಮಗ ಖಾಲಿ ಹೊಟ್ಟೆಯಲ್ಲಿರುವುದನ್ನು ಹೊನ್ನಿ ಸಹಿಸಲಿಲ್ಲ. ತಲೆಬಾಗಿಲಿನಿಂದ ಹೊರಬಿದ್ದು ,ದೇವಸ್ಥಾನದ ಸಮೀಪ ಬಂದಾಗ ಸಚಿನ್ ಇನ್ನೊಬ್ಬ ಹುಡುಗನ ಜೊತೆಗೆ ಆಟದಲ್ಲಿ ಕಿರಿಕ್ ಮಾಡಿಕೊಂಡು ಜಗಳವಾಡುತ್ತಿದ್ದ. ಹತ್ತಿರ ಹೋಗಿ ಜಗಳ ಬಿಡಿಸಿ “ಮಗಾ ಮನೆಗೆ ಬಾ ಗಂಜಿ ಕಾಯ್ಸಿದ್ದಿನಿ ಕುಡಿದು ಬರುವಿಯಂತೆ”ಪುಸಲಾಯಿಸಿದಳು.”ಹೋಗಮ್ಮ ನಾ ಬರಾಕಿಲ್ಲ ಇವತ್ತು ನಾನು ಗಂಜಿ ಕುಡಿಯುವುದಿಲ್ಲ ದೇವಸ್ಥಾನದಲ್ಲಿ ಪಾಯಸ ಕೊಡ್ತಾರೆ ಅದನ್ನೆ ಕುಡಿತಿನಿ” ಆಸೆಯಿಂದ ಹೇಳಿದ ಮಗನಿಗೆ ” ಪಾಯಸ ಸಿಗೋದು ಸಂಜಿಗೆ ಮಗಾ ಈಗ ಒಂದಿಷ್ಟು ಗಂಜಿ ಕುಡ್ದು ಹೋಗು ಹೊಟ್ಟೆ ತಣ್ಣಗಿರ್ತದೆ” ಮಗನಿಗೆ ದುಂಬಾಲು ಬಿದ್ದಳು. ಆದರೆ ಸಚಿನ್ ಜಗ್ಗಲಿಲ್ಲ.
ಕೆಲಸದ ಮನೆಗೆ ಹೊತ್ತಾಯ್ತದೆಂದು ಹೊನ್ನಿ ಹೊರಟು ಹೋದಳು.
******
3
####
ಮಧ್ಯಾಹ್ನದ ಸುಮಾರಿಗೆ ದೇವಸ್ಥಾನಕ್ಕೆ ಸ್ವಾಮಿಗಳ ಆಗಮನವಾಯ್ತು ಇನ್ನು ಕೆಲವೇ ನಿಮಿಷಗಳಲ್ಲಿ ಮಂತ್ರಿ ನುಂಗಿರಪ್ಪನವರು ಆಗಮಿಸಲಿದ್ದಾರೆ ನಂತರ ಹೋಮಕ್ಕೆ ಪೂರ್ಣಾಹುತಿ,ಮಂಗಳಾರತಿ ನಡೆಯಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ ಮೈಕ್‍ನಲ್ಲಿ ಸ್ವಯಂ ಸೇವಕರು ಜೋರಾಗಿ ಅರಚುತ್ತಿದ್ದರು.
ಖಾದಿಯ ಪ್ರವೇಶದಿಂದ ಜನಜಂಗುಳಿ ಹೆಚ್ಚಾಯಿತು.ದೇವಸ್ಥಾನದ ಆವಾರ ಹಿಡಿಸದೆ ಸಚೀನ್‍ನಂತಹ ಹುಡುಗರು ಆಡುತ್ತಿದ್ದ ಮೈದಾನದಲ್ಲೂ ಜನರು ಸೇರಲಾರಂಭಿಸಿದರು.ಇದರಿಂದ ಸಚೀನ್ ಮತ್ತು ಅವನಂತಹ ಹುಡುಗರ ಹಿಂಡು ಇನ್ನೂ ಹಿಂದಕ್ಕೆ ಸರಿಯಬೇಕಾಯಿತು.
ಮಂತ್ರಿ ನುಂಗೀರಪ್ಪ ಆ ಭಾಗದ ಶಾಸಕನಾಗಿ ಕಳೆದ ಇಪ್ಪತ್ತೈದು ವರ್ಷದಿಂದ ಆರಿಸಿ ಬರುತ್ತಿದ್ದ. ಸರಕಾರದಲ್ಲಿ ಪ್ರಭಾವಿಯೂ,ಹಿರಿಯ ಶಾಸಕನೂ,ಹೈಕಮಾಂಡಗೆ ನಿಯಮಿತವಾಗಿ ಕಪ್ಪವನ್ನು ಒಪ್ಪಿಸಬಲ್ಲವನೂ ಆಗಿದ್ದರಿಂದ ಅನಾಯಾಸವಾಗಿ ಮಂತ್ರಿ ಪದವಿ ಒಲಿದುಬಂದಿತ್ತು.ರಾಜಕಾರಣಿಗಳಿಗೆ ಬೇಕಾದ ಸಕಲಗುಣಗಳು ಅವನಲ್ಲಿ ಇದ್ದುದರಿಂದ ಯಶಸ್ವಿ ರಾಜಕಾರಣಿಯಾಗಿ ದರ್ಭಾರು ನಡೆಸುತ್ತಿದ್ದ.
ಈಗ್ಗೆ ಮೂರು ತಿಂಗಳ ಹಿಂದೆ ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಅವನ ಕೈವಾಡವಿದೆ ಎಂದು ಆರೋಪಿಸಲಾಗಿತ್ತುಒಂದಿಷ್ಟು ಸಂಘಟನೆಗಳು ಧರಣಿ ಕೂಡ ನಡೆಸಿದ್ದವು.ತನ್ನ ತಪ್ಪು ಗೊತ್ತಾಗಿ ಬಿಡುತ್ತದೆ ಎಂದು ನುಂಗೀರಪ್ಪ ಕ್ಷೇತ್ರದ ಕಡೆಗೆ ಕಾಲಿಟ್ಟಿರಲಿಲ್ಲ.ದೇವರ ಭಯವಿಲ್ಲದಿದ್ದರೆ ಈಗಲೂ ಬರುತ್ತಿರಲಿಲ್ಲ ಅಲ್ಲದೆ ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಬೇರೆ ಬರುವುದಿತ್ತು.ಸ್ವಾಮಿಯ ದರ್ಶನಕ್ಕೆ ಜನಸಾಗರವೇ ಬರುತ್ತದೆ.ಒಳ್ಳೆಯ ದಿನ,ಒಳ್ಳೆಯ ಸಮಯ ಚುನಾವಣಾ ಪ್ರಚಾರವನ್ನೇ ಪ್ರಾರಂಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ.
ಮಂತ್ರಿಗಳ ಆಗಮನದೊಡನೆ ಕಾರ್ಯಕ್ರಮ ವೇಗವನ್ನು ಪಡೆಯಿತು.ಪುರೋಹಿತರ ವೇದಘೋಷಗಳು ಅಬ್ಬರವನ್ನು ಪಡೆಯಿತು.ಮಂಗಳಾರತಿ,ಪ್ರಸಾದ ವಿತರಣೆ ಮುಗಿದು ಅನ್ನಸಂತರ್ಪಣೆ ಪ್ರಾರಂಭವಾಯಿತು. ನೂಕು-ನುಗ್ಗುಲು ಆಗದಂತೆ ಕಾರ್ಯಕರ್ತರು ಸಾಲಾಗಿ ಜನರನ್ನು ಬಿಡುತ್ತಿದ್ದರು. ಸಂಜೆಯಾಗುತ್ತಾ ಬಂದಿದ್ದರೂ ಜನಜಂಗುಳಿ ಕಡಿಮೆಯಾಗಿರಲಿಲ್ಲ.ಸಚಿನ್ ಮತ್ತು ಅವನ ಸಂಗಡಿಗರಿಗೆ ಆಟದ ಹುಚ್ಚು ಹೊರಟು ಹೋಗಿತ್ತು,ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು,ಜನಜಾತ್ರೆಯಿಂದಾಗಿ ಅಡುಗೆ ಚಪ್ಪರಕ್ಕೂ,ಅವರಿಗೂ ಅಂತರ ಹೆಚ್ಚಾಗಿತ್ತು.
ಅಡುಗೆ ಚಪ್ಪರದಲ್ಲಿ ಹತ್ತಾರು ಜನ ಕೆಲಸದಲ್ಲಿ ತೊಡಗಿದ್ದರು. ಹೂಡಿದ್ದ ದೊಡ್ಡ ದೊಡ್ಡ ಒಲೆಯ ಮೇಲೆ ಅನ್ನ,ಸಾರು,ಪಾಯಸ, ಕುದಿಯುತ್ತಿತ್ತು.ಅದನ್ನು ತಿರುವುತ್ತಿದ್ದ ಅಡುಗೆ ಭಟ್ಟರ ಮೈಯಿಂದ ಧಾರಾಕಾರವಾಗಿ ಬೆವರು ಇಳಿದು ತಯಾರಾಗುತ್ತಿದ್ದ ಅಡುಗೆಯೊಳಗೂ ಸೇರುತ್ತಿತ್ತು. ಪಾಯಸವನ್ನು ತಿರುವುತ್ತಿದ್ದ ಭಟ್ಟರು ಬಾಯಲ್ಲಿ ಬೀಡಿಯನ್ನು ಕಚ್ಚಿಕೊಂಡು ರೇಲ್ವೆ ಇಂಜಿನ್‍ನಂತೆ ಹೊಗೆ ಬಿಡುತ್ತಿದ್ದರು.
ಪಾಯಸದ ಸುಳಿಯಲ್ಲಿ ಏನೋ ಕಂಡಂತಾಯಿತು. ಪುನಃ ಸೌಟಿನಿಂದ ತಿರುವಿ ಉಪಾಯದಿಂದ ಎತ್ತಿ ನೋಡುತ್ತಾರೆ ಹಾವುರಾಣಿ. ಭಟ್ಟರ ಎದೆ ದಸಕ್ಕೆಂದಿತು. ವಿಷಯ ಅಡುಗೆ ಗುತ್ತಿಗೆ ಹಿಡಿದಿದ್ದ ಮುಖ್ಯಸ್ಥನಿಗೆ ಹೋಯಿತು. ವಿಷಯ ಬಯಲಾದರೆ ಇವತ್ತಿನ ಸಂಬಾವನೆ ಖೋತಾ, ಏನು ಮಾಡುವುದು ಎಂದು ಯೋಚಿಸಿ ಬೇರೆ ಪಾಯಸ ಮಾಡಲು ತಯಾರಿ ಪ್ರಾರಂಭಿಸಿದ.
***********
ಅಡುಗೆ ಭಟ್ಟರು ಧಣಿದು ಹೋಗಿದ್ದರು. ಪ್ರತೀ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಜನರು ಸೇರಿದ್ದರಿಂದ ಮಾಡಿದ್ದ ಅಡುಗೆ ಪೂರ್ತಿ ಖಾಲಿಯಾಗಿ ಅವರಿಗೇ ಏನೂ ಇರಲಿಲ್ಲ.
ಜನಸಾಗರ ಕಡಿಮೆಯಾದ ಮೇಲೆ ಕೊಳಗೇರಿಯ ಜನ ಮುಂದೆ ಬಂದರು.ಈಗ ಅವರನ್ನು ತಡೆಯುವವರು ಯಾರೂ ಇರಲಿಲ್ಲ.ಕೊನೆಯಲ್ಲಿ ಬರುತ್ತಿರುವ ಕೊಳಗೇರಿಯ ಜನರನ್ನು ನೋಡಿ ಅಡುಗೆ ಭಟ್ಟರು ಕಂಗಾಲಾದರು.ಮಾಡಿದ್ದ ಅಡುಗೆ ಖಾಲಿಯಾಗಿತ್ತು.ಪುನಃ ಮಾಡುವ ಎಂದರೆ ಕೈಕೆಳಗಿನ ಭಟ್ಟರು ಜಾಗ ಖಾಲಿ ಮಾಡಿದ್ದರು.
“ನೋಡ್ರಪಾ ಅಡುಗೆ ಖಾಲಿಯಾಗಿದೆ ಪಾಯಸ ಇದೆ ನೀವೆಲ್ಲಾ ಸಾಲಾಗಿ ಬನ್ನಿ ಎಲ್ಲರಿಗೂ ಸಿಗುತ್ತದೆ” ಯೋಚನೆ ಮಾಡಿ ಭಟ್ಟರು ಘೋಷಿಸಿದರು.
ಕೊಳಗೇರಿ ಜನರಿಗೆ ಖುಷಿಯಾಯಿತು. ದಬರೆಯಲ್ಲಿದ್ದ ಪಾಯಸ ಖಾಲಿಯಾಯಿತು. ಅಡುಗೆ ಭಟ್ಟರು ದೊಡ್ಡ ಬಾರ ಇಳಿದಂತೆ ನಿಟ್ಟುಸಿರು ಬಿಟ್ಟರು.
***********
ಮರುದಿನ ಪತ್ರಿಕೆಯ ಮುಖ ಪುಟದಲ್ಲಿ ದೊಡ್ಡ ಸುದ್ದಿ ಪ್ರಕಟವಾಗಿತ್ತು.
“ಸುಬ್ರಹ್ಮಣ್ಯ ದೇವಸ್ಥಾನದ ಪಾಯಸ ಪ್ರಸಾದ ಊಟ ಮಾಡಿದ ಕೊಳಗೇರಿಯ ಹದಿನಾರು ಬಾಲಕರ ಮರಣ. ನೂರಾರುಜನರು ಅಸ್ವಸ್ಥ”
*******************************
ಡಿ.ಜಿ.ಬಿ.