ಅಮಿತ್ ಶಾ ಭೇಟಿಯಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಶಿರಸಿ : ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಭೇಟಿಯಾಗಿ ಉತ್ತರ ಕನ್ನಡದ ಕೈಗಾ ಅಣು ವಿದ್ಯುತ್ ಸ್ಥಾವರದ ದುಷ್ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ ನಂತರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರ ಬಗ್ಗೆ ಕೇಂದ್ರ ಸರಕಾರ ಸಮಗ್ರ ಸಮೀಕ್ಷಾ ಕಾರ್ಯ ನಡೆಸಬೇಕು. ಮತ್ತು ಇದೇ ಕಾರಣದಿಂದ ಕೈಗಾ ಅಣು ಸ್ಥಾವರದ ಉದ್ದೇಶಿತ ಐದು ಆರನೇ ಘಟಕಗಳ ವಿಸ್ತರಣೆಯನ್ನು ಕೈಬಿಡಬೇಕು ಅಂತ ಸ್ವರ್ಣವಲ್ಲೀ ಶ್ರೀಗಳವರು ಗೃಹಮಂತ್ರಿ ಶಾ ಅವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಹಿಂದೆ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಮೂಲಕ ನಡೆಸಿದ ಆರೋಗ್ಯ ಸಮೀಕ್ಷೆಯ ವರದಿಯ ಅಂಶಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಅಲ್ಲದೇ ನಂತರದಲ್ಲಿ ಈ ಕುರಿತು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ನಿಯೋಗವನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ನಡೆಸುವುದಾಗಿ ಅಮಿತ್ ಶಾ ಹೇಳಿದರು.

ಈ ಸಂದರ್ಭದಲ್ಲಿ ಸೋಂದಾ ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಸ್ವಾಮೀಜಿಗಳು, ಸಂಸದರಾದ ಪ್ರಹ್ಲಾದ ಜೋಶಿ ಮತ್ತು ನಳಿನಕುಮಾರ್ ಕಟೀಲು, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಾಕರಸಾಸಂ ಅಧ್ಯಕ್ಷ ವಿ.ಎಸ್ ಪಾಟೀಲ್, ಶಾಸಕಿ ರೂಪಾಲಿ ನಾಯ್ಕ ಮುಂತಾದವರು ಹಾಜರಿದ್ದರು.

About the author

Adyot

1 Comment

Leave a Comment