ಮಂಗನಕಾಯಿಲೆ ಪ್ರದೇಶಗಳಲ್ಲಿ ಕಠಿಣ ಕ್ರಮದ ಅವಶ್ಯಕತೆಯಿದೆ : ಅನಂತ ಅಶಿಸರ

ಆದ್ಯೋತ್ ನ್ಯೂಸ್ ಡೆಸ್ಕ್ : ಮಂಗನಕಾಯಿಲೆ ಪೀಡಿತ ಪ್ರದೇಶಗಳ ಎಲ್ಲಾ ಜನರಿಗೆ ಲಸಿಕೆಯನ್ನು ನೀಡಲು ಕಠಿಣ ಕ್ರಮದ ಅವಶ್ಯಕತೆಯಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.


ಸಿದ್ದಾಪುರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಮಂಗನಕಾಯಿಲೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅನಂತ ಅಶಿಸರ, ಮಂಗನಕಾಯಿಲೆ ಯಾಕೆ ಈ ಪ್ರದೇಶಗಳಲ್ಲೇ ಬರುತ್ತಿದೆ ಅನ್ನೋದರ ಬಗ್ಗೆ ಸಮಗ್ರ ಸಂಶೋಧನೆಯ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದು, ಕೊರೊನಾ ಬಂದ ಕಾರಣ ಆ ವರದಿಯ ಕುರಿತು ಚರ್ಚಿಸಲು ಆಗುತ್ತಿಲ್ಲ. ಮಳೆ ಬಂದ ತಕ್ಷಣ ಮಂಗನಕಾಯಿಲೆ ಹೋಗೋ ಕಾರಣದಿಂದ ಮತ್ತೆ ಮುಂದಿನ ವರ್ಷ ಕಾಯಿಲೆ ಬಂದಾಗಲೇ ವಿಜ್ಞಾನಿಗಳು ಬರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗನಕಾಯಿಲೆ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಸಂಪೂರ್ಣ ಜನರನ್ನು ತಲುಪುವ ಅವಶ್ಯಕತೆಯಿದೆ. ಕೊರೊನಾಗೆ ಯಾವ ರೀತಿ ಕ್ರಮಗಳನ್ನ ಕೈಗೊಳ್ಳುತ್ತೇವೆಯೋ ಅದರಂತೆ ಮಂಗನಕಾಯಿಲೆ ಲಸಿಕೆಗೆ ಕಠಿಣ ಕ್ರಮಗಳನ್ನ ಕೈಗೊಂಡಾಗ ಕಾಯಿಲೆಯನ್ನು ತಡೆಗಟ್ಟೋಕೆ ಸಾಧ್ಯವಾಗುತ್ತದೆ. ಜನರು ಕಾಡುಗಳಿಗೆ ಹೋಗುವುದನ್ನ ಮೊದಲು ನಿರ್ಬಂಧಿಸಬೇಕಿದೆ ಎಂದರು. ಅತಿಸೂಕ್ಷ್ಮ ಪ್ರದೇಶಗಳಿಗೆ ತೆರಳದಂತೆ ನಿರ್ಬಂಧಿಸಿ ಕೂಡಲೇ ಆದೇಶ ಹೊರಡಿಸಿ ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

About the author

Adyot

Leave a Comment