ಆದ್ಯೋತ್ ಸುದ್ದಿ ನಿಧಿ : ದೇಶದೆಲ್ಲೆಡೆ ಕೊರೊನಾ ತನ್ನ ಆರ್ಭಟವನ್ನು ತೋರಿಸುತ್ತಿದ್ದು, ಇದರ ಮಧ್ಯೆಯೇ ಜೂನ್ 25 ರಿಂದ ನಡೆಯಲಿರುವ 10 ನೇ ತರಗತಿಯ ಪರೀಕ್ಷೆಗಾಗಿ ರಾಜ್ಯ ಸಜ್ಜಾಗಿದೆ. ಅದೇ ರೀತಿ ಸಿದ್ದಾಪುರ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗಾಗಿ ಕೋವಿಡ್-19 ಸುರಕ್ಷತೆ ದೃಷ್ಟಿಯಿಂದ ಟೀಮ್ ಪ್ರೇರಣಾ ವತಿಯಿಂದ ಮಾಸ್ಕ್ ನೀಡಲಾಯಿತು.
ಪ್ರೇರಣಾ ತಂಡದ ಮುಖ್ಯಸ್ಥರಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅವರಿಗೆ 1500 ಮಾಸ್ಕ್ ಹಸ್ತಾಂತರಿಸಿದರು. ರಾಜ್ಯಾದ್ಯಂತ ಪ್ರತಿ ವಿದ್ಯಾರ್ಥಿಗೂ ಒಂದು ಮಾಸ್ಕನ್ನು ಸ್ಕೌಟ್ಸ್ ಆಂಡ್ ಗೈಡ್ಸ್ ನೀಡಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದ ಜೊತೆಗೆ ಈ ಒಂದು ಮಾಸ್ಕ್ ಕೊಡಲಾಗಿದೆ. ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಟೀಮ್ ಪ್ರೇರಣಾ ನೀಡಿರುವ ಮಾಸ್ಕ್ ತಲುಪಿಸಿ, ಅಲ್ಲಿ ಇನ್ನೊಂದು ಮಾಸ್ಕ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್‍ಗಳನ್ನು ಸಹ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತಿದೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಪ್ರೇರಣಾ ತಂಡವು ಅಣಲೇಬೈಲ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿತ್ತು. ತೀರಾ ಅನಿವಾರ್ಯ ಸಂದರ್ಭದಲ್ಲಿ ಮನೆಗಳಿಂದ ಜನ ಹೊರಬರಲೇ ಬೇಕಾದರೆ ಮಾಸ್ಕ್ ಧರಿಸಿಯೇ ಬನ್ನಿ, ಎಂದು ಜಾಗೃತಿ ಮೂಡಿಸಿತ್ತು. ವಿಶೇಷವಾಗಿ ಗಣೇಶ ಐನಬೈಲ್, ರಾಮಚಂದ್ರ ತಾರೇಸರ, ಐನಬೈಲ್ ಹಾಗೂ ಹಾಲ್ಕಣಿ ಊರಿನ ಅನೇಕರು ಮಾಸ್ಕ್ ಸಿದ್ಧಪಡಿಸಿಕೊಡುವಲ್ಲಿ ನೆರವಾಗಿದ್ದಾರೆ ಎಂದು ಗುರುಪ್ರಸಾದ ಹೆಗಡೆ ಹರ್ತೆಬೈಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ “ಎಸ್.ಎಸ್.ಎಲ್.ಸಿ ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣ ಘಟ್ಟ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯ ಅನುಸಾರವೇ ಪರೀಕ್ಷೆ ನಡೆಯಬೇಕಿದೆ. ವಿದ್ಯಾರ್ಥಿಗಳು ಹೆಚ್ಚಿನ ಜಾಗೃತೆ ವಹಿಸಬೇಕು, ಮಾಸ್ಕ್ ನೀಡುತ್ತಿರುವ ಟೀಮ್ ಪ್ರೇರಣಾ ಪ್ರತೀ ವಿದ್ಯಾರ್ಥಿಗೂ’ಆಲ್ ದಿ ಬೆಸ್ಟ್’ ಹೇಳುತ್ತಿದೆ. ಶುಭವಾಗಲಿ” ಅಂತ ಟೀಮ್ ಪ್ರೇರಣಾ ಮುಖ್ಯಸ್ಥ ಗುರುಪ್ರಸಾದ ಹೆಗಡೆ ಶುಭಾಶಯ ಕೋರಿದರು.
ತಾಲೂಕಿನ ಪರೀಕ್ಷಾ ಕೇಂದ್ರಗಳ ಪರಿವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅವರನ್ನು ಹೆಗ್ಗರಣಿಯ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಭೇಟಿ ಮಾಡಿದ ಟೀಮ್ ಪ್ರೇರಣಾದ ಪ್ರಮುಖರಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಗಣೇಶ ಐನಬೈಲ್ ಮಾಸ್ಕ್ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಉಪ-ನಿರ್ದೇಶಕ ಚೈತನ್ಯ ಕುಮಾರ್ ಉಪಸ್ಥಿತರಿದ್ದರು.