ಆದ್ಯೋತ್ ನ್ಯೂಸ್ ಡೆಸ್ಕ್: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏಪ್ರಿಲ್ 2 ರಿಂದ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮತ್ತು ಹಳೆಯ ರೋಗಿಗಳ ಅನಕೂಲಕ್ಕಾಗಿ ಟೆಲಿಮೆಡಿಸಿನ್ ಮೂಲಕ ಸಮಾಲೋಚನೆಯನ್ನು ಪ್ರಾರಂಭಿಸಲಾಗಿದೆ.
ಕೊವಿಡ್-19(ಕೊರೊನಾ)ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ ನಮ್ಮ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಇದರಿಂದ ನಮ್ಮ ರೋಗಿಗಳ ನಿಯಮಿತ ಚಿಕಿತ್ಸೆಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇದನ್ನು ಮನಗೊಂಡು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿ ರೋಗಿಗಳ ಅನಕೂಲಕ್ಕಾಗಿ ಈ ಟೆಲಿಮೆಡಿಸಿನ್ ಸೌಲಭ್ಯ ನೀಡಲು ನಿರ್ಧರಿಸಿದೆ. ಈ ಸೇವೇಯಲ್ಲಿರುವ ಜನರು ತಮ್ಮ ಮನೆಯಲ್ಲೇ ಕುಳಿತು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವೈದ್ಯರನ್ನು ಸಂಪರ್ಕಿಸಬಹುದು.ಎಲ್ಲಾ ವಿಭಾಗದ ವೈದ್ಯರು ದೂರವಾಣಿಯ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಆಸ್ಪತ್ರೆಯಲ್ಲಿರುವ ಜ್ವರದ ಚಿಕಿತ್ಸಾಲಯ ಹಾಗೂ ತುರ್ತು ಚಿಕಿತ್ಸಾ ಸೇವೆಗಳು ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ -08047192235