ಸಿದ್ದಾಪುರ : ಖ್ಯಾತ ಸಾಹಿತಿ, ಮಕ್ಕಳ ಕವಿ ತಮ್ಮಣ್ಣ ಬೀಗಾರ ವಿರಚಿತ ‘ಉಲ್ಟಾ ಅಂಗಿ’ ಮಕ್ಕಳ ಕಥಾಸಂಕಲನ ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು.
ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಖ್ಯಾತ ಸಾಹಿತಿ ಶ್ರೀಧರ್ ಬಳಿಗಾರ್, ವಸ್ತುವನ್ನ ಉಪಯೋಗಿಸಿ ಮನುಷ್ಯರನ್ನು ಪ್ರೀತಿಸೋ ಕಾಲ ಬದಲಾಗಿ ವಸ್ತುವನ್ನ ಪ್ರೀತಿಸುತ್ತಿದ್ದೇವೆ, ಮನುಷ್ಯರನ್ನ ಉಪಯೋಗಿಸುತ್ತಿದ್ದೇವೆ. ಉಲ್ಟಾ ಅಂಗಿ ಕೃತಿ ಆಧುನಿಕ ಅಸಂಗತೆಗೆ ಒಂದು ಮದ್ದನ್ನ ಬಿಂಬಿಸುತ್ತಿದೆ. ನಮ್ಮ ಕೌಟುಂಬಿಕ ಜೀವನಗಳು ಅಸಂಗತವಾಗಿವೆ. ಅಸಂಬದ್ಧವಾದ ಜೀವನಕ್ಕೂ ಒಂದು ಮದ್ದು ಇದೆ ಅನ್ನೋದನ್ನ ಕೃತಿ ಔಷಧಿ ರೂಪದಲ್ಲಿ ನೀಡುತ್ತಿದೆ. ಮಕ್ಕಳ ಸಾಹಿತ್ಯ ಬರೆಯೋಕೆ ಒಂದು ಮುಗ್ಧತೆ ಹಾಗೂ ದೈವೀಕತೆ ಬೇಕು. ಆದ್ದರಿಂದಲೇ ಮಕ್ಕಳ ಸಾಹಿತ್ಯ ಸ್ವಲ್ಪ ಕಷ್ಟಕರ. ಮಕ್ಕಳ ಮನಸ್ಸಿನ ಮುಗ್ಧತೆಗಳನ್ನ ಹಿಡಿದಿಡೋ ಕೆಲಸವನ್ನ ತಮ್ಮಣ್ಣ ಬೀಗಾರ್ ಮಾಡಿದ್ದಾರೆ. ಕಲಿಕೆಯ ಆರಂಭದಲ್ಲೇ ಪರೀಕ್ಷೆ ಬರಬೇಕು. ಇಂದಿನ ಪರೀಕ್ಷೆಗಳು, ಶಿಕ್ಷಕರು ಕಲಿಸಿದ ಪಾಠವನ್ನು ಮಕ್ಕಳು ಎಷ್ಟು ತಿಳಿದಿದ್ದಾರೆ ಅನ್ನೋದರ ಕುರಿತು ನಡೆಯುತ್ತಿವೆ. ಈಗಿನ ಶಾಲೆಯ ಶಿಕ್ಷಣಗಳಿಗೆ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸಿಕೊಡಲಾಗುತ್ತಿಲ್ಲ. ಈಗಿನ ಪಠ್ಯಗಳು ಪರಿಸರದ ಪರಿಚಯದಿಂದ ದೂರವಾಗುತ್ತಿವೆ. ಆದ್ದರಿಂದಲೇ ಬೀಗಾರರ ಕಾವ್ಯದ ಮಕ್ಕಳು ಹೊರಜಗತ್ತಿಗೆ ತಮ್ಮನ್ನ ತೆರೆದುಕೊಳ್ಳುತ್ತಿವೆ ಎಂದರು.
ಸಾಹಿತಿ ಆನಂದ್ ಪಾಟೀಲ್ ಮಾತನಾಡಿ, ಸಾಹಿತ್ಯ ಅಕಾಡೆಮಿ ಮಕ್ಕಳ ಸಾಹಿತ್ಯಕ್ಕೆ ಅಷ್ಟೊಂದು ಬೆಲೆ ಕೊಡುತ್ತಿಲ್ಲ. ಮಕ್ಕಳ ಕಥೆ ಅಂದ್ರೆ ಜಂಪರು ಕಥೆ ಅನ್ನೋ ದೃಷ್ಟಿಯಲ್ಲಿ ನೋಡುತ್ತಾರೆ. ಆದ್ರೆ ಉತ್ತರ ಕನ್ನಡ ಜಿಲ್ಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಿರಿಯರಾದ ಚುಟುಕು ಬ್ರಹ್ಮ ದಿನಕರ ದೇಸಾಯಿ ಹಾಕಿಕೊಟ್ಟ ದಾರಿಯಲ್ಲಿ ಈಗಿನ ಮಕ್ಕಳ ಸಾಹಿತಿಗಳು ನಡೆಯುತ್ತಿರೋದು ಸಂತಸ ತಂದಿದೆ. ತಮ್ಮಣ್ಣ ಬೀಗಾರರ ಈ ಕೃತಿ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ಆಕಾಶವಾಣಿಯ ಬಸು ಬೇವಿನಗಿಡದ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಜಿ.ಜಿ ಹೆಗಡೆ, ಪ್ರಯೋಗ ಸೇವಾ ಸಂಸ್ಥೆಯ ಗಂಗಾಧರ ಕೊಳಗಿ, ಸಿ.ಎಸ್ ಗೌಡರ್ ಹಾಗೂ ಕಥಾಸಂಕಲದ ಲೇಖಕ ತಮ್ಮಣ್ಣ ಬೀಗಾರ್ ಉಪಸ್ಥಿತರಿದ್ದರು.