ಆದ್ಯೋತ್ ಸುದ್ದಿನಿಧಿ
ಯಲ್ಲಾಪುರದ ಕಿರುವತ್ತಿ ಮತ್ತು ಮದನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆಯ್ಕೆ ಹಿನ್ನಲೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಪಂಚಾಯ್ತಿ ಸದಸ್ಯರ ಮೇಲೆ ಹುಬ್ಬಳ್ಳಿ ಜಿಲ್ಲೆಯ ಕಲಘಟಗಿಯ ಡಾಬಾ ದಲ್ಲಿ ಇದೇ ತಿಂಗಳ ಏಳರಂದು ಸಚಿವ ಶಿವರಾಮ್ ಹೆಬ್ಬಾರ್ ಬಲಗೈ ಬಂಟ ವಿಜಯ ಮಿರಾಶಿ ಹಾಗೂ ಆತನ ತಂಡ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ ಯಲ್ಲಾಪುರದಲ್ಲಿ ಗೌಳಿ ಸಮಾಜ ಹಾಗೂ ಮೂಲ ಬಿಜೆಪಿಗರು ಪ್ರತಿಭಟನೆ ನಡೆಸಿ ಸಚಿವ ಶಿವರಾಮ್ ಹೆಬ್ಬಾರ್ ಆಪ್ತ ಬಿಜೆಪಿಯ ವಿಜಯ್ ಮಿರಾಶಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಹಿಂದೆ ಕಾಂಗ್ರೆಸ್ ನಲ್ಲಿ ಇದ್ದ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಬಂದಮೇಲೆ ಮೂಲ ಬಿಜೆಪಿಗರಿಗೆ ತೊಂದರೆ ನೀಡುತಿದ್ದಾರೆ, ಸಚಿವರೇ ಗುಂಡಾಗಿರಿ ಮಾಡೋ ಮೂಲಕ ತಮ್ಮ ಆಪ್ತನನ್ನು ರಕ್ಷಣೆ ಮಾಡುತ್ತಿದ್ದಾರೆ ಅಂತ ಸೇರಿದ್ದವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಎಮ್.ಎಲ್.ಸಿ ಶಾಂತಾರಾಮ್ ಸಿದ್ದಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು ಭಾಗಿಯಾಗಿದ್ದರು. ಇನ್ನು ಇದೇ ತಿಂಗಳು ಕಿರುವತ್ತಿ, ಮದನೂರು ಗ್ರಾ.ಪಂ ಸದಸ್ಯರಾದ ವಿಠ್ಠು ಶೆಳಕೆ, ಬಾಪು ತಾಟೆ, ಸೋನು ಜಂಗ್ಲಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದು ಕಲಘಟಕಿ ಠಾಣೆಯಲ್ಲಿ ದೂರು ದಾಖಲಾಗಿದೆ.