ಆದ್ಯೋತ್ ಸುದ್ದಿನಿಧಿ:
ಗ್ರಾಮ ಪಂಚಾಯತ್ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬಂದಂತೆ ಅಭ್ಯರ್ಥಿಗಳ ಪ್ರಚಾರ ಕೂಡ ರಂಗೇರಿದೆ. ಆದರೆ ವಿಷಯ ಎನೆಂದರೆ ಈ ಸಲದ ಚುನಾವಣೆ ಉಳಿದೆಲ್ಲ ಚುನಾವಣೆಗಿಂತ ವಿಭಿನ್ನವಾಗಿದೆ. ಈ ಸಲ ಗ್ರಾಮ ಪಂಚಾಯತ್ ಚುನಾವಣೆಗೆ ಯುವಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಬಲ ತಂದುಕೊಡುತ್ತೆ ಅನ್ನುವ ಆಶಯ ವ್ಯಕ್ತವಾಗಿದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬೇಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾರ್ಸಿ ನಿವಾಸಿ ಉಲ್ಲಾಸ್ ಗೌಡರ್ ಕೂಡ ಇದಕ್ಕೊಂದು ಉದಾಹರಣೆ. ತ್ಯಾರ್ಸಿ ವಾರ್ಡ್ ನಿಂದ ಸ್ಪರ್ಧಿಸಿದ ಉಲ್ಲಾಸ್ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದ್ದು, ವಿದ್ಯಾವಂತ ಹಾಗೂ ಏನೋ ಸಾಧಿಸಬೇಕು ಅನ್ನೋ ಛಲ ಹೊಂದಿರುವವರು.
*****
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾರೇಸರದ ಕಮಲಾಕ್ಷಿ ಮತ್ತು ನಾರಾಯಣ ಹೆಗಡೆ ಇವರ ಮಗನಾದ ‘ನವೀನ್ ನಾರಾಯಣ ಹೆಗಡೆ’(23) ಇವರು ಶಿರಸಿಯ ಎಂ ಈ ಎಸ್ ಲಾ ಕಾಲೇಜಿನ ಕಾನೂನು ವಿದ್ಯಾರ್ಥಿಯಾಗಿದ್ದಾರೆ.
ಕೊರೋನಾ ಮಾಹಾಮಾರಿಯಿಂದ ಸಂಪೂರ್ಣ ದೇಶವೇ ‘ಲಾಕ್ ಡೌನ್’ ಆದ ಸಮಯದಲ್ಲಿ ತನ್ನ ಜೀವದ ಹಂಗು ತೊರೆದು ಎಲ್ಲಾ ರೀತಿಯ ತುರ್ತು ಸೇವೆಗಳನ್ನು ಸುಮಾರು 45-50ದಿನಗಳ ಕಾಲ ಮಾಡಿದ್ದಾರೆ.
ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡ ಸೇರಿದಂತೆ ಹಲವೆಡೆ ಮನೆಮನೆಗೆ ತೆರಳಿ ಔಷದೋಪಕರಣ, ಆಹಾರ ಕಿಟ್ ಇನ್ನೂ ಮುಂತಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.‘ಲಾಕ್ ಡೌನ್'ನಲ್ಲಿ ಇವರು ಸತತವಾಗಿ ಮಾಡಿದ ಈ ಸೇವೆಯನ್ನು ಮೆಚ್ಚಿ ಊರಿನ ಗ್ರಾಮಸ್ಥರು ಈ ಬಾರಿಯ ‘ಗ್ರಾಮ ಪಂಚಾಯತ್ ಚುನಾವಣೆ'ಯಲ್ಲಿ ನಿಲ್ಲಲು ಪ್ರೋತ್ಸಾಹಿಸಿದ್ದಾರೆ. ಅದರಂತೆ ‘ನವೀನ ನಾರಾಯಣ ಹೆಗಡೆ’ ಇವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಇವೆಲ್ಲ ಕೇವಲ ಉದಾಹರಣೆಗಳಷ್ಟೇ. ಇಂತಹ ಇನ್ನೂ ಹಲವಾರು ಯುವಕರು ಈ ಸಲದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ಗ್ರಾಮಗಳ ಅಭಿವೃದ್ಧಿ ಮಾಡುವ ತುಡಿತ ಹೊಂದಿದ್ದು, ಯುವಕರು ಹೆಚ್ಚಾಗಿ ಇದರತ್ತ ಆಸಕ್ತಿ ತೋರುತ್ತಿರೋದು ದೇಶದ ಮುಂದಿನ ದಿಕ್ಸೂಚಿ ಅನ್ನೋ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ.