ಸಿದ್ದಾಪುರ : ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ, ರಾಜ್ಯದಲ್ಲೂ ಅವರದೇ ಸರ್ಕಾರವಿದೆ. ಆದ್ರೆ ಸ್ವತಃ ಸಿಎಂ ನೆರೆ ಪರಿಹಾರವನ್ನು ಸಾರ್ವಜನಿಕ ಸಭೆಯಲ್ಲಿ ಕೇಳುವಂತಾಗಿರೋದು ವಿಷಾದನೀಯ ಅಂತ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಮನೆಗಳ ಹಂಚಿಕೆಯಲ್ಲಿನ ವಿಳಂಬದ ಕುರಿತು ಸಿದ್ದಾಪುರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಆಳ್ವಾ, ರಾಜ್ಯಕ್ಕೆ ಇನ್ನೂ 360 ಕೋಟಿ ಯಷ್ಟು ಜಿಎಸ್ಟಿ ಹಣ ಬಂದಿಲ್ಲ. ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನುವರೆಗೂ ಮನೆ ಕಟ್ಟಿಸಿಕೊಟ್ಟಿಲ್ಲ. ಅವರಿನ್ನೂ ಶಾಲೆಗಳಲ್ಲೇ ವಾಸವಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಿದ್ರೆ ಮುಂದಿನ ಮಳೆಗಾಲ ಬರೋವರೆಗೆ ಮುಗಿಸಬಹುದಿತ್ತು. ಆದ್ರೆ ಮಳೆಗಾಲ ಕಳೆದು ಇಷ್ಟು ದಿನ ಆದ್ರೂ ಕೂಡ ಸಭಾಧ್ಯಕ್ಷರಾಗಲಿ, ಸಂಸದರಾಗಲಿ ಇದರ ಬಗ್ಗೆ ಗಮನಿಸುತ್ತಿಲ್ಲ. ಪ್ರಕೃತಿ ವಿಕೋಪದ ಸಮಯದಲ್ಲಿ ಬಂದು ಸಾಂತ್ವನ ಹೇಳಿ ಹೋದ ಮೇಲೆ ವಾಪಸ್ ತಿರುಗಿ ಕೂಡ ನೋಡಿಲ್ಲ. ಇಲ್ಲಾಂದ್ರೆ ಶಾಲೆಯನ್ನೇ ಅವರ ಹೆಸರಿಗೆ ಬರ್ಯೋ ಯೋಚನೆ ಇದ್ರೆ ಬರೆದು ಅಲ್ಲೇ ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡಿ ಅಂತ ಸಭಾಧ್ಯಕ್ಷ ಹಾಗೂ ಸಂಸದರನ್ನ ತಿವಿದಿದ್ದಾರೆ.