ಹೊಳೆಗೆ ಬಿದ್ದ ಕಾರು, ನಾಲ್ವರ ಸಾವು

ಆದ್ಯೋತ್ ಸುದ್ದಿ ನಿಧಿ : ಪ್ರವಾಸಕ್ಕೆಂದು ಬಂದು ಜಲಪಾತವನ್ನು ನೋಡಿ ವಾಪಸ್ ಹೋಗುತ್ತಿರುವ ಕಾರೊಂದು ಹೊಳೆಗೆ ಹಾರಿ 4 ಜನ ಮೃತಪಟ್ಟ ದಯನೀಯ ಘಟನೆ ಸಿದ್ದಾಪುರದ ಕೋಡ್ನಮನೆ ಸಮೀಪ ನಡೆದಿದೆ.

ಗೆಳೆಯನ ಆರೋಗ್ಯ ವಿಚಾರಿಸಿಕೊಂಡು ಉಂಚಳ್ಳಿ ಜಲಪಾತಕ್ಕೆ ಒಂದೇ ಕುಟುಂಬದ 2 ಜನ ಯುವಕರು ಹಾಗೂ 2 ಜನ ಯುವತಿಯರು ಬಂದಿದ್ದರು. ಜಲಪಾತ ವೀಕ್ಷಿಸಿ ವಾಪಸ್ ಹೋಗುವಾಗ ಕೋಡನಮನೆಯ ಹೊಳೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗುರುಳಿದ ಕಾರು ನೀರಿನ ಹರಿವಿನ ರಭಸಕ್ಕೆ ನೀರಿನಲ್ಲೇ ಸುಮಾರು 100 ಮೀಟರ್ ದೂರ ತೇಲಿ ಹೋಗಿ ಮುಳುಗಿದೆ. ಬುಧವಾರ ರಾತ್ರಿಯೇ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ಬೆಳಕಿಗೆ ಬಂದಿದೆ. ನಂತರ ವಿಷಯ ತಿಳಿದ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ಹೊಳೆಯ ತೀರಕ್ಕೆ ಎಳೆದು ತಂದು ಅದರಲ್ಲಿದ್ದ ನಿಶ್ಚಲ್, ಸುಷ್ಮಾ ಹಾಗೂ ರೋಷನ್ ಎನ್ನುವವರ ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ. ಕಳೆದುಹೋಗಿರುವ ಅಕ್ಷತಾ ಹಿರೇಮಠ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಶಿವಪ್ರಕಾಶ ದೇವರಾಜು ತೆರಳಿ ಮಾಹಿತಿ ಪಡೆದಿದ್ದು, ಇನ್ನೊಂದು ಶವದ ಹುಡುಕಾಟಕ್ಕಾಗಿ ತಂಡವನ್ನ ರಚಿಸಿ ಪತ್ತೆ ಕಾರ್ಯ ಮುಂದುವರೆಸಲಾಗಿದೆ.

About the author

Adyot

Leave a Comment