ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರೊಡನೆ ಆದ್ಯೋತ್ ನ್ಯೂಸ್ ಸಂದರ್ಶನ –
ಮೊದಲು ಪಾರ್ಥಸಾರಥಿಯವರ ಬಗ್ಗೆ ಒಂದಿಷ್ಟು ಮಾಹಿತಿ –
ಹರಿದಾಸ ಸಾಹಿತ್ಯ ಪ್ರವೀಣ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ
************************************
ಆದ್ಯೋತ: ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡಿದ್ದು ಹೇಗೆ?
ಡಾ.ಪಾರ್ಥಸಾರಥಿ : ನಮ್ಮದು ಹರಿದಾಸ ಮನೆತನ. ದಾಸ ಸಾಹಿತ್ಯ ನನ್ನ ಸುಪ್ತಮನಸ್ಸಿನಲ್ಲಿ ಹರಿದಾಡುತ್ತಿತ್ತು. ಪ್ರಾಥಮಿಕ ಶಿಕ್ಷಣದ ನಂತರದ ವ್ಯಾಸಂಗಗಳು ಬೇರೆ ಬೇರೆಯಾದರೂ ನನ್ನ ಮನಸ್ಸಿನಲ್ಲಿ ಅಡಗಿದ್ದ ದಾಸ ಸಾಹಿತ್ಯ ನನ್ನ ವೃತ್ತಿಯನ್ನು ಬಿಟ್ಟು ಈ ಪ್ರಪಂಚಕ್ಕೆ ಬರುವಂತೆ ಮಾಡಿತು.
ಆದ್ಯೋತ: ಧಾರ್ಮಿಕವಾಗಿ ಹಿಂದೂ ಧರ್ಮದಲ್ಲಿರುವ ಬಹುತೇಕ ದೇವರುಗಳ ಸಹಸ್ರನಾಮವಿದೆ. ಆದರೆ ನೀವು ವಿಷ್ಣುಸಹಸ್ರನಾಮದ ಬಗ್ಗೆ ಒಲವು ಹೊಂದಿರುವುದು ಯಾಕೆ?
ಡಾ.ಪಾರ್ಥಸಾರಥಿ: ಮಹಾಭಾರತದ ಯುದ್ಧ ಮುಗಿದು ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದು ದೇಹತ್ಯಾಗಕ್ಕಾಗಿ ಉತ್ತರಾಯಣ ಪರ್ವ ಕಾಲವನ್ನು ನಿರೀಕ್ಷಿಸುತ್ತಿದ್ದ ಸಮಯದಲ್ಲಿ ಧರ್ಮರಾಯಾದಿ ಪಾಂಡವರು ಅಲ್ಲಿಗೆ ಬಂದು ಭೀಷ್ಮರಿಂದ ಆಡಳಿತಾತ್ಮಕ, ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆಯುತ್ತಾರೆ. ಆ ಸಂದರ್ಭದಲ್ಲಿ ಧರ್ಮರಾಯ ಒಂದು ಪ್ರಶ್ನೆಯನ್ನು ಕೇಳುತ್ತಾನೆ, ದ್ವಾಪರಯುಗದ ಕೊನೆಯ ಭಾಗದಲ್ಲಿ ನಾವಿದ್ದೇವೆ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ ನಮ್ಮ ಜೊತೆಗಿದ್ದಾನೆ. ಈ ದ್ವಾಪರ ಯುಗ ವೇದ,ಉಪನಿಷತ್ ಗಳು ಜನಸಾಮಾನ್ಯರಿಗೂ ಅರ್ಥವಾಗುವಂತಹ ಯುಗ, ಆದರೆ ಬರಲಿರುವ ಕಲಿಯುಗದಲ್ಲಿ ಜನಸಾಮಾನ್ಯರಿಗಿರಲಿ ಪಂಡಿತರೆನಿಸಿಕೊಂಡವರಿಗೂ ಇವು ಕಬ್ಬಿಣದ ಕಡಲೆಯಾಗಿರುತ್ತದೆ. ಎಲ್ಲರಿಗೂ ಒಳಿತಾಗುವ ಒಂದು ಸ್ತೋತ್ರವನ್ನು ಹೇಳು ಎಂದು ಕೇಳಿದಾಗ ಭೀಷ್ಮರು ತಕ್ಷಣದಲ್ಲಿ ಹೇಳಿದ್ದು ವಿಷ್ಣುಸಹಸ್ರನಾಮ.
ಆದ್ಯೋತ: ಭೀಷ್ಮರ ಈ ನುಡಿ ನಿಮಗೆ ಸ್ಪೂರ್ತಿಯೇ?
ಡಾ.ಪಾರ್ಥಸಾರಥಿ: ಖಂಡಿತ ಹೌದು. ವಿಷ್ಣು ಸಹಸ್ರನಾಮದಲ್ಲಿ ಆಧ್ಯಾತ್ಮಿಕ, ಅಲೌಕಿಕ ಆನಂದವಿದೆ, ಹೀಗಾಗಿ ಗ್ಲೋಬಲ್ ಸಂಸ್ಥೆಯನ್ನು ಸ್ಥಾಪಿಸಿ ವಿಷ್ಣು ಸಹಸ್ರನಾಮದ ಪ್ರಚಾರದಲ್ಲಿ ತೊಡಗಿದ್ದೇನೆ. ನಮ್ಮ ಸನಾತನ ಪರಂಪರೆ, ಸಂಸ್ಕೃತಿ ಉಳಿಸುವ ಕೆಲಸವಾಗಬೇಕಾಗಿದೆ. ಜಗತ್ತಿಗೆ ಆಧ್ಯಾತ್ಮವನ್ನು ಕೊಟ್ಟಿದ್ದು ನಮ್ಮ ದೇಶ, ಹೀಗಾಗಿ ವಿಶ್ವದ 48 ದೇಶಗಳಲ್ಲಿ ವಿಷ್ಣುಸಹಸ್ರನಾಮದ ಪಠಣೆ ಹಾಗೂ ಉಪನ್ಯಾಸವನ್ನು ನೀಡಿದ್ದೇನೆ. ಇದನ್ನೊಂದು ರಾಷ್ಟ್ರೀಯ ಅಭಿಯಾನವನ್ನಾಗಿ ನಡೆಸುತ್ತಿದ್ದೇನೆ.
ಆದ್ಯೋತ: ರಾಮಚಂದ್ರಾಪುರ ಮಠದಲ್ಲಿ ನಡೆಯಲಿರುವ ಕೃಷ್ಣಾರ್ಪಣಮ್ ಕಾರ್ಯಕ್ರಮದ ಕುರಿತು?
ಡಾ.ಪಾರ್ಥಸಾರಥಿ: ಕೃಷ್ಣಾರ್ಪಣಮ್ ಒಂದು ವಿಶಿಷ್ಟ ಕಾರ್ಯಕ್ರಮ. ಶ್ರೀ ರಾಘವೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಕಾಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸಹಸ್ರ ಸಂಖ್ಯೆಯ ರಜತ ಛತ್ರಿಗಳು ಅಂದು ಗೋವರ್ಧನ ಗಿರಿಧಾರಿಗೆ ಸಮರ್ಪಣೆಯಾಗಲಿದೆ. ಐದುಸಹಸ್ರ ಜನರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣೆಯಾಗಲಿದೆ. ಎರಡು ಹಂತದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷ್ಣಾರ್ಪಣಮ್ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರು ತಮ್ಮ ಮನೆಯಲ್ಲೇ ಮಾರ್ಚ 3ರ ವರೆಗೆ 33 ಸಲ ವಿಷ್ಣುಸಹಸ್ರನಾಮವನ್ನು ಪಠಿಸಿ ಸಮರ್ಪಣೆ ಮಾಡಬಹುದು. ಇದೊಂದು ಅಪೂರ್ವ ಕಾರ್ಯ ಕ್ರಮವಾಗಿದ್ದು ನಮ್ಮ ಸನಾತನ ಪರಂಪರೆಯನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ.