ಆದ್ಯೋತ್ ಸುದ್ದಿನಿಧಿ:
ರಾಜ್ಯದ ರಾಜಕೀಯದಲ್ಲಿ ಹಲವು ಅನಿರೀಕ್ಷಿತ ಬೆಳವಣಿಗೆಗಳಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಗಂಡನಾಗಿರುವ ಬಿ.ಎಸ್.ಯಡಿಯೂರಪ್ಪನವರ ಆಡಳಿತದಲ್ಲಿ ತಪ್ಪು ಹುಡುಕುವ ಕಾರ್ಯಕ್ಕೆ ಮತ್ತೆ ಚುರುಕು ಹೆಚ್ಚುತ್ತಿದೆ.
ಅಪರೇಷನ್ ಕಮಲದಡಿಯಲ್ಲಿ ಕಾಂಗ್ರೇಸ್- ಜೆಡಿಎಸ್ ಮೈತ್ರಿಕೂಟವನ್ನು ಉರುಳಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಯಡಿಯೂರಪ್ಪನವರಿಗೆ ಅಂಕುಶ ಹಾಕುವುದರ ಜೊತೆಗೆ ಅವರನ್ನು ಪಟ್ಟದಿಂದ ಉರುಳಿಸಯವ ಕೆಲಸವನ್ನು ಬಿಜೆಪಿ ಹೈಕಮಾಂಡ್ ನಿರಂತರವಾಗಿ ಮಾಡುತ್ತಿದೆ.
ಮೊದಲು ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕುವ ಮೂಲಕ ಯಡಿಯೂರಪ್ಪನವರನ್ನು ತಡೆಯಲಾಯಿತು.
ಅಧಿಕಾರಕ್ಕೇರಿದ ಕೆಲವೇ ದಿನದಲ್ಲಿ ರಾಜ್ಯ ಪ್ರವಾಹದಲ್ಲಿ ಮುಳುಗಿತು ಮಂತ್ರಿಗಳೇ ಇಲ್ಲದ ಸರಕಾರದಲ್ಲಿ ಯಡಿಯೂರಪ್ಪ ಏಕಾಂಗಿಯಾಗಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದರು. ಪ್ರವಾಹ ಪೀಡಿತರಿಗೆ ನೆರವು ನೀಡುವಾಗಲೂ ಕೇಂದ್ರಸರಕಾರ ಯಡಿಯೂರಪ್ಪನವರನ್ನು ನಿರ್ಲಕ್ಷಿಸಿತು ಇದರಿಂದ ಅವರ ಇಮೇಜ್ ಕಡಿಮೆಯಾಗಲಿ ಎಂದು ಹೈಕಮಾಂಡ ಭಾವಿಸಿರಬೇಕು.
ನಂತರದಲ್ಲಿ ಸಂಪುಟ ವಿಸ್ತರಣೆಯಾದರೂ ಮೂರು-ನಾಲ್ಕು ಉಪಮುಖ್ಯಮಂತ್ರಿಗಳನ್ನು ಹಾಕುವುದರ ಜೊತೆಗೆ ಯಡಿಯೂರಪ್ಪನವರ ಬೆಂಬಲಿಗರು ಮಂತ್ರಿಗಳಾಗದಂತೆ ನೋಡಿಕೊಳ್ಳಲಾಯಿತು.
ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಬರಬೇಕಾದ ರಾಜ್ಯದ ಅನುದಾನದ ಪಾಲು ಸರಳವಾಗಿ ಬರಲೇ ಇಲ್ಲ ಒಟ್ಟಾರೆ ಯಡಿಯೂರಪ್ಪನವರಿಗೆ ರಾಜ್ಯದ ಆಡಳಿತ ಮಾಡಲು ಬರುವುದಿಲ್ಲ ಎಂದು ಬಿಂಬಿಸುವ ಎಲ್ಲಾ ಪ್ರಯತ್ನ ಮಾಡಲಾಯಿತು. ಯಡಿಯೂರಪ್ಪನವರು ತನ್ನೆಲ್ಲ ರಾಜಕೀಯ ಅನುಭವದ ಜೊತೆಗೆ ಬಿಜೆಪಿ ಸರಕಾರ ಬರಲು ಪರೋಕ್ಷವಾಗಿ ಸಹಾಯ ಮಾಡಿದ್ದ ಸಿದ್ದರಾಮಯ್ಯನವರ ನೆರವಿನಿಂದ ಆಡಳಿತ ನಡೆಸತೊಡಗಿದ್ದರು.
ಆದರೆ ಕೊವಿಡ್ ಎಂಬ ಮಹಾಮಾರಿ ರಾಜ್ಯಕ್ಕೆ ವಕ್ಕರಿಸಿದಾಗ ಯಡಿಯೂರಪ್ಪ ಕಂಗಾಲಾದರು. ಹೈಕಮಾಂಡಿಂದ ಹೇರಲ್ಪಟ್ಟ ಉಪಮುಖ್ಯಮಂತ್ರಿಗಳು ನೆರವಿಗೆ ಬರುವುದು ಬಿಟ್ಟು ಪರಿಸ್ಥಿತಿಯನ್ನು ಹದಗೆಡಿಸಿದರು.ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದಂತೆ ಏಕಾಂಗಿಯಾಗಿ ಕೊವಿಡ್ ಪರಿಸ್ಥಿತಿ ಎದುರಿಸಲು ಅವರಿಂದ ಆಗಲಿಲ್ಲ.ಕುಟುಂಬದ ಸದಸ್ಯರು,ಆಪ್ತರು ಬಾಯ್ತೆರೆದು ಕುಳಿತರು.ದಿನಕ್ಕೊಂದು ನಿಯಮ,ಒಬ್ಬೊಬ್ಬ ಸಚೀವರ ಒಂದೊಂದು ಹೇಳಿಕೆ,ಲಾಕ್ ಡೌನ್,ಸೀಲ್ ಡೌನ್ ಎಂಬ ಜೋಕು,ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳ ಬೇಕಾದ ಅನಿವಾರ್ಯತೆಯಲ್ಲಿರುವ ಸಿದ್ದರಾಮಯ್ಯನವರಿಂದ ಬಂದ ಬ್ರಷ್ಟಾಚಾರ ಆರೋಪ,ದಿನ ದಿನಕ್ಕೆ ಹೆಚ್ಚುತ್ತಿರುವ ಕೊವಿಡ್ ಮಹಾಮಾರಿ,ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿ
ಇವೆಲ್ಲವು ಯಡಿಯೂರಪ್ಪನವರು ವಿಫಲರಾಗುತ್ತಿದ್ದಾರೆ ಎಂದು ಬಿಂಬಿಸುವಲ್ಲಿ ಸಹಾಯ ಮಾಡುತ್ತಿದೆ.ಇದೆಲ್ಲದರ ಜೊತೆಗೆ ಎಲ್ಲರನ್ನು ಸಮಾಧಾನ ಪಡಿಸಲು ಹೊರಟಿರುವ ಅವರ ಸ್ವಯಂಕೃತ ಅಪರಾಧ.
ಈಗ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸುವ ವೇದಿಕೆ ಸಜ್ಜಾಗುತ್ತಿದೆ.ದೇವರಾಜ ಅರಸು ಕಾಲದಿಂದ ಪ್ರಾರಂಭವಾದ ಜಾತಿರಾಜಕಾರಣ ಇಂದು ಉತ್ತುಂಗದಲ್ಲಿದೆ.ಪ್ರಬಲ ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪನವರನ್ನು ಹೊರತು ಪಡಿಸಿ ಎಲ್ಲಾ ಒಳಪಂಗಡಗಳನ್ನು ಜೊತೆಗೆ ಕರೆದೊಯ್ಯುವ ನಾಯಕರಿಲ್ಲ.ಯಡಿಯೂರಪ್ಪನವರನ್ನು ಇಳಿಸಿದರೆ ಪಕ್ಷವನ್ನು
ಬೆಂಬಲಿಸುವ ಬಹುದೊಡ್ಡ ಸಮುದಾಯ ದೂರವಾದರೆ ಎಂಬ ಭಯ ಬಿಜೆಪಿಗೆ ಇದೆ ಇದೇ ಕಾರಣದಿಂದ ಒಂದು ಪ್ರಯೋಗಕ್ಕೆ ಬಿಜೆಪಿ ಮುಂದಾಗುತ್ತಿದೆ ಎನ್ನಲಾಗುತ್ತಿದೆ.
ಆದ್ಯೋತ್ ನ್ಯೂಸ್ ಗೆ ದೊರೆತ ಮಾಹಿತಿಯ ಪ್ರಕಾರ ಹಾಲಿ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ ಯಡಿಯೂರಪ್ಪನವರ ಮಗ ವಿಜಯೇಂದ್ರ ಸೇರಿದಂತೆ ಲಿಂಗಾಯತ ಸಮುದಾಯದವರಿಗೆ ಕ್ಯಾಬಿನೆಟ್ ದರ್ಜೆಯ ಸಚೀವರನ್ನಾಗಿ ಮಾಡುವುದು.ಇದರಿಂದ ಲಿಂಗಾಯತ ಸಮುದಾಯವನ್ನು ಸಮಾಧಾನ ಪಡಿಸಿದಂತೆ ಆಗುವುದು ಯಡಿಯೂರಪ್ಪನವರನ್ನು ಹಿನ್ನೆಲೆಗೆ ಸರಿಸಿದಂತಾಗುವುದು.ಒಂದು ವೇಳೆ ಲಿಂಗಾಯತ ಸಮುದಾಯ ದೊಡ್ಡಮಟ್ಟದಲ್ಲಿ ಅಸಮಧಾನಗೊಂಡರೆ ಪರ್ಯಾಯ ನಾಯಕನನ್ನು ರೂಪಿಸುವುದು ಇಲ್ಲವಾದಲ್ಲಿ ಅನಿರೀಕ್ಷಿತ ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ನೀಡುವುದು ಇದು ಬಿಜೆಪಿ ಹೈಕಮಾಂಡನ ಯೋಜನೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿಯಾಗಿ ಕಾಗೇರಿಯವರನ್ನೆ ಯಾಕೆ ಆಯ್ಕೆ ಮಾಡಲಾಗುತ್ತಿದೆ?
ಇದು ಒಂದು ಪ್ರಯೋಗ ಒಮ್ಮೆ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕುಳಿತವರು ಏಳಲು ಮನಸ್ಸು ಮಾಡುವುದಿಲ್ಲ.ಆದರೆ ವಿಶ್ವೇಶ್ವರ ಹೆಗಡೆಯವರು ಪಕ್ಷಕ್ಕೆ ಅತಿಯಾದ ನಿಷ್ಠೆಯುಳ್ಳವರು.
ಸತತವಾಗಿ ಆರು ಬಾರಿ ಶಾಸಕರಾದವರು,ಮಂತ್ರಿಗಳಾಗಿ,ಕಳೆದೊಂದು ವರ್ಷದಿಂದ ಸ್ಪೀಕರ್ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಅನುಭವವುಳ್ಳವರು.ಬಿಜೆಪಿಯ ಅಪರೇಷನ್ ಕಮಲದ ಸಮಯದ ರೆಸಾಟ್೯ ರಾಜಕಾರಣದಲ್ಲಿ
ಹಿರಿಯರಾದರೂ ಎಲ್ಲರಿಗಿಂತ ಮೊದಲು ರೆಸಾಟ್೯ಗೆ ಹೋಗುವ ಮೂಲಕ ಪಕ್ಷ ನಿಷ್ಠೆ ತೋರಿಸಿದವರು ಹೈಕಮಾಂಡ ಮಾತನ್ನು ಮೀರಿದವರಲ್ಲ ಖುರ್ಚಿ ಬಿಡಬೇಕು ಎಂದು ಸೂಚಿಸಿದರೆ ಯಾವುದೇ ಷರತ್ತುಗಳನ್ನು ಹಾಕದೆ ಅಧಿಕಾರ ಬಿಡಲು ಸಿದ್ದವಾದವರು.ಸಂಘಪರಿವಾರದ ಶಿಸ್ತಿನ ಸಿಪಾಯಿ,
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯಲ್ಲಿರುವ ಎರಡು-ಮೂರು ಬಣದವರೊಡನೆಯೂ ಸೌಹಾರ್ಧಸಂಬಂಧವನ್ನು ಇಟ್ಟುಕೊಳ್ಳುವುದರ ಜೊತೆಗೆ ಯಾವುದೇ ಬಣದ ಜೊತೆಗೆ ಗುರುತಿಸಿಕೊಳ್ಳದೇ ಇರುವುದು.
ವಿರೋಧ ಪಕ್ಷವಾದ ಕಾಂಗ್ರೇಸ್ ಹಾಗೂ ಜೆಡಿಎಸ್ ನಾಯಕರ ವಿಶ್ವಾಸಗಳಿಸಿಕೊಂಡಿರುವುದು ಈ ಎಲ್ಲ ಸಕಾರಣಗಳು ಕಾಗೇರಿಯವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಹತ್ತಿರ ತರುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ರಾಜಕಾರಣದಲ್ಲಿ ಅನಿರೀಕ್ಷಿತ ಗಿಮಿಕ್ ಮಾಡುತ್ತಿರುವ ಬಿಜೆಪಿ ರಾಜ್ಯದಲ್ಲೂ ಯಾವುದೋ ಗಿಮಿಕ್ ಮಾಡುತ್ತದೆ ಎಂದು ರಾಜ್ಯದ ಒಂದಿಷ್ಟು ಜನರು ನಿರೀಕ್ಷಿಸುತ್ತಿದ್ದಾರೆ.
ಈ ಬಗ್ಗೆ ಆದ್ಯೋತ್ ನ್ಯೂಸ್ ಜೊತೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು,ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸುವ ಯಾವ ಪ್ರಸ್ತಾಪವೂ ಇಲ್ಲ. ಇವೆಲ್ಲ ಕೇವಲ ಸುದ್ದಿ ಮುಂದಿನ ಪೂರ್ತಿ ಅವಧಿಗೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ
ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ ಪಕ್ಷವು ನನಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದೆ.ಸ್ಪೀಕರ್ ನಂತಹ ದೊಡ್ಡ ಹಾಗೂ ಗೌರವಯುತವಾದ ಹುದ್ದೆಯನ್ನು ನೀಡಿದೆ.ಇದಕ್ಕಿಂತ ಹೆಚ್ಚಿನ ಆಸೆಯಾಗಲಿ,ನಿರೀಕ್ಷೆಯಾಗಲಿ ನನಗೆ ಇಲ್ಲ ಎಂದು ಹೇಳಿದರು