ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ತೇಜಸ್ವಿ ಎಂಬ ವಿಸ್ಮಯ…….
ಗಂಡಿನಮನೆಯಲ್ಲಿ ನೆಂಟರೂಟ ಮುಗಿಸಿ ಬಂದ ಮರುದಿನ ಆ ಸಹೋದರಿಯರ ಮನೆಯಲ್ಲಿ ನೆಂಟರೂಟ. ಮದುವೆ ದಿನ ಸಿಹಿ ಊಟ ಆಗಿದ್ದರಿಂದ ಅವತ್ತು ಮೂಗಿಗೆ ಅಡರದ ಹೊಸ ಪರಿಮಳ ಅವತ್ತು ಘ್ರಾಣೇಂದ್ರಿಯವನ್ನು ತಟ್ಟಿತು.

ಮನೆಯಲ್ಲಿದ್ದ ನೆಂಟರಿಷ್ಟರು, ಹುಡುಗರು ಬೆಳಿಗ್ಗೆಯಿಂದಲೇ ಒಂಥರಾ ಹೊಸ ಥರದ ಲವಲವಿಕೆಯಲ್ಲಿ ಓಡಾಡತೊಂಡಗಿದ್ದು ಮೊದಲು ಕುತೂಹಲ ತಂದರೂ ಮಧ್ಯಾಹ್ನದ ಹೊತ್ತಿಗೆಲ್ಲ ಅದರ ಹಿಂದಿನ ರಹಸ್ಯ ಹೊರಬೀಳತೊಡಗಿತು. ಮೆತ್ತಿಯ ಮೇಲೆ ಕೂತಿದ್ದ ನನ್ನನ್ನು ತಟ್ಟತೊಡಗಿದ ಮಸಾಲೆ ಘಾಟಿನ ಆ ಪರಿಮಳ ನನ್ನಂಥ ಪುಳಿಚಾರನ್ನೇ ಅಲ್ಲಾಡಿಸಿರಬೇಕಾದರೆ ಅದನ್ನ ಇಷ್ಟಪಡುವ ಅವರಿಗೆ ಏನಾಗಿರಬೇಡ? ಬೇಕೆಂತಲೇ ನಾನು ಏನೋ ನೆಪ ಮಾಡಿಕೊಂಡು ಹೋಗಿ ಮನೆಯ ಹಿಂದಿನ ಅಂಗಳದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಅಡುಗೆ ಮನೆಯೊಳಕ್ಕೆ ಹಣಿಕಿದೆ. ಇಬ್ಬರು ಬಾಣಸಿಗರು ಅಡುಗೆಯ ಸಿದ್ಧತೆಯಲ್ಲಿದ್ದರು. ಕಟ್ಟಿಗೆಯ ಹೊಗೆ, ಕಾಯುವ ನೀರಿನ ಹಬೆ, ಇವೆಲ್ಲವುದರ ನಡುವೆ ಸಂಭಾರು ಪದಾರ್ಥದ ಕಡು ಘಾಟುಗಳ ಮಧ್ಯೆ ಆ ಬಾಣಸಿಗರು ಅವತ್ತಿನ ಕೇಂದ್ರ ಬಿಂದುವಾಗಿದ್ದರು.
ಈ ಎಲ್ಲ ಗಡಿಬಿಡಿಗಳ ಮಧ್ಯೆ ಆ ಹೆಣ್ಣುಮಕ್ಕಳಲ್ಲಿ ಓರ್ವಳನ್ನು ‘ಇವತ್ತಿನ ವಿಶೇಷ ಏನು?’ ಎಂದೆ. ಅವಳು ಹೇಳಿದ್ದು ಕೇಳಿ ತಲೆ ತಿರುಗಿ ಹೋಯ್ತು. ಚಿತ್ರಗಳಲ್ಲಿ ನೋಡಿ, ಮಾತುಗಳಲ್ಲಿ ಕೇಳಿ ಗೊತ್ತಿದ್ದ ಹೆಸರುಗಳನ್ನ ಹೇಳಿದಾಗ ಅಬ್ಬಾ! ಇವರು ನಿಜಕ್ಕೂ ಕಾಫಿ ಗೌಡರೇ’ ಅನ್ನಿಸಿತು. ಮೇಕೆ, ಆಡು ಕುರಿ, ನಾಟಿ ಕೋಳಿ, ಫೌಲ್ಟ್ರಿ ಕೋಳಿ, ಫಾರಂ ಹಂದಿ, ಎರಡು ಬಗೆಯ ದೊಡ್ಡ ಮೀನು( ಅದೇನೋ ಹೆಸರು ,ಈಗ ನೆನಪಿಲ್ಲ) ಮುಂತಾದವುಗಳಿಂದ ಪ್ರತಿಯೊಂದರಲ್ಲೂ ಕನಿಷ್ಠ ತಲಾ ನಾಲ್ಕಾರು ಬಗೆಯ ಖಾದ್ಯಗಳು, ಅದಕ್ಕೆ ಸಾಥ್ ಕೊಡಲು ಶಕ್ತಿ ಮದ್ದುವಾಗಿ ವೈನ್ ಸ್ಟೋರ್‍ನಲ್ಲಿ ದೊರೆಯುವ ಎಲ್ಲ ಬಗೆಯ ಮದ್ಯಗಳು, ಊರಲ್ಲೇ ತಯಾರಿಸಿದ ಬಟ್ಟಿ ಹೆಂಡ, ವಿಶೇಷವಾಗಿ ತರಿಸಿದ ಬಗಿನೆ ಕಳ್ಳು- ಈ ಎಲ್ಲ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ಕೊಡಬಹುದಾದ( ಆ ಥರ ಉದ್ದದ ಮೆನ್ಯೂ ಇರುತ್ತದೆ ಅಂಥ ಕೇಳಿದ್ದು, ಈವರೆಗೆ ನೋಡುವ ಭಾಗ್ಯ ದೊರೆತಿಲ್ಲ) ಆ ದಿನದ ಖಾದ್ಯ,ತೀರ್ಥಗಳ ಪಟ್ಟಿ ಕೊಟ್ಟಾಗ ಕಕ್ಕಾಬಿಕ್ಕಿಯಾಗಿಬಿಟ್ಟೆ. ಅವುಗಳಲ್ಲಿ ಹಲವು ಹೆಸರುಗಳು ನನಗೆ ಅಪರಿಚಿತವಾದಂಥವು. (ಇದನ್ನು ನಾನು ಸಾಧಾರಣಿಕರಿಸಿ ಅಥವಾ ಒಂದು ಜನಾಂಗದ ಟೀಕೆಯ ಭಾವನೆಯಲ್ಲಿ ವಿವರಿಸದೇ ಅತ್ಯಂತ ಗೌರವದಿಂದ ಹೇಳುತ್ತಿದ್ದೇನೆ. ಮನುಷ್ಯನಿಗೆ ಬದುಕಲು ಆಹಾರ ಮುಖ್ಯ. ಅದು ಯಾವುದೇ ಇರಬಹುದು. ಆದರೆ ಆ ಆಹಾರ ಮಾನವೀಯತೆಯನ್ನು ತಿನ್ನಬಾರದು ಎನ್ನುವದಷ್ಟೇ ಕಾಳಜಿ)

ನಮ್ಮನೆಯಲ್ಲೂ ಒಂದು ಸೌತೆಕಾಯಿಯೋ, ಹಾಗಲಕಾಯಿಯೋ ಅದರಲ್ಲೇ ನಾಲ್ಕಾರು ಬಗೆಯ ಪದಾರ್ಥ ಮಾಡುತ್ತಾರೆ. ವಿಶೇಷ ಕಾರ್ಯಗಳಲ್ಲಂತೂ ನಾಲ್ಕಾರು ಬಗೆಯ ಸಿಹಿ ಖಾದ್ಯ, ಹತ್ತಾರು ಬಗೆಯ ವ್ಯಂಜನಗಳಿರುತ್ತವೆ. ನಮ್ಮದು ನಮಗೆ, ಅವರದ್ದು ಅವರಿಗೆ. ಅದರಲ್ಲಿ ಶ್ರೇಷ್ಠತೆಯ ಪ್ರಶ್ನೆಯೇ ಬರೋದಿಲ್ಲ. ಆದರೆ ಬುದ್ದಿನಿರ್ಜೀವಿಗಳಿಗೆ ಇದರಲ್ಲೇ ತಮ್ಮ ತುರಿಕೆ ಪರಚುವ ಚಟ.
ಅವತ್ತಿನ ನೆಂಟರೂಟದ ಪಟ್ಟಿಯನ್ನು ಕೇಳಿದ ನಾನು ಕಂಗಾಲಾಗಿಬಿಟ್ಟೆ. ನನಗೆ ಇವತ್ತು ಅನ್ನ ಸಿಗುವದು ಡೌಟ್ ಅನ್ನಿಸಿ ‘ನಂದೇನು ಕತೆ? ಬ್ಯಾಗ್ ಹೆಗಲಿಗೆ ಹಾಕಿ ಮೂಡಿಗೆರೆಗೆ ಹೊರಡಬೇಕಾಯ್ತೆನೋ?’ಎಂದೆ. ‘ ಇಲ್ಲಾ, ಸುಮ್ನಿರಿ, ನಿಮ್ಗೆ ಅಕ್ಕ ಸಪರೇಟಾಗಿ ಅಡುಗೆ ಮಾಡ್ತಿದಾಳೆ’ ಅಂದಳು. ಅವತ್ತೀಡಿ ಸಂಜೆಯ ತನಕ ನಾನು ಕೆಳಗಿಳಿಯಲೇ ಇಲ್ಲ. ಕಿಡಕಿಯಿಂದಲೇ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದೆ. ಎಲ್ಲರೂ ಸಂತೋಷದಲ್ಲಿ, ಸಂಬ್ರಮದಲ್ಲಿ ಮುಳುಗಿದ್ದರು.
ಸಂಜೆಯಾಗತೊಡಗಿದಂತೆ ಬಹುತೇಕ ವಿಶೇಷ ಕಾರ್ಯಗಳ ತರಾತುರಿ ಮುಗಿದ ನಂತರ ಆವರಿಸಿಕೊಳ್ಳುವ ಉದಾಸೀನತೆ ಅಲ್ಲಿಯವರನ್ನೆಲ್ಲ ಆವರಿಸಿಕೊಳ್ಳತೊಡಗಿತ್ತು. ಹೆಂಗಸರು ಗುಂಪು,ಗುಂಪಾಗಿ ಅಲ್ಲಲ್ಲಿ ಕೂತು ಮದುವೆಗೆ ಬಂದ ಹೆಂಗಸರ ಬಟ್ಟೆ,ಬರೆ, ವಿಶೇಷವಾಗಿ ಬಂಗಾರದ ಒಡವೆಗಳ, ಅವರ ನಡವಳಿಕೆಗಳ ಬಗ್ಗೆ ತಮ್ಮ ಅನಿಸಿಕೆಯನ್ನ ಹಂಚಿಕೊಳ್ಳುತ್ತಿದ್ದರು. ಗಂಡಸರು ಇಲ್ಲಿನ ಊಟ, ಇನ್ನಿತರ ವ್ಯವಸ್ಥೆಗಳ ಮುಂದೆ ಗಂಡಿನ ಕಡೆಯವರದ್ದು ಏನೂ ಅಲ್ಲ ಎಂದು ಮೂದಲಿಸುತ್ತ, ಈ ಮನೆಯವರನ್ನ ಹೊಗಳುತ್ತ ಸಂಜೆಯ ಪಾರ್ಟಿ ರಂಗ್ ಆಗಲು ವೇದಿಕೆ ಸಿದ್ಧಪಡಿಸುತ್ತಿದ್ದರು.
ಮಧ್ಯಾಹ್ನ ಲೇಟಾದರೂ ಪೊಗದಸ್ತಾಗಿ ನೆಂಟರೂಟ ಸವಿದಿದ್ದ ಕಾರಣ ಅವರಿಗೆಲ್ಲ ಹಸಿವಾಗಿರಲಿಲ್ಲವೇನೋ? ನನಗಂತೂ ಹಸಿವೆಯಾಗಿತ್ತು. ರಾತ್ರಿ ಎಂಟರ ಸುಮಾರಿಗೆ ನನಗೆ ಬಂದ ಊಟ ಮುಗಿಸುವಷ್ಟರಲ್ಲಿ ಮದುವೆ ಗಲಾಟೆಯಲ್ಲಿ ನನ್ನೊಡನೆ ನಾಲ್ಕಾರು ಮಾತು ಆಡಲೂ ಸಾಧ್ಯವಾಗದಿದ್ದ ಆ ಹೆಣ್ಣುಮಕ್ಕಳ ಅಮ್ಮ ನಾನಿದ್ದ ಮೆತ್ತಿಗೆ ಹತ್ತಿಬಂದು ನನ್ನೊಡನೆ ಕುಶಲೋಪರಿ ಮಾತನಾಡಲು ಕೂತರು. ಆಕೆ ತಾಯಿ ಹೃದಯದ ಯಜಮಾನಿತಿ. ಪಕ್ಕಾ ಚಿಕ್ಕಮಗಳೂರು ಕಡೆಯ ಗೌಡರ ಮಾತು, ನಡವಳಿಕೆ. ನನ್ನ ಜೊತೆ ತುಂಬಾ ಹೊತ್ತಿನವರೆಗೆ ಮಾತನಾಡುತ್ತ ಕೂತಲ್ಲಿ ಆಕೆಯನ್ನು ಹುಡುಕಿಕೊಂಡು ಹೆಂಗಸರು ಒಬ್ಬೊಬ್ಬರಾಗಿ ಮೇಲಕ್ಕೆ ಬರತೊಡಗಿದರು. ಅವರಿಗೂ ನನ್ನ ಬಗ್ಗೆ ಕುತೂಹಲ ಇತ್ತಲ್ಲ! ಸ್ವಲ್ಪ ಹೊತ್ತಿನಲ್ಲಿ ಎಣ್ಣೆ ಹೊಡೆಯುವ ಗಂಡಸರನ್ನು ಬಿಟ್ಟು ಮನೆಯಲ್ಲಿದ್ದ ಹೆಂಗಸರು, ಹುಡುಗ,ಹುಡುಗಿಯರು, ಚಿಳ್ಳೆ ಪಿಳ್ಳೆಗಳೆಲ್ಲ ಮೆತ್ತಿಯಲ್ಲಿ ಜಮಾಯಿಸಿಬಿಟ್ಟಿದ್ದರು. ಕೆಳಗಡೆ ಇದ್ದ ಕಾಫಿ ಗೌಡರುಗಳೆಲ್ಲ ಯಥಾನುಶಕ್ತಿ ಶಕ್ತಿದ್ರವ ಸೇವಿಸಿ ಮಲಗಿದ್ದರಬಹುದೆಂದು ಅಂದುಕೊಂಡೆ.
ಅಲ್ಲಲ್ಲಿ ಕೂತು ವಿಷಯ ವ್ಯಾಖ್ಯಾನ, ವಿಶ್ಲೇಷಣೆ ಮಾಡುತ್ತ ಹೆಂಗಸರು ಕೂತಿದ್ದರೆ, ಹುಡುಗರು ಗುಂಪಾಗಿ ಕೂತು ಅದೇನೋ ಆಟ ಆಡುತ್ತಿದ್ದರು. ನನ್ನ ಸುತ್ತ ಆ ಮೂವರು ಹೆಣ್ಣುಮಕ್ಕಳು, ಅವರ ತಾಯಿ, ಮತ್ತಿಬ್ಬರು ಹೆಂಗಸರು ಕೂತು ಮಾತನಾಡುತ್ತಿದ್ದರು. ಮೆತ್ತಿಯ ಈಡೀ ಹಜಾರದಲ್ಲಿ ಟ್ಯೂಬ್ ಲೈಟ್ ಬೆಳಕು ಹೊಮ್ಮುತ್ತಿತ್ತು. ಇದ್ದಕ್ಕಿದ್ದಂತೆ ಅಲ್ಲಿ ವ್ಯಕ್ತಿಯೊಂದರ ಪ್ರವೇಶವಾಯಿತು.
ಯಾರೆಂದು ನೋಡಿದರೆ ಆತ ಆ ಹೆಣ್ಣುಮಕ್ಕಳ ಅಣ್ಣ. ಅವರು ಬಂದ ರೀತಿ, ಅಸ್ಪಷ್ಟವಾಗಿ ಆಡುತ್ತಿದ್ದ ಮಾತು ಕೇಳಿದರೆ ಇವತ್ತೇನೋ ಬದಲಾವಣೆ ಆಗಿದೆ ಅನ್ನಿಸಿತು. ಅಲ್ಲಿದ್ದ ಜನರನ್ನು ನೋಡಿ ಹುರುಪು ಬಂತೋ, ಅಥವಾ ಯಾವುದೋ ವಿಶೇಷ ಶಕ್ತಿಯಿಂದಲೋ ಏಕಾಏಕಿ ಆತ ತಾನು ಈಗ ಏಕಪಾತ್ರಾಭಿನಯ ಮಾಡುವದಾಗಿ ಘೋಷಿಸಿಬಿಟ್ಟರು! ಅಲ್ಲಿದ್ದ ಹುಡುಗ, ಹುಡುಗಿಯರು, ಚಿಳ್ಳೆಪಿಳ್ಳೆಗಳು ಕರತಾಡನದ ಮೂಲಕ ಅದನ್ನು ಸ್ವಾಗತಿಸಿದರೆ ಹೆಂಗಸರು ಮುಸಿ,ಮುಸಿ ನಗುತ್ತ ಕಾಟಾಚಾರಕ್ಕೆ ‘ಎ.ಅದೆಲ್ಲ ಬ್ಯಾಡೋ’ಎಂದರು. ಅಲ್ಲೇ ಇದ್ದ ಆತನ ಪತ್ನಿ ಕೂಡ ಮುನಿಸು ತೋರಿದಂತೆ ಮಾಡಿದರೂ ಬೇಡ ಎನ್ನಲಿಲ್ಲ. ತಾಯಿ ಮಾತ್ರ ‘ಇವನಿಗೆ ಇವತ್ತು ಒಳ್ಳೇ ಹುರುಪು ಬಂತಲ್ಲ’ಎಂದರು. ಆ ಮೂವರು ಸಹೋದರಿಯರಲ್ಲಿ ಒಬ್ಬಳು ನನಗಷ್ಟೇ ಕೇಳಿಸುವಂತೆ ‘ಅಣ್ಣ ಬೈನೆ ಕಳ್ಳು ಕುಡಿದಿರಬೇಕು. ಕೆಳಗಡೆ ನೆಂಟ್ರಿಗೆ ಹಂಚುತ್ತಿದ್ದ’ ಎಂದಳು. ಅವಳು ಅಷ್ಟು ಸಣ್ಣದಾಗಿ ಹೇಳುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಅಷ್ಟರಲ್ಲಾಗಲೇ ಕಳ್ಳಿನ ಸುವಾಸನೆಯನ್ನು ಪಸರಿಸುವ ಮೂಲಕ ಆಕೆಯ ಅಣ್ಣ ಅಲ್ಲಿದ್ದವರಿಗೆಲ್ಲ ಅದನ್ನು ಗೊತ್ತುಪಡಿಸಿದ್ದರು.
ತಾನೀಗ ಬಬ್ರುವಾಹನ ಸಿನೆಮಾದಲ್ಲಿ ಅರ್ಜುನ ಮತ್ತು ಬಬ್ರುವಾಹನನ ನಡುವಿನ ವಾಗ್ವಾದವನ್ನು ಅಭಿನಯಿಸುವದಾಗಿ ಹೇಳಿ ಹಜಾರದ ನಡುವೆ ನಿಂತು ಡೈಲಾಗ್ ಶುರುವಿಟ್ಟರು. ಅರ್ಜುನನಾಗಿ ಒಂದುಕಡೆ, ಬಬ್ರುವಾಹನನಾಗಿ ಇನ್ನೊಂದು ನಿಂತು ವಾಗ್ಜರಿ ಹರಿಸುತ್ತ, ಅತ್ತಿಂದಿತ್ತ ಓಡಾಡುತ್ತ ಅಭಿನಯಿಸತೊಡಗಿದ ಏಕಪಾತ್ರಾಭಿನಯ ಅಲ್ಲಿದ್ದವರಿಂದ ಮೆಚ್ಚುಗೆಗೆ ಪಾತ್ರವಾಯಿತು. ಇದರಿಂದ ಉತ್ತೇಜಿತರಾದ ಅವರು ಮತ್ತ್ಯಾವುದೋ ನಾಟಕದ ಡೈಲಾಗ್ ಗಳಿಗೆ ಶುರುವಿಟ್ಟರು. ನಿಜಕ್ಕೂ ಅವರಲ್ಲಿ ಪ್ರತಿಭೆ ಇರುವದು ಗೊತ್ತಾಗುತ್ತಿತ್ತು. ಆದರೆ ಅಗತ್ಯವಾದ ಶಿಸ್ತು, ಕ್ರಮ ಇರಲಿಲ್ಲ ಅಷ್ಟೇ. ತನ್ನೆದುರಿನ ಪ್ರೇಕ್ಷಕರಿಂದ ದೊರೆಯುತ್ತಿದ್ದ ಚಪ್ಪಾಳೆ, ಶಹಬ್ಬಾಸ್‍ಗಿರಿಗೆ ಉಬ್ಬಿಹೋದ ಆತ ಮೊದಲು ಸಣ್ಣನೆಯ ಸ್ವರದಲ್ಲಿ ಡೈಲಾಗ್ ಹೇಳುತ್ತಿದ್ದವರು ಎತ್ತರದ ಸ್ವರದಲ್ಲಿ ಹೇಳತೊಡಗಿದರು. ಅವರ ಏಕಪಾತ್ರಾಭಿನಯ ನಿರಂತರವಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ನಡೆಯಿತು. ನಗಗಂತೂ ಹೊಟ್ಟೆ ನೋಯುವಷ್ಟು ನಗು. ಹುಡುಗರೆಲ್ಲ ಹೋಯ್ ಎಂದು ಪ್ರೋತ್ಸಾಹ ಕೊಡುತ್ತಿದ್ದುದಕ್ಕೆ ಆತ ನಾಟಕದ ಹಾಡಿನ ಮಟ್ಟೊಂದನ್ನು ತಾರಕ ಸ್ವರದಲ್ಲಿ ಹಾಡತೊಡಗಿದರು.
ಅಷ್ಟರಲ್ಲಿ ಕೆಳಗಿನಿಂದ ಕೂಗಿನ ಗುಡುಗೊಂದು ಅಪ್ಪಳಿಸಿದಂತಾಯಿತು. ಒಳ್ಳೇ ಜೋಶ್ ನಲ್ಲಿದ್ದ ಆತ ಅದನ್ನು ಗಮನಿಸಲಿಲ್ಲ. ಹೆಣ್ಣುಮಕ್ಕಳಲ್ಲಿ ಒಬ್ಬಳು ‘ ಅಣ್ಣಾ, ಅಪ್ಪಾ ಕೂಗ್ತೀದಾರೆ’ ಅಂದಳು.
ಅಷ್ಟರಲ್ಲಿ ಕೆಳಗಿನಿಂದ ಮತ್ತೊಂದು ಮಿಸೈಲ್ ಸಿಡಿಯಿತು. ‘ ಏ, ಇವತ್ತು ಅಟ್ಟ ಮುರೀತಿಯೇನಾ, ಕಳ್ಳು ಹೆಚ್ಚಾಯ್ತಾ ಹೆಂಗೆ, ಸುಮ್ನೆ ಮುಚ್ಕೊಂಡು ಮಲಕ್ಕಾ, ಇಲ್ಲಾ ಅಂದ್ರೆ ಬತ್ತೀನಿ’ ಎನ್ನುವ ಮಾತುಗಳು ಬಿಡಿ ಬಿಡಿಯಾಗಿ ಮೇಲಕ್ಕೆ ಕೇಳಿಸಿದವು.
ನೆಂಟರೊಂದಿಗೆ ಶಕ್ತಿ ದ್ರವ ಸೇವಿಸಿ ಮಲಗಿದ್ದ ಕಾಫಿ ಗೌಡರಿಗೆ ಮಹಡಿಯ ರಂಗ ವೇದಿಕೆಯಲ್ಲಿ ರಂಗೇರಿ ನಡೆಯುತ್ತಿದ್ದ ಸಾಂಸ್ಕøತಿಕ ಕಾರ್ಯಕ್ರಮ ಅಪ್ಪಳಿಸಿತ್ತು. ಸುಮಾರು ಹೊತ್ತಿನ ತನಕ ಇದೇನೆಂದು ಅರಿವಾಗಲಿಲ್ಲವೇನೋ? ನಂತರ ಇದು ತಮ್ಮ ಕುಲ ಕಂಠೀರವನ ಅಮೋಘ ರಂಗ ಪ್ರದರ್ಶನ ಎಂದು ಅರ್ಥವಾಗಿರಬೇಕು. ಮಲಗಿದ್ದಲ್ಲಿಂದಲೇ ಗುಡುಗಿದ್ದರು. ಮೂರನೇ ಮಿಸೈಲ್ ಸಿಡಿಯಿತು ನೋಡಿ. ತಾರಕ ಸ್ವರದಲ್ಲಿ ಹಾಡುತ್ತಿದ್ದ ನಾಟಕದ ಹಾಡು ಗಕ್ಕನೆ ಗಂಟಲಿನಲ್ಲೇ ನಿಂತು ಹೋಯಿತು. ಉನ್ಮಾದ ಇಳಿದ ಸ್ಥಿತಿಯಲ್ಲಿ ಒಳಗಿದ್ದ ಇನ್ನರ್ಧ ಹಾಡನ್ನು ಹೇಗೆ ಹೊರತರುವದೆಂದು ತೋರದೇ ಪಿಳಿ,ಪಿಳಿ ಕಣ್ಣು ಬಿಡುತ್ತ, ಪೆಚ್ಚು,ಪೆಚ್ಚು ಮುಖ ಮಾಡುತ್ತ ನಿಂತ ಅವರ ಆಗಿನ ಸ್ಥಿತಿಯೂ ಒಂಥರಾ ಶುದ್ಧ ಅಬಿನಯದಂತೆ ತೋರುತ್ತಿತ್ತು. ಅದನ್ನು ಕಂಡ ಹುಡುಗರು ಮತ್ತೆ ಚಪ್ಪಾಳೆ ತಟ್ಟಿ ನಕ್ಕರು. ಇದ್ದಕ್ಕಿದ್ದಂತೆ ಆತ ಅಲ್ಲಿಂದ ಅವಸರದಲ್ಲಿ ಅಟ್ಟ ಇಳಿದು ನಾಪತ್ತೆಯಾಗಿಬಿಟ್ಟರು. ಇನ್ನೆಲ್ಲಿ ಅಪ್ಪ ಬಂದು ತದುಕಿದರೆ ಎನ್ನುವ ಭಯವಾಗಿತ್ತೇನೋ?

ನನಗಂತೂ ಅವರಲ್ಲಿ ಮಂದಣ್ಣನ ಚರ್ಯೆಗಳೆಲ್ಲ ಕಂಡಿದ್ದವು. ತೇಜಸ್ವಿಯವರ ಮಂದಣ್ಣನಂತಲ್ಲದಿದ್ದರೂ ಅವನಿಗೆ ಯಾತರಲ್ಲೂ ಕಡಿಮೆಯಲ್ಲದ, ಒಂದು ರೀತಿಯಲ್ಲಿ ಅವನಿಗೇ ಸವಾಲು ಹಾಕಬಹುದಾದ ಎಲ್ಲ ಅರ್ಹತೆಗಳೂ ಇವರಿಗಿದೆ ಅನ್ನಿಸಿತು.
ಮೂಡಿಗೆರೆಗೆ ಬಂದು ತೇಜಸ್ವಿಯವರನ್ನ ಕಾಣಲಾಗದಿದ್ದರೂ ಮಂದಣ್ಣನ ಪ್ರತಿರೂಪವೊಂದನ್ನ ಕಂಡ ಸಂತೃಪ್ತಿ ಅವತ್ತು ನನಗಾಗಿತ್ತು.
ಗಂಗಾಧರ ಕೊಳಗಿ

About the author

Adyot

Leave a Comment