ಆದ್ಯೋತ್ ನ್ಯೂಸ್ ಡೆಸ್ಕ್ : ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪವನ್ನೆಲ್ಲ ಆರಿಸಿ ಮನೆಯ ಬಾಗಿಲಿನಲ್ಲಿ ಅಥವಾ ಬಾಲ್ಕನಿಯಲ್ಲಿ ನಿಂತು ಮೊಂಬತ್ತಿ, ಟಾರ್ಚ್ ಗಳನ್ನು ಹಿಡಿದು ಕೊರೊನಾ ಮಹಾಮಾರಿಗಾಗಿ ಹೋರಾಡೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ವಿಡಿಯೋ ಸಂದೇಶವನ್ನು ನೀಡಿದ ಪ್ರಧಾನಿ ಮೋದಿ, ವಿಶ್ವವೇ ಭಾರತ ದೇಶದ ಲಾಕ್ ಡೌನ್ ಅನ್ನು ಶ್ಲಾಘಿಸುತ್ತಿದೆ. ದೇಶದ ಜನರು ಅತ್ಯುತ್ತಮವಾಗಿ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಈ ಸಮಯದಲ್ಲಿ ನಾವ್ಯಾರೂ ಏಕಾಂಗಿಗಳಲ್ಲ. ಮನಸ್ಸನ್ನು ಜಾಗೃತಗೊಳಿಸುವ ಶಕ್ತಿ ದೀಪವನ್ನು ಬೆಳಗುವುದರಲ್ಲಿದೆ. ಆದ್ದರಿಂದ ಎಲ್ಲರೂ ಸೊಷ್ಯಲ್ ಡಿಸ್ಟನ್ಸ್ ಕಾಪಾಡಿಕೊಂಡು ಏಪ್ರಿಲ್ 5 ರವಿವಾರ 9 ಗಂಟೆಯಿಂದ 9 ನಿಮಿಷ ದೀಪ ಬೆಳಗೋಣ. ಇಡೀ ದೇಶವೇ ಒಂದಾಗಿ ಅಂಧಕಾರವನ್ನು ಒದ್ದೋಡಿಸೋಣ. ತಾಯಿ ಭಾರತ ಮಾತೆಯ ಸ್ಮರಣೆ ಮಾಡೋಣ. ಇದರ ಮೂಲಕ ಕೊರೊನಾವನ್ನು ಓಡಿಸಲು ಇಡೀ ದೇಶವೇ ಒಂದಾಗಿದೆ ಅನ್ನೋದನ್ನ ತೋರಿಸೋಣ. ದೇಶದ ಮಹಾಶಕ್ತಿಯನ್ನು ಜಾಗೃತಿಗೊಳಿಸೋಣ ಎಂದರು.