ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮೃತಪಟ್ಟವರಿಗೆ ಪರಿಹಾರಕ್ಕಾಗಿ ಪ್ರಯತ್ನ : ಸಚಿವ ಶಿವರಾಮ್ ಹೆಬ್ಬಾರ್

ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ
ಮಂಗನ ಖಾಯಿಲೆಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಒತ್ತಾಯ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.


ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಖಾಯಿಲೆಯಿಂದ ಮೃತಪಟ್ಟವರ ಕುಟುಂಬದವರಿಗೆ ಕಳೆದ ವರ್ಷವನ್ನೂ ಒಳಗೊಂಡು ಈ ಬಾರಿಯೂ ಪರಿಹಾರ ನೀಡಲಾಗಿದೆ. ಆದರೆ ಉತ್ತರ ಕನ್ನಡದಲ್ಲಿ ಕಳೆದ ಬಾರಿ 3 ಜನರು, ಪ್ರಸಕ್ತ ವರ್ಷ ಓರ್ವ ಸಾವಿಗೀಡಾಗಿದ್ದಾರೆ. ಆದರೆ ಪರಿಹಾರ ನೀಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದರು.


ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಜಿಲ್ಲೆಯ ಗ್ರಾಮಗಳ ಸೇರ್ಪಡೆ ಮಾಡದಂತೆ ವಿಧಾನಸಭಾಧ್ಯಕ್ಷರು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದಾರೆ. ಜತೆ ಸಂಬಂಧಪಟ್ಟ ಸಚಿವರಿಗೂ ಆ ಪ್ರಸ್ತಾವ ಕೈಬಿಡುವಂತೆ ಸೂಚಿಸಿದ್ದಾರೆ. ಹಾಗಾಗಿ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು. ಈ ವೇಳೆ ಶಾಸಕರಾದ ರೂಪಾಲಿ ನಾಯ್ಕ, ಕಳಕಪ್ಪ ಬಂಡಿ, ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಇತರರು ಇದ್ದರು.

About the author

Adyot

Leave a Comment