‘ಕ್ರಿಪ್ಟೋಕರೆನ್ಸಿ’ ವಹಿವಾಟಿಗಿನ್ನು ಭಾರತ ಮುಕ್ತ – ಮುಕ್ತ!?

‘ಕ್ರಿಪ್ಟೋಕರೆನ್ಸಿ’ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ 2018 ರಲ್ಲಿ ಹೊರಡಿಸಿದ್ದ ಪ್ರತಿಬಂಧವನ್ನು ಸುಪ್ರೀಂ ಕೋರ್ಟ್ ಬುಧವಾರ ತೆರವುಗೊಳಿಸುವ ಮೂಲಕ, ದೇಶದಲ್ಲಿ ಬಿಟ್ ಕಾಯಿನ್ ನಂತಹ ವರ್ಚುವಲ್ ಹಣದ ವಹಿವಾಟು ಮತ್ತೆ ಪ್ರಾರಂಭವಾಗುವ ಮುನ್ಸೂಚನೆ ದೊರಕಿದೆ. ಮೇಲ್ನೋಟಕ್ಕೆ ಇದು ಡಿಜಿಟಲ್ ವಹಿವಾಟು ನಡೆಸುವ ಕ್ರಿಪ್ಟೋಕರೆನ್ಸಿ ಕಂಪೆನಿಗಳಿಗೆ ದೊರೆತ ಜಯದಂತೆ ಭಾಸವಾಗುತ್ತಿದೆ. ಜೊತೆಗೆ ಭಾರತದಲ್ಲಿರುವ ಸುಮಾರು 17 ಲಕ್ಷ ಬಳಕೆದಾರರು ಕೂಡಾ ಖುಷಿಯಾಗಿರಬಹುದು.

ಏನಿದು ಕ್ರಿಪ್ಟೋಗ್ರಫಿ ಹಾಗೂ ಕ್ರಿಪ್ಟೋಕರೆನ್ಸಿ?

ಕ್ರಿಪ್ಟೋಗ್ರಫಿ : ಕೋಡಿಂಗ್ ಬಳಸಿ ಯಾರಿಗೆ ಮಾಹಿತಿಯನ್ನು ಕಳಿಸಲಾಗಿರುತ್ತದೆಯೋ ಅವರು ಮಾತ್ರ ಓದಲಿಕ್ಕೆ ಸಾಧ್ಯವಾಗುವಂತೆ, ಮಾಹಿತಿಯನ್ನು ಸುರಕ್ಷಿತವಾಗಿಸಲಿಕ್ಕೆ ಬಳಕೆಯಾಗುವ ತಂತ್ರಜ್ಞಾನ. ಕ್ರಿಪ್ಟ್ ಅಂದರೆ ಗುಪ್ತ, ಗ್ರಫಿ ಅಂದರೆ ಬರಹ ಎಂದು ಅರ್ಥ. ಅಂದಹಾಗೆ ಈ ತಂತ್ರಜ್ಞಾನವು ಮಾಹಿತಿಯನ್ನು ರಹಸ್ಯವಾಗಿಡಲು ಮತ್ತು ಗುರುತನ್ನು ಸಾಬೀತುಪಡಿಸಲು ಬಳಕೆಯಾಗುತ್ತದೆ.

ಕ್ರಿಪ್ಟೋಕರೆನ್ಸಿ : ಕ್ರಿಪ್ಟೋಗ್ರಫಿ ತಂತ್ರಜ್ಞಾನವನ್ನು ಬಳಸಿಕೊಂಡ ಅಂತರ್ಜಾಲ ಆಧಾರಿತ ಹಣಕಾಸು ವಹಿವಾಟಿನ ಮಾಧ್ಯಮ. ಆದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವಂತೆ ಇಲ್ಲಿ ವಹಿವಾಟಿನ ಮೇಲೆ ಯಾವುದೇ ಕೇಂದ್ರದ ನಿಯಂತ್ರಣವಿಲ್ಲ, ಈ ರೀತಿ ಅನಿಯಂತ್ರಿತ – ಆದರೆ ಸುರಕ್ಷಿತ ಸೇವೆ ಒದಗಿಸಲು ಬಳಕೆಯಾಗಿರುವುದು ‘ಬ್ಲಾಕ್-ಚೈನ್’ ಎಂಬ ಇನ್ನೊಂದು ತಂತ್ರಜ್ಞಾನ!

ಒಟ್ಟಾರೆ ಕಣ್ಣಿಗೆ ಕಾಣದ – ಕೈಗೆ ಸಿಗದ ಮಾಯಾಂಗನೆ ‘ಕ್ರಿಪ್ಟೋಕರೆನ್ಸಿ’ ಮೊದಲಿಗೆ 9 ಜನವರಿ 2009 ರಂದು ‘ಬಿಟ್ ಕಾಯಿನ್’ ರೂಪದಲ್ಲಿ ಸೋರ್ಸ್-ಫೋರ್ಜ್ ಎಂಬ ಜಾಲತಾಣದ ಮೂಲಕ ಪರಿಚಯಿಸಲ್ಪಟ್ಟಿತು. ‘ಸತೋಷಿ ನಾಕಾಮೋಟೋ’ ಎಂಬ ವ್ಯಕ್ತಿ (ಅಥವಾ ಸಂಸ್ಥೆ) ಏನನ್ನೋ ಅನ್ವೇಷಣೆ ಮಾಡಲು ಹೋಗಿ ಕೊನೆಗೆ ಕಂಡುಹಿಡಿದದ್ದು ಈ ಬಿಟ್ ಕಾಯಿನ್ ಎಂದೂ ಹೇಳಲಾಗುತ್ತದೆ. ಇವತ್ತಿನವರೆಗೆ ಜಾಗತಿಕ ನಂಬರ್ 1 ಕ್ರಿಪ್ಟೋಕರೆನ್ಸಿಯಾಗಿರುವ ‘ಬಿಟ್ ಕಾಯಿನ್’ ಪರಿಚಯಿಸಿದವರ – ಪರಿಚಯ ಜಗತ್ತಿಗೆ ಆಗಿಯೇ ಇಲ್ಲವೆಂದರೆ ನೀವು ನಂಬಲೇಬೇಕು!

ಥಾಮಸ್ ಕಾರ್ಪರ್, ಎಂಬ ಯು.ಎಸ್ ಸೆನೆಟರ್ “ವರ್ಚುವಲ್ ಕರೆನ್ಸಿಗಳು, ಮುಖ್ಯವಾಗಿ ‘ಬಿಟ್ ಕಾಯಿನ್’, ಕೆಲವರ ಕಲ್ಪನೆಯನ್ನು ಸೆರೆಹಿಡಿದಿದೆ, ಇತರರಲ್ಲಿ ಭಯವನ್ನುಂಟುಮಾಡಿದೆ ಮತ್ತು ಉಳಿದವರಲ್ಲಿ ಗೊಂದಲವನ್ನುಂಟುಮಾಡಿದೆ.” ಎಂದಿದ್ದಾರೆ. ಇದೆಲ್ಲದರ ನಡುವೆಯೇ ಕೆಲವರು ಬಿಟ್ ಕಾಯಿನ್ ನಾಣ್ಯವನ್ನೂ ಪರಿಚಯಿಸಿದ್ದಾರೆ, ಅಮೇರಿಕ, ಕೆನಡಾ, ಯುರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ, ಫಿನ್ಲ್ಯಾಂಡ್, ಜರ್ಮನಿ ಕ್ರಿಪ್ಟೋಕರೆನ್ಸಿಗೆ ಯೆಸ್ ಅಂದಿವೆ. ಚೀನಾ, ರಷ್ಯಾ, ಬೊಲಿವಿಯಾ, ಇಕ್ವೆಡಾರ್, ಕೊಲಂಬಿಯಾ ನೋ ಎಂದಿವೆ.

ಬಿಟ್ ಕಾಯಿನ್ ಮಾತ್ರವಲ್ಲ, ಇಥೆರಿಯಂ (ETH), ರಿಪಲ್ (XRP), ಲೈಟ್ ಕಾಯಿನ್ (LTC), ಟೆಧರ್ (USDT), ಲಿಬ್ರಾ (LIBRA), ಮೊನೆರೋ (XMR) ಸೇರಿದಂತೆ 1,658 ಕ್ರಿಪ್ಟೋಕರೆನ್ಸಿಗಳಿವೆ!. ಕೆಲ ದೇಶಗಳಲ್ಲಿ ಕ್ರಿಪ್ಟೋಕರೆನ್ಸಿ (ಬಿಟ್ ಕಾಯಿನ್) ಎಟಿಎಂಗಳೂ ಕಾರ್ಯನಿರ್ವಹಿಸುತ್ತಿವೆ, ಯಾವುದೇ ಕೆ.ವೈ.ಸಿ ಚಿಂತೆಯಿಲ್ಲದೆ ಬಿಟ್ ಕಾಯಿನ್ ಖರೀದಿ ಅಥವಾ ಮಾರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ 2018 ರಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ ಭಾರತದ ಮೊದಲ ಎಟಿಎಂ ಕಿಯಾಸ್ಕ್ ಅಳವಡಿಸಿ ಪೊಲೀಸ್ ಅತಿಥಿಯಾಗಿದ್ದ; ನಮ್ಮ ನೆಲದಲ್ಲಿ ಈವರೆಗೂ ‘ಕ್ರಿಪ್ಟೋಕರೆನ್ಸಿ’ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳಿಲ್ಲ.

‘ಕ್ರಿಪ್ಟೋಕರೆನ್ಸಿ’ ಎಂದರೆ ಫ್ರೀಯಾಗಿ ಯಾರು ಬೇಕಿದ್ದರೂ ಡೌನ್ಲೋಡ್ ಮಾಡಿಕೊಳ್ಳಬಲ್ಲ ಓಪನ್ ಸೋರ್ಸ್ ಸಾಫ್ಟ್ವೇರ್, ಕಣ್ತಪ್ಪಿನಿಂದ ಒಮ್ಮೆ ಇನ್ಯಾರಿಗೋ ಕಳಿಸಿದ ಹಣ – ಪುನಃ ಸಿಗಲಾರದು, ಜಗತ್ತಿನ ಯಾವುದೇ ಮೂಲೆಗಾದರೂ ಅತ್ಯಂತ ವೇಗವಾಗಿ ಹಣ ವರ್ಗಾವಣೆ ಸಾಧ್ಯ, ಬ್ಯಾಂಕ್ ಅಕೌಂಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಕರೆನ್ಸಿ ಖರೀದಿಸಬಹುದು, ಬ್ಯಾಂಕಿಂಗ್ ವ್ಯವಸ್ಥೆಗಿಂತ ಕಡಿಮೆ ವೆಚ್ಚದಲ್ಲಿ ವರ್ಗಾವಣೆ ಸಧ್ಯ, ಆದರೆ ವಿಶ್ವದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ಮತ್ತು ಬಿಟ್ ಕಾಯಿನ್ ವಹಿವಾಟನ್ನು ಪತ್ತೆ ಹಚ್ಚುವುದೂ ಕ್ಲಿಷ್ಟವಾದ್ಧರಿಂದ ಆರ್.ಬಿ.ಐ ಸುತ್ತೋಲೆ ಹೊರಡಿಸಿ ಪ್ರತಿಬಂಧಿಸಿತ್ತು, ಅಲ್ಲದೆ ಸರ್ಕಾರವು ಕೂಡಾ ನಿಷೇಧಕ್ಕೆ ಚಿಂತನೆ ನಡೆಸಿತ್ತು; ಸಧ್ಯಕ್ಕೆ ಅನಿಶ್ಚಿತತೆ ಮುಂದುವರೆದಿದೆ.

ಬಿಟ್ ಕಾಯಿನ್ ಎಕ್ಸ್ಚೇಂಜ್ : ಕ್ರಿಪ್ಟೋಕರೆನ್ಸಿಯ ಕೊಡು – ಕೊಳ್ಳುವಿಕೆಯ ಆನ್ಲೈನ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಮೈನಿಂಗ್ : ಮೈನಿಂಗ್ ಬಿಟ್‌ ಕಾಯಿನ್ ನೆಟ್‌ವರ್ಕ್‌ನ ಬೆನ್ನೆಲುಬಾಗಿದೆ. ಮೈನರ್ ಪಾತ್ರವು ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸುವುದು ಮತ್ತು ಪ್ರತಿ ಬಿಟ್‌ ಕಾಯಿನ್ ವಹಿವಾಟನ್ನು ಪ್ರಕ್ರಿಯೆಗೊಳಿಸುವುದು; ಯಾರು ಬೇಕಿದ್ದರೂ ಮೈನರ್ ಆಗಿ ಕಾರ್ಯ ನಿರ್ವಹಿಸಬಹುದು. ಬಿಟ್ ಕಾಯಿನ್ ವಾಲೆಟ್ : ಇದೊಂದು ಸಾಫ್ಟ್ವೇರ್ ಪ್ರೋಗ್ರಾಮ್, ಎಲ್ಲೆಂದರಲ್ಲಿ ಬಿಟ್ ಕಾಯಿನ್ ಸಂಗ್ರಹ ಸಾಧ್ಯವಿಲ್ಲ, ಖಾಸಗಿ ಕೀ ಭದ್ರತೆ ಹೊಂದಿರುವ ವಾಲೆಟ್ಟಿನಲ್ಲಿ ಬಿಟ್ ಕಾಯಿನ್’ಗಳನ್ನು ಸಂಗ್ರಹಿಸಲಾಗುತ್ತದೆ. ಟ್ರೇಡಿಂಗ್ : ಪ್ರಸ್ತುತ ಒಂದು ಬಿಟ್ ಕಾಯಿನ್ ಮೌಲ್ಯ 9119 ಡಾಲರ್, ಕ್ಷಣ – ಕ್ಷಣಕ್ಕೂ ಇದು ಬದಲಾಗುತ್ತಿರುತ್ತದೆ. 2017 ರಲ್ಲಿ ಬರೋಬ್ಬರಿ ಇಪ್ಪತ್ತು ಸಾವಿರ ತಲುಪಿತ್ತು.

ಕ್ರಿಪ್ಟೋಕ್ವೀನ್ ಕಥೆ : ಒನ್ ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿಯನ್ನು ರುಜು ಇಗ್ನಾಟೋವಾ ಎಂಬಾಕೆ ತನ್ನ ಸಹೋದರ, ಮತ್ತಿತರ ಹೂಡಿಕೆದಾರರ ಸಹಾಯದೊಂದಿಗೆ 2014 ರಲ್ಲಿ ಪರಿಚಯಿಸಿದಳು. ಮೈನಿಂಗ್ ಮೂಲಕ ಅತಿ ಹೆಚ್ಚು ಹಣಗಳಿಕೆ ಸಾಧ್ಯವೆಂಬುದಾಗಿಯೂ, ಪ್ರಪಂಚವನ್ನು ಸುತ್ತಿ ಸರಣಿ ಸಭೆಗಳನ್ನು ಮಾಡಿ ಜನರನ್ನುಆಕರ್ಷಿಸಿದಳು. 2016 ರ ಹೊತ್ತಿಗೆ ಒನ್ ಕಾಯಿನ್ 3.4 ಬಿಲಿಯನ್ ಡಾಲರ್ ಸಂಗ್ರಹಿಸಿತ್ತು, ಚೀನಾ ಒಂದರಿಂದಲೇ ಅರವತ್ತು ಪ್ರತಿಶತ ಹೂಡಿಕೆಯಾಗಿತ್ತು. ರುಜು ಇಗ್ನಾಟೋವಾ ತನ್ನನ್ನು ತಾನು ‘ಕ್ರಿಪ್ಟೋಕ್ವೀನ್’ ಎಂಬುದಾಗಿ ಕರೆದುಗೊಂಡಿದ್ದಳು ಮತ್ತು ಬಿಟ್ ಕಾಯಿನ್ ಹಿಂದಿಕ್ಕಿ ಒನ್ ಕಾಯಿನ್ ಬೆಳೆಯಲಿದೆ ಅನ್ನುತ್ತಿದ್ದಳು. ವರ್ಷಗಳ ನಂತರ ಹೂಡಿಕೆದಾರರು ಅನುಮಾನಗೊಂಡು ತಮ್ಮ ಕ್ರಿಪ್ಟೋಕರೆನ್ಸಿಯನ್ನು ನೈಜ ಕರೆನ್ಸಿಯಾಗಿ ಪರಿವರ್ತಿಸುವಂತೆ ದುಂಬಾಲು ಬಿದ್ದಾಗ ಒನ್ ಕಾಯಿನ್ ತನ್ನ ಟ್ರೇಡಿಂಗ್ ನಿಲ್ಲಿಸಿಬಿಟ್ಟಿತು. ಅಷ್ಟರಲ್ಲಾಗಲೇ ರುಜು ಇಗ್ನಾಟೋವಾ ಮತ್ತಾಕೆಯ ಸಹೋದರ ತಮ್ಮ ಬ್ಯಾಂಕ್ ಅಕೌಂಟಗಳಿಗೆ ಹಣ ವರ್ಗಾವಣೆ ಮಾಡಿಕೊಂಡಾಗಿತ್ತು. ಹೂಡಿಕೆದಾರರಿಗೆ ಟೋಪಿ ಹಾಕಿ ಕ್ರಿಪ್ಟೋಕ್ವೀನ್ ನಾಪತ್ತೆಯಾದಳು, ಆಕೆಯ ತಮ್ಮ ಕೊನ್ಸ್ಟಾನಿನ್ ಇಗ್ನಾಟೋವಾ ಮಾತ್ರ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದ.

ಲಿಬ್ರಾ / Libra : ಇನ್ನು ನಾವೆಲ್ಲಾ ಸ್ನೇಹಿತರ ಪಡೆಯನ್ನು ಕಟ್ಟಿಕೊಂಡಿರುವ ಫೇಸ್ಬುಕ್ ಕೂಡ ತಾನು ಕ್ರಿಪ್ಟೋಕರೆನ್ಸಿಯನ್ನು ಬಳಕೆಗೆ ತರುತ್ತಿರುವುದಾಗಿ ಜೂನ್ 18, 2019 ರಂದು ಘೋಷಿಸಿತ್ತು. ಈಗಾಗಲೇ ಗ್ಲೋಬಲ್ ಕಾಯಿನ್ ಅಥವಾ ಫೇಸ್ಬುಕ್ ಕಾಯಿನ್ ಎಂದು ಕರೆಯಲ್ಪಡುತ್ತಿರುವ ಈ ವರ್ಚುವಲ್ ಕರೆನ್ಸಿಯ ಹೆಸರು ‘ಲಿಬ್ರಾ’ ಎಂದಾಗಲಿದೆ. ಇದರ ಮೊದಲ ಅವತರಣಿಕೆಯನ್ನು ಫೇಸ್ಬುಕ್ ಈ ವರ್ಷವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಈಗಾಗಲೇ ಅಪಸ್ವರ ಕೇಳಿ ಬಂದಿದೆ, ಒಂದೊಮ್ಮೆ ಫೇಸ್ಬುಕ್ ಶಕ್ತಿಶಾಲಿಯಾದ, ಅನಿಯಂತ್ರಿತ, ಜಾಗತಿಕ ಶಾಡೋ-ಬ್ಯಾಂಕಿಂಕ್ ವ್ಯವಸ್ಥೆಯನ್ನು ರೂಪಿಸಹೊರಟಿದೆಯೇ ಎಂಬ ಪ್ರಶೆಗಳು ಎದ್ದಿವೆ; ಹಾಗಾದಲ್ಲಿ ಅಕ್ರಮ ಹಣ ವರ್ಗಾವಣೆಗೆ ವೇದಿಕೆಯಾಗಲಿದೆ ಎಂಬ ಆತಂಕವೂ ಇದೆ, ಮಾದಕ ವಸ್ತುಗಳ ಮಾರಾಟ ಜಾಲಗಳ ಹಣ ವರ್ಗಾವಣೆಗೆ ನೆರವಾದೀತೆಂಬ ಆರೋಪವೂ ಕೇಳಿಬಂದಿದೆ, ಅಲ್ಲದೆ ಜಗತ್ತಿನ ಸಣ್ಣ ದೇಶಗಳ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುವ ಸಂಭವವನ್ನೂ ಕೂಡ ಅಲ್ಲಗಳೆಯುವಂತಿಲ್ಲ.

ಈ ಮೊದಲು ಫೇಸ್ಬುಕ್ ಜೊತೆಗಾರರಾಗಿದ್ದ ವೀಸಾ, ಮಾಸ್ಟರ್ ಕಾರ್ಡ್, ಪೇ-ಪಾಲ್, ಸ್ಟ್ರೈಪ್, ಈ-ಬೇ, ಮೆರ್ಕ್ಯಾಡೊ ಪೋಗೋ ಮತ್ತು ಬುಕಿಂಗ್ ಹೋಲ್ಡಿಂಗ್ಸ್ ಈಗಾಗಲೇ ಲಿಬ್ರಾ ಅಸೋಸಿಯೇಷನ್’ನಿಂದ ಹೊರಬಂದಿವೆ; ಈಗ ಉಬರ್, ಪೇಯೂ, ಸ್ಪೋಟಿಫೈ, ಕಾಯಿನ್ ಬೇಸ್, ವೊಡಾಫೋನ್, ಶಾಪಿಫೈ, ಹಾಗೂ ಕೆಲವು ಹೂಡಿಕೆದಾರ ಸಂಸ್ಥೆಗಳು ಫೇಸ್ಬುಕ್ ಲಿಬ್ರಾ ಅಸೋಸಿಯೇಷನ್ ಜೊತೆಗಿವೆ.

ಕೊನೆಯಲ್ಲೊಂದು ಮಾತು : ಮೊನ್ನೆ ಪ್ರಧಾನಿ ಮೋದಿಯವರು ತಾನು ಭಾನುವಾರ ಸಾಮಾಜಿಕ ಜಾಲತಾಣಗಳಿಂದ ಹೊರಬರುವುದಾಗಿ ಟ್ವೀಟ್ ಮಾಡಿದ್ದರು. ಸ್ವದೇಶೀ ಜಾಲತಾಣಗಳ ಬಳಕೆಗೆ ಒತ್ತುಕೊಡಲಿಕ್ಕಾಗಿ ಈ ನಿರ್ಧಾರ ಎಂಬುದು ಹಲವರ ಅಂಬೋಣ. ಇದು ಕ್ರಿಪ್ಟೋಕರೆನ್ಸಿ ವಹಿವಾಟು ಆರಂಭಿಸಲಿರುವ ಫೇಸ್ಬುಕ್’ಗೆ ಪಾಠ ಕಲಿಸಲಿಕ್ಕೆ ನಮೋ ಇಡುತ್ತಿರುವ ಹೆಜ್ಜೆಯಾ? ಹಾಗನ್ನಿಸುತ್ತಿದೆ, ಭಾನುವಾರದ ವರೆಗೆ ಕಾಯೋಣ!

ಗುರುಪ್ರಸಾದ ಹೆಗಡೆ,
ಸಾಮಾಜಿಕ ಕಾರ್ಯಕರ್ತ & ಹವ್ಯಾಸಿ ಬರಹಗಾರ

About the author

Adyot

Leave a Comment