ಕೋಟಿ-ಕೋಟಿ ಭಾರತೀಯ ಹೃದಯಗಳ ಸಾಮ್ರಾಟ್ – ಅಪ್ಪಟ ಚಿನ್ನ ಅಟಲ್ ಜೀ!

ಭಾರತದ ಹೃದಯ ಮಧ್ಯ ಪ್ರದೇಶದ ಗ್ವಾಲಿಯರ್‍ನ ಶಿಂದೇಕಿ ಚಾವಟಿಯಲ್ಲಿ 1924ರ ಡಿಸೆಂಬರ್ 25ರಂದು ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾ ದೇವಿಯವರ ಪುತ್ರರಾಗಿ ಜನಿಸಿದರು. ತಮ್ಮ ಸ್ನೇಹಮಯೀ, ಸಂವೇದನಾಶೀಲ ವ್ಯಕ್ತಿತ್ವದಿಂದ ಸೂಜಿಗಲ್ಲಿನಂತೆ ಅಸಂಖ್ಯ ಜನರನ್ನು ತಮ್ಮತ್ತ ಸೆಳೆದುಕೊಂಡ ಸರಳ ಹಾಗೂ ಸಜ್ಜನಿಕೆಯ ನಾಯಕ. ವಿಭಿನ್ನ ವಿಚಾರಧಾರೆ ಹೊಂದಿದ್ದರೂ, ಪಕ್ಷಗಳ ಎಲ್ಲೆಯನ್ನೂ ಮೀರಿ ಕೂಡ ಎಲ್ಲರೂ ತಲೆದೂಗಲೇ ಬೇಕಾದ ಪಾಂಡಿತ್ಯವನ್ನು ಹೊಂದಿದ್ದ ಮೇರು ವ್ಯಕ್ತಿತ್ವ ಅಟಲ್ ಜೀಯವರದ್ದು. ಬಾಲ್ಯದಿಂದಲೇ ಸ್ವಯಂಸೇವಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯಿಂದ ಪ್ರೇರೇಪಿತಗೊಂಡು ಮುಂದೆ ಪ್ರಚಾರಕರಾಗಿ ರಾಷ್ಟ್ರ ಸೇವೆಯ ವೃತವನ್ನು ಸ್ವೀಕರಿಸಿದವರು. ಕವಿಹೃದಯೀ ನೇತಾರರಾಗಿದ್ದ ವಾಜಪೇಯೀ ಜೀಯವರ ಜೀವನವು ಒಂದು ನಿಸ್ವಾರ್ಥ ಹೋರಾಟ.

ತಮ್ಮ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ ಸಂದರ್ಭದಲ್ಲಿ ಒಮ್ಮೆ ಭಾಷಣಕ್ಕೆಂದು ಎದ್ದು ನಿಂತಾಗ ಸಾಲುಗಳು ಮರೆತು ಹೋಗಿ ಮುಜುಗರಕ್ಕೀಡಾಗಿದ್ದರಂತೆ. ಆಗ ಇನ್ನು ಮುಂದೆ ಬಾಯಿಪಾಟ ಮಾಡಿ ಭಾಷಣ ಮಾಡಬಾರದೆಂದು ನಿರ್ಣಯಿಸಿದವರು, ಮುಂದೆ ತಮ್ಮ ಕಾಲೇಜು ಶಿಕ್ಷಣದ ಸಂದರ್ಭದಲ್ಲಿಯೇ ಅವರು ಅಪ್ರತಿಮ ವಾಗ್ಮಿಯಾಗಿ ರೂಪುಗೊಂಡರು. ತಮ್ಮ ವಿಚಾರಗಳಿಂದ ಸಭಿಕರನ್ನು ಮಂತ್ರಮುಗ್ಧಗೊಳಿಸಬಲ್ಲ ಚತುರ ನೇತಾರರೆನಿಸಿದರು. ಜೊತೆ-ಜೊತೆಗೆ ಅವರ ವ್ಯಕ್ತಿತ್ವದಲ್ಲಿ ಬೆಳೆದದ್ದು ಸಿದ್ಧಾಂತದೊಂದಿಗೆ ರಾಜಿಯಾಗದ ಅವರ ಮನೋಭಾವ, ಒಮ್ಮೆ ಯೋಚಿಸಿ ತೆಗೆದುಕೊಂಡ ನಿರ್ಧಾರಕ್ಕೆ ಸಧಾ ಬದ್ಧವಾಗಿರುವ ಕಾರ್ಯಶೈಲಿ.

ರಾಜಕೀಯ ಶಾಸ್ತ್ರದಲ್ಲಿ ಎಂ ಎ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಕಾನೂನು ಅಧ್ಯಯನಕ್ಕಾಗಿ ಸೇರಿದ್ದರೂ ಕೂಡ, ಸಂಘದ ಕಾರ್ಯಚಟುವಟಿಕೆಗಳ ಕಡೆಗೇ ಹೆಚ್ಚಾಗಿ ತೊಡಗಿಕೊಂಡರು. ಪ್ರಾಧ್ಯಾಪಕ ವೃತ್ತಿಯೆಡೆಗೆ ಗೌರವಾದರಗಳು ಇದ್ದರೂ ಕೂಡ, ಸರಕಾರಿ ನೌಕರಿ ಇಷ್ಟವಿಲ್ಲದ ಕಾರಣ ಅಧ್ಯಾಪನದ ಕೆಲಸಕ್ಕೆ ಸೇರಲಿಲ್ಲ. ಇನ್ನೊಂದೆಡೆಗೆ ಸ್ವಾತಂತ್ರ್ಯದ ಕಾವು ರಾಷ್ಟ್ರವ್ಯಾಪಿಯಾಗುತ್ತಿದ್ದ ಸಮಯವದು. ಅಟಲ್ ಜೀಯವರಲ್ಲಿದ್ದ ಕಿಚ್ಚು – ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿತು. ರಾಷ್ಟ್ರಪ್ರೇಮದ ಜಾಗೃತಿಗಾಗಿ ‘ಮಾಧ್ಯಮ’ದ ಅಗತ್ಯದ ಕುರಿತಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್‍ಗಳಲ್ಲಿ ಚರ್ಚೆಯಾಗುತ್ತಿತ್ತು, ಮುಂದೆ ಪರಾಮರ್ಶೆಯ ಪರಿಣಾಮ ‘ರಾಷ್ಟ್ರಧರ್ಮ’ ಹೆಸರಿನಲ್ಲಿ ಮಾಸಿಕ ಪತ್ರಿಕೆಯೊಂದನ್ನು ಪ್ರಾರಂಭಿಸುವ ನಿರ್ಧಾರಕ್ಕೆ ಬರಲಾಯಿತು.

ಸೂಕ್ಷ್ಮಮತಿ, ಸಂಘಟನಾ ಚತುರತೆಯ ಜೊತೆಗೆ ಅಪಾರ ಜ್ಞಾನವಿದ್ದ ಪಂಡಿತ ದೀನದಯಾಳ ಉಪಾಧ್ಯಾಯರು ಈ ಪತ್ರಿಕೆಯ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡರು, ಹೀಗೆ ಆರಂಭಗೊಂಡ ‘ರಾಷ್ಟ್ರಧರ್ಮ’ ಪತ್ರಿಕೆಯ ಸಂಪಾದಕರಾಗಿ ಅಟಲ್ ಜೀಯವರು, ರಾಜೀವಲೋಚನ ಅಗ್ನಿಹೋತ್ರಿಯವರ ಜೊತೆಗೆ ಜವಾಬ್ಧಾರಿಯನ್ನು ವಹಿಸಿಕೊಂಡರು. ಅನೇಕ ಲೇಖಕರನ್ನು ಹುಡುಕುವ, ಬರೆಯಿಸುವ, ಪ್ರಕಟಿಸುವ ಮತ್ತು ಸರಳ ನೇತಾರ ಪಂ. ದೀನದಯಾಳಜೀಯವರ ಜೊತೆಗೆ ಮುದ್ರಣಯಂತ್ರಕ್ಕೆ ಅಕ್ಷರದ ಮೊಳೆ ಜೋಡಿಸುವ ಕೆಲಸಗಳಲ್ಲಿ ಕೂಡ ಅತ್ಯಂತ ತಾಳ್ಮೆಯಿಂದ ಕಾರ್ಯಮಗ್ನರಾಗುತ್ತಿದ್ದರು.

ರಾಷ್ಟ್ರಧರ್ಮದ ಜೊತೆಗೆ ‘ಪಾಂಚಜನ್ಯ’ ಹೆಸರಿನಲ್ಲಿ ವಾರಪತ್ರಿಕೆಯನ್ನು ಪ್ರಾರಂಭಿಸುವ ಪಂ. ದೀನದಯಾಳಜೀಯವರ ವಿಚಾರಕ್ಕೆ ಸಹಕಾರಿಯಾಗಿ ನಿಂತವರು ಅಟಲ್ ಜಿ. ಗಾಂಧೀಜಿಯವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಲಾಯಿತು, ಹಲವು ನಾಯಕರನ್ನು ಬಂಧಿಸಲಾಯಿತು, ಅಟಲ್ ಜೀ ಭೂಗತರಾದರು. ನಂತರ ಬೇರೊಂದು ಮಾಸ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸತೊಡಗಿದರು. 1950ರಲ್ಲಿ ಸಂಘದ ಮೇಲಿನ ನಿಷೇಧವು ತೆರವುಗೊಂಡ ಬಳಿಕ ಪುನಃ ಪಂ. ದೀನದಯಾಳಜೀ ಅಟಲ್ ಜೀಯವರನ್ನು ಕರೆತಂದು ರಾಷ್ಟ್ರಧರ್ಮ & ಪಾಂಚಜನ್ಯಗಳ ಕೆಲಸಕ್ಕೆ ಹಚ್ಚಿದರು.

ಪಂ. ದೀನದಯಾಳಜೀಯವರ ಜೊತೆಗೆ, ಅಟಲ್ ಜೀಯವರೂ ಕೂಡ ಪ್ರೆಸ್‍ನಲ್ಲಿದ್ದ ಮೂಲಭೂತ ಸೌಕರ್ಯಗಳ ಕೊರತೆಯನ್ನೂ ಲೆಕ್ಕಿಸದೇ ಅಹರ್ನಿಶಿ ಕೆಲಸ ಮಾಡುತ್ತಿದ್ದರು. ದಿನದ ಕೆಲಸ ಮುಗಿಸಿ ಮಲಗಲು ಬಳಸುತ್ತಿದ್ದುದು ಒಂದು ಚಾಪೆ ಮತ್ತು ತಲೆದಿಂಬಾಗುತ್ತಿದ್ದುದು ಇಟ್ಟಿಗೆ. ಇದರ ಜೊತೆಗೆ ಅನೇಕರಿಂದ ಪತ್ರಿಕೆಗೆ ಅಡ್ಡಿ-ಆತಂಕಗಳಿದ್ದವು, ಕೋರ್ಟು-ಕೇಸೆಂದು ಅಲೆದಾಡಬೇಕಾಗುತ್ತಿತ್ತು. ಆದರೆ ಪಂ. ದೀನದಯಾಳಜಿ ‘ಸ್ವದೇಶಿ’ ಹೆಸರಿನಲ್ಲಿ ದಿನಪತ್ರಿಕೆಯೊಂದನ್ನು ಪ್ರಾರಂಭಿಸುವ ತಯಾರಿಯಲ್ಲಿದ್ದರು! ಈ ದಿನಪತ್ರಿಕೆಗೆ ಕೂಡ ಅಟಲ್ ಜೀ ಸಂಪಾದಕರಾದರು, ಪತ್ರಿಕೆಯು ಜನಮನ್ನಣೆಯನ್ನು ಗಳಿಸುವುದರ ಜೊತೆಗೆ, ಇದೇ ಮಾದರಿಯಲ್ಲಿ ರಾಷ್ಟ್ರಪ್ರೇಮದ ಕುರಿತಾದ ಜಾಗೃತಿ ಮೂಡಿಸಬಲ್ಲ ಪತ್ರಿಕೆಗಳನ್ನು ಆರಂಭ ಮಾಡಲು ಅನೇಕರು ಮುಂದೆ ಬರಲೂ ಕೂಡ ಕಾರಣವಾಯಿತು! ಇಪ್ಪತ್ತು-ಇಪ್ಪತ್ತೈದರ ವಯಸ್ಸಿನಲ್ಲಿ ಅನೇಕರಿಗೆ ಪ್ರೇರಣೆಯಾದರು ಯುವಕ ಅಟಲ್ ಜೀ!

1951ರಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರು ‘ಭಾರತೀಯ ಜನಸಂಘ’ದ ಹೆಸರಿನಲ್ಲಿ ಹೊಸ ಪಕ್ಷವೊಂದರ ಘೋಷಣೆಯನ್ನು ಮಾಡಿದರು, ಪಂ. ದೀನದಯಾಳ ಉಪಾಧ್ಯಾಯರು ಸಂಘಟನಾ ಕಾರ್ಯದರ್ಶಿಯಾದರು. ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಮುಂದೆ 26ರ ಹರೆಯದ ಅಟಲ್ ಜೀ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಆಪ್ತ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.

1953 ಮೇ ತಿಂಗಳಿನಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಕಾಶ್ಮೀರ ಪ್ರವಾಸದಲ್ಲಿದ್ದಾಗ ಅವರನ್ನು ಬಂಧಿಸಲಾಯಿತು, ಅವರು ಅಟಲ್ ಜೀ ಯವರಿಗೆ ಅಲ್ಲಿಂದ ತೆರಳುವಂತೆಯೂ ಹಾಗೂ ಈ ಅನ್ಯಾಯದ ಕುರಿತಾಗಿ ತಮ್ಮ ಬರಹದ ಮೂಲಕ ಜಾಗೃತಿ ಮೂಡಿಸುವಂತೆಯೂ ತಿಳಿಸಿ ಕಳುಹಿಸಿದರು. ಆದರೆ 1953 ಜೂನ್ 23ರಂದು ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಗುರುವನ್ನು ಕಳೆದುಕೊಂಡ ಅಟಲ್ ಜೀ ತೀರ್ವ ದುಃಖಕ್ಕೆ ಒಳಗಾದರು, ನಂತರದ ದಿನಗಳಲ್ಲಿ ಅಪೂರ್ಣಗೊಂಡ ಕೆಲಸಗಳನ್ನು ಮುಂದುವರೆಸಲು ಅಣಿಯಾದರು.

ಅಟಲ್ ಜೀಯವರ ಸಾಮಥ್ರ್ಯದ ಅರಿವಿದ್ದ ಪಂ. ದೀನದಯಾಳಜೀ 1953ರಲ್ಲಿ ನೆಹರೂ ಅವರು ಸಂಸದರಾಗಿದ್ದ ತಮ್ಮ ಸಹೋದರಿ ವಿಜಯಲಕ್ಷ್ಮೀಯವರನ್ನು ರಷ್ಯಾದ ರಾಯಭಾರಿಯನ್ನಾಗಿ ನೇಮಿಸಿದಾಗ, ಅವರ ಲೋಕಸಭಾ ಸ್ಥಾನ ತೆರವಾಯಿತು, ಅಲ್ಲಿ ಸ್ಪರ್ಧಿಸುವಂತೆ ಅಟಲ್ ಜೀಯವರಿಗೆ ಪಂ. ದೀನದಯಾಳಜೀ ಸೂಚಿಸಿದರು. ಗೆಲುವು ದಕ್ಕಲಿಲ್ಲವಾದರೂ ಅಟಲ್ ಜೀ ಹೆಸರು ರಾಜಕೀಯವಾಗಿ ಮುನ್ನೆಲೆಗೆ ಬಂತು. ಎದೆಗುಂದದೆ ಪಕ್ಷ ಕಟ್ಟುವ ತಮ್ಮ ಕಾಯಕದಲ್ಲಿ ತೊಡಗಿಕೊಂಡರು ಅಟಲ್ ಜೀ, ಎಲ್ಲೆಡೆ ಪ್ರವಾಸ – ಸಭೆಗಳ ಆಯೋಜನೆಯಲ್ಲಿ ಮಗ್ನರಾಗಿರುತ್ತಿದ್ದರು. ಅಟಲ್ ಜೀಯವರನ್ನು ಸಂಸತ್ತಿಗೆ ಕಳುಹಿಸಲೇ ಬೇಕೆಂದು ತೀರ್ಮಾನಿಸಿದ್ದ ಪಂ. ದೀನದಯಾಳಜೀ ಲಕ್ನೋ, ಮಥುರಾ ಹಾಗೂ ಬಲರಾಮಪುರ ಈ ಮೂರು ಲೊಕಸಭಾ ಸ್ಥಾನಗಳಿಗೆ 1957ರಲ್ಲಿ ಸ್ಪರ್ಧಿಸುವಂತೆ ಸೂಚಿಸಿದರು, ಬಲರಾಮಪುರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಗೊಂಡರು ಅಟಲ್ ಜೀ.

ಸದಾ ಗಡಿತಂಟೆಯಲ್ಲಿ ನಿರತ ಪಾಕಿಸ್ತಾನವು ಭಾರತದ ಭೂಭಾಗಗಳನ್ನು 1965ರಲ್ಲಿ ಅತಿಕ್ರಮ ಪ್ರವೇಶ ಮಾಡಿದಾಗ, ಬ್ರಿಟನ್ ಮಧ್ಯಸ್ಥಿಕೆ ವಹಿಸಿ ಕೆಲವು ಪ್ರದೇಶಗಳನ್ನು ಭಾರತವು ಬಿಡುವಂತೆ ಮಾಡಿತು. ಈ ತೀರ್ಮಾನಕ್ಕೆ ಭಾರತ ಸರ್ಕಾರವು ಒಪ್ಪಿಕೊಂಡಿದ್ದನ್ನು ಜನಸಂಘವು ವಿರೋಧಿಸಿತು. ಸಂಸತ್ ಭವನದ ಎದುರು ಪಂ. ದೀನದಯಾಳ ಜೀಯವರ ನೇತೃತ್ವದಲ್ಲಿ ಜನಾಂದೋಲನವು ರೂಪುಗೊಂಡು ಸುಮಾರು 5ಲಕ್ಷ ಜನ ಪಾಲ್ಗೊಂಡರು. ಅಟಲ್ ಜೀ ಈ ಕುರಿತಾಗಿ: “ಭಾರತೀಯ ಜನತೆಯ ವಿರಾಟ ರೂಪ” ಎಂದು ವರ್ಣಿಸಿದ್ದರು!

ಮುಂದೆ ಸಂಸತ್ತಿನಲ್ಲಿ ಮಾತನಾಡಲು ತಮ್ಮ ಸದಸ್ಯರಿಗೆ ಅವಕಾಶ ದೊರಕದಿದ್ದಾಗ ‘ಇದೊಂದು ಮಹರಾಣಿಯ ಒಡ್ಡೋಲಗವಾಗಿದೆ’ ಎಂದು ಖಂಡಿಸಿದ್ದರು. ನೆಹರೂರವರು ಸರಕಾರದಿಂದ ಹೊಟೇಲೊಂದರ ಸ್ಥಾಪನೆಯ ಪ್ರಸ್ತಾವವನ್ನು ಸಂಸತ್ತಿನ ಮುಂದೆ ಇಟ್ಟಾಗ, ಯುವ ಸಂಸದ ಅಟಲ್ ಜೀ ಎದ್ದು ನಿಂತು, ಹೊಟೇಲು ಬೇಡವೆಂದಲ್ಲ, ಸ್ಥಾಪಿಸುವುದಿದ್ದರೆ ಆಸ್ಪತ್ರೆಯನ್ನು ಸ್ಥಾಪಿಸಿ ಎಂಬುದಾಗಿ ಸಮರ್ಥವಾಗಿ ವಾದವನ್ನು ಮಂಡಿಸಿದರು. ಪರಿಣಾಮ ನೆಹರೂರವರು ಅನಿವಾರ್ಯವಾಗಿ ಹೊಟೇಲಿನ ಜೊತೆಗೆ ಆಸ್ಪತ್ರೆಯನ್ನೂ ಸ್ಥಾಪಿಸೋಣ ಎಂದು ಅನಿವಾರ್ಯವಾಗಿ ಹೇಳಲೇಬೇಕಾಯಿತು!

ಕರಾಳ ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ವಿರೋಧ ಪಕ್ಷಗಳ ನಾಯಕರನ್ನೆಲ್ಲ ಜೈಲುಗಳಿಂದ ಬಿಡುಗಡೆಗೊಳಿಸಲಾಯಿತು, ಆಗ ರಾಮಲೀಲಾ ಮೈದಾನದಲ್ಲಿ ಆಯೊಜನೆಗೊಂಡ ಸಭೆಗೆ ಜನ ತಂಡೋಪ-ತಂಡವಾಗಿ ಸೇರತೊಡಗಿದರು, ನೆನಪಿರಲಿ ಇಂದಿರಾರ ವಿರುದ್ಧ ಇಂತಹ ಹೋರಾಟವೊಂದನ್ನು ಊಹಿಸಲೂ ಸಾಧ್ಯವಿಲ್ಲದ ದಿನಗಳವು. ಆದರೆ ಹಾಗೆ ಬಂದ ಜನ ತದೇಕ ಚಿತ್ತರಾಗಿ ಕಾದು ಕುಳಿತಿದ್ದರು, ಕಾರಣ ಅಟಲ್ ಜೀಯವರ ಭಾಷಣ ಕೊನೆಯದಾಗಿತ್ತು. ತಮ್ಮ ಎಂದಿನ ವಾಗ್ಝರಿಯನ್ನು ವಿಶಿಷ್ಟ ಶೈಲಿಯಲ್ಲಿ ಹರಿಯ ಬಿಟ್ಟು ಜನರನ್ನು ಜಾಗೃತಗೊಳಿಸುವಲ್ಲಿ, ಜನಾಂದೋಲನಕ್ಕೆ ಅಣಿಗೊಳಿಸುವಲ್ಲಿ ಯಶಸ್ವಿಯಾದ ಪರಿಣಾಮ ನಿಚ್ಛಳವಾಗುತ್ತಿತ್ತು. ಮುಂದೆ 1977ರ ಮಹಾಚುನಾವಣೆಯಲ್ಲಿ ಇಂದಿರಾರವರ ಕಾಂಗ್ರೆಸ್ ಹೀನಾಯವಾಗಿ ಸೋಲನ್ನನುಭವಿಸಿತು, ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಜನತಾ ಪಕ್ಷವು ಅಧಿಕಾರಕ್ಕೆ ಬಂದಿತು. ದೆಹಲಿಯಲ್ಲಿ ಸ್ಪರ್ಧಿಸಿ ವಿಜಯಶಾಲಿಯಾಗಿದ್ದ ಅಟಲ್ ಜೀ ಜನತಾ ಪಕ್ಷದ ಮಂತ್ರಿ ಮಂಡಳದಲ್ಲಿ ವಿದೇಶಾಂಗ ಸಚಿವರಾದರು.

ಅನೇಕರ ಅನುಮಾನ-ಅವಮಾನ-ಅಸೂಯೆ ಹಾಗೂ ವಿರೋಧವನ್ನು ಮೀರಿ ಉತ್ತಮ ವಿದೇಶಾಂಗ ಮಂತ್ರಿಂಯೆನಿಸಿದರು. ಆ ಕಾಲಕ್ಕೆ ಪ್ರಭಾವಿ ರಾಷ್ಟ್ರಗಳೆನಿಸಿದ್ದ ಅಮೆರಿಕ-ರಷ್ಯಾಗಳ ತಾರತಮ್ಯ ನೀತಿಗೆ ವಿರುದ್ಧವಾಗಿ, ಭಾರತವು ಅಣ್ವಸ್ತ್ರ ಹೊಂದುವ ಕುರಿತಾದ ಅವರ ನಿರ್ಧಾರದಲ್ಲಿ ಸ್ಪಷ್ಟತೆಯಿತ್ತು. ಪಾಕಿಸ್ತಾನವಿರಲಿ ಅಥವಾ ಚೀನಾವಿರಲಿ ಮೊದಲಿಗೆ ಸಂಬಂಧಗಳ ಸುಧಾರಣೆಗಾಗಿ ಪ್ರಯತ್ನಿಸಿದರು. ಇದು ಅಟಲ್ ಜೀಯವರ ವಿಶಿಷ್ಠ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತದೆ.

1980ರಲ್ಲಿ ಭಾರತೀಯ ಜನತಾ ಪಾರ್ಟಿಯು ಸ್ಥಾಪನೆಗೊಂಡ ಸಂದರ್ಭದಲ್ಲಿ ಅಟಲ್ ಜೀ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಗೊಂಡರು. 1984ರಲ್ಲಿ ರಾಷ್ಟ್ರಪ್ರೇಮೀ ಸಮಾನ ಮನಸ್ಕ ವಿರೋಧ ಪಕ್ಷಗಳೆಲ್ಲವೂ ಒಂದಾಗಿ ಕಾಂಗ್ರೆಸ್ಸಿನ ವಿರುದ್ಧ ಹೋರಾಡಬೇಕೆಂಬುದರ ಕುರಿತಾಗಿ ವಿಶೇಷ ಮುವರ್ಜಿವಹಿಸಿದರು. ಮುಂದೆ ಮೂರು ಬಾರಿ ಪ್ರಧಾನಿಯಾಗುವ ಅವಕಾಶಗಳು ಒದಗಿ ಬಂದಾಗಲೂ ಕೂಡ ಅಟಲ್ ಜೀಯವರ ಹಾದಿ ಹೋರಾಟದ್ದೇ ಆಗಿದೆ. 1996ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿದ್ದು 13ದಿನಗಳ ಅವಧಿಗೆ, 1998-99ರಲ್ಲಿ ಹನ್ನೊಂದು ತಿಂಗಳ ಅವಧಿಗೆ, ನಂತರ 2004ರ ವರೆಗೆ ಒಂದು ಪೂರ್ಣ ಅವಧಿಗೆ ಪ್ರಧಾನಿಯಾಗಿ ಭಾರತವನ್ನು ಮುನ್ನಡೆಸಿದ ರತ್ನ ಅಟಲ್ ಜೀ.

ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭೂಕಬಳಿಕೆ, ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದದ್ದು, ಭಾರತವು ಅಣ್ವಸ್ತ್ರ ಹೊಂದುವಲ್ಲಿ ಪೋಖರಣದ ಅಣ್ವಸ್ತ್ರ ಪರೀಕ್ಷೆಯ ದಿಟ್ಟ ನಿರ್ಧಾರ, ಆರ್ಥಿಕ ಸುಧಾರಣೆಯ ಕ್ರಮಗಳು, ವೈಜ್ಞಾನಿಕ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ಸರ್ವ ಶಿಕ್ಷಾ ಅಭಿಯಾನ, ಗ್ರಾಮೀಣಾಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‍ದಂತಹ ಯೋಜನೆಗಳು, ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ ಹಾಗೂ ಅವರು ರೂಪಿಸಿದ ದೂರದೃಷ್ಠಿಯ ಅಭಿವೃದ್ಧಿ ಯೋಜನೆಗಳು ಅಟಲ್ ಜೀ ಒಬ್ಬ ಧೀಮಂತ ನೇತಾರ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಅಟಲ್ ಜೀ ಸದಾ ರಾಷ್ಟ್ರಹಿತದ ಚಿಂತನೆಯನ್ನಿಟ್ಟುಕೊಂಡಿದ್ದ ಅಗ್ರಪಂಕ್ತಿಯ ನಾಯಕರೆನಿಸುವುದು ಇದೇ ಕಾರಣಗಳಿಗೆ.

About the author

Adyot

Leave a Comment