ಶಿಕ್ಷಣ ಕ್ಷೇತ್ರದ ಕಾಯಕ ಯೋಗಿ ಮಂಜುನಾಥ ಮಾಸ್ತರರು

ಆದ್ಯೋತ್ ಸುದ್ದಿ ನಿಧಿ : ವೃತ್ತಿಯಿಂದ ನಿವೃತ್ತರಾದ ಕೂಡಲೇ ಕೆಲವರಲ್ಲಿ ವಯಸ್ಸಾಯಿತೆಂಬ ಭಾವನೆ ಮೂಡಿ ಉತ್ಸಾಹ ಬತ್ತುವ ಸಾಧ್ಯತೆಯೇ ಹೆಚ್ಚು. ಅಪರೂಪಕ್ಕೆಂಬಂತೆ ನಿವೃತ್ತಿಯ ನಂತರ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚು-ಹೆಚ್ಚಾಗಿ ತೊಡಗಿಸಿಕೊಂಡು ಸಮಾಜಮುಖಿಯಾಗುವ ವ್ಯಕ್ತಿಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರ ಸಾಲಿಗೆ ಸೇರುವವರೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಹತ್ತಿರದ ಕಲ್ಲೇಮಕ್ಕಿ ನಿವಾಸಿ ಮಂಜುನಾಥ ಮಾಸ್ತರರು.


ಸರಕಾರದ ನಿಯಮಾವಳಿಯಂತೆ 2002 ರಲ್ಲಿ ತಮ್ಮ 58 ನೇ ವಯಸ್ಸಿಗೆ ಶಿಕ್ಷಕ ಹುದ್ದೆಯಿಂದ ನಿವೃತ್ತಿ ಹೊಂದಿದ್ದರೂ ಇಂದಿಗೂ ತಮ್ಮ 76 ರ ಹರೆಯದಲ್ಲಿ ಅವಿರತವಾಗಿ ವಿದ್ಯಾದಾನ ಮಾಡುತ್ತಾ ಬಂದವರು ಇವರು. ಕಳೆದ 59 ವರ್ಷಗಳಿಂದ ತಮ್ಮ ಜೀವನವನ್ನು ಶಿಕ್ಷಕ ವೃತ್ತಿ-ಪ್ರವೃತ್ತಿಯಾಗಿ ಎರಡೂ ವಿಧದಲ್ಲಿ ನಡೆಸಿಕೊಂಡು ಬಂದ ಉತ್ಸಾಹದ ಚಿಲುಮೆ ಮಂಜುನಾಥ ಮಾಸ್ತರರು. ಮಂಜುನಾಥ ಗಣೇಶ ಭಟ್ ಅವರ ತಂದೆ ಕುಮಟಾ ತಾಲೂಕಿನ ಬೆತ್ತಗೇರಿಯಿಂದ ದೊಡ್ಮನೆ ದೇವಾಲಯಗಳ ಪೂಜೆಗಾಗಿ ಕಳೆದ 77ವರ್ಷಗಳ ಹಿಂದೆ ದೊಡ್ಮನೆಗೆ ಬಂದು ನೆಲೆಸಿದರು. ಆಗ ಮಂಜುನಾಥ ಮಾಸ್ತರರಿಗೆ ಕೇವಲ ಒಂದು ವರ್ಷ. ನಂತರ ಶಾಲೆಯಲ್ಲಿ ಓದಿ ಮುಲ್ಕಿ ಪರೀಕ್ಷೆ ತೇರ್ಗಡೆಯಾದ ಮಂಜುನಾಥ ಮಾಸ್ತರರು ಕುಮಟಾದಲ್ಲಿ ಟಿಸಿಎಲ್(ಟೀಚರ್ ಸರ್ಟಿಫೀಕೇಟ್ ಲೋವರ್‍ಗ್ರೇಡ್)ತರಬೇತಿ ಮುಗಿಸಿ 1961 ರಲ್ಲಿ ಶಿಕ್ಷಕವೃತ್ತಿಯಲ್ಲಿ ತೊಡಗಿಕೊಂಡರು. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದವರು ನಡೆಸುವ ಪ್ರಥಮ, ಮಧ್ಯಮ ಪರೀಕ್ಷೆಗಳಲ್ಲೂ ತೇರ್ಗಡೆ ಹೊಂದಿದರು. ನಂತರದ ವರ್ಷಗಳಲ್ಲಿ ಹಸ್ವಿಗುಳಿ, ಬೇಗಾರ, ಸೂರಗಾಲ, ಹಾಳದಕಟ್ಟಾ,ಬಿಳಗಿ, ಬಿಳೇಗೋಡ ಶಾಲೆ ಹೀಗೆ ಒಟ್ಟೂ 41 ವರ್ಷಗಳ ಕಾಲ ಶಿಕ್ಷಕ ವೃತ್ತಿ ನಡೆಸಿ ನಿವೃತ್ತರಾದರು.


ನಿವೃತ್ತಿಯ ನಂತರವೂ ಬೋಧನಾಸಕ್ತಿ: ನಿವೃತ್ತಿಯ ನಂತರವೂ ಇವರಿಗೆ ಮನೆಯಲ್ಲಿ ಸುಮ್ಮನೇ ಕೂರುವ ಮನಸ್ಸಾಗಲಿಲ್ಲ. ಬೀಳ್ಕೊಡುಗೆಯಾದ ಮರುದಿವಸದಿಂದಲೇ ಅವರ ಕಾಲು ತಾವು ನಿವೃತ್ತಿ ಹೊಂದಿದ ಬಿಳೇಗೋಡ ಶಾಲೆಯತ್ತಲೇ ರೂಢಿಗನುಗುಣವಾಗಿ ಪಯಣ ಬೆಳೆಸಿತ್ತು. ಎಂದಿನಂತೆ ಮಕ್ಕಳಿಗೆ ತಮ್ಮ ಅಚ್ಚುಮೆಚ್ಚಿನ ವಿಷಯಗಳಾದ ಕನ್ನಡ, ಗಣಿತ, ಪರಿಸರ, ಹಿಂದಿ ವಿಷಯಗಳ ಬೋಧನೆಯೂ ಮುಂದುವರಿಯಿತು. ಇಂದಿಗೂ ಆ ಪರಿಪಾಠ ಮುಂದುವರಿದೇ ಇದೆ. ಏಕೆಂದರೆ ಬಿಳೇಗೋಡ ಶಾಲೆಯಲ್ಲಿ ಏಳನೇ ಇಯತ್ತೆಯವರೆಗೂ ಇದ್ದು ವಿದ್ಯಾರ್ಥಿಗಳೂ ಇದ್ದಾರೆ. ಶಿಕ್ಷಕರು ಮಾತ್ರ ನಾಲ್ವರಿದ್ದಾರೆ. ಮಂಜುನಾಥ ಮಾಸ್ತರರು ಕಲಿಸಲು ಬಂದರೆ ಉಳಿದ ಶಿಕ್ಷಕರಿಗೂ ಕೊಂಚ ಸಹಕಾರವಾಗುತ್ತದೆ. ಅಲ್ಲದೇ ಶಿಕ್ಷಕರಿಗೆಲ್ಲಾ ಇವರನ್ನು ಕಂಡರೆ ಆದರ, ಅವರ ಶಿಕ್ಷಣಾಭಿಮಾನ ಕುರಿತು ಅಪಾರ ಗೌರವ. ಇಂದಿಗೂ ಮಂಜುನಾಥ ಮಾಸ್ತರರು ಸಿದ್ದಾಪುರ ಸಂತೆಗೆ ಬಂದರೆ ಅವರು ಕಲಿಸಿದ ಶಿಷ್ಯರು ಅವರನ್ನು ಮುತ್ತಿಕೊಂಡು ಆತ್ಮೀಯವಾಗಿ ಮಾತನಾಡಿಸಿಯೇ ಹೋಗುತ್ತಾರೆ. ನಮಗೆ ಕಲಿಸಿದ ಶಿಕ್ಷಕರೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಇದೇ ಮಂಜುನಾಥ ಮಾಸ್ತರರ ನಿಜವಾದ ಆಸ್ತಿ.


ಬರಿಗಾಲು ನಡಿಗೆ: ಶುಭ್ರವಾದ ಬಿಳೇ ಪಂಚೆ, ಬಿಳೇ ಶರಟು ಮಾತ್ರ ತೊಡುವ ಮಂಜುನಾಥ ಮಾಸ್ತರರ ಕಾಲಿಗೆ ಚಪ್ಪಲಿಯ ಅವಶ್ಯಕತೆಯೇ ಬಿದ್ದಿಲ್ಲ. ಚಿಕ್ಕಂದಿನಲ್ಲಿರುವಾಗ ತಾಯಿ ಕಲಿಸಿದ್ದ ಸ್ತೋತ್ರ ಅವರ ಪಾಲಿನ ಆಚರಣೆಯಾಗಿಯೂ ಮಾರ್ಪಟ್ಟಿತು. ಭೂಮಿಯು ತಾಯಿ ಸಮಾನ. ಅದನ್ನು ಚಪ್ಪಲಿ ಮೆಟ್ಟಿಕೊಂಡು ತುಳಿಯಬಾರದು ಎಂಬ ಗುಂಗು ಅವರ ತಲೆಯಲ್ಲಿ ಬೇರೂರಿತ್ತು. ಹೀಗಾಗಿಯೇ ಚಿಕ್ಕಂದಿನಿಂದ ಈ ಇಳಿವಯದವರೆಗೂ ಮಂಜುನಾಥ ಮಾಸ್ತರರು ಚಪ್ಪಲಿ ಮೆಟ್ಟಿದ್ದಿಲ್ಲ. “ಕಾಲಿಗೆ ಚಪ್ಪಲಿಯಿಲ್ಲದಿದ್ದರೆ ಕಲ್ಲು, ಮುಳ್ಳು ಚುಚ್ಚುವುದೆಂಬ ಅರಿವು ನನಗೆ ಚೆನ್ನಾಗಿದೆ. ಆದರೆ ಚಪ್ಪಲ್ಲು ತೊಟ್ಟು ಭೂಮಿಯಮೇಲೆ ಕಾಲಿಡಲು ಮನಸ್ಸು ಒಪ್ಪುತ್ತಿಲ್ಲ. ಭೂಮಿತಾಯಿಯನ್ನು ಪಾದರಕ್ಷೆಯಿಂದ ತುಳಿದಂತೆ ಎಂಬ ಭಾವನೆ ಕಾಡುತ್ತದೆ. ಹೀಗಾಗಿಯೇ ಬರಿಗಾಲಿನಲ್ಲಿಯೇ ಬಿಸಿಲು, ಮಳೆ ಲೆಕ್ಕಿಸದೇ ತಿರುಗಾಡುವದನ್ನು ರೂಢಿಸಿಕೊಂಡಿದ್ದೇನೆ. ನನಗೆ ಚಪ್ಪಲಿಯ ಅವಶ್ಯಕತೆಯೇ ಕಂಡು ಬಂದಿಲ್ಲ” ಎಂದು ಮಂಜುನಾಥ ಮಾಸ್ತರರು ತಮ್ಮ ಬರಿಗಾಲಿನ ಕುರಿತು ವಿವರಿಸುತ್ತಾರೆ.


ಸನ್ಮಾನ: ಮಂಜುನಾಥ ಮಾಸ್ತರರನ್ನು ಶಿಕ್ಷಣ ಇಲಾಖೆಯು ಸನ್ಮಾನಿಸಿದೆ. ಭುವನಗಿರಿಯ ಶ್ರೀಭುವನೇಶ್ವರಿಯ ಸನ್ನಿಧಾನದಲ್ಲಿ ಮಾತೃವಂದನಾ ಸಮಿತಿಯಿಂದ ಗೌರವ ಸಂಮಾನ ಸಂದಿದೆ. ಕೆಲವು ಸಂಘ-ಸಂಸ್ಥೆಗಳವರೂ ಅವರ ಶಿಕ್ಷಣಾಭಿಮಾನವನ್ನು ಮೆಚ್ಚಿ ಗೌರವಿಸಿದ್ದಾರೆ. ಆದರೂ ಒಂದು ರೀತಿಯಲ್ಲಿ ಮಂಜುನಾಥ ಮಾಸ್ತರರು ಎಲೆ ಮರೆಯ ಕಾಯಿಯೇ ಸರಿ. ತಾವಾಯಿತು, ತಮಗೆ ಅನ್ನ ನೀಡಿದ ಶಿಕ್ಷಕ ವೃತ್ತಿಯಾಯಿತು ಎಂದು ಇಂದಿಗೂ ನಿಷ್ಠೆಯಿಂದ ವಿದ್ಯಾದಾನದಲ್ಲಿ ನಿರತರಾಗಿರುವ ಮಂಜುನಾಥ ಮಾಸ್ತರರು ಕಳೆದ ಲಾಕ್‍ಡೌನ್‍ವರೆಗೂ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಇದೀಗ ಶಾಲೆಗೆ ಮಕ್ಕಳು ಬರುತ್ತಿಲ್ಲ, ಪಾಠ ಮಾಡಲಾಗುತ್ತಿಲ್ಲ ಎಂಬ ಕೊರಗೂ ಅವರಿಗೆ ಕಾಡಹತ್ತಿದೆ. ಹೀಗಾಗಿ ಆಗಾಗ ಶಾಲೆಗೆ ಹೋಗಿ ಮಕ್ಕಳ ಕುರಿತು ವಿಚಾರಿಸಿಕೊಳ್ಳುತ್ತಾ, ಶಿಕ್ಷಕರ ಯೋಗಕ್ಷೇಮ ಆಲಿಸಿಕೊಂಡು ಬರುತ್ತಿದ್ದಾರೆ. ಯಾವುದೇ ಪ್ರಶಸ್ತಿಯ ಬಯಕೆ, ಹಂಬಲ ಮಂಜುನಾಥ ಮಾಸ್ತರರಲ್ಲಿ ಲವಲೇಶವೂ ಇಲ್ಲ. ಯಾರು ಮೆಚ್ಚಲಿ ಬಿಡಲಿ ಈ ಕಾಯಕ ಯೋಗಿಯ ಶಿಕ್ಷಣಾಭಿಮಾನಕ್ಕಂತೂ ಕೊನೆಯೆಂಬುದಿಲ್ಲ.

ಲೇಖನ : ನಾಗರಾಜ್ ಭಟ್ ಕೆಕ್ಕಾರ್

About the author

Adyot