ಆದ್ಯೋತ್: ಕಥಾಗುಚ್ಛ

ಅದಿತಿ

ಬೆಂಗಳೂರಿನ ಮುಂಜಾನೆ .ಸುಮಾರು ಆರು ಗಂಟೆ ಇರಬೇಕು ,ನಾನು ಇನ್ನೂ ಹಾಸಿಗೆಯಲ್ಲೇ ಹೊರಳಾಡುತ್ತಿದ್ದೆ.ಒಂದು ಸುಂದರ ಕನಸು .ಆ ಕನಸಿನಲ್ಲಿ ನನ್ನ ಗುರಿಯನ್ನು ತಲುಪಿದ್ದೆ. ಎಸಿ ರೂಮಿನಲ್ಲಿ ಕೂತು ದೊಡ್ಡ ದೊಡ್ಡ ಫೈಲುಗಳಿಗೆ ಸಹಿ ಹಾಕುತ್ತಿದ್ದೆ. ನನ್ನ ಮುಂದಿರುವ ಚಾರ್ಟೆಡ್ ಅಕೌಂಟೆಂಟ್ ಎಂಬ ನಾಮಫಲಕ ನನಗೆ ತುಂಬಾ ಖುಷಿ ಕೊಡುತ್ತಿತ್ತು. ಅಷ್ಟರಲ್ಲಿ ‘ಸಾಲುತಿಲ್ಲವೇ ಸಾಲುತಿಲ್ಲವೇ’ ಹಾಡು  ಕೇಳಿಸತೊಡಗಿತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಸ್ವಲ್ಪ ಎಚ್ಚರವಾಯಿತು .

ಆದರೂ ಮತ್ತೆ ಮಲಗಿಕೊಂಡು ಆ ಕನಸನ್ನು ಮುಂದುವರೆಸಲು ಪ್ರಯತ್ನಿಸುತ್ತಿದ್ದೆ. ಒಳ್ಳೆಯ ಕನಸುಗಳನ್ನು ಮತ್ತೆ ಮುಂದುವರೆಸುವ ಒಂದು ವಿಚಿತ್ರ ಅಭ್ಯಾಸ ನನ್ನಲ್ಲಿತ್ತು. ಮತ್ತೆ’ ಸಾಲುತಿಲ್ಲವೇ ಸಾಲುತಿಲ್ಲವೇ ‘ಹಾಡು  ಕೇಳಿಸತೊಡಗಿತು. ನನ್ನ ಪಕ್ಕದಲ್ಲೇ ಮಲಗಿದ್ದ ನನ್ನ ಗೆಳತಿ ಸಿಂಚು ನನ್ನನ್ನು ಎಬ್ಬಿಸಿ “ನಿನ್ನ ಮೊಬೈಲ್ ರಿಂಗ್ ಆಗುತ್ತಿದೆ  ನಿಮ್ಮ ಅಪ್ಪನ ಕಾಲ್ ಬೇಗ ಪಿಕ್ ಮಾಡು” ಎಂದು ಹೇಳಿದೊಡನೆ ಯೇ ಅರ್ಥವಾದದ್ದು ಪದೇಪದೇ ಕನಸಲ್ಲೂ  ಪ್ಲೇ ಆಗುತ್ತಿದ್ದ ಆ ಹಾಡು ನನ್ನ ಮೊಬೈಲ್ ರಿಂಗ್ಟೋನ್ ಎಂದು ಆ ನಿದ್ದೆಗಣ್ಣಲ್ಲೇ ಹಲೋ ಎಂದಾಗ ಅಮ್ಮನ ಧ್ವನಿ “ಇನ್ನೂ ಎದ್ದಿಲ್ವಾ? ಸ್ನಾನ ಮಾಡಿ ,ತಿಂಡಿ ತಿಂದು ,ಆಫೀಸ್ ಹೋಗುವುದು ಯಾವಾಗ ?ಒಮ್ಮೆಯೇ ಪ್ರಶ್ನೆಗಳ ಸುರಿಮಳೆ .ಸರಿ ಅಮ್ಮ ,ಏನು ವಿಷಯ? ಎಂದು ಕೇಳಿದಾಗ ಅಮ್ಮ ಹೇಳಿದಳು” ನಾಡಿದ್ದು ನಾಗರಪಂಚಮಿ ಹಬ್ಬ ಹಾಗಾಗಿ ಇವತ್ತು ರಾತ್ರಿಯೇ ಮನೆಗೆ ಹೊರಟು ಬಾ”  ಎಂದಳು.

ಮನೆಯಲ್ಲಿ ಎಲ್ಲರ ಕುಶಲ ಕ್ಷೇಮ ವಿಚಾರಿಸಿದೆ .”ಆಫೀಸಿನಲ್ಲಿ ರಜೆ ತೆಗೆದುಕೊಂಡು ಮನೆಗೆ ಬರುತ್ತೇನೆ” ಎಂದು ಅಮ್ಮನಿಗೆ ಹೇಳಿ, ಹಾಸಿಗೆಯಿಂದ ಎದ್ದು ಸ್ನಾನ ಮಾಡಿ ಫ್ರೆಷ್ ಆದೆ. ನನ್ನ ಹೆಸರು ಅದಿತಿ. ನಮ್ಮದು ಒಂದು ಪುಟ್ಟ ಕುಟುಂಬ. ಅಪ್ಪ ,ಅಮ್ಮ, ಅಜ್ಜಿ ಹಾಗೂ ನನ್ನ ಇಬ್ಬರು ತಮ್ಮಂದಿರು. ಶಿರಸಿಯ ಒಂದು ಪುಟ್ಟ ಹಳ್ಳಿಯಲ್ಲಿ ನಮ್ಮ ಮನೆಯಿದೆ .ಅಪ್ಪ ಅಪ್ಪಟ ಕೃಷಿಕ. ಅಮ್ಮ ಸವ್ಯಸಾಚಿ ,ಅಂದರೆ ಅಡುಗೆ ಮಾಡುವುದರ ಜೊತೆಗೆ ಎಲ್ಲಾ ಕೆಲಸಗಳನ್ನು ಮಾಡುತ್ತಾ ಅಪ್ಪನಿಗೆ ನೆರವಾಗುತ್ತಿದ್ದಳು. ಅಜ್ಜಿಗೆ ನಾನೆಂದರೆ ತುಂಬಾ ಪ್ರೀತಿ .ಮೊದಲನೆಯ ತಮ್ಮ 9ನೇ ತರಗತಿ. ಎರಡನೆಯ ತಮ್ಮ ಮೂರನೇ ತರಗತಿ. ನಮ್ಮದು ತುಂಬಾ ಸಂಪ್ರದಾಯಸ್ಥ ಕುಟುಂಬ .ನಾನು ವಾಣಿಜ್ಯ ವಿಭಾಗದಲ್ಲಿ ಪದವೀಧರೆ .ನನ್ನ ಕನಸೆಂದರೆ   ಚಾರ್ಟೆಡ್ ಅಕೌಂಟೆಂಟ್(ಸಿ.ಎ) ಆಗುವುದು. ನಾನು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ  ಸಿ .ಎ ತಯಾರಿ ನಡೆಸುತ್ತಿದ್ದೆ.

ನನಗೆ ನಾಗರಪಂಚಮಿ ಎಂದರೆ ತುಂಬಾ ಇಷ್ಟದ ಹಬ್ಬ .ಏಕೆಂದರೆ ನನ್ನ ಅಪ್ಪ ಸುಂದರವಾದ ಮದರಂಗಿ ಡಿಸೈನ್ ಅನ್ನು ನನ್ನ ಕೈಮೇಲೆ ಚಿತ್ರಿಸುತ್ತಿದ್ದ  ಹಾಗೂ ನಾಗರ ಬನದಲ್ಲಿ ನಾವೆಲ್ಲರೂ ಸೇರಿ ನಾಗರಕಲ್ಲಿನ ಪೂಜೆಯನ್ನು ಮಾಡುತ್ತಿದ್ದೆವು ಇದು ಈ ಹಬ್ಬದ ವಿಶೇಷತೆ.
ಇವೆಲ್ಲವನ್ನೂ ಮೆಲುಕು ಹಾಕುತ್ತಲೇ ಸಿಂಚು ಜೊತೆ ಆಫೀಸಿಗೆ ಹೊರಟೆ .ಸಿಂಚು ನನ್ನ ಪ್ರಾಣ ಸ್ನೇಹಿತೆ. ನಾವಿಬ್ಬರೂ ಒಂದೇ ಆಫೀಸಿನಲ್ಲಿ ವರ್ಕ್ ಮಾಡುತ್ತಿದ್ದೆವು . ನಾಲ್ಕು ದಿನದ ರಜೆಯನ್ನು ಆಫೀಸ್ನಲ್ಲಿ ವಿನಂತಿಸಿಕೊಂಡೆ  .ರಜಾ ಸಿಗುತ್ತೋ ಇಲ್ಲವೋ ಎಂದು ಚಿಂತಿಸುತ್ತಿದ್ದ ನನಗೆ ಬಾಸ್ ಓಕೆ ಎನ್ನುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ .ಪಕ್ಕದಲ್ಲೇ ನಿಂತಿದ್ದ ಸಿಂಚು ಹುಬ್ಬು ಹಾರಿಸಿ ಮುಗುಳ್ನಕ್ಕಳು. ಈ ದಿನ ಆಫೀಸ್ ನಲ್ಲಿ ಕೆಲಸ ಮಾಡುವಾಗ ಮನೆಯದ್ದೇ ಧ್ಯಾನ. ಕೆಲಸ ಮುಗಿಸಿ ರಾತ್ರಿ ಪಿಜಿಯಲ್ಲಿ ಊಟ ಮಾಡುವಾಗ ಅಮ್ಮನ ಅಡುಗೆಯ ರುಚಿ ನೆನಪಾಗುತ್ತಿತ್ತು . ಲಗೇಜ್ ಎಲ್ಲಾ ಪ್ಯಾಕ್ ಮಾಡಿ ಗೆಳತಿಯ ಜೊತೆ ಬಸ್ಸ್ಟ್ಯಾಂಡ್ ವರೆಗೆ ತಲುಪಿ ಬಸ್ಸು ಹತ್ತಿದೆ .ಸಿಂಚು ಗೆ ಬಾಯ್ ಮಾಡಿ ಬಸ್ ನಲ್ಲಿ ಸೆಲ್ಫಿ ತಗೊಂಡು  ,ವಾಟ್ಸಾಪ್ ಸ್ಟೇಟಸ್ ಅಪ್ಲೋಡ್ ಮಾಡಿದ್ದೊಂದೇ ನೆನಪು .ಕಂಡಕ್ಟರ್  ‘ಶಿರಸಿ ಶಿರಸಿ ‘ಎಂದು ಕೂಗುವಾಗಲೇ ಎಚ್ಚರವಾದದ್ದು.

ಯಾವಾಗ ನಿದ್ದೆಗೆ ಜಾರಿದೆ ನೆಂದು ನನಗೆ ತಿಳಿಯಲಿಲ್ಲ. ಬಸ್ಟಾಪ್ನಲ್ಲಿ ನನ್ನ ತಮ್ಮ ನನಗಾಗಿ ಕಾಯುತ್ತಿದ್ದ.ನನ್ನನ್ನು ಪ್ರೀತಿಯಿಂದ ಮಾತನಾಡಿಸಿ.” ನಿನ್ನ ಹಳೆಯ ಮೊಬೈಲ್ ನನಗೆ  ಈ ಸಾರಿ ಕೊಡುತ್ತೀಯಾ ಅಲ್ಲವೇ ?”ಎಂದು ಸಣ್ಣ ಮುಖ ಮಾಡಿಕೊಂಡು ಕೇಳಿದ .ನಾನು ಬೆಂಗಳೂರಿಗೆ ಹೊರಡುವಾಗ ನಿನಗೆ ಕೊಡುತ್ತೇನೆ ಎಂದಾಗ ನನ್ನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ನನ್ನ ಜೊತೆ ಮನೆಯಕಡೆ ಖುಷಿಯಿಂದ ಹೊರಟ .
ಹಾಗೆಯೇ ದಾರಿಯಲ್ಲಿ ಹೋಗುವಾಗ “ಅಕ್ಕ ನಿನಗೆ ಒಂದು ಸರ್ಪ್ರೈಸ್ ಇದೆ “ಎಂದ. ಏನು ಎಂದು ಎಷ್ಟು ವಿಚಾರಿಸಿದರೂ ಹೇಳಲಿಲ್ಲ .

ಮನೆಗೆ ಬಂದು ತಲುಪಿದೆವು .ಮನೆಯಂಗಳದಲ್ಲಿ ಅಮ್ಮನಿಂದ ಹಾಕಲ್ಪಟ್ಟ ಸುಂದರವಾದ ರಂಗೋಲಿ ಜಗಜಗಿಸುತ್ತಿತ್ತು. ಬಣ್ಣದಿಂದ ಸಿಂಗರಿಸಲ್ಪಟ್ಟ ಮನೆಯು ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸಿತ್ತು .ಅಮ್ಮ, ಅಪ್ಪ, ತಮ್ಮ ಎಲ್ಲರೂ ಪ್ರೀತಿಯಿಂದ ಎದುರುಗೊಂಡರು. ಹಾಗೆಯೇ ,ಸೋದರಮಾವ ,ಅತ್ತೆ ,ಪಕ್ಕದ ಮನೆಯ ಮಾದಕ್ಕ ಎಲ್ಲರೂ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಆದರೆ ಅಪ್ಪನನ್ನು ನೋಡಿ ತುಂಬಾ ಆಶ್ಚರ್ಯವಾಯಿತು .ನಾನು ಮನೆಗೆ ಬರದೆ ನಾಲ್ಕು ತಿಂಗಳು ಕಳೆದಿದ್ದವು .ನಾಲ್ಕು ತಿಂಗಳ ಹಿಂದೆ ನೋಡಿದ  ಅಪ್ಪ ತುಂಬಾ ಸ್ಲಿಮ್ ಆಗಿದ್ದ. ಅಪ್ಪನಲ್ಲಿ ತಮಾಷೆ ಮಾಡಿದೆ” ಯೋಗಾಭ್ಯಾಸದಿಂದ ಈ ರೀತಿಯು ಸ್ಲಿಮ್ ಅಂಡ್ ಫಿಟ್ ಆಗಬಹುದೇ “ಎಂದು. ಅಪ್ಪ ಎಂದಿನಂತೆ ಮುಗುಳ್ನಕ್ಕ .ಅಜ್ಜಿಯನ್ನು ಪ್ರೀತಿಯಿಂದ ತಬ್ಬಿಕೊಂಡೆ,ಮೈದಡವಿದಳು. ತಮ್ಮಂದಿರಿಗೆ ಎಂದಿನಂತೆ ಡೈರಿ ಮಿಲ್ಕ್ ಚಾಕೊಲೇಟ್ ಕೊಟ್ಟು ,ಚಿಕ್ಕ ತಮ್ಮನ ಗಲ್ಲವನ್ನು ಚಿವುಟಿದಾಗ ಕಿರುಚುತ್ತಾ ಮನೆಯೊಳಗೆ ಓಡಿಹೋದ. ಅಮ್ಮ “ಬೇಗ ಬೇಗ ಪ್ರೆಶ್ ಆಗಿ ಬಾ “ಎಂದಳು . ಯಾಕೆ ಸೋದರಮಾವ ಅತ್ತೆ ಎಲ್ಲ ಬಂದಿದ್ದಾರೆ? ಈ ಸಾರಿ ಹಬ್ಬ ತುಂಬಾ ವಿಶೇಷವೇ ?ಎಂದು ಮನಸ್ಸಿನಲ್ಲೇ ಗೊಣಗುತ್ತಾ  , ಸ್ನಾನವನ್ನು ಪೂರೈಸಿ, ನನ್ನ ರೂಮಿಗೆ ಹೊರಟೆ.

ಅಷ್ಟರಲ್ಲಿ  ರೂಮ್ನ ಎದುರುಗಡೆ ನಿಂತಿದ್ದ ಅತ್ತೆ , ಏನನ್ನೋ ಹೇಳಲೋ ಬೇಡವೋ ಎಂದು ಅನುಮಾನಿಸುತ್ತಿದ್ದಳು .ಅತ್ತೆಯನ್ನು ಏನೆಂದು ಪ್ರಶ್ನಿಸಿದಾಗ “ಅದಿತಿ ,ಇವತ್ತು 11ಗಂಟೆಗೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ .ತುಂಬಾ ಒಳ್ಳೆಯ ಹುಡುಗ ,ಎಂಬಿಬಿಎಸ್ ಓದಿದ್ದಾನೆ ,ತಿಂಗಳಿಗೆ ಒಂದು ಲಕ್ಷದಷ್ಟು  ಸಂಬಳ ಪಡೆಯುತ್ತಾನೆ. ಬೆಂಗಳೂರಿನಲ್ಲಿ ವಾಸ್ತವ್ಯ” ಎಂದಳು.
ಈ ಮಾತನ್ನು ಕೇಳಿದ್ದೇ ತಡ ನನಗೆ ಸಿಡಿಲು ಬಡಿದಂತಾಯಿತು. ಅತ್ತೆಗೆ ಏನೂ ಉತ್ತರಿಸಲಿಲ್ಲ .ನನ್ನ ಕಣ್ಣಲ್ಲಿ ನೀರು ತುಂಬಿತ್ತು ,ಹಾಗೆಯೇ ಕೋಪವೂ ಬಂತು. ಅಪ್ಪ-ಅಮ್ಮ ಇಬ್ಬರಿಗೂ  ಸ್ವಲ್ಪವೂ ನನ್ನನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿಲ್ಲವಲ್ಲ, ನನ್ನನ್ನು ಬೆಂಗಳೂರಿನಿಂದ ಕರೆಯಿಸಲು ಇಷ್ಟು ಸುಳ್ಳು ಹೇಳುವ, ಹಬ್ಬದ ನೆಪ ಒಡ್ಡುವ ಅಗತ್ಯವಿತ್ತೇ ? ನನ್ನ ಆಸೆ ಆಕಾಂಕ್ಷೆ ಯಾವುದು ತಿಳಿಯದೆ ಇರುವ ಅಪ್ಪ-ಅಮ್ಮನ ಮೇಲೆ ಕೋಪ ಉಕ್ಕಿಬಂತು. ಅಡುಗೆಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದ ಅಮ್ಮನ ಕೈ ಹಿಡಿದು ಕರೆದುಕೊಂಡು ಬಂದು, “ಇನ್ನೂ ಎರಡು ವರ್ಷ ಮದುವೆಯ ವಿಚಾರ ನನ್ನ ಮುಂದೆ ಇಡಬೇಡಿ ಎಂದು ಸ್ಪಷ್ಟವಾಗಿ ಮೊದಲೇ ಹೇಳಿರುವೆ ಆದರೂ ಈ ರೀತಿ ಹಬ್ಬದ ನೆಪವೊಡ್ಡಿ ನನ್ನನ್ನು ಮನೆಗೆ ಕರೆಯಿಸಿ ಮದುವೆಗೆ ಪ್ರಯತ್ನವನ್ನು ಮಾಡುತ್ತೀರಲ್ಲ “ಎಂದು ಕೋಪದಿಂದ  ಕೂಗಾಡಿದೆ.

ನೋಡಮ್ಮ “ಸಿಎ ಆಗುವವರೆಗೂ ನಾನು ಮದುವೆ ಆಗಲಾರೆ “ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ .ಆಗ ಅಮ್ಮ”ಮಗಳೇ  ಈ ನಿರ್ಧಾರ ನನ್ನ ನಿರ್ಧಾರವಲ್ಲ.ಇದು ಅಪ್ಪನ ನಿರ್ಧಾರ. ಅವರು ನನ್ನ ಮಾತನ್ನು ಕೇಳುತ್ತಿಲ್ಲ. ನಿನಗೆ ಗಂಡು ನೋಡಬೇಕೆಂದು ಒಂದು ತಿಂಗಳಿಂದ ಹಠ ಹಿಡಿದಿದ್ದಾರೆ .ನಾನೇನು ಮಾಡಲಿ ?”ಎಂದಳು. ಕೂಡಲೇ ಅಪ್ಪನಿದ್ದಲ್ಲಿಗೆ ಹೊರಟೆ.

ಅಪ್ಪ ಸೋದರ ಮಾವನೊಂದಿಗೆ ಮದುವೆಯ ಖರ್ಚು-ವೆಚ್ಚಗಳ ಬಗ್ಗೆ ಮಾತನಾಡುತ್ತಿದ್ದರು. ನನಗೆ ಕೋಪ ಇಮ್ಮಡಿಸಿತು “ನನಗೆ ಸುಳ್ಳು ಹೇಳಿ ಮನೆಗೆ ಕರೆಯಿಸಿಕೊಂಡು ಗಂಡು ನೋಡುವ ಕಾರ್ಯಕ್ರಮ ಇರಿಸಿದ್ದಲ್ಲದೇ ಮುಂದುವರೆದು ಮದುವೆಯ ವಿಚಾರವನ್ನು ಮಾತನಾಡುತ್ತಿದ್ದೀರ.ಅಪ್ಪ ನಿನಗೆ ನನ್ನ ಮದುವೆಯನ್ನು ಮಾಡಿ ಕೈತೊಳೆದುಕೊಂಡರೆ ಸಾಕಾಗಿದೆ ಅಲ್ಲವೇ?ನಿಮಗೆ ನಾನು ಅಷ್ಟು ಭಾರವಾಗಿದ್ದೇನೆಯೇ?”ಎಂದು ಹೇಳಿದೆ.  ಅಷ್ಟರಲ್ಲಿ ಸೋದರಮಾವ “ನೋಡು ,ಅದಿತಿ ನಿನ್ನ ಮದುವೆ ಕಾರ್ಯಗಳನ್ನು ಯಾವಾಗ ಮಾಡಬೇಕೆಂದು ನಮಗೆ  ಚೆನ್ನಾಗಿ ತಿಳಿದಿದೆ .

ನಿನಗೆ ಸಂಬಂಧ ಇಷ್ಟವಾದರೆ ಮದುವೆ ಮಾಡಿಕೊಡುತ್ತೇವೆ ಅಷ್ಟೇ” ಎಂದು ಸ್ವಲ್ಪ ಗದರಿಸಿ ಹೇಳಿದ .ಸೋದರಮಾವ ಎಂದರೆ ಯಾಕೋ ಚಿಕ್ಕನಿಂದಲೂ ಭಯ. ಮರುಮಾತಾಡದೆ ತಿಂಡಿ ತಿನ್ನಲು ಹೊರಟೆ.ಉಪಯೋಗವಿಲ್ಲದ ಹಸುವನ್ನು ಕಟುಕರಿಗೆ ನೀಡುವಂತೆ ನನ್ನನ್ನು ಮದುವೆ ಮಾಡಲು ಹೊರಟಿದ್ದಾರೆ ಎಂದು ಅನಿಸಿತು. ತಿಂಡಿ ಎರಡು ತುತ್ತು ಸರಿಯಾಗಿ ಗಂಟಲಲ್ಲಿ ಇಳಿಯಲಿಲ್ಲ. ಕೋಣೆಗೆ ಹೋಗಿ ಸಿಂಚು ಗೆ ಕಾಲ್ ಮಾಡಿ ಇಲ್ಲಿ ನಡೆಯುತ್ತಿರುವ ಎಲ್ಲ ವಿಚಾರವನ್ನು ಹೇಳಿಕೊಂಡೆ .ನಾನು ಅಳುವುದನ್ನು ಕೇಳಿ ಸಿಂಚು ಹೇಳಿದಳು” ಅದಿತಿ ಇಷ್ಟು ಸಣ್ಣ ವಿಚಾರವನ್ನು ಏಕೆ ದೊಡ್ಡದು ಮಾಡುತ್ತೀಯಾ ನಿನಗೆ ಇಷ್ಟವಿಲ್ಲ ಎಂದು ಹೇಳಿದರಾಯಿತು ಅಳಬೇಡ “ಎಂದು ಸಮಾಧಾನ ಹೇಳಿದಳು.ಆದರೂ ಅಪ್ಪನ ಮೇಲಿನ ಕೋಪವನ್ನು ಗೆಳತಿಯೊಡನೆ ಮತ್ತೆ ಹೇಳಿಕೊಂಡೆ.

ನನ್ನ ಮುಖವೆಲ್ಲಾ ಅತ್ತು ಅತ್ತು ಕೆಂಪಾಗಿತ್ತು. ಅತ್ತೆ ಮತ್ತು ಮಾದಕ್ಕಬಂದು ನನ್ನನ್ನು ಸೀರೆಯುಡಿಸಿ ಆಭರಣದಿಂದ ಅಲಂಕರಿಸಿದರು. ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಸೋದರಮಾವ ಮನೆಗೆ ಹೋದಮೇಲೆ ಅಪ್ಪನೊಂದಿಗೆ ಇನ್ನೆಂದು ಮಾತನಾಡುವುದಿಲ್ಲ, ಮುಖವನ್ನೂ ನೋಡುವುದಿಲ್ಲ ಎಂದು ನಿರ್ಧರಿಸಿದೆ. ಅಷ್ಟರಲ್ಲಿ ಹುಡುಗನ ಕಡೆಯವರು ಬಂದರು .ಮನೆಯವರೆಲ್ಲ ಎದುರುಗೊಂಡು ಅವರನ್ನು ಮಾತನಾಡಿಸಿ ಪರಸ್ಪರ ಕುಶಲೋಪರಿ ವಿಚಾರಿಸಿದರು .ನನಗೆ ಅವರ ಮುಖವನ್ನು ನೋಡಲು ಮನಸ್ಸಿರಲಿಲ್ಲ .ಆದರೂ ಒಲ್ಲದ ಮನಸ್ಸಿನಿಂದ ಹುಡುಗನ ಮೇಲೆ ದೃಷ್ಟಿ ಹಾಯಿಸಿದೆ .ಆತ ಸುಂದರವಾಗಿದ್ದ. ನನ್ನನ್ನು ನೋಡಿ ಒಮ್ಮೆ ಮುಗುಳ್ನಕ್ಕ.ಆದರೆ ನಾನು ಗಂಟಿಕ್ಕಿದ ಮುಖದಲ್ಲೇ ಎಲ್ಲರನ್ನೂ ಮಾತನಾಡಿಸಿದೆ. ಕಾಫಿ ಟೀ ಎಲ್ಲವನ್ನೂ ನನ್ನ ಕೈಯಿಂದ ಗಂಡಿನ ಕಡೆಯವರಿಗೆ ಕೊಡಿಸಿದರು.

ಪರಸ್ಪರ ಜಾತಕಗಳನ್ನು ಬದಲಾಯಿಸಿ, ಸಂಪ್ರದಾಯದಂತೆ ವಿಧಿ ವಿಧಾನವನ್ನು ನೆರವೇರಿಸಿ, ಗಂಡಿನ ಕಡೆಯವರು ಮನೆಗೆ ಹೊರಟರು. ಹೇಗೆ ನಾಟಕ ಮುಗಿದ ಮೇಲೆ ಕಲಾವಿದ ವೇಷ ಬದಲಿಸುವನೂ ಹಾಗೆ ನಾನು ಕೂಡ ಆಭರಣವನ್ನೆಲ್ಲ ಬದಿಗಿಟ್ಟು ಅಡುಗೆ ಮನೆಗೆ ಬಂದೆ .ಆದರೆ ಅಲ್ಲಿ ಎಲ್ಲರದ್ದೂ ಒಂದೇ ಮಾತು “ನಮ್ಮ ಅದಿತಿಗೆ ಹೇಳಿ ಮಾಡಿಸಿದಂತಹ ಹುಡುಗ. ಎಷ್ಟು ನಯ-ವಿನಯ ಆ ಹುಡುಗನಲ್ಲಿ” ಅಂತೆಲ್ಲ ಹೇಳುತ್ತಿದ್ದರು. ನನಗಂತೂ ಕೋಪ ನೆತ್ತಿಗೇರಿತ್ತು. ಮಧ್ಯಾಹ್ನದ ಊಟ ಮುಗಿಸಿ ಹೊರಬಂದಾಗ ,ಗಂಡಿನವರ ಕಡೆಯಿಂದ ಫೋನ್ ಬಂತು .ನಾನು ದೇವರಲ್ಲಿ ಸಂಬಂಧ ಒಪ್ಪಿಗೆ ಆಗದಿರಲಿ ಎಂದು ಕೇಳಿಕೊಂಡೆ.ಆದರೆ ಅಮ್ಮ ಹೇಳಿದ ಮಾತು ನನಗೆ ದೇವರ ಮೇಲೂ ವಿಶ್ವಾಸ ಹೋಯಿತು .”ಗಂಡಿನ ಕಡೆಯವರಿಗೆ ನೀನು ತುಂಬಾ ಇಷ್ಟವಾಗಿದ್ದೀಯಂತೆ ಅವರು ಈ ಸಂಬಂಧವನ್ನು ಒಪ್ಪಿದ್ದಾರೆ .ಕೇವಲ ನಿನ್ನ ಅಭಿಪ್ರಾಯ ಬಾಕಿ ಇದೆ” ಎಂದಳು. ಅಮ್ಮನಲ್ಲಿ ಹೇಳಿದೆ “ಹುಡುಗ ನನಗೆ ಇಷ್ಟವಾಗಿಲ್ಲ. ನನ್ನ ಸಿ .ಎ ಮುಗಿಯುವವರೆಗೂ ನಾನು ಯಾರನ್ನು ಮದುವೆ ಆಗಲ್ಲ “ಎಂದು .ಸಣ್ಣ ಮುಖ ಮಾಡಿಕೊಂಡೆ ಅಮ್ಮ ಒಳನಡೆದಳು. ಆದರೆ ಸೋದರಮಾವನೆದುರು ಅಪ್ಪನಿಗೂ ಹೇಳುವ ಧೈರ್ಯ ನನಗಿರಲಿಲ್ಲ. ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತೆ .ಅಪ್ಪನ ಮೇಲೆ ತುಂಬಾ ಬೇಜಾರಾಗಿತ್ತು. ಗೆಳತಿ ಸಿಂಚು ಗೆ ಕಾಲ್ ಮಾಡಿ ಎಲ್ಲ ವಿಷಯವನ್ನು ಚಾಚೂತಪ್ಪದೆ ಹೇಳಿದೆ.
ಹುಡುಗ ಇಷ್ಟವಾಗಿದ್ದರು ನನಗೆ ನನ್ನ ಕನಸೇ ಮುಖ್ಯ ಎಂದು ಸಿಂಚುವಿನಲ್ಲಿ ಹೇಳಿದೆ .ಅವಳು ಕೂಡ ನನ್ನೆಲ್ಲ ಭಾವನೆಗಳನ್ನು ಸಮರ್ಥಿಸಿದಳು .ಅಷ್ಟರಲ್ಲಿ ಸಂಜೆ ಆಗಿತ್ತು. ಅಪ್ಪ ಬಂದು “ಮಗಳೇ ಈ ವರ್ಷ ಹೊಸದಾದ ಡಿಸೈನ್ ಮದರಂಗಿ ಹಾಕುತ್ತೇನೆ ಬಾ” ಎಂದು ಪ್ರೀತಿಯಿಂದ ಕರೆದ. “ನಾನು ಬರುವುದಿಲ್ಲ ನನಗೆ ಯಾವ ಹೊಸ ಡಿಸೈನ್ ಹಾಕುವ ಅಗತ್ಯವಿಲ್ಲ” ಎಂದು ಕೋಪದಿಂದ ಹೇಳಿದೆ .ಆಗ ಅಪ್ಪ  “ಮಗಳೇ ಸಂಬಂಧ ಇಷ್ಟವಿಲ್ಲ ವಾದರೆ ಬಿಡು,ಈಗ ಹಬ್ಬದ ಸಮಯದಲ್ಲಿ ಯೋಚಿಸಬೇಡ “ಎಂದ.ನಾನು ಕೋಪದಿಂದ ಮಾತನಾಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ಸೋದರಮಾವ ಬಂದು “ಅದಿತಿ  ನಿನ್ನೊಂದಿಗೆ ಸ್ವಲ್ಪ ಮಾತನಾಡಬೇಕು .ನಿಮ್ಮ ಕಂಪನಿಯಲ್ಲಿ ನನ್ನ ಮಗನಿಗೂ ಕೂಡ ಕೆಲಸ ಸಿಗಬಹುದೇ ? ಬಾಗಿಲನ್ನು ತೆಗೆ” ಎಂದ. ಕಣ್ಣೀರನ್ನು ಒರೆಸುತ್ತಾ ಬಾಗಿಲನ್ನು ತೆಗೆದಾಗ ಸುತ್ತಲೂ ಯಾರೂ ಇಲ್ಲವೆಂಬುದನ್ನು ಮಾವ ಖಾತ್ರಿಪಡಿಸಿಕೊಂಡು ,”ನಿನಗೆ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕು ,ದಯವಿಟ್ಟು ನಿಮ್ಮ ಅಪ್ಪನ ಮನಸ್ಸನ್ನು ನೋಯಿಸಬೇಡ .ಅವನಿಗೆ ನಿನ್ನ ಮೇಲೆ ತುಂಬಾ ಪ್ರೀತಿ. ಸದ್ಯ ನಿನಗೆ ಬಂದಿರುವುದು ತುಂಬಾ ಒಳ್ಳೆಯ ಸಂಬಂಧ ,ಎಲ್ಲ ರೀತಿಯಲ್ಲೂ ತೂಗಿ ಅಳತೆ ಮಾಡಿಯೇ ಇಂದು ನಾವು ಈ ನಿರ್ಧಾರಕ್ಕೆ ಬಂದಿರುತ್ತೇವೆ. ನಿನ್ನ ಅಪ್ಪನಿಗೆ ಅಪ್ಪನಿಗೆ( ಬಡಬಡಿಸುತ್ತಾ) ಬ್ಲಡ್ ಕ್ಯಾನ್ಸರ್ ,ಇನ್ನು ಅವನು ಬದುಕುಳಿಯುವುದು ಕೆಲವೇ ತಿಂಗಳು ಎಂದು ಡಾಕ್ಟರ್ ಹೇಳಿದ್ದಾರೆ.ಅವನ  ಮನಸ್ಸನ್ನು ದಯವಿಟ್ಟು ನೋಯಿಸಬೇಡ. ನಿನಗೆ ಈ ಸಂಬಂಧ ಇಷ್ಟವಿಲ್ಲ ವಾದರೂ ತೊಂದರೆ ಇಲ್ಲ ,ಆದರೆ ಅಪ್ಪನನ್ನು ಮಾತ್ರ ದ್ವೇಷಿಸಬೇಡ. ಈ ವಿಚಾರ ನನಗೆ ,ನಿನ್ನ ಅಪ್ಪನಿಗೆ ಬಿಟ್ಟು ಇನ್ಯಾರಿಗೂ ತಿಳಿದಿಲ್ಲ .ಮನೆಯ ಹಿರಿಯ ಮಗಳಾದ ನೀನು ನಿನ್ನ ಜವಾಬ್ದಾರಿ ಅರಿತು ನಿರ್ಧರಿಸು “ಎಂದು ಹೇಳಿದ.
ಇದನ್ನು ಕೇಳಿದ ನನಗೆ ಒಂದು ಕ್ಷಣ ಎದೆಯೇ ಒಡೆದಂತಾಯಿತು .”ಮಾವ ನೀನು ಸುಳ್ಳು ಹೇಳುತ್ತಿರುವೆ”. ಎಂದು ಅಳಲು ಪ್ರಾರಂಭಿಸಿದೆ. ಭಾವುಕನಾದ ಮಾವ ಮೈದಡವಿ ನನ್ನನ್ನು ಸಮಾಧಾನಿಸಿದ ಧೈರ್ಯ ತುಂಬಿದ. ಅಪ್ಪನ ದೇಹದಲ್ಲಿ ಆದಂತಹ ಬದಲಾವಣೆ ಯೋಗಾಭ್ಯಾಸದಿಂದ ಅಲ್ಲ. ಎನ್ನುವುದು ಅಷ್ಟರಲ್ಲಿ ನನಗೆ ಖಾತ್ರಿಯಾಗಿತ್ತು. ಕೂಡಲೇ ಸಮಾಧಾನ ಮಾಡಿಕೊಂಡು ಅಪ್ಪ ಇದ್ದಲ್ಲಿ ಓಡಿದೆ. ಅಪ್ಪ ಎಂದಿನಂತೆ ನಗುಮುಖದಲ್ಲೇ ಮದರಂಗಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ನನಗಾಗಿ ಕಾಯುತ್ತಿದ್ದ .ಒಮ್ಮೆ ಅಪ್ಪನ ಮುಖವನ್ನು ನೋಡಿ ನನಗೆ ದುಃಖ ತಡೆಯಲಾಗಲಿಲ್ಲ . ಪುನಃ ಮಾಮ ಇದ್ದಲ್ಲಿಗೆ ಬಂದು ಅಳತೂಡಗಿದೆ.ಮಾವ ಮತ್ತೆ ಸಮಾಧಾನ ಮಾಡಿದ “ನೋಡು ಅದಿತಿ ನಿಮ್ಮಪ್ಪನನ್ನು ಸಾವಿನ ಮನೆಯನ್ನು ಎದುರು ನೋಡುತ್ತಿರುವ ಅವನ ಮುಖದಲ್ಲಿ ಸ್ವಲ್ಪವೂ ಬೇಸರವಿಲ್ಲ .ಮುಗುಳ್ನಗೆಯಿಂದಲೇ ಸತ್ಯವನ್ನು ಸ್ವಾಗತಿಸುತ್ತಿದ್ದಾನೆ.ನಾವು ಕೂಡ ಸತ್ಯವನ್ನು ಸ್ವೀಕರಿಸಬೇಕಿದೆ”ಎಂದ.

ನನಗಂತೂ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು ಇಂಥ ! ಅಪ್ಪನನ್ನು ತಿಳಿಯದೆ ನಿಂದಿಸಿ ಅವನ ಮನಸ್ಸನ್ನು ನೋಯಿಸಿದೆನಲ್ಲ .ಎಂಬ ಪಾಪಪ್ರಜ್ಞೆ ಕೂಡ ಕಾಡತೊಡಗಿತ್ತು. ಅಪ್ಪನ ಸಂತೋಷದ ಮುಂದೆ ನನ್ನ ಕನಸನ್ನು  ತ್ಯಾಗ ಮಾಡುವುದು ನನಗೆ ಅಗ್ನಿಪರೀಕ್ಷೆಯಾಗಿತ್ತು .ನಾನು ಅಪ್ಪನ ಸಂತೋಷವನ್ನು ಆಯ್ದುಕೊಂಡೆ .ಕೂಡಲೇ ಅಪ್ಪನಲ್ಲಿ ಹೋಗಿ “ಅಪ್ಪ ನನ್ನನ್ನು ಕ್ಷಮಿಸು .ನನಗೆ ವಿಷಯ ತಿಳಿಸದೆ ಸಂಬಂಧ ನೋಡಿದ್ದರಿಂದ ಸ್ವಲ್ಪ ಕೋಪಗೊಂಡೆ “ಎಂದು ಆತನನ್ನು ಒಮ್ಮೆ ಬಿಗಿದಪ್ಪಿಕೊಂಡೆ. ಅಪ್ಪ ಹೇಳಿದ “ಮಗು ಯಾಕೆ ಅಳುತ್ತಿರುವೆ .ನನ್ನ ಮೇಲೆ ನಿನಗೆ ಬಂದ ಕೋಪ ಸಹಜ.” ಎನ್ನುತ್ತ ನನ್ನ ಕೈ ಹಿಡಿದು ಕಣ್ಣೀರನ್ನು ಒರೆಸಿ, ಮದರಂಗಿ ಹಾಕಲು ಪ್ರಾರಂಭಿಸಿದ .ಅಪ್ಪನ ವಿಚಾರ ನನಗೆ ತಿಳಿದಿಲ್ಲ ದಂತೆ ನಟಿಸಬೇಕೆಂದು ಸೋದರಮಾವ ಹೇಳಿರುವ ಮಾತು ನೆನಪಿಗೆ ಬಂತು.

ನಗುನಗುತ್ತಲೇ ಅಪ್ಪನೊಂದಿಗೆ ಬೆಂಗಳೂರಿನ ವಿಚಾರವನ್ನೆಲ್ಲ ಹಂಚಿಕೊಂಡೆ .ಅಪ್ಪ ತುಂಬಾ ತಮಾಷೆಯ ಸ್ವಭಾವದವರಾಗಿದ್ದರು .ಆ ಸಮಯದಲ್ಲೂ ತಮಾಷೆ ಮಾಡುತ್ತಾ ನಗುತ್ತಿದ್ದರು. ಅಷ್ಟರಲ್ಲಿ ಅಮ್ಮ ಬಂದಳು. “ಅಪ್ಪ ಮಗಳನ್ನು ನೋಡಿದರೆ ಸಂಬಂಧವನ್ನು ಮಗಳು ಒಪ್ಪಿಕೊಂಡಂತಿದೆ “ಎಂದಳು .ತಕ್ಷಣ ಏನನ್ನು ವಿಚಾರಿಸದೆ “ಹೌದಮ್ಮ .ನನಗೆ ಸಂಬಂಧ ತುಂಬಾ ಇಷ್ಟವಾಯಿತು. ಅಪ್ಪ ನನಗೆ ನೋಡಿದ ಸಂಬಂಧ ನನಗೆ ಇಷ್ಟವಾಗದೇ ಇರಲು ಹೇಗೆ ಸಾಧ್ಯ “ಎಂದು ಉದ್ಗರಿಸಿದೆ .ಅಪ್ಪ ಸಂತೋಷದಿಂದ ! “ನಿಜವೇ ಮಗಳೇ?” ಎಂದು ಕೇಳಿದ .ನಾನು “ಹೌದಪ್ಪ” ಎಂದು ಮುಗುಳ್ನಕ್ಕಂತೆ ನಟಿಸಿದೆ .ಮದರಂಗಿಯ ಕೊನೆಯ ಗೆರೆ ಎಳೆಯುವಾಗ ಅಪ್ಪನ ಕಣ್ಣಿನಿಂದ ಒಂದು ತೊಟ್ಟು ನೀರು ನನ್ನ ಕೈ ಮೇಲೆ ಬಿದ್ದಿತ್ತು.

ಅಷ್ಟರಲ್ಲಿ ಮಾವ ನನ್ನನ್ನು ಕರೆದು “ಈ ಸಂಬಂಧ ನಿನಗೆ ಇಷ್ಟವಿದ್ದರೆ ಮಾತ್ರ ಒಪ್ಪಿಕೋ “ಎಂದ.” ಮಾಮಾ ನನಗೆ ಒಪ್ಪಿಗೆ ಇದೆ” ಎಂದು ತಲೆಯಲ್ಲಾಡಿಸಿದೆ. ಕೂಡಲೇ ಮನೆಯಂಗಳದ ಮೂಲೆಯಲ್ಲಿರುವ ಸುಂದರವಾದ ಹೂದೋಟಕ್ಕೆ ತೆರಳಿದೆ .ನನ್ನ ದುಃಖ ತುಂಬಿ ಬಂತು, ಅಪ್ಪನನ್ನು ಕಳೆದುಕೊಳ್ಳಬೇಕಾದ ನೋವು ಒಂದೆಡೆಯಾದರೆ ನನ್ನ ಕನಸನ್ನು ಬದಿಗೊತ್ತಿದ ನೋವು ಇನ್ನೊಂದೆಡೆ ಆಗಿತ್ತು.

ತೋಟದಲ್ಲಿ ಅರಳಿದ ಹೂವಿಗೂ ಅಪ್ಪನ ನಗುವಿಗೂ ಏನೂ ವ್ಯತ್ಯಾಸವಿಲ್ಲ ಎನಿಸಿತು.  ನಾಳೆಯೇ ಬಾಡಿಹೋಗುವ ಹೂವು ಹೂದೋಟದಲ್ಲಿ ತನ್ನ ಸೌಂದರ್ಯದಿಂದ ವಿಜೃಂಭಿಸುವಂತೆ ಅಪ್ಪ ನಮಗೆಲ್ಲರಿಗೂ ಆದರ್ಶ ಎನಿಸಿತು. ಅಷ್ಟರಲ್ಲಿ ನನ್ನ ಪುಟ್ಟ ತಮ್ಮ ಬಂದು ಕೈ ಹಿಡಿದು “ಅಕ್ಕ ಆ  ಹಣ್ಣನ್ನು ನನಗೆ ಕಿತ್ತು ಕೊಡುವೆಯಾ ?”ಎಂದು ಎತ್ತರದಲ್ಲಿರುವ ಮಾವಿನಹಣ್ಣನ್ನು ತೋರಿಸಿದಾಗ  ಕುಟುಂಬದ ಮೇಲೆ ನನಗಿರುವ ಜವಾಬ್ದಾರಿ ನೆನೆದು ಕಣ್ಣೊರೆಸಿಕೂಂಡೆ.
ತ್ಯಾಗಕ್ಕೆ ಇನ್ನೂಂದು ಪದ ಮಹಿಳೆ ಎನ್ನುವುದು ಅಕ್ಷರಶಃ ಸತ್ಯವಾಗಿತ್ತು.
#####
ನಿರಂಜನ ಹೆಗಡೆ

About the author

Adyot

Leave a Comment