ರಾಷ್ಟ್ರ ರಕ್ಷಣೆ, ರಾಷ್ಟ್ರೀಯ ಸುರಕ್ಷತೆಯ ಕುರಿತಾಗಿ ಬಹಳ ಹಿಂದೆಯೇ ಚಿಂತನೆ ನಡೆಸಿದ್ದ ಮೇಧಾವೀ ಆಚಾರ್ಯ ತಕ್ಷಶಿಲೆಯ ಗುರು ಚಾಣಕ್ಯ. ಮೆಸಡೋನಿಯಾದ ರಾಜ ಅಲೆಕ್ಸಾಂಡರ್ ವಿಶ್ವವಿಜಯದ ಉದ್ದೇಶದೊಂದಿಗೆ ಒಂದೊಂದೇ ರಾಜ್ಯಗಳನ್ನು ವಶಪಡಿಸಿಕೊಳ್ಳುತ್ತ ಬರುತ್ತಿರುವ ಮಾಹಿತಿ ಹಾಗೂ ಆತ ಪರ್ಶಿಯಾವನ್ನು ತಲುಪಿರುವ ಸಂಗತಿ ಅರಿತಿದ್ದ ಚಾಣಕ್ಯ, ಭಾರತದ ಸುರಕ್ಷತೆಯ ಬಗ್ಗೆ ಯೋಜನೆ ರೂಪಿಸುತ್ತಿದ್ದ. ಚಿಕ್ಕ-ಚಿಕ್ಕ ರಾಜ್ಯಗಳಾಗಿ ಬೇರೆ-ಬೇರೆ ರಾಜರುಗಳ ಆಳ್ವಿಕೆಗೆ ಒಳಪಟ್ಟಿದ್ದ ಭಾರತವನ್ನು ಅಖಂಡವಾಗಿ ನೋಡುವ ಮತ್ತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪರಕೀಯರ ಆಕ್ರಮಣವನ್ನು ಎದುರಿಸುವ ಚಿಂತನೆ, ಪರಸ್ಪರ ಬಡಿದಾಡುತ್ತಿದ್ದ ಭಾರತೀಯ ರಾಜರುಗಳ ಕಾರಣಕ್ಕಾಗಿ ಅತಾರ್ಕಿಕವೆನ್ನಿಸುತ್ತಿತ್ತು!
ಅಧ್ಯಯನ-ಅಧ್ಯಾಪನದಲ್ಲಿ ನಿರತರಾಗಿರುತ್ತಿದ್ದ ಆಚಾರ್ಯ, ರಾಷ್ಟ ಹಿತಕ್ಕಾಗಿ ಅಗತ್ಯ ಬಿದ್ದರೆ ರಾಜರಿಗೂ ಸಲಹೆ ಕೊಡಬಹುದೆಂದು ಭಾವಿಸಿ ಆ ಕಾಲಕ್ಕೆ ದೊಡ್ಡ ರಾಜ್ಯವಾಗಿದ್ದ ‘ಮಗಧ’ಕ್ಕೆ ತೆರಳಿದ್ದ. ಆದರೆ ಅರಸ ಧನಾನಂದ ಈ ಕಾರ್ಯಕ್ಕೆ ಅಸಡ್ಡೆ ತೋರಿದ್ದರಿಂದ ಆತನನ್ನೇ ಸಿಂಹಾಸನದಿಂದ ಇಳಿಸಿ, ‘ಆ-ಸ್ಥಾನ’ದಲ್ಲಿ ಬೇರೊಬ್ಬ ಸೂಕ್ತ ವ್ಯಕ್ತಿಯನ್ನು (ಚಂದ್ರಗುಪ್ತ ಮೌರ್ಯ) ತಂದು ಅಖಂಡ ಭಾರತವನ್ನು ನಿರ್ಮಿಸುವ, ತನ್ಮೂಲಕ ತಾಯ್ನೆಲವನ್ನು ಸುರಕ್ಷಿತವಾಗಿರಿಸುವ ಮಹತ್ಕಾರ್ಯಕ್ಕೆ ಮುಂದಾದ. ರಾಜನೀತಿ, ಅರ್ಥಶಾಸ್ತ್ರ ಹಾಗೂ ಆಡಳಿತ ನಿರ್ವಹಣೆಯ ವಿಧಾನಗಳಿಗೆ ರೂಪುರೇಷೆ ನೀಡಿ, ಚಾಣಕ್ಯ ನೀತಿ-ಸೂತ್ರಗಳನ್ನೇ ಕೊಡುಗೆಯಾಗಿ ಕೊಟ್ಟದ್ದು ಇತಿಹಾಸ. ಯಾರೇ ಆಗಲಿ ಸಮಚಿತ್ತದಿಂದ ಒಂದು ಮಹತ್ಕಾರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟದ್ದು ಅನುಭವಕ್ಕೆ ಬಂದಾಗಲೆಲ್ಲ ಈ ಮಹಾನ್ ಆಚಾರ್ಯ ಚಾಣಕ್ಯ ಕೂಡ ನೆನಪಾಗುತ್ತಾನೆ.
ಸುಬಾಷ್ ಚಂದ್ರ ಭೋಸ್ 1942-43ರಲ್ಲಿ ಆಜಾದ್ ಹಿಂದ್ ಫೌಜ್ (ಐ.ಎನ್.ಎ – ಇಂಡಿಯನ್ ನ್ಯಾಷನಲ್ ಆರ್ಮಿ)ಎಂಬ ಸೈನ್ಯವನ್ನು ಕಟ್ಟಿ ಅದರ ನೇತೃತ್ವವನ್ನು ವಹಿಸಿದರು. ನನಗೆ ನಿಮ್ಮ ಶಕ್ತಿ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ. ಸ್ವಾತಂತ್ರ್ಯವು ಬೇಡಿ ಪಡೆಯುವ ವಸ್ತುವಲ್ಲ, ರಕ್ತ ಹರಿಸಿ – ಬಲಿದಾನ ಮಾಡಿ ಪಡೆವ ವಸ್ತುವೆಂದು ಹೇಳಿದ್ದ ಭೋಸ್, ‘ಜೈ ಹಿಂದ್’ ಘೋಷಣೆಯನ್ನ ಕೊಟ್ಟರು. ಸುಭಾಷರು ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಅದು ಹೆಚ್ಚಲು ಯಾವ ‘ಕದಂ-ಕದಂ ಬಡಾಯೆಜಾ…’ ಹಾಡನ್ನು ತಮ್ಮ ಈ ಸೇನೆಗಾಗಿ ಆಯ್ಕೆ ಮಾಡಿದ್ದರೋ – ಅದೇ ಇಂದಿಗೂ ಕೂಡ ಭಾರತೀಯ ಸೇನೆಯ ಕ್ವಿಕ್ ಮಾರ್ಚ್ ಹಾಡಾಗಿದ್ದು ಪ್ರೇರಣೆ ನೀಡುತ್ತಿದೆ.
ರಾಷ್ಟ್ರ-ಮೊದಲು ಎಂದು ದೃಢವಾಗಿ ವಿಶ್ವಾಸವಿಡುವ, ಒಗ್ಗಟ್ಟಿನಿಂದ ಶತ್ರುನಾಶಕ್ಕಾಗಿ ಹೋರಾಡುವ ಭಾರತೀಯ ಸೈನಿಕರದ್ದು ತಾಯಿ ಭಾರತಿಗಾಗಿ ನಿಸ್ವಾರ್ಥ ಸೇವೆ. ಶಸ್ತ್ರಾಭ್ಯಾಸ, ತರಬೇತಿ ಹಾಗೂ ವಿವಿಧ ಪರೀಕ್ಷೆಗಳನ್ನು ಎದುರಿಸುವುದು ಮತ್ತು ಸದಾ ಸನ್ನದ್ಧವಾಗಿರುವುದು ಸೇನೆಗೆ ಮಾಮೂಲು. ಸೇನೆಯ ಯಾವುದೇ ಅಂಗವಿರಲಿ ಅಲ್ಲಿ ಭರ್ತಿಯಾಗುವ ಸೈನಿಕ ಅಥವಾ ಅಧಿಕಾರಿ ಅರ್ಪಣೆಯ ಮನೋಭಾವ ಹೊಂದಿದವರೇ ಆಗಿರಬೇಕು. ಬಹುಷಃ ಸೇನಾಭರ್ತಿಯ ಸಂದರ್ಭದಲ್ಲಿನ ವಿವಿಧ ಪರೀಕ್ಷೆಗಳ ಹೊರತಾಗಿ ಬಹುಮುಖ್ಯವಾಗಿ ಓರೆಗೆ ಹಚ್ಚುವುದು ಇದೇ ಗುಣವಿರಬೇಕು. ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರು ಕೇವಲ ಯುದ್ಧ ಸಂದರ್ಭದಲ್ಲಿ ಮಾತ್ರವಲ್ಲ; ಪ್ರಕೃತಿ ವಿಕೋಪದಲ್ಲಿ, ತುರ್ತು ಅಗತ್ಯವಿದ್ದಾಗ, ಗಡಿ ಸುರಕ್ಷತೆ ಮತ್ತು ಪ್ರತ್ಯೇಕತಾ ವಾದಿಗಳ-ಆತಂಕವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಕೂಡ ಕಾರ್ಯಮಗ್ನರಾಗುತ್ತಾರೆ.
ರಾಷ್ಟ್ರವೊಂದರ ಸಾಮಥ್ರ್ಯವು ನಿರ್ಧರಿತವಾಗುವುದು ಬಹು ಮುಖ್ಯವಾಗಿ ಅದರ ಸೇನಾ ಶಕ್ತಿಯ ಮೇಲೆ ಕೂಡ ಅವಲಂಬಿತ. ಇತ್ತೀಚಿನ ದಿನಗಳಲ್ಲಿ ಸೇನೆಯ ಶಕ್ತಿ ನಿರ್ಧರಿತವಾಗುವುದು ಸಂಭಾವ್ಯ ದಾಳಿಯನ್ನು ಎದುರಿಸಬಲ್ಲ ಮತ್ತು ಶತ್ರು ದೇಶಗಳ ಮೇಲೆ ದಾಳಿ ಮಾಡಲಿಕ್ಕೆ ಬೇಕಾಗುವ ವೈಮಾನಿಕ ಶಸ್ತ್ರಾಸ್ತ್ರಗಳು – ಯುದ್ಧ ವಿಮಾನಗಳನ್ನು ಹೊಂದಿರುವ ಪ್ರಮಾಣದ ಮೇಲೆ. ಈ ರೀತಿಯ ರಕ್ಷಣಾ ಸಲಕರಣೆಗಳ ಖರೀದಿಯ ಮೇಲೆ ಸರ್ಕಾರವೊಂದು ಮಾಡುವ ವೆಚ್ಚವು ಗಮನಸೆಳೆಯುತ್ತಿದ್ದ ಕಾಲವೊಂದಿತ್ತು, ಆದರೆ ತಡವಾಗಿಯಾದರೂ ಇತ್ತೀಚೆಗೆ ರಕ್ಷಣಾ ಉತ್ಪಾದನೆಗಳು ಈ ನೆಲದಲ್ಲಿಯೇ ಆಗಬೇಕು ಎಂಬ ದಿಶೆಯಲ್ಲಿ ಪ್ರಯತ್ನಗಳು ಆರಂಭಗೊಂಡಿವೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ರಕ್ಷಣಾ ಸಾಮಗ್ರಿ ತಯಾರಿಕೆಯೇ ಮುಖ್ಯ ಸ್ಥಾನ ವಹಿಸಲಿದೆ ಎಂದು ಸ್ವತಃ ಮಾನ್ಯ ಪ್ರಧಾನಿಗಳೇ ಹೇಳಿದ್ದಾರೆ. ಭಾರತದಲ್ಲಿಯೇ ರೂಪಿಸಿ, ಅಭಿವೃದ್ಧಿ ಪಡಿಸಿ, ಇಲ್ಲಿಯೇ ನಿರ್ಮಿಸಬಲ್ಲ ಹಾಗೂ ಬಿಡಿ ಬಾಗಗಳನ್ನು ಕೂಡ ದೇಶೀಯವಾಗಿ ಉತ್ಪಾದಿಸಬಲ್ಲ ತಾಂತ್ರಿಕ ಪರಿಣತಿಯನ್ನು ನಾವೀಗ ಸಾಧಿಸಬೇಕಿದೆ.
14 ಲಕ್ಷ ಸೈನಿಕ ಬಲ ಹೊಂದಿರುವ ಭಾರತೀಯ ಸೇನೆಯು ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡದು, ನಮ್ಮ ಅರೆ ಸೇನಾ ಪಡೆ (ಪ್ಯಾರಾ ಮಿಲಿಟರಿ ಪಡೆ) ವಿಶ್ವಕ್ಕೇ ದೊಡ್ಡದು ಮತ್ತು ಅತ್ಯಂತ ದೊಡ್ಡ ಸ್ವಯಂಸೇವಾ ಸೇನಾ ಬಲ ಹೊಂದಿದ ಗರಿಮೆಯೂ ಕೂಡ ನಮ್ಮದೇ! ಭೂಸೇನೆ, ವಾಯುಸೇನೇ, ನೌಕಾದಳಗಳ ನಮ್ಮ ಸೇನೆಯ ಅಂಗಗಳು ಮತ್ತು ಭಾರತೀಯ ತಟ ರಕ್ಷಕ ದಳ (ಇಂಡಿಯನ್ ಕೋಸ್ಟ ಗಾರ್ಡ) ಕೂಡ. ಜೊತೆಗೆ ಪ್ಯಾರಾ ಮಿಲಿಟರಿ ಪಡೆಗಳೆಂದು ಕರೆಯಲ್ಪಡುವ ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ, ಕೇಂದ್ರೀಯ ಸಶಸ್ತ್ರ ಮೀಸಲು ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆ, ನ್ಯಾಶನಲ್ ಸೆಕ್ಯುರಿಟಿ ಗಾರ್ಡ (ಎನ್.ಎಸ್.ಜಿ), ಸಶಸ್ತ್ರ ಸೀಮಾ ಬಲ ಹಾಗೂ ಅಣುಶಕ್ತಿ ನಿರ್ವಹಣಾ ವಿಭಾಗ – ಈ ಎಲ್ಲ ಅಂಗಗಳೂ ಕೂಡ ಭಾರತೀಯ ಸೇನೆಯ ಕೆಲಸಕ್ಕೆ ನೆರವಾಗುತ್ತವೆ. ಪ್ಯಾರಾ ಮಿಲಿಟರಿ ಪಡೆಗಳಿಗೆ ಐ.ಪಿ.ಎಸ್ ಅಧಿಕಾರಿಗಳು ಮುಖ್ಯಸ್ಥರಾಗಿದ್ದು (ಡೈರೆಕ್ಟರ್ ಜನರಲ್) ಮುನ್ನಡೆಸುತ್ತಾರೆ, ಬಹುತೇಕ ಸಿಬ್ಬಂದಿಗಳ ನೇಮಕಾತಿಯನ್ನು ಆಯಾ ಪಡೆಗಳೇ ಮಾಡಿಕೊಳ್ಳುತ್ತವೆ. ಭಾರತೀಯ ಸೇನೆಯ ಸರ್ವೋಚ್ಛ ದಂಡನಾಯಕರು ಸನ್ಮಾನ್ಯ ರಾಷ್ಟ್ರಪತಿಗಳಾಗಿರುತ್ತಾರೆ.
2017ರ ಗಣರಾಜ್ಯೋತ್ಸವದ ಪರೇಡಿನಲ್ಲಿ ಫೋರ್ಥ್ ಜೆನರೇಶನ್ನಿನ ಮೂರು ಲೈಟ್ ಕಾಂಬಾಟ್ ಎರ್‍ಕ್ರಾಫ್ಟಗಳು, ಮಿ-17 ಹೆಲಿಕ್ಯಾಪ್ಟರ್, ಮಿ-35 ಆಕ್ರಮಣಕಾರೀ ಹೆಲಿಕ್ಯಾಪ್ಟರ್, ಮಿ-29 ಫೈಟರ್ ಜೆಟ್ ಮತ್ತು ಸಿ-1305 ಹಾಗೂ ಸಿ-17 ಶಸ್ತ್ರ ಸಾಗಾಣಿಕಾ ವಿಮಾನಗಳು ಪ್ರದರ್ಶನ ನೀಡಿದ್ದವು. ಈ ಸಲ ಹಿಂದೂಸ್ತಾನ್ ಎರೋನಾಟಿಕ್ಸ ಲಿಮಿಟೆಡ್ (ಎಚ್.ಎ.ಎಲ್) ದೇಶೀಯವಾಗಿ ನಿರ್ಮಿಸಿರುವ ಮೂರು ‘ರುದ್ರಾ’ – ಆಕ್ರಮಣಕಾರೀ ಹೆಲಿಕ್ಯಾಪ್ಟರ್‍ಗಳು ವೈಮಾನಿಕ ಪ್ರದರ್ಶನ ನೀಡಿದವು. ಇವು ಶಸ್ತ್ರ-ಸಜ್ಜಿತವಾಗಿದ್ದು – ‘ಧ್ರುವ’ ಹೆಲಿಕ್ಯಾಪ್ಟರಿನ ಸುಧಾರಿತ ಅವತರಣಿಕೆಯಾಗಿವೆ ಎನ್ನುವುದು ವಿಶೇಷತೆ.
ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಉತ್ಪಾದನೆ ಹಾಗೂ ಯುದ್ಧ ವಿಮಾನ ತಯಾರಿಕೆಯಲ್ಲಿ ನೆರೆವಾಗುತ್ತಿರುವುದು ಈ ನೆಲೆದ ಸಂಸ್ಥೆಗಳಾದ, ಭಾರತದ ಉದ್ದಗಲಕ್ಕೆ ಹರಡಿಕೊಂಡಿರುವ ಸುಮಾರು 41 ಆರ್ಡನನ್ಸ್ ಫ್ಯಾಕ್ಟರಿಗಳು (ಶಸ್ತ್ರಾಸ್ತ್ರ, ಮದ್ದುಗುಂಡು, ಪಿಸ್ತೂಲ್ ಹಾಗೂ ಬಂದೂಕುಗಳು, ಸೇನಾ ವಾಹನಗಳು ಇಲ್ಲಿ ತಯಾರಾಗುತ್ತವೆ), ಜೊತೆಗೆ ಎಚ್.ಎ.ಎಲ್, ಬಿ.ಇ.ಎಲ್ – ಭಾರತ್ ಇಲೆಕ್ಟ್ರಾನಿಕ್ಸ ಲಿಮಿಟೆಡ್, ಬಿ.ಇ.ಎಮ್.ಎಲ್, ಡಿ.ಆರ್.ಡಿ.ಓ ಮೊದಲಾದವು ರಕ್ಷಣಾ ಉಪಕರಣಗಳನ್ನು ಅಭಿವೃದ್ಧಿ ಪಡಿಸುವದರಲ್ಲಿ ತೊಡಗಿಕೊಂಡಿವೆ. ರಾಡಾರ್-ಸೋನಾರ್, ರಕ್ಷಣಾ ಸಂವಹನ ಸಾಮಗ್ರಿಗಳು, ನಮ್ಮ ಸೇನೆಯ ಬಳಕೆಗೆ ಬೇಕಾಗಬಲ್ಲ ವಾಹನಗಳು, ಇ_ವಾರ್‍ಫೇರ್ ಸಿಸ್ಟಂಗಳು, ಟ್ಯಾಂಕ್, ಮಿಸೈಲ್, ಯುದ್ಧವಿಮಾನಗಳು ಮುಂತಾದವುಗಳನ್ನು ಈ ಸಂಸ್ಥೆಗಳು ತಯಾರಿಸಿಕೊಡುತ್ತವೆ.
ಶಸ್ತ್ರಾಸ್ತ್ರ ಸಾಗಾಣಿಕಾ ವಾಹನಗಳು, ಅಣ್ವಸ್ತ್ರ ಸಿಡಿತಲೆಗಳು, ಕ್ಷಿಪಣಿ ಮತ್ತು ಕ್ಷಿಪಣಿ ವಾಹಕಗಳ ಉತ್ಪಾದನೆ, ಉಪಗ್ರಹ ಉಡಾವಣೆಯಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಇಂದು ಭಾರತ ಫಿಫ್ತ್ ಜೆನರೇಶನ್ ಎರ್‍ಕ್ರಾಫ್ಟ್‍ಗಳ ತಯಾರಿಕೆಯಲ್ಲಿ ನಿರತವಾಗಿದೆ ಎನ್ನುವುದು ಹೆಮ್ಮೆಯ ಸಂಗತಿ. ವಿದೇಶದಲ್ಲಿರುವ ಭಾರತದ ಏಕೈಕ ವೈಮಾನಿಕ ಸೇನಾ ನೆಲೆ (ಎರ್ ಬೇಸ್) ತಜಕಿಸ್ತಾನದ ಫಾರ್ಖೋರ್‍ದಲ್ಲಿ ಇದೆ. ಇತರ ದೇಶಗಳಲ್ಲಿಯೂ ಕೂಡ ನಮ್ಮ ಸೇನಾ ನೆಲೆಯನ್ನು (ಮಿಲಿಟರಿ ಬೇಸ್) ನಾವು ಹೊಂದಿದ್ದೇವೆ, ಖತಾರ್, ಓಮಾನ್, ಮೊಝಾಂಬಿಕ್, ಮಡಗಾಸ್ಕರ್, ಸೈಚೆಲ್ಲಿಸ್, ವಿಯೆಟ್ನಾಂ, ಮಾಲ್ಡೀವ್ಸ್, ಭೂತಾನ್ ಮತ್ತು ನೇಪಾಳದಲ್ಲಿ ನಮ್ಮ ಸೇನಾ ನೆಲೆಗಳಿವೆ. ಜೈ ಹಿಂದ್!