ಸಿದ್ದಾಪುರದಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣೆ ಸಮಾರಂಭ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಸರ್ವ ಧರ್ಮ ಸಹಿಷ್ಣುತೆಯ ಸುಭದ್ರ ಅಡಿಪಾಯ ನಿರ್ಮಾಣವಾಗಬೇಕಾದರೆ ಶಿಕ್ಷಣ ಬಹಳ ಅಗತ್ಯ.ದೇಶದ ಚಿತ್ರಣವನ್ನು ಬದಲಿಸುವ ಶಕ್ತಿ ಶಿಕ್ಷಣ ಹಾಗೂ ಶಿಕ್ಷಕರಿಗಿದೆ.ದೇಶದ ಭವಿಷ್ಯವನ್ನು ರೂಪಿಸುವ ಮುಂದಿನ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಪವಿತ್ರ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರು ಅಭಿನಂದನಾರ್ಹರು ಎಂದು ಹೇಳಿದರು.

ದೇಶದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುವ ವ್ಯಕ್ತಿಗಳಿಗೆ ಸಿಗುತ್ತಿರುವ ಗೌರವ ನಿಜವಾಗಿ ಶಿಕ್ಷಕರಿಗೆ ಸಲ್ಲುತ್ತದೆ. ಅಂತಹ ಶಿಕ್ಷಣವನ್ನು ನೀಡುತ್ತಿರುವುದು ಶಿಕ್ಷಕರು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿದೆ. ಸಮಾಜದಲ್ಲಿ ಉಳಿದ ನೌಕರರಿಗಿಂತ ಶಿಕ್ಷಕರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ೬ ಜನ ಶಿಕ್ಷಕರಿಗೆ ಡಾ. ಎ ಪಿ ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ತಾಲ್ಲೂಕಿನ ೨೨ ವಿದ್ಯಾರ್ಥಿಗಳಿಗೆ ಮತ್ತು ಸಾಧಕ ಶಿಕ್ಷರಿಗೆ ಸಭೆಯಲ್ಲಿ ಗೌರವಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ ಎಂ ಆರ್ ಕುಲಕರ್ಣಿ, ಇ ಒ ದೇವರಾಜ ಹಿತ್ತಲಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ, ಗ್ಯಾರೆಂಟಿ ಅನುಷ್ಠಾನ ತಾಲ್ಲೂಕು ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ದೈಹಿಕ ಪರಿವೀಕ್ಷಕ ಎಂ ವಿ ನಾಯ್ಕ, ಕಸಾಪ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯ್ಕ ಮುಂತಾಧವರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯದರ್ಶಿ ಗುರುರಾಜ ನಾಯ್ಕ ಸನ್ಮಾನಿತರ ಪರಿಚಯ ಮಾಡಿದರು.
ಗಣೇಶ ಜೋಷಿ ಮತ್ತು ರೇಷ್ಮಾ ನಿರೂಪಿಸಿದರು.

About the author

Adyot

Leave a Comment