ಹೊನ್ನಾವರ: ಮಾಳ್ಕೊಡನಲ್ಲಿ ಹಳೆವಿದ್ಯಾರ್ಥಿಗಳ ಮಹಾ ಸಂಗಮ

ಆದ್ಯೊತ್ ಸುದ್ದಿನಿಧಿ::
ಹೊನ್ನಾವರ ತಾಲ್ಲೂಕಿನ ಮಾಳ್ಕೋಡಿನಲ್ಲಿ – ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ, ಎಸ್.ಡಿ.ಎಂ.ಸಿ., ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ, ಅಭಿನಂದನಾ ಕಾರ್ಯಕ್ರಮ “ಹಳೆ ವಿದ್ಯಾರ್ಥಿಗಳ ಮಹಾಸಂಗಮ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಲೀನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಪರಿಸರ ಅಧಿಕಾರಿ ವಿಜಯ ಹೆಗಡೆ ಮಾತನಾಡಿ,ಇಂದು ನಾವು ಉತ್ತಮ ಶಿಕ್ಷಣವನ್ನು ಪಡೆದು ವಿವಿಧ ಸ್ಥರದ ಉನ್ನತ ಹುದ್ದೆಗಳಲ್ಲಿ ಕಾರ್ಯವನ್ನು ನಿರ್ವಹಿಸಿದ್ದೇವೆ. ಆದರೆ ಇದಕ್ಕೆ ಮೂಲ ಬೇರು ನಾವು ಬಾಲ್ಯದಲ್ಲಿ ಶಿಕ್ಷಣವನ್ನು ಪಡೆದ ಪ್ರಾಥಮಿಕ ಶಾಲೆಯನ್ನು ಮರೆಯಬಾರದು. ಬಾಲ್ಯದಲ್ಲಿ ಕಲಿತ ಶಾಲೆಯತ್ತ ಉನ್ನತ ಹುದ್ದೆಯಲ್ಲಿದ್ದವರು ಮುಖಮಾಡುವಂತಾಗಬೇಕು. ಅಂದಾಗ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಉಳಿಯುವುದಕ್ಕೆ ಸಾಧ್ಯ ಆಗಲಿದೆ ಎಂದು ಹೇಳಿದರು.

ಇಲ್ಲಿ ಕಲಿತ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರೌಢಿಮೆ ಮೆರೆದು, ಹೆಜ್ಜೆ ಗುರುತು ಮೂಡಿಸಿದ್ದಾರೆ. ಇವತ್ತು ಮಾಳಕೋಡು ಶಾಲೆಯಲ್ಲಿ ಕಲಿತ ಮೇಧಾವಿ ಮಕ್ಕಳು ಬರೀ ಮೆಡಿಕಲ್‌, ಇಂಜಿನೀಯರಿಂಗ್‌ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಲ್ಲದೇ, ಯೋಗ, ಶಿಕ್ಷಣ, ಪತ್ರಿಕೋದ್ಯಮ, ಕೃಷಿ, ಹಣಕಾಸು, ಕಾನೂನು, ಸರ್ಕಾರಿ ಹಾಗೂ ಸರ್ಕಾರೇತರ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ,ಶಾಲೆಯು ಶತಮಾನೊತ್ತರ ಸಂಭ್ರಮದಲ್ಲಿದ್ದು ಈ ಕಾರಣಕ್ಕೆ ಹಳೆ ವಿದ್ಯರ್ಥಿಗಳನ್ನು ಸಂಪರ್ಕಿಸಿ ಇಂದು ಮಹಾಸಂಗಮ ನಡೆಸಿದ್ದೇವೆ. ನಾವು ಕಲಿತ ಶಾಲೆ ಉಳಿಯುವಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ಎಲ್ಲರು ಕೈ ಜೋಡಿಸಿ ಸಹಕರಿಸಬೇಕು. ಅಂದಾಗ ನಾವು ಕಲಿತ ಶಾಲೆಯ ಗತವೈಭವವನ್ನು ನೋಡುವುದಕ್ಕೆ, ಕಣ್ತುಂಬಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಡಿ.ಏಫ್.ಓ. ಕೃಷ್ಣ ಅಣ್ಣಯ್ಯ ಗೌಡ, ಶಿರಸಿಯ ಕೃಷಿ ಇಲಾಖೆೆಯ ಸಹಾಯಕ ನಿರ್ದೇಶಕ ಮಧುಕರ್ ಎಚ್. ನಾಯ್ಕ, ಕುಮಟಾ ರೇಷ್ಮೆ ಇಲಾಖೆಯ ನಿವೃತ್ತ ನಿರೀಕ್ಷಕ ಸಿ.ಎಸ್. ನಾಯ್ಕ, ಬೆಂಗಳೂರಿನ ಲೆಕ್ಕಪರಿಶೋಧಕ ಸಿ.ಎ. ಶಿವಾನಂದ ಕೆ. ಹೆಗಡೆ, ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಡಾ. ಜಯರಾಮ ಜಿ. ನಾಯ್ಕ, ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ ಎಂ. ಶೆಟ್ಟಿ, ಉತ್ತರ ಕನ್ನಡ ಒಕ್ಕಲು ಸಂಗಮ “ಉತ್ತಾನ” (ರಿ.) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ನಾಗರಾಜ ಈರಾ ಗೌಡ, ಧಾರವಾಡದ ಎಸ್. ಎನ್. ಪಿ.ಯು. ಜ್ಞಾನ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಎಂ. ಅಂಬಿಗ, ಮುಖ್ಯಾಧ್ಯಾಪಕರಾದ ಲಕ್ಷ್ಮಿ ಎಂ. ಭಟ್ ಉಪಸ್ಥಿತರಿದ್ದು ಮಾತನಾಡಿದರು.

ಗೌರವಾಧ್ಯಕ್ಷ ಬಾಲಚಂದ್ರ ಎಂ. ನಾಯ್ಕ, ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿದ ಕೈಗಾರಿಕೊದ್ಯಮಿ ಸುಬ್ರಾಯ ರಾಮಚಂದ್ರ ಹೆಗಡೆ ಮಾನ್ಯ, ದೆಹಲಿಯ ಸತ್ವ ಸ್ಕೂಲ್ ಆಫ್ ಯೋಗ ಸಂಸ್ಥಾಪಕ ಜಗದೀಶ ಎಸ್. ನಾಯ್ಕ ಅಂಗಡಿಮನೆ, ದೃಶ್ಯ ಮಾಧ್ಯಮ ಸಂಯೋಜಕ ಜಗದೀಶ ಭಾವೆ, ಮುಖ್ಯಮಂತ್ರಿಗಳ ಬಂಗಾರಪದಕದ ಪುರಸ್ಕೃತ ಪಿ.ಎಸ್.ಐ ನವೀನ ಎಸ್. ನಾಯ್ಕ, ವೈದ್ಯಾಧಿಕಾರಿ, ಡಾ|| ಗಜಾನನ ಎಂ.ಜಿ., ಯಕ್ಷಗಾನ ಕಲಾವಿದ ಜಗದೀಶ್ ಹೆಗಡೆ, ಗಣಪತಿ ನಾರಾಯಣ ಪಂಡಿತ, ಸಾಮಾಜಿಕ ಕಾರ್ಯಕರ್ತ ಮಹಾಬಲ ಟಿ. ಗೌಡ ಮಾತನಾಡಿದರು.
ಸುಪ್ರಿತ ಮತ್ತು ಸಿಂಚನಾ ಪ್ರಾರ್ಥಿಸಿ ಸ್ವಾಗತಿ ಗೀತೆ ಹಾಡಿದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ ಎಚ್. ನಾಯ್ಕ ಸ್ವಾಗತಿಸಿದರು ಶತಮಾನೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಸುರೇಶ್ ಜಿ. ಹೆಗಡೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಿ. ಜಿ. ಹೆಗಡೆ ವಂದಿಸಿದರು. ಮಂಜುನಾಥ ಗೌಡ ಹಾಗೂ ಎಚ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಂತರದಲ್ಲಿ “ರಿದಂ ಮೆಲೋಡಿಸ್” ಹೊನ್ನಾವರ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

About the author

Adyot

Leave a Comment