ಬೆಂಗಳೂರು ಗಿರಿನಗರದ ಶ್ರೀರಾಮಚಂದ್ರಾಪುರ ಶಾಖಾಮಠದಲ್ಲಿ “ನವರಾತ್ರಿ ನಮಸ್ಯಾ”

ಆದ್ಯೊತ್ ಸುದ್ದಿನಿಧಿ:
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ‘ನವರಾತ್ರ ನಮಸ್ಯಾ‘
ನವರಾತ್ರಿಯ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ.
ಶ್ರೀ ರಾಘವೇಶ್ವರ ಸ್ವಾಮೀಜಿಯವರು ಶ್ರೀ ದೇವಿಯ ಕುರಿತಾದ ಲಲಿತೋಪಾಖ್ಯಾನ ಎಂಬ ವಿಶೇಷ,ಮಹತ್ವದ ಪ್ರವಚನವನ್ನು ನಡೆಸಿಕೊಡುತ್ತಿದ್ದಾರೆ.

ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು‌ ಮಹಾವಿಷ್ಣುವೂ ಬೇಕು. ದೇವರೂ ರಾಕ್ಷಸರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದಾಗ ಪ್ರತ್ಯಕ್ಷವಾದ ಮೋಹಿನಿಯು ಕೇವಲ ತನ್ನ ಉಪಸ್ಥಿತಿಯ ಮಾತ್ರದಿಂದ ಯುದ್ಧವನ್ನು ನಿಲ್ಲಿಸುತ್ತಾಳೆ. ಮೋಹದ ಜಾಲಕ್ಕೆ ಸಿಕ್ಕ ರಾಕ್ಷಸರು ಅಮೃತದಿಂದ ವಂಚಿತರಾಗುತ್ತಾರೆ ಎಂದರು.

ಜೀವನದಲ್ಲಿ ತಲೆ ಪ್ರತಿಷ್ಠೆಯನ್ನು ಮಾಡಬಾರದು. ದೇವಾಸುರರು ಸಮುದ್ರ ಮಥನ ಮಾಡುವಾಗ ರಾಕ್ಷಸರು ತಮಗೆ ವಾಸುಕಿಯ ತಲೆಯ ಭಾಗವೇ ಬೇಕು ಎಂದು ಪಡೆದುಕೊಳ್ಳುತ್ತಾರೆ. ಆದರೆ ಮಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ. ಹಾಗಾಗಿ ನಾವು ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಿದರೆ ಪತನವನ್ನು ಹೊಂದುತ್ತೇವೆ ಎಂದು ಹೇಳಿದರು.

ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೇ ಕಲಹವಿಲ್ಲ. ಆದರೆ ಇಂದು ಶೈವರು ಹಾಗೂ ವೈಷ್ಣವರ ಮಧ್ಯೆ ಕಲಹ ಮುಗಿಯುವುದೇ ಇಲ್ಲ. ಶಿವ ಹಾಗೂ ವಿಷ್ಣುವಿನ ಹೆಸರಿನಲ್ಲಿ ‌ಜಗಳ‌ ಸಾಗುತ್ತಲೇ ಇದೆ. ಬಹುಶಃ ದೇವ ಲೋಕದಲ್ಲಿರುವ ಅವರಿಬ್ಬರೂ ಈ ಜಗಳವನ್ನು ನೋಡಿ ನಗುತ್ತಿರಬಹುದು. ಹಾಗಾಗಿ ನಾವು ದೇವರ ಹೆಸರಿನಲ್ಲಿ ಜಗಳವಾಡಬಾರದು ಎಂದು ಶ್ರೀ ಗಳು ಹೇಳಿದರು.


ಮಾಜಿ ಅಡ್ವೊಕೇಟ್ ಜನರಲ್ ಅಶೋಕ‌ ಹಾರನಹಳ್ಳಿ ದಂಪತಿಗಳು, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಮುಂತಾದವರು ಶ್ರೀಗಳ‌ ಆಶೀರ್ವಾದ ಪಡೆದರು.

——-
ಶತಚಂಡಿಕಾ ಮಹಾಯಾಗ
ದೇವಿಯ ಉಪಾಸನೆಯ ಅಂಗವಾಗಿ ದಿನಾಂಕ 20.10.2026 ಮಂಗಳವಾರದಂದು ಶತಚಂಡಿಕಾ ಯಾಗ ನೆರವೇರಲಿದ್ದು, 100 ದೇವಿಸಪ್ತಶತೀ ಪಾರಾಯಣದ ಮೂಲಕ ಶತಚಂಡಿಕಾ ಯಾಗ ನೆರವೇರಲಿದೆ. ಪಾರಾಯಣ ಸೇರಿದಂತೆ ಈ ಮಹಾಯಾಗದಲ್ಲಿ 50 ಋತ್ವಿಜರು ಭಾಗವಹಿಸಲಿದ್ದಾರೆ. ವಿಶೇಷ ಹೋಮ ಕುಂಡ ಸೇರಿದಂತೆ ಯಾಗದ ಸಿದ್ಧತೆಗಳು ನಡೆದಿವೆ.

About the author

Adyot

Leave a Comment