ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನಾಕಾರರ ಬಂಧನ


ಆದ್ಯೋತ್ ಸುದ್ದಿನಿಧಿ
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಗುರುವಾರ ಮಧ್ಯಾಹ್ನ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ 300ಕ್ಕೂ ಹೆಚ್ಚು
ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರಕನ್ನಡ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ, ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ, ಶಾಸಕ ದಿನಕರ ಕೆ ಶೆಟ್ಟಿ, ಮಾಜಿ ಶಾಸಕ ಸುನಿಲ್ ನಾಯ್ಕ, ಸುನಿಲ್ ಹೆಗಡೆ, ವಿ.ಪ ಸದಸ್ಯರಾದ ಗಣಪತಿ ಉಳ್ವೆಕರ್, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ್ರಶಾಂತ ನಾಯ್ಕ ಹಾಗೂ ಶಿವಾಜಿ ನರಸಾನಿ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಕೆ ಜಿ ನಾಯ್ಕ, ಈಶ್ವರ ನಾಯ್ಕ, ಸಂತೋಷ ತಳವಾರ ಸೇರಿದಂತೆ ಮೋರ್ಚಾದ ಹಾಗೂ ಪ್ರಕೋಷ್ಠಗಳ ರಾಜ್ಯ ಹಾಗೂ ಜಿಲ್ಲಾ ಪ್ರಮುಖರು, ವಿವಿಧ ಸ್ತರದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಹಾಗೂ 14 ಮಂಡಲಗಳಿಂದ ಆಗಮಿಸಿದ್ದ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರೂಪಾಲಿ ನಾಯ್ಕ ಮಾತನಾಡಿ, ಅಧಿಕಾರದ ದರ್ಪದಿಂದ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯ 18 ಶಾಸಕರನ್ನು ಅಮಾನತ್ ಮಾಡಲಾಗಿದೆ. ನಮಗೂ ಕಾಲ ಬರತ್ತೆ, ನಾವು ಅಧಿಕಾರಕ್ಕೆ ಬಂದ ಮೇಲೆ ಇವರಿಗೆ ಸೂಕ್ತ ಉತ್ತರ ನೀಡುತ್ತೇವೆ. ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ ವಿಪರೀತವಾಗಿದೆ. ಒಂದು ಕಡೆಯಿಂದ 2 ಸಾವಿರ ರೂ. ಕೊಟ್ಟ ಹಾಗೆ ಮಾಡಿ 15 ಸಾವಿರದಷ್ಟು ದೋಚುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಸರ್ಕಾರ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಅಹೋರಾತ್ರಿ ಧರಣಿ ನಿರತರಾಗಿದ್ದ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ರಾತ್ರಿ ಫ್ರೀಡಂ ಪಾರ್ಕಿನಲ್ಲಿ ತಾವು ಪ್ರತಿಭಟಿಸುತ್ತಿದ್ದ ಜಾಗದಲ್ಲಿಯೇ ಮಲಗಿದರು. ಎರಡನೇ ದಿನವಾದ ಗುರುವಾರ ಕೂಡ ಉತ್ಸಾಹದಿಂದಲೇ ಕಾರ್ಯಕರ್ತರು ಭಾಗವಹಿಸಿದ್ದು ಕಂಡುಬಂತು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಹಾಗೂ ಅನೇಕ ಪ್ರಮುಖರು ಮಾತನಾಡಿದರು. ಬೆಲೆ ಏರಿಕೆ ವಿರುದ್ಧ ಹರಿಹಾಯ್ದರು, ಅಲ್ಲದೆ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಜನಾಕ್ರೋಶ ಯಾತ್ರೆ ನಡೆಸುವ ಸಿದ್ಧತೆ ನಡೆದಿದೆ ಎಂದು ಪ್ರಕಟಿಸಿದರು. ನಂತರ ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಲು ಹೊರಟ ಮುಖಂಡರನ್ನು ಫ್ರೀಡಂ ಪಾರ್ಕಿನಲ್ಲಿಯೇ ಪೊಲೀಸ್ ಅಧಿಕಾರಿಗಳು ಬಂಧಿಸಿದರು.

ರಾಜ್ಯದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಸಕರು, ಮಾಜಿ ಶಾಸಕರು ಹಾಗೂ ಪ್ರಮುಖರು ಜೊತೆಗೆ ಉತ್ತರಕನ್ನಡ ಜಿಲ್ಲೆಯ ಪ್ರಮುಖರೂ ಕೂಡಾ ಬಂಧನಕ್ಕೆ ಒಳಗಾದರು. ಈ ಸಂದರ್ಭದಲ್ಲಿ ನಾಯಕರು ಹಾಗೂ ಪೊಲೀಸ್ ನಡುವೆ ವಾಗ್ವಾದ ನಡೆಯಿತು. ಮುಖ್ಯಮಂತ್ರಿಗಳ ಮನೆಯ ಬಳಿ ಬಂಧಿಸಬಹುದಿತ್ತು, ಆದರೆ ಮುಂಜಾಗ್ರತೆ ಕ್ರಮವಾಗಿ ಫ್ರೀಡಂ ಪಾರ್ಕ್ ಬಳಿಯೇ ಬಂಧಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಖಂಡರನ್ನು ಬಂಧಿಸಿ ಪ್ರತಿಭಟನಾ ಸ್ಥಳದಿಂದ ಬೇರೆಡೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

About the author

Adyot

Leave a Comment