ಸಿದ್ದಾಪುರ; ಕಾನಸೂರು ವಿದ್ಯುತ್‌ಗ್ರಿಡ್‌ಗೆ ಶಂಕುಸ್ಥಾಪನೆ

ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಕಾನಸೂರು ಗ್ರಾಮದ ಅಡ್ಕಳ್ಳಿ ಕ್ರಾಸ್ ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದವತಿಯಿಂದ ರೂ ೨೫.೪೦ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ೨*೨೦ ಎಂವಿಎ, ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ಸೋಮವಾರ ನಡೆಯಿತು.


ವಿಸ್ತಾರವಾದ ಅರಣ್ಯ ಪ್ರದೇಶದ ಜೊತೆಗೆ ಗ್ರಾಮೀಣ ಪ್ರದೇಶವನ್ನೆ ಹೊಂದಿರುವ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣು-ಮುಚ್ಚಾಲೆ ಆಟಗಳು ನಿರಂತರವಾಗಿರುತ್ತಿತ್ತು ಮಳೆಗಾಲದಲ್ಲಂತೂ ವಾರಗಟ್ಟಲೆ ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗ ಕತ್ತಲೆಯಲ್ಲಿ ಮುಳುಗಿರುತ್ತಿತ್ತು ಪಟ್ಟಣದ ಸಮೀಪವಿರುವ ಗ್ರೀಡ್‌ನಿಂದ ನೂರಾರು ಕಿಮಿ ವಿಸ್ತಾರವಾದ ಪ್ರದೇಶಗಳಿಗೆವಿದ್ಯುತ್ ಸರಬರಾಜು ಆಗಬೇಕಿತ್ತು ಮಧ್ಯದಲ್ಲಿ ಮರ ಬೀಳಲಿ,ಬೇರೆ ಏನಾದರೂ ಅನಾಹುತವಾದರೆ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಇರುತ್ತಿರಲಿಲ್ಲ. ದಶಕದಿಂದ ತಾಲೂಕಿನ ಜನತೆ ಬಹಳ ದಿನಗಳಿಂದ ಇನ್ನೂ ಎರಡು ಗ್ರಿಡ್‌ಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು ಈಗ ಒಂದು ಗ್ರಿಡ್‌ಗೆ ಶಂಕುಸ್ಥಾಪನೆಯಾಗಿದ್ದು ತಾಲೂಕಿನ ವಿದ್ಯುತ್ ಸಮಸ್ಯೆ ಒಂದಿಷ್ಟು ಸುಧಾರಣೆ ಕಾಣಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ


ಶಂಕಸ್ಥಾಪನೆ ನೆರವೇರಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ವಿದ್ಯುತ್ ಎಂಬುದು ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಅತ್ಯಗತ್ಯವಾದ ಮೂಲಭೂತ ಸೌಲಭ್ಯವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ತಾಯಂದಿರ ಮತ್ತು ಅರ್ಹ ಫಲಾನುಭವಿಗಳ ಬಾಳಿಗೆ ಆಸರೆಯಾಗಿದೆ ಇದರ ಜೊತೆಗೆ ಗ್ರಾಮೀಣ ಭಾಗದ ವೋಲ್ಟೇಜ್ ಸಮಸ್ಯೆ ನಿವಾರಿಸಿ, ಪ್ರತಿಯೊಬ್ಬರಿಗೂ ಗುಣಮಟ್ಟದ ವಿದ್ಯುತ್ ಒದಗಿಸುವುದು ನಮ್ಮ ಸರ್ಕಾರದ ಮುಖ್ಯ ಚಿಂತನೆಯಾಗಿದೆ” ಎಂದು ಹೇಳಿದರು.
ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ ೧೦ ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಿ ಕ್ರಾಂತಿ ಮಾಡಿದ್ದರು. ರೈತನಿಗೆ ನೀರು ಮತ್ತು ವಿದ್ಯುತ್ ಸಿಕ್ಕರೆ ಹಸಿರು ಕ್ರಾಂತಿ ಮಾಡಲು ಸಾಧ್ಯ. ರಾಜ್ಯದ ಬೇರೆಡೆ ರೈತರಿಗೆ ೭-೮ ಗಂಟೆ ವಿದ್ಯುತ್ ಸಿಕ್ಕರೆ, ನಮ್ಮ ಜಿಲ್ಲೆಗೆ ಅಧಿಕಾರಿಗಳು ೨೪ ಗಂಟೆಯೂ ನಿರಂತರ ವಿದ್ಯುತ್ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ರೈತರಿಗೂ ದಿನದ ೨೪ ಗಂಟೆಯೂ ವಿದ್ಯುತ್ ನೀಡುವ ನಿಟ್ಟಿನಲ್ಲಿ ಸರ್ಕಾರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯು ಶರಾವತಿ, ಗೇರುಸೊಪ್ಪ ಹಾಗೂ ಕೈಗಾ ಯೋಜನೆಗಳ ಮೂಲಕ ಇಡೀ ದೇಶಕ್ಕೆ ಬೆಳಕು ನೀಡಲು ತನ್ನ ಭೂಮಿಯನ್ನು ತ್ಯಾಗ ಮಾಡಿದೆ. ಆದರೆ ನಮ್ಮ ಕ್ಷೇತ್ರದಲ್ಲಿಯೇ ಗುಣಮಟ್ಟದ ವಿದ್ಯುತ್ ಕೊರತೆ ಇರುವುದನ್ನು ಮನಗಂಡು ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನವನ್ನು ನಮ್ಮ ಸರಕಾರ ಬಿಡುಗಡೆ ಮಾಡಿದೆ.,ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆ, ಸೇತುವೆ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ ೫೦೦ ಕೋಟಿಗೂ ಅಧಿಕ ಹಣವನ್ನು ಸರ್ಕಾರ ನೀಡಿದೆ ಆಡುಕಟ್ಟಾ ,ಹುಲೇಕಲ್‌ನಲ್ಲೂ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಇಂಧನ ಸಚಿವರಿಂದ ಭರವಸೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ಕಾನಸೂರು ಭಾಗದ ವಿದ್ಯುತ್ ಕೊರತೆ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ಇಂದಿನ ಶಂಕುಸ್ಥಾಪನೆಯಿAದ ಆರಂಭವಾಗಲಿದೆ. ಯಾರು ಕೆಲಸ ಮಾಡಿದರೂ ಅದನ್ನು ಪಕ್ಷಭೇದ ಮರೆತು ಪ್ರೋತ್ಸಾಹಿಸುವ ಕೆಲಸವಾಗಬೇಕು. ಶಾಸಕ ಭೀಮಣ್ಣ ನಾಯ್ಕ ಅವರು ತಮಗೆ ಸಿಕ್ಕ ಅಲ್ಪ ಅವಧಿಯಲ್ಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರಿಗಿರುವ ಆಸಕ್ತಿಗೆ ಅಧಿಕಾರಿ ವರ್ಗದವರು ಸ್ಪಂದಿಸಿದರೆ ಇತಿಹಾಸದಲ್ಲೇ ಕಾಣದ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಬಗರ್ ಹುಕುಂ ಸಮಿತಿ ಸದಸ್ಯ ಎಸ್.ಕೆ. ಭಾಗವತ್ ಮಾತನಾಡಿ, “ಕ್ಷೇತ್ರದ ಸಮಸ್ಯೆಗಳನ್ನು ಅರಿತು, ಅಧ್ಯಯನ ಮಾಡಿ, ಆದ್ಯತೆಯ ಮೇರೆಗೆ ಪರಿಹಾರ ಕೊಡುವ ಕೆಲಸವನ್ನು ಶಾಸಕರು ಮಾಡುತ್ತಿರುವುದರಿಂದಲೇ ಕ್ಷೇತ್ರ ಇಷ್ಟು ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಮಾ ಉಗ್ರೆಣಕರ್, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡರ್, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ಲಕೊಪ್ಪ, ವಿದ್ಯುತ್ ನಿಗಮದ ಶಿಲ್ಪಾ ಎಂ., ಕೆ.ವಿ. ಪಾಗಿ, ಸುನಿಲ್ ಕುಮಾರ್, ವಿನಯ್ ರಾಚೋಟಿ ಉಪಸ್ಥಿತರಿದ್ದರು.

About the author

Adyot

Leave a Comment