ಆದ್ಯೋತ್: “ಭಾಶಿ ಲೋಕ”

ಆದ್ಯೋತ್ ಸುದ್ದಿನಿಧಿ
ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡಬಾರದೆ….?
ಸಂಜೆ ಶಾಲೆ ಮುಗಿಸಿ ಮನೆಗೆ ಬಂದು ಎಂದಿನಂತೆ ಚಹಾ ಸೇವಿಸುತ್ತ ದಿನಪತ್ರಿಕೆ ಓದಿ ಬದಿಗಿಟ್ಟೆ. ಹಾಗೆಯೇ ಟಿ.ವಿ. ಆನ್ ಮಾಡುತ್ತಿದ್ದಂತೆ ನ್ಯೂಸ್ ಚಾನಲ್ ಅಲ್ಲಲ್ಲ…! ಅರಚಾಡುವ ಚಾನಲ್ ಗಳು..! ಆದರೂ  ಒಂದು ಕ್ಷಣ ವೀಕ್ಷಿಸಲೇ ಬೇಕಲ್ಲವೆ.. ಪೂರಾ ಅಲ್ದಿದ್ದರೂ ಸ್ವಲ್ಪಮಟ್ಟಿಗಾದರೂ ದೈನಂದಿನ ಸುದ್ದಿ ನೋಡಿ ಕಣ್ತುಂಬಿಕೊಳ್ಳು ಚಟ ಬೇರೆ.. ಅದೇ ಅರೆಚಾಟದ ಮದ್ಯೆ  “ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತು ಕೈಗಿತ್ತ ಮಗ…!”  ಪದೇ ಪದೇ ಅದೇ ಸಾಲುಗಳು ಹತ್ತಾರು ಭಾರಿ… ಬ್ರೇಕಿಂಗ್ ನ್ಯೂಸ್… ನಮ್ಮ ಚಾನಲ್ ನಲ್ಲಿ ಮಾತ್ರ…! ಎಂಬ ತಲೆಯಿಲ್ಲದ ತಲೆ ಬರಹ ಬೇರೆ…!
ಕ್ಷಣ ಹೊತ್ತು ಟಿ ವಿ ನ್ಯೂಸ್ ಚಾನಲ್ ಮೇಲೆ ಕೋಪ ಬಂದರೂ ತಾಳಿಕೊಂಡು ನೋಡಿದೆ . ಅದೇ ತಲೆ ಬರಹದೊಂದಿಗೆ  ಕಿತ್ತ ಕಣ್ಣನ್ನು ಸುರಿಯುತ್ತಿರುವ ರಕ್ತದ ಮುದ್ದೆಯಂತೆ ಕೈಲಿಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಹತ್ತಿನೋ ಬಟ್ಟೆಯಿಂದಲೋ ಮುಚ್ಚಿಹಿಡಿದು  ಆಟೋದಲ್ಲಿ ಆಸ್ಪತ್ರೆಗೆ ಬಂದ ತಂದೆಯ ಸ್ಥಿತಿಯನ್ನು ನೋಡಿ ಯಾರಿಗಾದರೂ ಭಯವಾಗದೆ ಇರದು..!
ಆಸ್ಪತ್ರೆಯ ವೈದ್ಯರು ಎಮರ್ಜೆನ್ಸಿ ವಾರ್ಡಗೆ ಬರುವಷ್ಟರಲ್ಲಿ ಅಲ್ಲಿಗೇ ಬಂದ ಹತ್ತಾರು ನ್ಯೂಸ್, ಸಾಮಾಜಿಕ ಜಾಲತಾಣದವರ ಕ್ಯಾಮರಾ ಕಣ್ಣುಗಳ ಮದ್ಯೆ ವರದಿಗಾರರ ಪ್ರಶ್ನೆಗಳ ಸುರಿಮಳೆ…
ವರದಿಗಾರ: ಸಾರ್ ಏನಾಯ್ತು. ನಿಮ್ಮ ಹೆಸರೇನು? ಯಾವೂರು, ನಿಮ್ಮ ಈ ಸ್ಥಿತಿಗೆ ಯಾರು ಕಾರಣ? ಸ್ವಲ್ಪ ಹೇಳ್ತೀರಾ..
ವ್ಯಕ್ತಿ: ನನ್ನ ಹೆಸರು ರಾಮಮೂರ್ತಿ ಅಂತಾ , ಏನು ಹೇಳೋದು ಸರ್ ನನ್ನ ಮಗನೇ ಕುಡುಕೊಂಡು ಜಗಳಮಾಡಿ ಈ  ಕಣ್ ಕಿತ್ತಿದ್ದಿದ್ದಾನೆ! .. ಇಂತಾ ಮಗಾ ಯಾರಿಗೂ ಹುಟ್ಟಬಾರದು ಸರ್.. ಅವನು ಕುಡದಾಗ ಏನ‌ಮಾಡ್ತಾನೋ ಅವನಿಗೆ ಗೊತ್ತಿರಲ್ಲ.  ಜೂಜಾಟಕ್ಕೆ,ಕುಡಿಯೋಕೆ ದುಡ್ಡು ಕೊಟ್ಟಿಲ್ಲ ಅಂತಾ  ದಿನಾನೂ ಜಗಳ ಆಡಿ ಅವನ ಅಮ್ಮನ್ನೇ ಹೆದರಿಸಿ ಹೊಡದು ಬಡಿದು ಹಣ ತಗೊಂಡೋಗ್ತಿದ್ದ. ಅವನ ಅಮ್ಮ ಅದೇ ಚಿಂತೇಲಿ ಸತ್ತು  ಈಗ ಆರು ತಿಂಗಳಾತು. ಅಷ್ಟಾದರೂ ಬಿಡದೆ ಜೂಜಾಡಿ,ಕುಡುದು ಹಣಾ  ಖಾಲಿಮಾಡಿದ. ಈಗ ನಾ ಕೂಡಿಟ್ಟಿರೋ ಆಸ್ತಿ, ಮನೆ ಎಲ್ಲಾನೂ ಮಾರಿದ್ದಾನೆ… ಈವಾಗ ಬಾಡಿಗೆ ಮನೆಯಲ್ಲಿದ್ದೇವೆ. ಇವತ್ತು ಮಧ್ಯಾಹ್ನಕ್ಕೆ ಕುಡ್ಕೊಂಡು ಬಂದು ದುಡ್ಡು ಕೇಳಿದಾ. ನಾ ಹಣ ಇಲ್ಲಪ್ಪಾ. ನೀ ಎಲ್ಲಾದರೂ ಕೆಲಸಕ್ಕೋಗು ಅಂದಿದ್ದಕ್ಕೆ ನನ್ನ ಹಿಡಕಂಡು ಹೊಡೆದಿದ್ದಲ್ಲದೆ  ಕೆಳಗೆ ಕೆಡವಿಹಾಕ್ಕೊಂಡು ಬೆಳ್ ತೂರಿ ಕಣ್ ಕಿತ್ತಾಕಿದ್ದಾನೆ’.  ಅಂತಾ ‘ಗಳೋ’ ಎಂದು ಅಳತ್ತಿದ್ದ ಮುದಿಕನ ಸ್ಥಿತಿ ಛೇ ಅನಿಸ್ತಿತ್ತು…
ವರದಿಗಾರರ: ಯಾಕ ಸರ್, ನಿಮ್ಮ ಮಗ  ಏನೂ ಓದಿಲ್ವಾ? ಯಾವುದೂ ಕೆಲಸ ಮಾಡ್ತಿಲ್ವಾ? ಏನೂ ಇನ್ ಕಮ್ ಇಲ್ವಾ.?  ನೀವೇನ ಮಾಡ್ತಿದ್ರಿ ಸಾರ್.?
ವೃದ್ದ: ‘ನಾನೊಬ್ಬ ರಿಟೈರ್ಡ್ ಆಫೀಸರು. ಸರಕಾರಿ ಕಛೇರಿಯಲ್ಲಿದ್ದು ನಿವೃತ್ತಿಯಾಗಿ ಐದು ವರ್ಷ ಆಯ್ತು.  ಇಬ್ಬರು ಮಕ್ಕಳು.ಪತ್ನಿ ಇತ್ತೀಚೆಗೆ ಇವನ‌ ಚಿಂತೆನೇ ಹಚ್ಚಿಕೊಂಡು ಮನೋ ಕಾಯಿಲೆಯಿಂದ ತೀರಿಕೊಂಡಿದ್ದಾಳೆ. ಮಗಳು ಮದುವೆಯಾಗಿ ವಿದೇಶದಲ್ಲಿ ಇದ್ದಾಳೆ. ಮಗ ಒಬ್ಬನೇ ಅಂತಾ ಮುದ್ದಿನಿಂದ ಸಾಕಿಒಂದಷ್ಟು ಆಸ್ತಿನೂ ಮಾಡಿದ್ದೆ. ಅದೆಲ್ಲಾ ಮಾರಿ ತಿಂದು ತೇಗಿ ಈಗ ನನ್ನ ಕೇಳಿದರೆ ನಾ ಎಲ್ಲಿಂದ ಕೊಡ್ಲಿ ಅಂದಿದ್ದಕ್ಕೆ ಈ ಉಡುಗೊರೆ ಕೈಗೆ ಕೊಟ್ಟಿದ್ದಾನೆ’ . ಎಂದ ಮುದುಕನ ಸ್ಥಿತಿ ಕಂಡ ಮರುಗದವರೇ ಇರಲಿಲ್ಲ. ಅಷ್ಟರಲ್ಲಿ ವೈದ್ಯರು ಬಂದು ಚಿಕಿತ್ಸೆಗೆ ಕರೆದೊಯ್ದರು
    ಪಾಪ..! ಈ ವೃದ್ದನಿಗೆ  ಎಷ್ಟು ನೋವು ಆಗಿರಬೇಡ ಅನಿಸ್ತು..  ತಕ್ಷಣ ಮಡದಿಯನ್ನು ಕರೆದು ಟಿವಿ ತೋರಿಸಿದಾಗ ಅವಳೂ  ಕಣ್ ಕಣ್ ಬಿಟ್ಟು ನೋಡಿ  ಅಯ್ಯೋ ದ್ಯಾವ್ರೆ!! ಎಂತಾ ಕಟುಕ ಮಗನ್ರೀ ಅವನು ಛೇ! ಅಂದು ಬೇಸರ ವ್ಯಕ್ತಪಡಿಸುತ್ತ ಅಡುಗೆ ಕೋಣೆಗೆ ಹೋದಳು.
ಇದಾಗಿ ಮೂರ್ ನಾಲ್ಕು ದಿನ ಕಳದಿರಬೇಕು.
ಭಾನುವಾರ  ಮತ್ತದೇ ನ್ಯೂಸು..!
ಮಗನ ವ್ಯಸನಕ್ಕೆ ಮೂಲವಾಯ್ತಾ ಅಪ್ಪ ಕೂಡಿಟ್ಟ ಹಣ… !
  ಹೆಡ್ ಲೈನ್  ಜೊತೆಗೆ ಅರಚಾಡುವ ಆಂಕರ್..!
ಬಯಲಾಯ್ತು   ಅಪ್ಪನ ಹಿಂದಿನ ಕರಾಮತ್ತು..!
‌ಮಾಡಿದ್ದುಣ್ಣೋ ಮಾರಾಯ. ಒಕ್ಕಣ್ಣೇ ನಿನಗೆ ಸರಿಯಣ್ಣ….!  ಇತ್ಯಾದಿ ತಲೆ ಬರಹ…
ಗಳ ಜೊತೆಗೆ ಮೂರು ದಿನಗಳ ಹಿಂದೆ ಮಗನಿಂದಲೇ ಕಣ್ಣು ಕೇಳಿಸಿಕೊಂಡು ಆಸ್ಪತ್ರೆ ಪಾಲಾದ ನಿವೃತ್ತ ಸರಕಾರ ಅಧಿಕಾರಿ ಮನೆ ಮೇಲೆ ಆದಾಯ ಇಲಾಖೆಯ ದಾಳಿ…ತಲೆ ಬರಹಗಳು ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದವು. ರವಿವಾರದ ವಿಶೇಷತೆ ;
ನೈಜತೆ ಹುಡುಕಿದ ಪೋಲಿಸ್ ತಂಡಕ್ಕೆ ಶ್ಲಾಘನೆಯ ಸುರಿಮಳೆ.
  ಹಾಗಾದರೆ ಏನಿದರಹಸ್ಯ…!
ಎನ್ನುತ್ತಿದ್ದಂತೆ ಕಣ್ಣು ಕೇಳಿಸಿಕೊಂಡ ತಂದೆ ರಾಮಮೂರ್ತಿಯ ಹಿಂಗತೆ ಒಂದೊಂದಾಗಿ ಬಯಲಾಯ್ತು. ರಾಮಮೂರ್ತಿ ಸುಮಾರು ಮೂವತ್ತು ವರ್ಷಗಳ ಕಾಲ ಪಿ.ಡಬ್ಲು ಡಿ, ಕಂದಾಯ, ಜಿಲ್ಲಾ ಪಂಚಾಯತ್ ಇಲಾಖೆಗಳ ಆಯಕಟ್ಟಿನ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾನೆ. ಸೇವಾ ಅವಧಿಯಲ್ಲಿ ಸರಕಾರಿ ಸೇವೆಗಿಂತ ಹಣ ಸೇವಿಂಗ ಬಗ್ಗೆಯೇ ಹೆಚ್ಚು ಆಸ್ಥೆ… ಪ್ರತಿದಿನವೂ ಸಾವಿರಾರು ರೂಪಾಯಿ ಲಂಚ ತುಂಬಿದ ಜೇಬಿನೊಂದಿಗೆ ಮನೆಗೆ ಬರುತ್ತಿದ್ದ ತಂದೆಯನ್ನು ಹೆಂಡತಿ-ಮಕ್ಕಳು ಆರಂಭದಲ್ಲಿ ತುಂಬಾ   ಚೆನ್ನಾಗಿ ಗೌರವದಿಂದ ನೋಡುತ್ತಿದ್ದರು. ಹೆಂಡತಿ ಮಕ್ಕಳ ಮೈಮೇಲೆ ಬೆಲೆಬಾಳುವ ಆಭರಣ, ದುಬಾರಿ ಡ್ರೆಸ್ ಗಳು ಮಾಮೂಲಾಗಿತ್ತು. ವೈಭವದ ಮನೆಯ ಸೊಬಗು.. ಅಕ್ಕಪಕ್ಕದವರ ಕಣ್ಣು ಕುಕ್ಕುವ ಇವರ ವೈಭವ. ತಡೆಯುಲು ಅವರಾರು?  ಮಗ ಕೇಳಿದ್ದೇ ವಾಚು, ಡ್ರೆಸ್ಸು, ಐಕು,ಕಾರು, ಕಾಂಚಾಣ ಝಣಝಣ,!  ಮಗ ಐಶಾರಾಮಿ ಚಟಗಳ ದಾಸನಾಗಲು ಇಷ್ಟು ಸಾಕಲ್ಲವೆ..?. ಈ ನಡುವೆ ಇತ್ತೀಚೆಗೆ ಅಪ್ಪನಿಗೆ ವರ್ಷ ಅರವತ್ತಾಯ್ತು. ಸರಕಾರಿ ನೌಕರಿಯಿಂದ ರಿಟೈರ್ಮೆಮಂಟ್ ಆಗಿ ಮನೆ ಸೇರಬೇಕಾಯ್ತು. ಅಪ್ಪನ ದುಡಿಮೆ ಬರೀ ಅರ್ಧಮಾತ್ರವಲ್ಲ ನಾಲ್ಕಾರು ಪಟ್ಟು ಕಡಿಮೆಯಾಯ್ತು…!
ಹೇಗಂತೀರಾ  ಕೆಲವು ಭ್ರಷ್ಟ ಅಧಿಕಾರಿಗಳು ಅದರಲ್ಲೂ ಉನ್ನತ ಹುದ್ದೆಯಲ್ಲಿದ್ದ ಭ್ರಷ್ಟ ರಿಗೆ ಸಂಬಳ ಒಂದು ಒಂದೂವರೆ ಲಕ್ಷವಾಗಿದ್ದರೆ ಗಿಂಬಳಾ.. ಹತ್ತಿಪ್ಪತ್ತು ಲಕ್ಷದಷ್ಟು ಕೀಳುತ್ತಾರೆ ! ಅದೇ ನಿವೃತ್ತನಾದ ಮೇಲೆ ಎಲ್ಲಾ ಕಡೆಯಿಂದಲೂ ಗಿಂಬಳದಾರಿಗಳು ಮುಚ್ಚಿ ಕೇವಲ ಸರಕಾರ ನೀಡುವ ಅರ್ಧದಷ್ಷು ನಿವೃತ್ತ ವೇತನ ಮಾತ್ರ ಕೈಸೇರುತ್ತೆ. ಹಿಂದಿನ ಐಶಾರಾಮಿ ಬದುಕಿನಂತೆ ಜೀವನ ಸಾಗಿಸುವುದೇ ಕಷ್ಟ!
ಈ ನಡುವೆ ಬಿ.ಪಿ. ಶುಗರ್ ಇತ್ಯಾದಿ ಸಹಜ ಕಾಯಿಲೆಗಳು. ಇನ್ನು ಮಕ್ಕಳು ಬೆಳೆದು ದೊಡ್ಡವರಾದರೂ ಸಹ ಸ್ವಂತ ಬದುಕು ಕಾಣದಿದ್ದರೆ ಅದೂ ಒಂದು ಚಿಂತೆ… ಹಾಗೆಯೇ  ಈಗ ಈ ನಿವೃತ್ತ ಅಧಿಕಾರಿ ರಾಮಮೂರ್ತಿಯದೂ ಅದೇ ಗೋಳು… ಕೈಯಲ್ಲಿ ಯಥೇಚ್ಛ ಹಣ, ಅಧಿಕಾರ,ದರ್ಪ! ಇದ್ದಾಗ ಮಗಾ ಮನೆಲಿ ಏನ ಮಾಡ್ತಿದ್ದಾನೆ, ಅವನ ಭವಿಷ್ಯದ ಗುರಿ ಏನು ಅಂತಾ ಸ್ವಲ್ಪವೂ ಯೋಚಿಸದೆ  ಲಂಚದ ಆಸೆಗಾಗಿ ಹಗಲಿರುಳೂ ದುಡಿದು ದಣಿದು ಸರಿ ರಾತ್ರಿಗೆ ಮನೆ ಸೇರುತಿದ್ರು.  ಪತ್ನಿ ತನ್ನ ಮನೆಗೆಲಸ,ಮೊಬೈಲ್, ಧಾರಾವಾಹಿ ಗೀಳು ಬೇರೆ ! ಜೊತೆಗೆ ಗಂಡ ದಿನವೂ ತಂದು ಕೈಗಿಡುತ್ತಿದ್ದ ಲಕ್ಷಲಕ್ಷ ಹಣದ ದುರಾಸೆಯ ವೈಭವ ಜೀವನದಲ್ಲೇ ಕಾಲಹರಣ. ಮಗ ಬೆಳೆದಂತೆ ಅವನಿಗೆ ಸರಿಯಾದ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಬದಲಿಗೆ ಅವನು ಕೇಳಿ ಕೇಳಿದಾಗಲೆಲ್ಲ ಯಥೇಚ್ಛವಾಗಿ ಹಣ ನೀಡಿ ಕೈತೊಳೆದುಕೊಂಡಿದ್ದರ ಪರಿಣಾಮದ ದುಸ್ಥಿತಿ ಕೇಳಬೇಕೆ? ಮಗ ಅಪ್ಪನ ದುಡಿಮೆಯ ಹಣದಲ್ಲಿ ಮೋಜು,ಮಸ್ತಿ, ಜೂಜು, ಮಧ್ಯ ಪಾನಗಳ ದಾಸನಾಗಿ ಹೋದ. ಈ ನಡುವೆ ಮಗಳ  ಮದುವೆ, ವರದಕ್ಷಿಣೆ ಖರ್ಚಿಗಾಗಿ ಇರುವ ಆಸ್ತಿ ಮಾರಲೇಬೇಕಾಯ್ತು..!
        ಇನ್ನು ಗಂಡ ನಿವೃತ್ತನಾದ ಮೇಲೆ ಕೇಳಬೇಕೆ.. ಕುಳಿತು ಉಂಡರೆ ಕುಡಿಕೆ ಹೊನ್ನೂ ಸಾಲದು  ಎಂಬಂತೆ ಕೂಡಿಟ್ಟ ಆಸ್ತಿ, ಹಣವೆಲ್ಲ ಮಾಯವಾಗದೆ ಇನ್ನೇನಾಗಲು ಸಾದ್ಯ.?
ಇತ್ತ ತಂದೆಯ ಹಣ ಖಾಲಿಮಾಡಿದ ಮೇಲೆ ಮಗ ದುಶ್ಯಂತ ನ ಸ್ಥಿತಿ ಇನ್ನೂ ಶೋಚನೀಯ. ಅದು ದುರಂತಕ್ಕೇ ದಾರಿಯಾಗಲೇಬೇಕಾಯ್ತು. ಮನೆಯ ಒಂದೊಂದು ವಸ್ತುಗಳು ಗಿರವಿ ಅಂಗಡಿ ಮಾರ್ವಾಡಿಗಳ ಪಾಲಾದವು‌. ಊರಲ್ಲೆಲ್ಲ ಅಪ್ಪನ ಹೆಸರಿನಲ್ಲಿ ಸಾಲ. ಆ ಸಾಲತೀರಿಸಲು  ತಂದೆ ರಾಮಮೂರ್ತಿ ಅನಿವಾರ್ಯವಾಗಿ ಇರುವುದೊಂದು ಮನೆಯನ್ನೂ ಮಾರಲೇಬೇಕಾಯ್ತು. ಎಲ್ಲಾ ಕಳೆದುಕೊಂಡರೂ ಮಗ ದುಶ್ಯಂತನ ದುಶ್ಚಟ ದೂರಾಗಲೇ ಇಲ್ಲ.  ಮಾನಸಿಕ ಸ್ಥಿಮಿತ ಕಳೆದುಕೊಂಡು ನಿತ್ಯ ಜಗಳ ಕಾರುವ ಈತ ಮೊನ್ನೆ ತಂದೆಯ ಕಣ್ಣನ್ನೇ ಕಿತ್ತು ಕತ್ತು ಹಿಚುಕುವ ಭಸ್ಮಾಸುರನಾಗಿ ಇದೀಗ ಪೋಲಿಸರ ಅತಿಥಿಯಾಗಿದ್ದಾನೆ.
        ಈಗ ಹೇಳಿ ಸ್ನೇಹಿತರೇ, ಹೆತ್ತವರು ತಾವು ಕಷ್ಟಪಟ್ಟು ದುಡಿದು ಹೊಟ್ಟೆಬಟ್ಟೆ ಕಟ್ಟಿ  ಮಕ್ಕಳಿಗೆ ಆಸ್ತಿ ಪಾಸ್ತಿ ಮಾಡಿ ಮಕ್ಕಳನ್ನು ಮೈಗಳ್ಳರನ್ನಾಗಿ ಮಾಡಿ ದುಶ್ಚಟಗಳ ದಾಸರನ್ನಾಗಿಸುತ್ತಿಲ್ಲವೆ.. ಇದರ ಬದಲಿಗೆ ಚಿಕ್ಕ ವಯಸ್ಸಿನಿಂದಲೇ ಸಕಾಲದಲ್ಲಿ ಸತ್ಯ, ಪ್ರಾಮಾಣಿಕತೆ, ಪರೋಪಕಾರ ಗುಣ ಬೆಳೆಸುತ್ತ ಉತ್ತಮ  ಶಿಕ್ಷಣ,ಸುಸಂಸ್ಕಾರ ನೀಡಿದರೆ ಅದೇ ಮಕ್ಕಳು ಕೇವಲ ಕುಟುಂಬದ ಆಸ್ತಿ ಅಷ್ಟೇ ಅಲ್ಲ. ದೇಶದ ಆಸ್ತಿ ಕೂಡ ಆಗುವರಲ್ಲವೆ….?
ಈ ಮಕ್ಕಳೇ ನಾಳಿನ ದೇಶ ಕಟ್ಟುವ ರೂವಾರಿಗಳಾಗುವರು.
‘ಮಕ್ಕಳೆಮಗೆ ಬದುಕು… ಅವರ ಜೀವನವೇ ಸೊಗಸು….’

ಗೋಪಾಲ ನಾಯ್ಕ ಭಾಶಿ.
ಸಿದ್ದಾಪುರ8277742013

About the author

Adyot

Leave a Comment