ಆದ್ಯೋತ್ ಸುದ್ದಿನಿಧಿ:
ಪ್ರಕಟಿಸಲಾಗುತ್ತಿರುವ ಮನಃಶಾಸ್ತ್ರ ಹಾಗೂ ಸಮಾಲೋಚಕನ ಕರ್ತವ್ಯಗಳ ಸರಣಿಯು ಉಪಯುಕ್ತವಾಗಿದ್ದು ನಿಮ್ಮೆಲ್ಲರಿಗೂ ಮೆಚ್ಚುಗೆಯಾಗುತ್ತಿದೆ. ಹಾಗೆಯ ಹೊಸ ವಿಷಯದ ಬಗ್ಗೆ ಅರಿತುಕೊಳ್ಳುವ ಆಸಕ್ತಿ ಮೂಡುತ್ತಿದೆ ಎಂದು ಭಾವಿಸುತ್ತ, ಮುಂದಿನ ಹಂತಕ್ಕೆ ಹೋಗೊಣ.
ಬರೀ ಕಷ್ಟದಲ್ಲಿರುವವರಿಗೆ ಮಾತ್ರವೆ ಸಮಾಲೋಚನೆಯ ಅಗತ್ಯವಿರುತ್ತದೆಯೆ? ಕೆಲವೊಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆಯೆ ಎಂದರೆ, ಅದು ತಪ್ಪು ಕಲ್ಪನೆ.
ಒಬ್ಬ ವ್ಯಕ್ತಿ ತಾನು ಅಂದುಕೊಂಡಂತೆ ಅಥವಾ ಮಾರ್ಗ ತಪ್ಪಿದಲ್ಲಿ, ಆ ಮಾರ್ಗವನ್ನು ಆರಿಸುವಲ್ಲಿ ವಿಫಲನಾದರೆ, ಅಲ್ಲಿಯೂ ಸಹ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಹಾಗಾದರೆ ಯಾವ ಯಾವ ಕ್ಷೇತ್ರದಲ್ಲಿ ಮಾರ್ಗದರ್ಶನದ ಅಗತ್ಯವಿರುತ್ತದೆ ಎಂಬುದನ್ನು ತಿಳಿಯೋಣ.
1. ವೃತ್ತಿ ಮತ್ತು ಉದ್ಯೋಗ ಸಲಹೆ (Career and Vocational Counselling)
ಶಿಕ್ಷಣವೆಂಬುದು ಜೀವನದ ಮುಖ್ಯ ಘಟ್ಟವಾದರೆ, ವೃತ್ತಿ ಹಾಗು ಉದ್ಯೋಗವು ಜೀವನಕ್ಕೆ ಅಡಿಪಾಯವಾಗಲು ಸಹಾಯ ಮಾಡುತ್ತದೆ. ಪಡೆದ ಶಿಕ್ಷಣ ಅಥವಾ ಅನಿವಾರ್ಯತೆಯಿಂದ ಮಾಡುವ ಉದ್ಯೋಗ ಹಣ ನೀಡುತ್ತದೆ ಆದರೆ ಮನಸ್ಸಿಗೆ ಖುಷಿ, ಸಂತೋಷ ನೀಡುವುದಿಲ್ಲ. ಯಾವುದೇ ರೀತಿ ಆಸಕ್ತಿ, ಉತ್ಸಾಹ ಅಥವಾ ಏನಾದರೂ ಹೊಸದನ್ನು ಮಾಡುವ ಮನಸ್ಥಿತಿ ಇರುವುದಿಲ್ಲ. ತೃಪ್ತಿಯಿರದ ಉದ್ಯೋಗದಿಂದ ಯಾವುದೇ ಉನ್ನತಿ ಲಭಿಸುವುದಿಲ್ಲ. ಆದ್ದರಿಂದ, ಶಿಕ್ಷಣದ ಮೂಲಕ ಹಾಗೂ ಅದಕ್ಕೆ ಸರಿಹೊಂದುವ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಮುನ್ನಡೆಯುವ ಮೂಲಕ ವೃತ್ತಿ ಹಾಗು ಉದ್ಯೋಗವು ಉತ್ತಮವಾಗಬಹುದು.
2. ಶಾಲಾ ಮತ್ತು ಶೈಕ್ಷಣಿಕ ಸಲಹೆ (School and Educational Counselling)
ಶಿಕ್ಷಣದಲ್ಲಿ ಹೊಸದು ಹಾಗೂ ಮುಂಬರುವ ದಿನಗಳಲ್ಲಿ ಉಪಯೋಗವಾಗುವ ಶಿಕ್ಷಣವನ್ನು ಪಡೆಯುವುದು ಮುಖ್ಯ. ಕೆಲವೊಮ್ಮೆ ಒಂದೇ ಶಿಕ್ಷಣದ ಹಾದಿ ಹಿಡಿದು ಎಲ್ಲರಂತೆ ಹತ್ತು ಜನರಲ್ಲೊಂದುವನು ಎಂಬ ಸ್ಥಿತಿಗೆ ಬಂದು, ಸಮಾಜದಲ್ಲಿ ನಿರುದ್ಯೋಗಿಯಾಗಿ ಜೀವನ ನಡೆಸುವುದು ಕಷ್ಟದಾಯಕವಾಗುತ್ತದೆ.
ಶಿಕ್ಷಣದಲ್ಲಿ ಹೊಸತನ್ನು ಅಳವಡಿಸಿ ಉತ್ತಮ ಜೀವನಶೈಲಿಯನ್ನು ಪಡೆಯಬಹುದು. ಮುಖ್ಯವಾಗಿ ಪರೀಕ್ಷೆ ಸಮಯದಲ್ಲಿ ಒತ್ತಡವನ್ನು ನಿಯಂತ್ರಿಸುವುದು, ಪರೀಕ್ಷೆಯನ್ನು ಎದುರಿಸುವ ವಿಧಾನ, ಓದುವ ರೀತಿಯನ್ನು ಬದಲಾಯಿಸಿ ಉತ್ತಮ ಅಂಕಗಳನ್ನು ಗಳಿಸಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
3. ಮಾನಸಿಕ ಆರೋಗ್ಯ ಸಲಹೆ (Mental Health Counselling)
ಕಂಗಾಲು, ಆತಂಕ, ತೊಂದರೆಗಳು ಮತ್ತು ಮನೋದೌರ್ಬಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಸಿಬಿಟಿ (CBT), ಮಾನವೀಯ ಚಿಕಿತ್ಸೆ ಮತ್ತು ಮನನಾಭ್ಯಾಸ (Mindfulness) ಸಮಸ್ಯೆ ನಿವಾರಣೆಗೆ ಉಪಯೋಗಿಸಲಾಗುತ್ತದೆ.
4. ದಾಂಪತ್ಯ ಮತ್ತು ಕುಟುಂಬ ಸಲಹೆ (Marriage and Family Counselling)
ಒಂದಾನೊಂದು ಕಾಲದಲ್ಲಿ ಮದುವೆ ಸಂಭ್ರಮವಾಗಿದ್ದರೆ, ಇವತ್ತಿನ ಬೆಳವಣಿಗೆಗಳಲ್ಲಿ ಅದು ಒಂದು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಮದುವೆಯು ಸಂಬಂಧ ಬಲಪಡಿಸುವ ಬದಲು ಸಮಾಜದಲ್ಲಿ ಯಾರನ್ನಾದರೂ ತೃಪ್ತಿಪಡಿಸುವ ಅಥವಾ ತೋರಿಸುವ ಪ್ರಯತ್ನವಾಗುತ್ತಿದೆಯೆಂಬ ಭಾವನೆಯಿಂದ ಸಂಬಂಧಗಳು ಮುರಿಯುತ್ತಿವೆ.
ಮನಸ್ತಾಪಗಳು, ಅಹಂಗಳು, ವಿವಾದಗಳು, ತಾನು ಹೆಚ್ಚು ಎಂಬ ಮನೋಭಾವದಿಂದ ಜೀವರಂಗ ಡಿವೋರ್ಸ್ ಹಾದಿಯಲ್ಲಿ ಸಾಗುತ್ತಿದೆ.ರಕ್ತ ಸಂಬಂಧದಲ್ಲಿ ಮದುವೆಯಾದರೆ, ಮಕ್ಕಳಿಗೆ ಉಂಟಾಗಬಹುದಾದ ದೈಹಿಕ ನ್ಯೂನತೆಗಳು ಹಾಗು ಅಡ್ಡಪರಿಣಾಮಗಳನ್ನು ತಪ್ಪಿಸುವುದು ಮುಖ್ಯವಾಗುತ್ತದೆ.
5. ಪುನರ್ವಸತಿ ಸಲಹೆ (Rehabilitation Counselling)
ಅಂಗವಿಕಲತೆ, ಮಾನಸಿಕ ಅಸ್ವಸ್ಥತೆ ಅಥವಾ ಅಭಿವೃದ್ಧಿ ಸಮಸ್ಯೆಗಳಿರುವವರಿಗೆ ಸಹಾಯ ಮಾಡುವುದು, ಅವರಿಗೆ ಜೀವನದಲ್ಲಿ ಉತ್ತೇಜನ ನೀಡುವುದು, ಪ್ರೇರಣೆಯನ್ನು ನೀಡುವುದು, ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವ ಅವಕಾಶ ನೀಡುವುದು.
ಸ್ವತಂತ್ರ ಜೀವನ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
6. ಆಲ್ಕೊಹಾಲ್ ಮತ್ತು ಅಡಿಕ್ಷನ್ ಸಲಹೆ (Substance Abuse and Addiction Counselling)
ದ್ರವ್ಯ ವ್ಯಸನ, ಮದ್ಯಪಾನ ಅಥವಾ ಇತರ ಕೆಟ್ಟ ಚಟಗಳಿಂದ ಬಳಲುವವರಿಗೆ ಮಾರ್ಗದರ್ಶನ ನೀಡುವುದು ಮುಖ್ಯ.
ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೆಟ್ಟ ಚಟಗಳನ್ನು ಅಳವಡಿಸಿಕೊಂಡು ಹಾಳಾಗುತ್ತಿರುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು.ಮರುಹುಡುಕುವಿಕೆ (relapse) ತಡೆ, ಕುಟುಂಬ ಸಹಕಾರ ಮತ್ತು ಚಿಕಿತ್ಸೆಗಳನ್ನು ನೀಡುವ ಮೂಲಕ ವ್ಯಸನಮುಕ್ತ ಜೀವನಕ್ಕೆ ಸಹಾಯ ಮಾಡಬೇಕು.ಇದು ಕೌಟುಂಬಿಕ ಕಲಹಗಳನ್ನು ತಡೆಯಲು ಮತ್ತು ನೆಮ್ಮದಿಯ ಜೀವನ ನಡೆಸಲು ಸಹಾಯಕವಾಗುತ್ತದೆ.
7. ಶೋಕ ಮತ್ತು ಆಘಾತ ಸಲಹೆ (Grief and Trauma Counselling)
ನಷ್ಟ, ಆಘಾತ ಅಥವಾ ಬದಲಾಗುವ ಜೀವನ ಪರಿಸ್ಥಿತಿಗಳಿಗೆ ವ್ಯಕ್ತಿಯನ್ನು ಹೊಂದಿಕೊಳ್ಳಲು ಸಹಾಯ ಮಾಡಬೇಕು.
ಪರಿಸ್ಥಿತಿಯು ತಿಳಿಯಾಗುವ ತನಕ ತಾತ್ಕಾಲಿಕ ಮತ್ತು ದೀರ್ಘಕಾಲದ ಭಾವನಾತ್ಮಕ ಬೆಂಬಲ ನೀಡಬೇಕು.
ಜೀವನದಲ್ಲಿ ಉತ್ಸಾಹ ಹಾಗೂ ಗಟ್ಟಿಯಾದ ಮನಸ್ಥಿತಿಯನ್ನು ಬೆಳೆಸಿಕೊಂಡು ದುಃಖದಿಂದ ಹೊರಬಂದು ಉತ್ತಮವಾಗಿ ಸಾಗಲು ಮಾರ್ಗದರ್ಶನ ಅವಶ್ಯಕ.
8. ಬಹುಸಾಂಸ್ಕೃತಿಕ ಸಲಹೆ (Multicultural Counselling)
ಜಾತಿ, ಸಂಸ್ಕೃತಿ, ವಲಸೆ, ಭೇದಭಾವ ಮತ್ತು ಗುರುತಿನ ಸಮಸ್ಯೆಗಳಿಗೆ ಸಂಬಂಧಿಸಿದ ಸಲಹೆ ನೀಡುವುದು.
ಯಾವುದೇ ಕೋಮು ಗಲಭೆ, ಇತರ ಧರ್ಮಗಳ ಬಗ್ಗೆ ಸಿಟ್ಟು, ಬೇಸರ, ದ್ವೇಷ, ಅಸೂಯೆ ಹೊಂದದೇ ಸಮಾನ ಗೌರವ ನೀಡುವುದು ಮುಖ್ಯ.ಜಾತಿ ಮತ್ತು ಕೀಳುಭಾವನೆಯನ್ನು ತ್ಯಜಿಸಿ ‘ಎಲ್ಲರೂ ಒಂದೇ’ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.
ಸಾಂಸ್ಕೃತಿಕವಾಗಿ ವೇದಗಳು, ಧರ್ಮಗ್ರಂಥಗಳ ತತ್ವಗಳು ಮತ್ತು ಜೀವನದ ಪ್ರಮುಖ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಲು ಮಾರ್ಗದರ್ಶನ ಮುಖ್ಯ.
9. ಲಿಂಗ ಮತ್ತು LGBTQ+ ಸಲಹೆ (Gender and LGBTQ+ Counselling)
ಲಿಂಗ ಗುರುತು ಮತ್ತು ಲೈಂಗಿಕ ಹಕ್ಕುಗಳಿಗೆ ಸಂಬಂಧಿಸಿದ ಭಾವನಾತ್ಮಕ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮುಖ್ಯ.
ಸ್ವೀಕಾರ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವುದು ಇದರ ಪ್ರಮುಖ ಭಾಗ.
10. ಸಂಸ್ಥಾತ್ಮಕ/ಕಾರ್ಯಸ್ಥಳ ಸಲಹೆ (Organizational/Workplace Counselling)
ನೌಕರರ ನಡುವೆ ಇರುವ ಸಂಘರ್ಷ, ಒತ್ತಡ, ಬರ್ನೌಟ್ ಹಾಗೂ ಉತ್ಪಾದಕತೆ ಇತ್ಯಾದಿಗಳಿಗೆ ಪರಿಹಾರ ನೀಡುವುದು.
ಎಲ್ಲರಲ್ಲಿಯೂ ಸಮಾನತೆಯನ್ನು ಬೆಳೆಯಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಹಿಡಿಯುವುದು.
ಉದ್ಯೋಗಿ ಸಹಾಯ ಕಾರ್ಯಕ್ರಮಗಳ (Employee Assistance Programs) ಮೂಲಕ ಉತ್ತಮ ಬಾಂಧವ್ಯ ಬೆಳೆಸುವುದು ಈ ಸಲಹೆಯ ಉದ್ದೇಶ.
ಈ ಎಲ್ಲ ಕ್ಷೇತ್ರಗಳಲ್ಲಿ ಮಾರ್ಗದರ್ಶನವು ತುಂಬಾ ಮುಖ್ಯವಾಗಿದ್ದು, ನಿರ್ಣಾಯಕ ಪಾತ್ರವಹಿಸುತ್ತದೆ.
ಧನುಷ್ ಭಟ್
(9945266006)
