ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಟಿಎಂಎಸ್ ಸಭಾಭವನದಲ್ಲಿ ಶುಕ್ರವಾರ ಸ್ಥಳೀಯ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನದವತಿಯಿಂದ ಖ್ಯಾತ ಯಕ್ಷಗಾನ ಕಲಾವಿದ ದಿ.ಅನಂತ ಹೆಗಡೆ ಕೊಳಗಿಯವರ ನೆನಪಿನ ಅನಂತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗಂಗಾಧರ ಕೊಳಗಿ ರಚಿಸಿರುವ
ಕೊಳಗಿ ಅನಂತಣ್ಣ ಕೃತಿಯ ಬಿಡುಗಡೆ ಹಾಗೂ ಖ್ಯಾತ ಮದ್ದಲೆ ವಾದಕ ಶಂಕರ ಭಾಗವತರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ,ಉತ್ತರ ಕನ್ನಡ ಜಿಲ್ಲೆ ವಿವಿಧ ಕಲೆಗಳಿಗೆ ಹೆಸರುವಾಸಿಯಾಗಿದೆ. ಈ ಭಾಗದ ಎಲ್ಲೆಡೆಗಳಲ್ಲಿ ಹಿಂದೂಸ್ತಾನೀ ಗಾಯಕರು ಸಿಗುತ್ತಾರೆ. ಆದರೆ ಯಕ್ಷಗಾನ ಕಲಾವಿದರ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿನ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಕ್ಷಗಾನ ಕಲೆಗೆ ಸಲ್ಲಿಸಬೇಕಾದ ಸೇವೆ, ಗೌರವವನ್ನು ಸಲ್ಲಿಸುವಲ್ಲಿ ವಿಫಲರಾದಂತಿದೆ. ಕ್ಷೇತ್ರದಲ್ಲಿನ ಕಲಾವಿದರನ್ನು ಗುರುತಿಸಿ ರಾಜ್ಯ, ರಾಷ್ಟç ಮಟ್ಟದಲ್ಲಿ ಅವರಿಗೆ ಸಲ್ಲಬೇಕಾಗ ಗೌರವ ಸಲ್ಲುವಂತೆ ಮಾಡಬೇಕು. ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಮಾಡಲು ನಾವೆಲ್ಲರೂ ಸೇರಿ ಪ್ರಯತ್ನಿಸಬೇಕು. ಕೊಳಗಿ ಅನಂತಣ್ಣ ಕೃತಿ ಓರ್ವ ಕಲಾವಿದ ಕೆಳಹಂತದಿAದ ಬೆಳೆದು ಬಂದ ಕುರಿತು ನಿರೂಪಿಸಿದೆ ಎಂದರು.
ಸಾಹಿತಿ, ವಿ| ಜಗದೀಶ ಶರ್ಮಾ ಸಾಹಿತಿ ಗಂಗಾಧರ ಕೊಳಗಿ ರಚಿಸಿದ ಕೊಳಗಿ ಅನಂತಣ್ಣ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯಕ್ಷಗಾನವನ್ನು ಉಸಿರಾಗಿಸಿಕೊಂಡು ಬೆಳೆಸಿಕೊಂಡು ಬಂದ ಪ್ರದೇಶ ಇದಾಗಿದೆ. ಯಕ್ಷಗಾನ ಬಹಳ ಚಿಕ್ಕ ಪ್ರದೇಶದ ವ್ಯಾಪ್ತಿ ಹೊಂದಿದ ಕಲೆಯಾದರೂ ಈ ಕಲೆಯ ಕಸುವು, ಕಲಾವಿದರ ನಿಷ್ಠೆ, ಈ ಕಲೆಯನ್ನು ವಿಶ್ವಗಾನವಾಗಿ ಮಾರ್ಪಡಿಸಿದೆ. ಈ ಕೃತಿ ಓರ್ವ ಮಹಾನ್ ಕಲಾವಿದನ ಕುರಿತು ಆಪ್ತವಾಗಿ ನಿರೂಪಿತವಾಗಿದೆ. ಜೀವನದ ಕುರಿತು ಮಸಾಲೆ ಬೆರೆಸದೆ ಸಾಹಿತ್ಯಿಕ ಸ್ಪರ್ಶದೊಂದಿಗೆ ರಚಿಸಲ್ಪಟ್ಟಿದೆ ಎಂದರು.

ಅಭಿನಂದನಾ ನುಡಿಯಾಡಿದ ಸೆಲ್ಕೋ ಇಂಡಿಯಾ ಸಿಇಒ ಮೋಹನ ಭಾಸ್ಕರ ಹೆಗಡೆ, ಕಲಾವಿದರ ಜೀವನ ಚರಿತ್ರೆ ಪರಿಸರವನ್ನು ಜಾಗೃತಗೊಳಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಹೊತ್ತಿಗೆಗಳು ಪ್ರಕಟವಾಗಿ ಅವರುಗಳ ಸಾಧನೆ ಲೋಕದ ಗಮನಕ್ಕೆ ಬರಬೇಕೆಂಬ ಆಶಯವಿದೆ.ಕೊಳಗಿ ಅನಂತಣ್ಣ ಕೃತಿ ಓದಬೇಕಾದ ಕೃತಿ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ ಕೊಳಗಿ ಅನಂತ ಹೆಗಡೆಯವರು ನಿಗರ್ವಿ, ಸರಳ, ಸಜ್ಜನ ಕಲಾವಿದರು. ತಾವು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬಿ ನ್ಯಾಯ ಒದಗಿಸುವ ಮೇರು ಕಲಾವಿದರಾಗಿದ್ದರು ಎಂದರು.
ಕೃತಿಕಾರ ಗಂಗಾಧರ ಕೊಳಗಿ ಮಾತನಾಡಿ ಕಲಾವಿದ ನಿಜ ಮನುಷ್ಯನಾಗಿರುವುದು ವಿರಳ. ಆದರೆ ಅನಂತಣ್ಣ ಇದಕ್ಕೆ ಅಪವಾದವಾಗಿದ್ದು ನಮಗೆಲ್ಲ ಸಾಹಿತ್ಯಿಕ ಶಕ್ತಿ ನೀಡಿದವರು ಎಂದರು.

ಕಲಗದ್ದೆ ನಾಟ್ಯ ವಿನಾಯಕ ದೇವಾಲಯದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಪ್ರಾಧ್ಯಾಪಕ ದತ್ತಮೂರ್ತಿ ಭಟ್ಟ ಕೊಳಗಿ ಅನಂತಣ್ಣ ಕೃತಿಯ ಕುರಿತು ಮಾತನಾಡಿದರು. ಅನಂತ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಮದ್ದಲೆ ವಾದಕ ಶಂಕರ ಭಾಗವತ ಯಲ್ಲಾಪುರ ದಂಪತಿಗಳಿಗೆ ಅನಂತ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಶಂಕರ ಭಾಗವತ ಮಾತನಾಡಿ,ಇಂದು ನೀಡಿದ ಪ್ರಶಸ್ತಿ ನನ್ನ ಮದ್ದಳೆ ವಾದನಕ್ಕೇ ವಿನ: ನನಗಲ್ಲ. ಅನೇಕ ಹಿರಿಯರು ನನ್ನನ್ನು ತಿದ್ದಿ ತೀಡಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ಮದ್ದಳೆ ವಾದಕರಾದವರು ಭಾಗವತರ ಕಂಠ ಶಕ್ತಿಗೆ ತಕ್ಕುದಾಗಿ ಅತಿಕ್ರಮಣ ಮಾಡದೇ ನಾಟ್ಯಶಾಸ್ತçಕ್ಕೆ ಬದ್ಧರಾಗಿ ಮದ್ದಲೆ ನುಡಿಸಬೇಕು ಎಂದರು.

ಭಾಗವತ ಮಾಧವ ಭಟ್ಟ ಕೊಳಗಿ ಅವರ ಗಣಪತಿ ಸ್ತುತಿಸಿದರು. ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸನ್ಮಾನಪತ್ರ ವಾಚಿಸಿದರು.ಪ್ರೊ|ಎಂ.ಕೆ.ನಾಯ್ಕ ಹೊಸಳ್ಳಿ ನಿರ್ವಹಿಸಿದರು. ನಂತರ ತುಳಸಿ ಹೆಗಡೆ ಪ್ರಸ್ತುತಿಯ ವಿಶ್ವಾಭಿಗಮನಮ್ ಯಕ್ಷ ರೂಪಕ ನಡೆಯಿತು.
