ಆದ್ಯೋತ್ “ಆಪ್ತ ಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ:
ಹಿಂದಿನ ಸಂಚಿಕೆಯಲ್ಲಿ ಓದಲು ಹಾಗು ಅಧ್ಯಯನ ಮಾಡಲು ಅನುಕೂಲವಾಗಿರುವ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದೆವೆ. ಇಂದಿನ ಸಂಚಿಕೆಯಲ್ಲಿ ಹೊಸ ವಿಷಯವನ್ನು ಅರಿಯೋಣ.
ಪ್ರಪಂಚದಲ್ಲಿ ಸಾಕಷ್ಟು ಗಂಭೀರವಾದ ಸಮಸ್ಯೆಗಳಿದ್ದರೂ ಎಲ್ಲರ ಮನೆಯಲ್ಲೂ ಕಂಡುಬರುವ ಆಪಾದನೆ ಎಂದರೆ ತಮ್ಮ ಮಕ್ಕಳು ವಿದ್ಯಾಭ್ಯಾಸಕ್ಕೆ ಚೂರು ಗಮನ ಹರಿಸುವುದಿಲ್ಲ, ಓದಲು ಮನಸ್ಸೇ ಮಾಡುವುದಿಲ್ಲ, ಗಮನ ಹರಿಸುವುದಿಲ್ಲ ಎಂಬುದು ಸರ್ವಸಾಮಾನ್ಯ. ಇದಕ್ಕೆ ಕಾರಣಗಳು, ಮಕ್ಕಳಿಗೆ ಕಾಡುತ್ತಿರುವ ಸಮಸ್ಯೆ,ತೊಂದರೆಗಳೇನು ಎಂಬುದನ್ನು ನೋಡೋಣ.
ಎಲ್ಲಾ ಕೈಬೆರಳುಗಳು ಹೇಗೆ ಸಮನಾಗಿರುವುದಿಲ್ಲವೋ ಹಾಗೆಯೇ ಎಲ್ಲಾ ಮಕ್ಕಳು ಸಮನಾಗಿರುವುದಿಲ್ಲ. ಎಲ್ಲರೂ ವಿಭಿನ್ನವಾದ ಕಲಾಕೌಶಲ್ಯವನ್ನು ಹೊಂದಿರುತ್ತಾರೆ. ಅದನ್ನು ಪಾಲಕರಾದವರು ಗುರುತಿಸಬೇಕು. ಹಾಗಿದ್ದರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಪ್ರಾರಂಭಿಕ ಮಟ್ಟದ ವಿದ್ಯೆಯನ್ನು ನೀಡಬೇಕೆಂದು ತಿಳಿದುಕೊಳ್ಳೋಣ.
ಮಕ್ಕಳ ಬೆಳವಣಿಗೆಯ ಹಂತ 3 ವರ್ಷ ತುಂಬಿದ ನಂತರ ಅವರು ಹೊಸಹೊಸ ವಿಷಯಗಳನ್ನು ಅರಿಯಲು,ಕಲಿಯಲು, ನೆನಪಿಟ್ಟುಕೊಳ್ಳಲು, ಅದನ್ನು ರೂಢಿಗೊಳಿಸಲು ಶಕ್ತರಾಗುವ ಸಮಯವಾಗುತ್ತದೆ. ಜ್ಞಾನವು ಮೊಳಕೆ ಒಡೆಯುವ ಈ ಸಮಯವೆ ಪ್ರಥಮ ಹಂತವಾಗಿದ್ದು ಬಹುಮುಖ್ಯ. ಮೊಳಕೆಯು ಸಶಕ್ತವಾಗಿ, ಪೌಷ್ಟಿಕವಾಗಿ ಬೆಳೆಯಲು ರಸಗೊಬ್ಬರಗಳ ಅವಶ್ಯಕತೆ ಇರುತ್ತದೆ. ಆದರೆ ಉತ್ತಮ ಪ್ರಮಾಣದಲ್ಲಿ ನೀಡಿದರೆ ಮಾತ್ರ ಪಸಲು ಚೆನ್ನಾಗಿ ಬರಲು ಸಾಧ್ಯ. ಅಳತೆಯಲ್ಲಿ ಹೆಚ್ಚು ಕಡಿಮೆಯಾದರೆ ಪಸಲು ಸಂಪೂರ್ಣವಾಗಿ ನಾಶವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಹಂತ ಹಂತವಾಗಿ ಒಂದೊಂದೆ ಮೆಟ್ಟಿಲು ಹತ್ತುತ್ತಾ ಬಂದರೆ ಹೆಜ್ಜೆಯ ಜೊತೆಗೆ ನಡೆಯುವುದನ್ನು ಸಂಪೂರ್ಣವಾಗಿ ಅರಿತುಕೊಳ್ಳುತ್ತಾರೆ. ಹಾಗಾದರೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ತಿಳಿಯೋಣ.
ಮಕ್ಕಳೆ ಸಮಾಜದ ಅಡಿಪಾಯ ಹಾಗು ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ. ಕೆಲವರಿಗೆ ಕಲಿಕಾ ಅಸಮರ್ಥತೆ (Learning Disabilities) ಉಂಟಾಗುತ್ತವೆ. ಇವು ಮಕ್ಕಳಿಗೆ ಓದಲು, ಬರೆಯಲು, ಲೆಕ್ಕ ಮಾಡಲು, ಒಂದು ವಿಷಯದ ಬಗ್ಗೆ ಗಮನ ಹರಿಸಲು ಕಷ್ಟವಾಗುತ್ತವೆ. ಇವೆಲ್ಲವು ಕೇವಲ ಕಡಿಮೆ ಬುದ್ಧಿಮಟ್ಟವನ್ನು ಹೊಂದಿರುವುದರಿಂದ ಅಲ್ಲ, ಬದಲಾಗಿ ನರಗಳ ಸಂಯೋಜನೆಗಳು, ಮೆದುಳಿನಲ್ಲಿ ನರಗಳ ರಚನೆ ಹಾಗು ಬೆಳವಣಿಗೆಯಲ್ಲಿ ಉಂಟಾಗುವ ಕುಂಟಿತವು ನೇರ ಪರಿಣಾಮ ಬೀರುತ್ತದೆ. Dyslexia (ಡಿಸ್ಲೆಕ್ಸಿಯಾ), Dysgraphia (ಡಿಸ್ಗ್ರಾಫಿಯಾ), Dyscalculia (ಡಿಸ್ಕ್ಯಾಲ್ಕುಲಿಯಾ), Attention Deficit Disorders (ಗಮನ ಕೊರತೆ – ADHD) ಇವುಗಳಲ್ಲಿ ಪ್ರಮುಖವಾದವು.
ಈ ರೀತಿಯ ಸಮಸ್ಯೆಗಳನ್ನು ಬೇಗ ಗುರುತಿಸಲಾಗದಿದ್ದರೆ ಮುಂದಿನ ಹಂತದಲ್ಲಿ ಆತ್ಮವಿಶ್ವಾಸದ ಕೊರತೆ, ವಿದ್ಯಾಭ್ಯಾಸದಲ್ಲಿ ವಿಫಲತೆ ಮತ್ತು ಸಾಮಾಜಿಕ ದೂರಾವಸ್ಥೆ ಉಂಟಾಗಬಹುದು. ಇದನ್ನು ಪಾಲಕರು, ಶಿಕ್ಷಕರು ಗುರುತಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿ, ಭಾವನಾತ್ಮಕವಾಗಿ ಬೆಂಬಲ ನೀಡಿದರೆ ಹಿಂದುಳಿದ ಮಕ್ಕಳು ಕೂಡ ಇತರ ಮಕ್ಕಳಂತೆ ಪ್ರಗತಿ ಸಾಧಿಸಲು ಪ್ರೆರೇಪಿತರಾಗುತ್ತಾರೆ. ಆದರೆ ದುರಂತವೆಂದರೆ ಈಗಿನ ಶಾಲಾ ಹಾಗು ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಗಳ ಮೂಲಕ ವ್ಯಕ್ತಿತ್ವವನ್ನು ಅಳೆಯುವ ಮಾಪನವಾಗಿಬಿಟ್ಟಿದೆ. ಅಂಕಗಳಿಗೆ ಮಹತ್ವ ನೀಡುವ ಮೂಲಕ ಮಕ್ಕಳನ್ನು ಪುಸ್ತಕ ಹುಳುಗಳನ್ನಾಗಿ ಮಾಡಿ, ಹೊರಗಿನ ಪ್ರಪಂಚದ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿಗಳಿಂದ ದೂರವಿಟ್ಟು, ಪಠ್ಯಪುಸ್ತಕಗಳು, ಟ್ಯೂಷನ್ ಹಾಗು ಓದುವುದನ್ನೇ ಪರಮಗುರಿ ಎಂಬಂತೆ ಬಿಂಬಿಸಿ, ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡಿ ತಮ್ಮ ವಿದ್ಯಾಸಂಸ್ಥೆಯ ಕೀರ್ತಿ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳಿಗೆ ಸೃಜನಶೀಲತೆಯನ್ನು ಪೋಷಿಸುವುದು, ನೈತಿಕ ಮೌಲ್ಯಗಳನ್ನು ಬೆಳೆಸುವುದು, ಚಟುವಟಿಕೆ ಆಧಾರಿತ ಕಲಿಕೆಯನ್ನು, ಸಮಾವೇಶಿತ ತರಗತಿಗಳನ್ನು ಮತ್ತು ತಂತ್ರಜ್ಞಾನ ಆಧಾರಿತ ಪಾಠಗಳನ್ನು ಉತ್ತೇಜಿಸಬೇಕು. ಪೋಷಕರು ಮಕ್ಕಳನ್ನು ಪರಸ್ಪರ ಹೋಲಿಸದೆ ಪ್ರೋತ್ಸಾಹಿಸಿ, ಪ್ರೀತಿಯ ವಾತಾವರಣವನ್ನು ನಿರ್ಮಿಸುವುದು ಬಹುಮುಖ್ಯ.
ಕಲಿಕಾ ಅಸಮರ್ಥತೆಗಳಲ್ಲಿ ಹಲವು ವಿಧಗಳಿವೆ. ಅವುಗಳು:
1.ಶೈಕ್ಷಣಿಕವಾಗಿ (Academic) – ಓದು, ಬರಹ, ಗಣಿತದಲ್ಲಿ ತೊಂದರೆ, ಫಲಿತಾಂಶದಲ್ಲಿ ಕುಂಟಿತ.
2. ಭಾವನಾತ್ಮಕ (Emotional)– ವಿಫಲತೆ, ಆತ್ಮವಿಶ್ವಾಸ ಕುಗ್ಗುವುದು, ಹೀನಭಾವನೆ, ಆತಂಕ, ನಿರಾಸೆ ಉಂಟಾಗುವುದು.
3. ಸಾಮಾಜಿಕ (Social) – ಇತರರಿಂದ ಹಾಸ್ಯ, ಹಿಂಸೆ ಅಥವಾ ತಿರಸ್ಕಾರ ಎದುರಾಗುವುದು, ಸ್ನೇಹ ಬೆಳೆಸಲು ಕಷ್ಟವಾಗುವುದು.
4. ನಡವಳಿಕೆ (Behavioral)– ಒತ್ತಡ ಮತ್ತು ನಿರಾಸೆಯಿಂದ ಕೋಪ, ಹಠ, ಅತಿಚುರುಕುತನ ಅಥವಾ ಹಿಂಜರಿಕೆಯ ವರ್ತನೆ.
5. ಭವಿಷ್ಯ (Future)– ತಕ್ಕ ಮಟ್ಟಿಗೆ ಪರಿಹಾರ ದೊರೆಯದಿದ್ದರೆ ಮುಂದಿನ ವಿದ್ಯಾಭ್ಯಾಸ, ವೃತ್ತಿ ಆಯ್ಕೆ ಮತ್ತು ಜೀವನ ಸಂತೃಪ್ತಿಗೆ ಪರಿಣಾಮ ಬೀರುವುದು.
6. ಪೋಷಕರು ಮತ್ತು ಶಿಕ್ಷಕರ ಅರ್ಥದೋಷ (Parental & Teacher Challenges) – ಮಕ್ಕಳನ್ನು “ಅಲಕ್ಷ್ಯ” ಅಥವಾ “ಸೊಕ್ಕು” ಎಂದು ತಪ್ಪಾಗಿ ಅರ್ಥೈಸುವುದು, ಇದರಿಂದ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವುದು.
ಮುಂದಿನ ಸಂಚಿಕೆಯಲ್ಲಿ ಮಕ್ಕಳಲ್ಲಿ ಯಾವ ಕಾರಣಗಳಿಂದ ಅಸಮರ್ಥತೆಗಳು ಬರುತ್ತವೆ ಹಾಗು ಡಿಸ್ಲೆಕ್ಸಿಯಾ (Dyslexia Disorder) ಬಗ್ಗೆ ಸಂಪೂರ್ಣವಾಗಿ ತಿಳಿಯೊಣ.
########
ಧನುಷ್ ಭಟ್

About the author

Adyot

Leave a Comment