ಆದ್ಯೋತ್ ಸುದ್ದಿನಿಧಿ:
ಅಪ್ಪನೆಂದರೆ ಚಂದ್ರಶೇಖರನಂತಿರಬೇಕು…
ಎಲೆಮರೆಯಲ್ಲಿದ್ದು ಮರೆಯಾದ ಆದರ್ಶ ಶ್ರಮಜೀವಿ…
“ಮೇಸ್ಟ್ರೇ, ನೀವೇನರಾ ತಿಳ್ಕಳಿ, ನಾ ಮಕ್ಕಳಿಗಾಗಿ ಅದೆಷ್ಟು ಕಷ್ಟ ಪಟ್ಟಿದ್ದೆನೆ ಅಂದ್ರೆ ಆ ದ್ಯಾವರಿಗೆ ಗೊತ್ತು ಕಣ್ರಿ. ಒಟ್ಟಲ್ಲಿ ನನ್ನ ಮೂರೂ ಮಕ್ಕಳು ಒಳ್ಳೆ ಶಿಕ್ಷಣ ಕಲ್ತು ಸಣ್ದರಾ ನೌಕರಿ ಪಡಿಬೇಕು, ನಂಗೆ ಇರೋಕೊಂದು ಹಳೆಮನೆ ಬಿಟ್ರೆ ತೋಟ,ಗದ್ದೆ, ಜಮೀನೂ ಏನೂ ಇಲ್ಲ ಕಣ್ರಿ. ಅದಕ್ಕಾಗಿ ಒಂದು ದಿನಾನೂ ಖಾಲಿ ಕುಂತುದ್ದೇ ಇಲ್ಲ .ಪ್ಯಾಟಿ, ಪಟ್ನ,ಊರು ಕೇರಿ ಹೀಗೆ ಎಲ್ಲಿ ಯಾರು ಯಾವ ಕೆಲಸಕ್ಕ ಕರದ್ರೂ ಬರಲ್ಲಾ ಅಂದದ್ದೇ ಇಲ್ಲ ಕಣ್ರಿ. ರಸ್ತೆ ಬದಿ ಗಟಾರ ಕ್ಲೀನಿಂದ ಹಿಡ್ದು ಎಲ್ಲಾ ಕೂಲಿಕೆಲ್ಸಾನೂ ಮಾಡಿದ್ದೇನ್ರಿ. ಹಂಗೆ ಕೆಲಸ ಮುಗಿಸಿ ಸಂಬಳ ಕೈಗೆ ಬಂದ ಕೂಡೆ ನಾಲ್ಕ ಬಾಗ ಮಾಡತಿದ್ದೆ ಮೇಷ್ಟ್ರೆ , ಒಂದು ಮನೆ ಖರ್ಚಿಗೆ ಉಳ್ದ ಮೂರು ಭಾಗ ಮಾಡಿ ಇದು ಮಹೇಶನಿಗೆ, ಇದು ಗಿರೀಶನಿಗೆ, ನಾಲ್ಕನೆ ಭಾಗ ವಿನಾಯಕಂಗೆ. ಹಿಂಗ್ ಲೆಕ್ಕ ಮಾಡಿ ನನ್ನ ಹೆಂಡತಿ ಅನ್ಸೂಯಾಳ ಕೈಯಾಗ ಕೊಟ್ಟ ಬಿಡ್ತಿದ್ದೆ. ನನ್ತಾವ ಇಟ್ಬಿಟ್ರೆ ಹಾಳಾದ ಖರ್ಚಾಗಿ ಹೋದ್ರೆ ಅಂತಾ ಭಯ. ನನ್ನ ಹೆಂಡ್ತಿ ಅನ್ಸೂಯಾಳೂ ಈ ಮನಿಗ, ಮಕ್ಳ ಪಟ್ಟಿ ಪುಸ್ತಕ, ಬಟ್ಟೆ ಬರಿಗೆ ಬಾಳ ಕಷ್ಟ ಪಟ್ಟಾಳ್ರಿ, ಸುಮ್ನ ಹೇಳಬಾರದು. ಇಷ್ಟು ವರ್ಷ ಆತು ಊರಾಗ ಒಬ್ರ ತಾವಾನೂ ಒಂದ ಕೆಟ್ಟ ಮಾತು ಹೇಳ್ಸಿಕಂಡಿಲ್ಲ. ನಂಗೂ ಎಲೆ ಅಡ್ಕೆ ಬಿಟ್ರೆ ಬೇರೆ ಯಾವ್ ಚಟಾನೂ ಇಲ್ಲ ಕಣ್ರಿ. ಗಂಡ ಹೆಂಡ್ತಿ ಇಬ್ರೂ ಅದೆಂಗ ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದೇವೆ ಅಂದ್ರೆ ಆ ನಮ್ಮಪ್ಪ ಬೇಡ್ಕಣಿ ಕೋಟೆ ಹನ್ಮಂತ್ನಿಗೇ ಗೊತ್ತು ಕಣ್ರಿ.

*ವರ್ಷಕ್ಕೊಮ್ಮೆ ಇಡಗುಂಜಿಗೆ ಪಾದಯಾತ್ರೆ* ಮೇಸ್ಟ್ರೇ ಇನ್ನೊಂದು ವಿಷಯ ನಾನು ವರ್ಷಕ್ಕೊಮ್ಮೆ ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಕಾಲ್ನಡಿಗೆ ಸೇವೆ ಮಾಡಿದಗದೇನ್ರಿ.ಅಲ್ಲಿ ಪೂಜಾ ಮುಗದ ಮ್ಯಾಲ ಪ್ರಸಾದ ಊಟ ಮಾಡಿ ಇಲ್ಲಿಗ ಬರತಿದ್ದೆ. ಆ ಮಾಗಣ್ಪತಿ ದಯೇನೇ ಇರಬೇಕ್ರಿ. ಈಗ ಮೂರು ಮಕ್ಕಳೂ ನಮ್ಮ ಕಣ್ಮುಂದೆ ಚಲೋತ್ನಾಗಿ ಓದಿ ಸರಕಾರಿ ನೌಕರಿ ಮಾಡ್ತಾ ಅವರವರ ಕಾಲ ಮೇಲ್ನಿಂತಿದ್ದಾರಲ್ಲ ಅದೇ ಸಂತೋಷ ಕಣ್ರಿ. ಇದ ಖುಷಿಲೆ ಮೂವರ್ನೂ ಮದುವೆನೂ ಮಾಡಿ ಮುಗಿಸಿಬಿಟ್ಟೆ, ಇನ್ನ ಅವರವರ ಬದುಕು ಅವರ ಕೈಯಾಗ. ಇದಕ್ಕಿಂತ ಹೆಚ್ಚಿಂದೇನ ಬೇಕ್ರಿ ನೀವ ಹೇಳ್ರಿ” ಎಂದು ತಮ್ಮ ಎಂದಿನ ಮುಗ್ಧ ಸಂತೃಪ್ತ ನಗುಚೆಲ್ಲಿ ಹೇಳುತ್ತಿದ್ದ ಮಾತುಗಳನ್ನು ಕೇಳುತಿದ್ದ ನಾನು ಮತ್ತು ಶಿಕ್ಷಕ ಮಿತ್ರ ಟಿ.ಕೆ.ನಾಯ್ಕ ಇಬ್ಬರೂ ಒಂದು ಕ್ಷಣ ಮೂಕವಿಸ್ಮಿತರಾದೆವು. ಇದ್ದರೆ ಇಂತಾ ಆದರ್ಶ ತಂದೆ ತಾಯಿ ಇರಬೇಕೆಂದುಕೊಂಡೆವು.
ಇವರ ಮಾತುಗಳನ್ನು ಕೇಳುತಿದ್ದ ಗುರುಮಿತ್ರ ಅವರು “ಗೋಪಾಲ್ ಸರ್ ನೀವು ಯಾರ್ಯಾರ್ದೋ ಬಗ್ಗೆ ಆರ್ಟಿಕಲ್ಸ್ ಬರಿತೀರಿ. ಇಂತ ಸಾಧಕರ ಬಗ್ಗೆನೂ ಬರೀರಿ, ಇಂತವರು ಯಾರಿಗೂ ಕಮ್ಮಿ ಇಲ್ಲ ಕಣ್ರಿ , ನಮ್ಮ ಶಾಲೆ ಮಕ್ಕಳ ಪಾಲಕರಿಗೆ ಗೊತ್ತಾಗಬೇಕು. ಇಂತವರೂ ನಮ್ಮ ನಡುವೆ ಇದ್ದಾರೆ, ತಾವೂ ಅಪ್ಪನಾಗಿ ತಮ್ಮ ತಮ್ಮ ಮಕ್ಕಳ ಮುಂದೆ ಮನ್ಯಾಗ ಹೀಗಿರಬೇಕು ಅಂತಾ ತಿದ್ದಿಕೋತಾರೆ” ಅಂದಾಗ ಹೌದಲ್ವಾ ಅನಿಸ್ತು. ಅದೇ ದಿನ ಈ ಪುಣ್ಯಾತ್ಮನ ಬಗ್ಗೆ ಒಂದಷ್ಟು ತೊಚಿದ್ದು ಬರೆದಿಟ್ಟಿದ್ದೆ. ಆದರೆ ಕಾರ್ಯದ ಒತ್ತಡದಲ್ಲಿ ಪೂರ್ಣಗೊಳಿಸಿರಲಿಲ್ಲ. ಆದರೆ ಆ ವಿಧಿ ಇಷ್ಟು ಬೇಗ ಈ ಮುಗ್ದ ತಂದೆ ಚಂದ್ರಶೇಖರ ನಾಯ್ಕ ರನ್ನು ಕರೆದೊಯ್ಯುತ್ತದೆ ಎಂಬ ಅರಿವೇ ಇರಲಿಲ್ಲ.
ನಿನ್ನೆ ನೂರಾರು ಶಿಕ್ಷಕರ ವಾಟ್ಸಪ್ ಸ್ಟೇಟಸ್ ನಲ್ಲಿ ನೋಡಿದ ನಾನು ಒಂದು ಕ್ಷಣ ದಿಗ್ಬ್ರಾಂತನಾಗಿ ಹೋದೆ!.ಮೊನ್ನೆಮೊನ್ನೆಯಷ್ಟೆ ಆರಿದ್ರಮಳೆ ಹಬ್ಬದ ಊಟಕ್ಕೆ ಹೋದಾಗ ಎಷ್ಟೊಂದು ಸಂತೋಷ, ಸಂಭ್ರಮ ಪಟ್ಟಿದ್ರು. ಇತ್ತೀಚೆಗೆ ಎರಡು ವರ್ಷಗಳಲ್ಲೇ ತಮ್ಮ ಮೂರು ಮಕ್ಕಳ ಮದುವೆ ಕೂಡ ಮಾಡಿ ಜವಾಬ್ದಾರಿ ಇಳಿಸಕೊಂಡಿದ್ರು. ಮಹೇಶ ಮತ್ತು ಗಿರೀಶ ಇಬ್ಬರೂ ಶಿಕ್ಷಕರಾಗಿ ಸೇವೆಯಲ್ಲಿದ್ದರೆ ಇನ್ನೊಬ್ಬ ಮಗ ವಿನಾಯಕ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಮೂರು ಮಕ್ಕಳನ್ನು ತೋರಿಸಿ “ಗುರುಗಳೇ, ಈ ಮೂರೂ ಮಕ್ಕಳೂ ಗಣೇಶ-ಸುಬ್ರಹ್ಮಣ್ಯ-ವೀರಭದ್ರನ ತರಾ ಕಣ್ರಿ ಒಬ್ರನ್ ಬಿಟ್ಟು ಇನ್ನೊಬ್ರಿರಲ್ಲ.ಮೂರೂ ಮಕ್ಕಳೂ ಚಿನ್ನದಂತಾ ಮಕ್ಕಳು ಕಣ್ರಿ. ಈ ಪುಣ್ಯ ಯಾರಿಗ ಸಿಗ್ತೈತ್ರಿ ಸರ…” ಅಂತಾ ತುಂಬಾ ಹೆಮ್ಮೆಯಿಂದ ಹೇಳಿದ್ದ ಪುಣ್ಯಾತ್ಮ ಇಂದು ತಿರುಗಿ ಬಾರದೂರಿಗೆ ಪಯಣಿಸಿಬಿಟ್ಡಿದ್ದಾರೆ
ನಂಬಲು ಸಾದ್ಯವೇ?
“ಸರ್, ನಾವು ಬೆಳೆದು ಇಷ್ಟು ದೊಡ್ಡವರಾದರೂ ಬೇಡ ಬೇಡವೆಂದರೂ ನಮ್ಮ ಬಟ್ಟೆ ಬರೆಗಳನ್ನು ತೊಳೆಯುವುದು, ಇಸ್ತ್ರಿ ಮಾಡುವುದು. ಗಾಡಿ ತೊಳೆದು ಸ್ವಚ್ಛಂದವಾಗಿಡುವುದು, ಡ್ಯೂಟಿಗೆ ಹೊರಟಾಗ ,ಮರಳಿ ಬಂದಾಗ ಗೇಟ್ ವರೆಗೂ ಬಂದು ಸ್ನೇಹಿತನಂತೆ ಹಾಸ್ಯಮಾಡ್ತಾ ಕುಶಲೋಪಚಾರ ವಿಚಾರಿಸುವುದು , ಅಮ್ಮನ ಜೊತೆಗೆ ಪ್ರೀತಿಯ ಮಾತು, ಸೇವೆ ನಮ್ಮಪ್ಪನ ನಿತ್ಯದ ಕಾಯಕವಾಗಿತ್ತು. ಇಂತ ಅಪ್ಪನ ಸೇವೆ ಮಾಡುವ ಅವಕಾಶನಾ ದೇವರು ನಮಗೆ ಕೊಡಲಿಲ್ಲವಲ್ಲ ಸರ್, ನಮ್ಮ ಅಪ್ಪನಂತಾ ಆದರ್ಶ ತಂದೆ ನಾವಾಗಲು ಸಾದ್ಯವೇ ಸರ್” ಅಂತಾ ಹೇಳುವ ಮಕ್ಕಳಾದ ಗಿರೀಶ,ಮಹೇಶ ವಿನಾಯಕ ರ ದುಃಖ ಬಣ್ಣಿಸಲಾರೆ.
*ಆದರ್ಶ ತಂದೆ ಚಂದ್ರಶೇಖರ ನಾಯ್ಕ…*
ಶಿಕ್ಷಕರಾದ ನಮಗೆ ನಿತ್ಯ ನೂರಾರು ವಿಭಿನ್ನ ಪರಿಸರ, ಸಂಸ್ಕೃತಿಯ ಹಿನ್ನೆಲೆಯಿಂದ ಬರುವ ಮಕ್ಕಳನ್ನು ಕಾಣ್ತೇವೆ. ಎಷ್ಟೋ ಭಾರಿ ನಾವು ನಮ್ಮ ಶಾಲೆಯ ಮಕ್ಕಳಿಗಿಂತ ಹೆಚ್ಚಾಗಿ ಅವರವರ ತಂದೆ ತಾಯಿಗೇನೆ ಬುದ್ದಿ ಹೇಳಿದ್ದೆ ಹೆಚ್ಚು. ಯಾಕೆಂದರೆ ಮಕ್ಕಳು ಏನಾಗಬೇಕು ಅನ್ನೋದನ್ನ ಹಿರಿಯರಾದ ತಾವು ಬರೀ ಬಾಯಲ್ಲಿ ಹೇಳಿದ್ರಾಗಲಿಲ್ಲ. ಮನೆಯಲ್ಲಿ ಮಕ್ಕಳೆದರು ಆದರ್ಶವಾಗಿರದೆ ತಂದೆ-ತಾಯಿ ದಿನಕ್ಕೊಂದು ಜಗಳ, ತಂಟೆ,ತಕರಾರು ಮಾಡ್ತಿದ್ರೆ ಮಕ್ಕಳು ಯಾವ ಸಂಸ್ಕಾರ ಕಲಿತಾರೆ ಹೇಳಿ? ಮಕ್ಕಳ ಪಾಲಿನ ನಿಜವಾದ ಹಿರೋ ಹೀರೋಯಿನ್ ತಂದೆ-ತಾಯಿಯೇ ಅಲ್ವೆ.. ಮನೆ, ಊರು, ಸಮಾಜದ ಎಲ್ಲರೊಂದಿಗೆ ಉತ್ತಮ ಸಂಭಾಷೆ, ಉನ್ನತ ಸಂಸ್ಕಾರ ಹೊಂದಿರಬೇಕು. ಬೇರೆಯವರ ಬಗ್ಗೆ ಎಲ್ಲೆಂದರಲ್ಲಿ ಅನಗತ್ಯವಾಗಿ ಅಪ್ರಸ್ತುತ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳುವುದಕ್ಕಿಂತ ಮೌನವಾಗಿ ಆಲಿಸಿ ಅವಶ್ಯಕತೆ ಇದ್ರೆ, ಅದೂ ಕೇಳಿದರೆ ಮಾತ್ರ ಸೂಕ್ತ ಸುವಿಚಾರ ಹೇಳಬೇಕು. ಇಲ್ಲದಿದ್ದರೆ ಮೌನವಾಗಿರಬೇಕು. ನಿಂದಲ್ಲೇನೂ ನಡೆಯದಿದ್ದರೆ ‘ಬಡವಾ ನೀ ಮಡಗಿದಂಗಿರು’ ಅಂತಿರಬೇಕು ಅನ್ನುವ ಹಿರಿಯರ ಶ್ರೇಷ್ಠ ಮಾತನ್ನು ಅನುಸರಿಸಿ ಮೊನ್ನೆ ಮೊನ್ನೆಯವರೆಗೆ ನಮ್ಮೊಂದಿಗೆ ಬದುಕಿ ಇಂದು ಮರೆಯಾದವರು ಈ ಆದರ್ಶ ಅಪ್ಪ ಚಂದ್ರಶೇಖರ.
ವಿಧಿಯಾಟವೇ ಬೇರೆಯಾಗಿತ್ತು:
ಕಳೆದ ಒಂದು ವಾರದ ಹಿಂದೆ ಸಾಮಾನ್ಯ ಜ್ವರದ ರೂಪದಲ್ಲಿ ಸುಪ್ತವಾಗಿ ಬಂದೆರಗಿದ ಜವರಾಯ ಚಂದ್ರಶೇಖರರನ್ನು ಬಿಡಲೆ ಇಲ್ಲ. ಹೆಂಡತಿ ಮಕ್ಕಳ ದೈವದ ಮೊರೆ, ವೈದ್ಯರ ಸಕಲಾಸ್ತ್ರ ಯಾವುದಕ್ಕೂ ಮಣಿಯದೆ ಮರಣ ಮೃದಂಗ ಭಾರಿಸಿ ಮರಳಿ ಬಾರದೂರಿಗೆ ಹೊತ್ತೊಯ್ದೇ ಬಿಟ್ಟಿದೆ.
ಈಗ ಉಳಿದಿರುವುದೊಂದೆ ಚಂದ್ರಶೇಖರ ನಾಯಕರ ಆದರ್ಶ ಶ್ರಮ ಜೀವನ. ಹೆತ್ತವರು ದುಶ್ಚಟಗಳಿಂದ ದೂರವಿದ್ದು ತಮ್ಮ ಮಕ್ಕಳಿಗೆ ಆದರ್ಶವಾಗಿದ್ದರೆ ಅದೇ ಮಕ್ಕಳು ನಾಡಿನ ಆಸ್ತಿಯಾಗಿವರೆಂಬ ನಿದರ್ಶನ.
ಗೋಪಾಲ ಭಾಶಿ.
ಶಿಕ್ಷಕರು,
ಸಾಯಿನಗರ ಸಿದ್ದಾಪುರ ಉ.ಕ.
8277742013
