ಆದ್ಯೋತ್ ಸುದ್ದಿನಿಧಿ;
ಸಿದ್ದಾಪುರ ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿ ಆವಾರದಲ್ಲಿ ರಾಷ್ಟ್ರ ನಾಯಕ ದಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮತ್ತು ಚೇತನಾ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ,ಜೀವನದಲ್ಲಿ ನಾವು ಇಬ್ಬರು ವ್ಯಕ್ತಿಗಳನ್ನು ನೋಡುತ್ತೇವೆ. ಒಬ್ಬರು ಸತ್ತರೂ ಬದುಕಿದಂತಿರುತ್ತಾರೆ ಇನ್ನೊಬ್ಬರು ಬದುಕಿದ್ದರೂ ಸತ್ತಂತಿರುತ್ತಾರೆ. ರಾಮಕೃಷ್ಣ ಹೆಗಡೆಯವರು ಮೊದಲ ಪಂಕ್ತಿಯಲ್ಲಿ ಬರುತ್ತಾರೆ ಅವರು ನಮ್ಮ ನಡುವೆ ಇಲ್ಲದಿದ್ದರೂ ತಮ್ಮ ಜನಪರ ಕಾರ್ಯಕ್ರಮದಿಂದ ನಮ್ಮ ನಡುವೆ ಇದ್ದಾರೆ.ಹೆಣ್ಣು ಮಕ್ಕಳಿಗೆ ೬ ತಿಂಗಳು ಹೆರಿಗೆ ಭತ್ಯೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮವನ್ನು ಅವರು ನೀಡಿದ್ದಾರೆ.ಅಧಿಕಾರ ಇರಲಿ ಇಲ್ಲದೆ ಇರಲಿ ಅವರು ಯಾವಾಗಲೂ ಒಂದೇ ರೀತಿ ಇರುತ್ತಿದ್ದರು. ಇಂದು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಇಂದು ಮೌಲ್ಯ ಕಳೆದು ಹೋಗಿದ್ದು ರಾಜಕಾರಣ ಮಾತ್ರ ಇದೆ . ಹೆಗಡೆಯವರು ಅನೇಕರನ್ನು ಬೆಳೆಸಿದ್ದಾರೆ. ಮುಖ್ಯಮಂತ್ರಿ ಆಗಿದ್ದರೂ ಜನರ ಬಗ್ಗೆ ಇದ್ದ ಅವರ ಕಳಕಳಿ ಮೆಚ್ಚಲೇಬೇಕು. ಜಾತಿ ಮತವನ್ನು ನೋಡದ ಮಾನವೀಯತೆಯ ಮೌಲ್ಯವನ್ನು ಉಳಿಸಿಕೊಂಡ ರಾಜಕಾರಣಿಯಾಗಿದ್ದರು. ಈವರೆಗಿನ ಮುಖ್ಯಮಂತ್ರಿಗಳಲ್ಲಿ ಅವರ ಆದರ್ಶ ಮಾರ್ಗದರ್ಶನ,ಶಿಸ್ತು ಬದ್ದ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿ,ರಾಮಕೃಷ್ಣ ಹೆಗಡೆಯವರು ಒಬ್ಬ ಧೀಮಂತ ನಾಯಕರಾಗಿದ್ದರು. ರಾಷ್ಟ್ರಕಂಡ ಪ್ರಾಮಾಣಿಕ ನಿಷ್ಠಾವಂತ ನಾಯಕರು.ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಿದಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಬಹುದು . ಪ್ರತಿಯೊಬ್ಬ ಮತದಾರರು ಅರಿತು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ರಾಮಕೃಷ್ಣ ಹೆಗಡೆಯವರು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವನ್ನು ಇಟ್ಟವರು. ಕೇವಲ ಒಂದು ಫೋನ್ ಕದ್ದಾಲಿಕೆ ಆರೋಪಕ್ಕೆ ರಾಜೀನಾಮೆ ನೀಡಿದರು. ಆದರೆ ಇಂದಿನ ರಾಜಕಾರಣಿಗಳು ಭ್ರಷ್ಟಾಚಾರ ಮಾಡಿದರು ರಾಜೀನಾಮೆ ಕೊಡುವ ಮಾತು ಆಡುವುದಿಲ್ಲ. ನೈತಿಕತೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದರು. ಯುವಕ ಯುವತಿಯರು ರಾಜಕಾರಣಕ್ಕೆ ಬರಬೇಕು. ರಾಜಕೀಯ ಒಳ್ಳೆಯ ಕ್ಷೇತ್ರ ಸಮಾಜ ಸೇವೆ ಮಾಡುವುದಕ್ಕೆ ಪ್ರಾಮಾಣಿಕತೆ ಬೇಕು. ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಜಾತಿ ರಾಜಕಾರಣ ಮಾಡಬಾರದು.ರಾಮಕೃಷ್ಣ ಹೆಗಡೆಯವರ ಆದರ್ಶ ಮಾರ್ಗದರ್ಶನವೇ ನಾನು ೯ ಬಾರಿ ಶಾಸಕನಾಗಿ
ಆಯ್ಕೆಯಾಗಲು ಕಾರಣವಾಗಿದೆ ಎಂದರು.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ,ಇಂದಿನ ರಾಜಕಾರಣಿಗಳಿಗೆ ರಾಮಕೃಷ್ಣ ಹೆಗಡೆಯವರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ರಾಮಕೃಷ್ಣ ಹೆಗಡೆಯವರು ಅನೇಕ ಪ್ರತಿಭೆಗಳನ್ನು ಬೆಳೆಸಿದ್ದಾರೆ. ಅವರೊಬ್ಬರು ದೂರದರ್ಶತ್ವದ ರಾಜಕಾರಣಿಯಾಗಿದ್ದರು ಅವರ ಚಿಂತನೆ ಕಳಕಳಿ ಇಂದಿನ ರಾಜಕಾರಣಿಗಳಿಗೆ ಅವಶ್ಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೆಗಡೆಯವರ ಅನುಯಾಯಿಗಳಾದ ಪಿ ಎಸ್ ಭಟ್ಟ ಉಪ್ಪೋಣಿ, ಜಿ ಎಂ ಹೆಗಡೆ ಮುಳಖಂಡ, ಗೋಪಾಲಕೃಷ ಹೆಗಡೆ ಮುರೇಗಾರ, ಸಿ ಕೆ ಅಶೋಕ ಮೈನಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಮೋದ ಹೆಗಡೆ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡಿದರು.
ಸಭೆಯಲ್ಲಿ ಸ್ಥಳೀಯ ಮುಖಂಡ ಕೆ ಜಿ ನಾಯ್ಕ ಹಣಜೀಬೈಲ್, ಶಿರಸಿ ಟಿ ಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶಿರಸಿ ಟಿ ಎಂ ಎಸ್ ಅಧ್ಯಕ್ಷ ಜಿ ಟಿ ಹೆಗಡೆ ತಟ್ಟಿಸರ, ಸ್ಥಳೀಯ ಟಿ ಎಂ ಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ, ಉತ್ತರ ಕನ್ನಡ ಸಹಕಾರಿ ಯೂನಿಯನ್ ಅಧ್ಯಕ್ಷ ವಿ ಎನ್ ಭಟ್ಟ ಅಳ್ಳಂಕಿ, ಕಾರವಾರ ಸಹಕಾರಿ ಇಲಾಖೆಯ ಉಪನಿಭಂಧಕ ಮಂಜುನಾಥ ಉಪಸ್ಥಿತರಿದ್ದರು.
