
ಆದ್ಯೋತ್ ಸುದ್ದಿನಿಧಿ:
ಹಿಂದಿನ ಸಂಚಿಕೆಯಲ್ಲಿ ಡಿಸ್ಲೆಕ್ಸಿಯಾ ಅಸಮರ್ಥತೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಪ್ರಾರಂಭದ ಹಂತದಲ್ಲಿ ಉಂಟಾಗಬಹುದಾದಂತಹ ತೊಂದರೆಗಳಿವು. ಅದರ ಜೊತೆಗೆ ಅದಕ್ಕೆ ಪೂರಕವಾಗಿಯೇ ಕಲಿಕಾ ಅಸಮರ್ಥತೆಯಾದ ಡಿಸ್ಗ್ರಾಫಿಯಾ (Disgraphia) ಬಗ್ಗೆ ಅರಿಯೋಣ. ನೋಡಲು, ತಿಳಿಯಲು ಎರಡು ಒಂದೇ ಅನಿಸಿದರೂ ಚಿಕ್ಕಪುಟ್ಟ ವ್ಯತ್ಯಾಸಗಳಿರುತ್ತವೆ. ಆ ಸೂಕ್ಷ್ಮ ವ್ಯತ್ಯಾಸಗಳೇ ಮುಂದೊಂದು ದಿನ ದೊಡ್ಡ ಪರಿಣಾಮವಾಗಿ ಮಾರ್ಪಾಡಾಗುತ್ತದೆ. ಯಾವುದೇ ಚಿಕ್ಕಪುಟ್ಟ ಸಂಗತಿಗಳನ್ನು ಪೋಷಕರು ಮಕ್ಕಳ ಬಾಲ್ಯಾವಸ್ಥೆಯಲ್ಲಿ ನಿರ್ಲಕ್ಷಿಸಬೇಡಿ.
ಡಿಸ್ಗ್ರಾಫಿಯಾ (Disgraphia)
ಮೊಟ್ಟ ಮೊದಲನೆಯದಾಗಿ ಈ ಕಲಿಕಾ ಅಸಮರ್ಥತೆಗಳು ಮೆದುಳಿನ, ಮೆದುಳಿನ ರಚನಾ ಕ್ರಮ, ಮೆದುಳಿನ ನರಗಳ ರಚನಾ ಕ್ರಮದಲ್ಲಿ ಉಂಟಾಗುವ ದೋಷದಿಂದ ಪರಿಣಮಿಸುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಂಡಿರಬೇಕು. ಡಿಸ್ಗ್ರಾಫಿಯಾ (Disgraphia) ಕೂಡ ಮೆದುಳಿನ ರಚನಾ ಕ್ರಮದಲ್ಲಿ ಉಂಟಾದ ದೋಷದಿಂದ ಪರಿಣಾಮ ಬೀರುತ್ತದೆ. ಡಿಸ್ಗ್ರಾಫಿಯಾ ಎಂದರೆ ಬರವಣಿಗೆಯ ಅಭಿವ್ಯಕ್ತಿಯನ್ನು ಹಾನಿಗೊಳಿಸುವ ವಿಶೇಷ ಕಲಿಕಾ ಅಸಮರ್ಥತೆ. ಇದರಲ್ಲಿ ಕೈಬರಹ, ಅಕ್ಷರಶು
ದ್ದಿ (spelling) ಮತ್ತು ಕಲ್ಪನೆಗಳನ್ನು ಸರಿಯಾಗಿ ಏರ್ಪಡಿಸುವಲ್ಲಿ ತೊಂದರೆ ಉಂಟಾಗುತ್ತದೆ. ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (APA, DSM-5) ಇದನ್ನು “Specific Learning Disorder with impairment in written expression” ಎಂಬ ವರ್ಗದಲ್ಲಿ ಸೇರಿಸಿದೆ. ಇದು ಮುಖ್ಯವಾಗಿ ಕಲಿಕೆ ಹಾಗೂ
ಬರವಣಿಗೆಯ ಕೌಶಲ್ಯಕ್ಕೆ ಪರಿಣಾಮ ಬೀರುತ್ತದೆ. ನರಜೈವಿಕ ಸಮಸ್ಯೆ, ಸಾಮಾನ್ಯ ಬುದ್ಧಿಮಟ್ಟ ಮತ್ತು ಉತ್ತಮ ಶಿಕ್ಷಣ ದೊರೆತರೂ ಬರವಣಿಗೆಯಲ್ಲಿ ಕಷ್ಟವನ್ನು ಪಡುತ್ತಾರೆ. ಇದು ಬಾಲ್ಯದಲ್ಲಿಯೂ ಹಾಗೂ ವಯಸ್ಕರಲ್ಲಿಯೂ ಗಮನಿಸಬಹುದು.
ಡಿಸ್ಗ್ರಾಫಿಯಾ (Disgraphia) ಮುಖ್ಯ ಲಕ್ಷಣಗಳು:
ಕೆಟ್ಟ ಕೈಬರಹವನ್ನು ಹೊಂದಿರುತ್ತಾರೆ, ಅಕ್ಷರಗಳಲ್ಲಿ ಅಸ್ಪಷ್ಟತೆ, ಅಂತರವಿರುತ್ತದೆ.
ಅಕ್ಷರ ಜೋಡನೆಯಲ್ಲಿ,ಪದಗಳಲ್ಲಿ,ದೋಷ, ಅಕ್ಷರಗಳನ್ನು ಬಿಡುವುದು, ತಪ್ಪಾಗಿ ಬರೆಯುವುದು,
ಮಂದಗತಿಯಲ್ಲಿ ಬರವಣಿಗೆ, ಹೆಚ್ಚು ಸಮಯ ತೆಗೆದುಕೊಳ್ಳುವುದು.
ವ್ಯಾಕರಣದಲ್ಲಿ ಮತ್ತು ವಾಕ್ಯ ರಚನೆಯಲ್ಲಿ ದೋಷ.
ಪ್ರಬಂಧ, ಕಥೆ, ಕವನಗಳನ್ನು ಬರೆಯುವಲ್ಲಿ ಸರಿಯಾಗಿ ವಾಕ್ಯರಚನೆ ಮಾಡಲಾಗುವುದಿಲ್ಲ. ವಾಕ್ಯ ಕಟ್ಟುವಲ್ಲಿ ವಿಫಲರಾಗುತ್ತಾರೆ.
ದೇಹದಲ್ಲಿ ಅಸಹಜ ನೋವು, ಕೈನೋವು, ಪೆನ್ ಹಿಡಿಯುವುದರಲ್ಲಿ ವಿಫಲ, ಬರಹವನ್ನು ತಪ್ಪಿಸುವ ಪ್ರಯತ್ನ.
ಡಿಸ್ಗ್ರಾಫಿಯಾ (Disgraphia) ಪ್ರಕಾರಗಳು:
ಡಿಸ್ಲೆಕ್ಸಿಕ್ ಡಿಸ್ಗ್ರಾಫಿಯಾ (Dyslexic Dysgraphia) – ಸ್ವತಃ ಬರೆಯುವಾಗ ಅಸ್ಪಷ್ಟ, ನಕಲಿಸುವಾಗ ಸ್ವಲ್ಪ ಉತ್ತಮವಾಗಿ ಬರೆಯುವುದು.
ಮೋಟಾರ್ ಡಿಸ್ಗ್ರಾಫಿಯಾ (Motor Dysgraphia) – ಸೂಕ್ಷ್ಮ ಚಲನಶಕ್ತಿ ಕೊರತೆ, ಮಂದಗತಿ, ಅಸ್ಪಷ್ಟ ಬರಹ.
ಸ್ಪೇಷಿಯಲ್ ಡಿಸ್ಗ್ರಾಫಿಯಾ (Spatial Dysgraphia) – ಅಕ್ಷರಗಳಲ್ಲಿ ಅಂತರ, ಅಳತೆ ಹಾಗೂ ಸರಿಹೊಂದಿಸುವಿಕೆಯಲ್ಲಿ ತೊಂದರೆ.
ಡಿಸ್ಗ್ರಾಫಿಯಾ (Disgraphia) ಕಾರಣಗಳು ಮತ್ತು ಅಪಾಯಕಾರಿ ಅಂಶಗಳು:
ನರಜೈವಿಕ ಮೂಲ (Neurological basis): ಮೆದುಳಿನ ಚಲನ, ಮೆದುಳಿನ ರಚನೆ ಹಾಗೂ ಭಾಷಾ ಪ್ರದೇಶಗಳಲ್ಲಿ ಅಡಚಣೆ.
ಕುಟುಂಬದಲ್ಲಿ ಕಲಿಕಾ ಅಸಮರ್ಥತೆ (Genetic predisposition): ಕುಟುಂಬದಲ್ಲಿ ಅನಕ್ಷರಸ್ಥತೆ ಅಥವಾ ತೊಂದರೆಯಿದ್ದರೆ ಅದು ಮಕ್ಕಳಲ್ಲಿ ಮರುಕಳಿಸಬಹುದು.
ಸಹವ್ಯಾಧಿಗಳು (Co-occurrence): ADHD, ಡಿಸ್ಲೆಕ್ಸಿಯಾ, developmental coordination disorder ಜೊತೆ ಕಾಣಿಸಿಕೊಳ್ಳುವುದು.
ಪರಿಸರ (Environmental influences): ಆರಂಭಿಕ ಬರಹಾಭ್ಯಾಸ ಕೊರತೆಯಿಂದ ತೊಂದರೆ ಹೆಚ್ಚಾಗಬಹುದು, ಆದರೆ ಇದು ಮೂಲ ಕಾರಣವಲ್ಲ.
ಡಿಸ್ಗ್ರಾಫಿಯಾ (Disgraphia) ನಿರ್ವಹಣೆ ಮತ್ತು ಚಿಕಿತ್ಸೆ:
ನರ-ಮನೋವೈಜ್ಞಾನಿಕ ಪರೀಕ್ಷೆಗಳು (Neuropsychological Assessments): ಸ್ಮರಣೆ, ನೆನಪು, ಚಲನೆ, ಭಾಷಾ ಸಾಮರ್ಥ್ಯಗಳನ್ನು ಪರೀಕ್ಷಿಸುವುದು.
ಮಾನದಂಡಿತ ಬರವಣಿಗೆ ಪರೀಕ್ಷೆಗಳು (Standardized Writing Tests): ಬರವಣಿಗೆ, ಅಕ್ಷರಾಭ್ಯಾಸ, ಅಕ್ಷರಗಳನ್ನು ತಿದ್ದಿ ಬರೆಯುವುದು, ವಾಕ್ಯರಚನೆಗೆ ಸಹಾಯ.
ಶಾಲಾ ವಾತಾವರಣದ ಅವಲೋಕನ (Observation in School Settings): ಶಿಕ್ಷಕರ ವರದಿ ಮೂಲಕ ಬೆಳವಣಿಗೆಯ ಹಂತಗಳಲ್ಲಿ ಗಮನ ಹರಿಸುವುದು.
ಶೈಕ್ಷಣಿಕ ಹಸ್ತಕ್ಷೇಪ: ಹೊಸ ವಿಧಾನಗಳನ್ನು ಕಲಿಸುವುದು.
ಬಹುಇಂದ್ರಿಯ ಬೋಧನಾ ವಿಧಾನಗಳು: ಕಣ್ಣು, ಕಿವಿ, ಸ್ಪರ್ಶದ ಮೂಲಕ ಕಲಿಸುವುದು.
ಅಕ್ಷರರಚನೆ ಮತ್ತು ಅಕ್ಷರಾಭ್ಯಾಸ: ವ್ಯಾಕರಣ ದೋಷ ಸರಿಪಡಿಸಲು ಸಹಾಯ.
ಕಂಪ್ಯೂಟರ್, ಕೀಬೋರ್ಡ್ ಬಳಕೆ: ಹೊಸ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿಸುವುದು.

ಡಿಸ್ಗ್ರಾಫಿಯಾ (Disgraphia) ಥೆರಪಿ ಕ್ರಮಗಳು:
Occupational therapy: ಸೂಕ್ಷ್ಮ ಚಲನಾಭ್ಯಾಸ, ಬರವಣಿಗೆಯಲ್ಲಿ ಕೈ ಹಿಡಿತ ಸರಿಪಡಿಸುವುದು.
Speech-language therapy: ಭಾಷಾ ತೊಂದರೆ ಇದ್ದಲ್ಲಿ ಜೋರಾಗಿ ಓದುವುದು, ಕಥೆ, ಕವನಗಳ ಮೂಲಕ ಹೇಳುವುದು.
ಮನೋವೈಜ್ಞಾನಿಕ ಸಲಹೆ: ಆತ್ಮವಿಶ್ವಾಸ ವೃದ್ಧಿಸುವುದು, ಮನೋಸಮಾಲೋಚಕರ ಬಳಿ ಸಲಹೆ ಪಡೆದು ಶೈಕ್ಷಣಿಕ ಮತ್ತು ಜೀವನದ ಗುರಿ ಸಾಧಿಸಲು ಸಹಾಯ.
ಪೋಷಕರು ಮತ್ತು ಶಿಕ್ಷಕರು: ಹೆಚ್ಚುವರಿ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದು, ಬರಹದ ಬದಲು ಮೌಖಿಕ ಉತ್ತರವನ್ನು ಸ್ವೀಕರಿಸುವುದು, ನೋಟ್ಸ್ ಬರೆಯಲು ಸಹಾಯ ಮಾಡುವುದು.
ಡಿಸ್ಗ್ರಾಫಿಯಾ ಒಂದು ಜಟಿಲ ಹಾಗೂ ಕಡೆಗಣಿಸಲ್ಪಡುವ ಕಲಿಕಾ ಅಸಮರ್ಥತೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಈ ತರಹದ ಸಮಸ್ಯೆ ಹೊಂದಿ ಮುಂದೆ ಜೀವನದಲ್ಲಿ ಕಷ್ಟ ಪಡುವುದನ್ನು ತಪ್ಪಿಸಲು, ಮೊದಲ ಹಂತದಲ್ಲಿಯೇ ಸರಿಪಡಿಸಿ ಮಕ್ಕಳ ಆತ್ಮವಿಶ್ವಾಸವನ್ನು ವೃದ್ಧಿಸಿ ಜೀವನದ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಲು ಪೋಷಕರು ಶ್ರಮಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಬೇಡ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಕಲಿಕಾ ಅಸಮರ್ಥತೆಯ ಬಗ್ಗೆ ತಿಳಿಯೋಣ.
ಧನುಷ್ ಭಟ್ ಹೊಸೂರು
9945266006
