ಸಿದ್ದಾಪುರದಲ್ಲಿ ರೈತಸಂಘ-ಹಸಿರುಸೇನೆ ರಾಜ್ಯಾಧ್ಯಕ್ಷರ ಸುದ್ದಿಗೋಷ್ಠಿ

ಬಿಜೆಪಿಕಾಂಗ್ರೆಸ್ ಪಕ್ಷಗಳು ರೈತರಿಗೆ ವಿಷ ಹಾಕುವ ಕೆಲಸ ಮಾಡುತ್ತಿದೆಕೋಡಿಹಳ್ಳಿ ಚಂದ್ರಶೇಖರ
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ರೈತಸಂಘ-ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರರವರು ಸುದ್ದಿಗೋಷ್ಠಿ ನಡೆಸಿದರು.

ಅಧಿಕಾರಕ್ಕೆ ಬರುವ ಮೊದಲು ರೈತರ ಪರವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಈಗ ತುಟಿ ಬಿಚ್ಚದೆ ಮೌನವಾಗಿದ್ದಾರೆ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ರೈತರಿಗೆ ವಿಷ ಹಾಕುವ ಕೆಲಸ ಮಾಡುತ್ತಿವೆ.ಕೃಷಿಭೂಮಿಯನ್ನು ಉದ್ದಿಮೆ ನಡೆಸಲು ಸರಕಾರ ವಶಪಡಿಸಿಕೊಳ್ಳುವ ಕಾಯ್ದೆಯನ್ನು ೨೦೧೮ರಲ್ಲಿ ಕುಮಾರಸ್ವಾಮಿ ಜಾರಿಗೆ ತಂದರು. ಮುಂದೆ ಯಡಿಯೂರಪ್ಪನವರು ಯಾರೂ ಬೇಕಾದರೂ ಭೂಮಿಯನ್ನು ಖರೀದಿ ಮಾಡಬಹುದು ಎಂಬ ಕಾಯ್ದೆ ಜಾರಿಗೆ ತಂದರು ಆಗ ವಿರೋದಪಕ್ಷದಲ್ಲಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದರೆ ಈ ಎರಡೂ ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದ್ದರು ಆದರೆ ಅಧಿಕಾರಕ್ಕೆ ಬಂದನಂತರ ಅದೆಲ್ಲವನ್ನು ಮರೆತು ಕಾಯ್ದೆಯನ್ನೂ ನೀಟಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ
ರೈತರ ಬೆಳೆಗೆ ವೈಜ್ಞಾನಿಕ ಬೆಂಬಲಬೆಲೆ ನೀಡಬೇಕು ಇದು ಶಾಸನಬದ್ಧವಾಗಬೇಕು ಎಂದು ಡಾ.ಸ್ವಾಮಿನಾಥನ್ ೨೫ ವರ್ಷದ ಹಿಂದೆಯೆ ವರದಿ ನೀಡಿದ್ದರು ಆದರೆ ಇಲ್ಲಿಯವರೆಗೆ ಯಾವುದೇ ಸರಕಾರ ಇದನ್ನು ಜಾರಿಗೆ ತಂದಿಲ್ಲ ರಾಹುಲಗಾಂಧಿಯವರು ದೆಹಲಿಯ ರೈತರ ಪ್ರತಿಭಟನೆಯಲ್ಲಿ ಇದನ್ನು ಜಾರಿಗೆ ತರಬೇಕು ಎನ್ನುತ್ತಾರೆ ಆದರೆ ಅವರದೇ ಪಕ್ಷ ಅಧಿಕಾರ ಇರುವ ರಾಜ್ಯಗಳಲ್ಲಿ ಇದನ್ನು ಜಾರಿಗೆ ತರುತ್ತಿಲ್ಲ ಹೀಗಾಗಿ ಈ ಪಕ್ಷಗಳು ರೈತರನ್ನುಮೂರ್ಖರನ್ನಾಗಿಸಲು ಹೊರಟಿದೆ ರೈತರು ಎಚ್ಚೆತ್ತುಕೊಂಡು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂದು ರೈತಸಂಘ-ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಉತ್ತರಕನ್ನಡ ಜಿಲ್ಲೆಯ ರೈತರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ಪ್ರವಾಸ ಮಾಡುತ್ತಿದ್ದೆನೆ ಇಲ್ಲಿಯ ಅಡಿಕೆ ಬೆಳೆಗೆ ಕೊಳೆರೋಗ ಹಾಗೂ ಎಲೆಚುಕ್ಕಿರೋಗದಿಂದ ತೊಂದರೆಯಾಗಿದೆ. ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳಿಂದ ರೈತರ ಮೇಲೆ ದೌರ್ಜನ್ಯವಾಗುತ್ತಿದೆ. ಶರಾವತಿ ಹಿನ್ನಿರಿನಿಂದ ಬೇರೆ ಕಡೆಗೆ ನೀರು ಒಯ್ಯುಲು ಸರಕಾರ ತಯಾರಾಗಿದೆ ಇದರಿಂದ ರೈತರಿಗೆ,ಪರಿಸರಕ್ಕೆ ಏನು ಹಾನಿಯಾಗುತ್ತದೆ ಇವೆಲ್ಲವನ್ನು ಅಧ್ಯಯನ ಮಾಡುತ್ತಿದ್ದೆವೆ ಮುಖ್ಯಮಂತ್ರಿಗಳ ಭೇಟಿಯ ಸಮಯದಲ್ಲಿ ಈ ವರದಿಯನ್ನು ನೀಡಿ ಸರಕಾರದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೆವೆ ಎಂದು ಹೇಳಿದರು.

ಮೋದಿಯವರ ಫಸಲ್ ಬಿಮಾ ಎಂಬ ಯೋಜನೆ ಅದಾನಿ ಕಂಪನಿಗೆ ಸೇರಿದ್ದಾಗಿದೆ. ಮೋದಿಯವರು ರೈತರಿಗೆ ಅನುಕೂಲ ಮಾಡಿಕೊಡುವ ಬದಲು ಕಂಪನಿಗಳಿಗೆ ವರದಾನ ನೀಡುತ್ತಿದ್ದಾರೆ. ರೈತರು ಜಾಗೃತರಾಗಿ ಅಧಿಕಾರಿಗಳನ್ನು ಭೂಮಿಗೆ ಕರೆಸಿ ವಾಸ್ತವ ಸ್ಥಿತಿ ಪರಿಚಯಿಸಬೇಕು. ಜನರೇ ಜಾಗೃತರಾಗುವ ಅನಿವಾರ್ಯತೆ ಇದೆ. ಮಳೆಮಾಪನದ ಗೊಂದಲವನ್ನು ಅಧಿಕಾರಿಗಳು ಬಗೆಹರಿಸಬೇಕು. ಇಲ್ಲದಿದ್ದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ಜಿಲ್ಲೆಯ ರೈತರಿಗೆ ಬೆಳೆವಿಮೆ ಸರಿಯಾಗಿ ಸಿಗುತ್ತಿಲ್ಲ ಎಂದು ಶಿರಸಿ-ಹಾವೇರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡು-ಮೂರು ಸಭೆ ನಡೆಸಿ ಆಗ್ರಹಿಸಿದ ನಂತರ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದು, ನಂತರ ವಿಮೆ ಜಮಾ ಆಗಿದೆ. ಸಿದ್ದಾಪುರ ತಾಲೂಕಿನಲ್ಲಿ ರೈತ ಸಂಘದ ಘಟಕ ರಚಿಸಿ ಮುಂದಿನ ದಿನಗಳಲ್ಲಿ ರೈತರ ಪರವಾಗಿ ಹೋರಾಟ ನಡೆಸುತ್ತೇವೆ ಎಂದರು
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ, ರಾಜ್ಯ ಸಮಿತಿ ಸದಸ್ಯ ಇಂದೂಧರ ಪಾಟೀಲ್ ಉಪಸ್ಥಿತರಿದ್ದರು.
————

About the author

Adyot

Leave a Comment