ಆದ್ಯೋತ್ ಸುದ್ದಿನಿಧಿ
ಮಲೆನಾಡಿನ ವೈಶಿಷ್ಟ್ಯಪೂರ್ಣ ಮಾಳಪಕ್ಷ (ಪಿತೃಪಕ್ಷ)ಹಬ್ಬ
ನಮ್ಮ ದೇಶ ಹಳ್ಳಿಗಳ ನಾಡು, ಬಹು ಸಂಸ್ಕ್ರತಿಯ ಬೀಡು. ಗುರುಹಿರಿಯರನ್ನು ಗೌರವಿಸುವ, ಆಸರೆ ನೀಡುವ, ಜತೆಗೆ ಬಹುಸಂಸ್ಕೃತಿಯನ್ನು ಆರಾಧಿಸುವ ಸಾಂಸ್ಕೃತಿಕ ಮೌಲ್ಯದ ನೆಲೆವೀಡು. ನಮ್ಮ ಹಬ್ಬ ಹರಿದಿನಗಳ ಆಚರಣೆಗಳು ನಮ್ಮ ಬಂಧುತ್ವ ಬೆಸೆಯುವ ಸೇತುವೆಗಳು. ಈ ನಿಟ್ಟಿನಲ್ಲಿ ನಮ್ಮ ಮಲೆನಾಡಿನ ಗ್ರಾಮೀಣ ಪ್ರದೇಶದ ನೆಲಮೂಲ ಸಂಸ್ಕೃತಿಯ ಹಬ್ಬ. ಮೃತ ಹಿರಿಯರ ಸ್ಮರಣೆಯ ಹಿರೇರ ಹಬ್ಬ, ಪಿತೃಪಕ್ಷ ಅಥವಾ ಮಾಳಪಕ್ಷ ಹಬ್ಬ.

ಪಿತೃಪಕ್ಷ ವಿಶೇಷತೆ
ಸಾಮಾನ್ಯವಾಗಿ ಮೇಲ್ವರ್ಗದವರು, ಸಸ್ಯಾಹಾರಿಗಳು,ತಮ್ಮ ಕುಟುಂಬದ ದಿವಂಗತರನ್ನು ವೈದಿಕ ಪರಂಪರೆಯಲ್ಲಿ ಕಾಶಿ,ಗೋಕರ್ಣ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಅಥವಾ ಅವರವರ ಮನೆಯಲ್ಲಿ ಕುಟುಂಬದ ಪುರೋಹಿತರ ನೇತೃತ್ವದಲ್ಲಿ ಪಿಂಡ ಪ್ರದಾನ ಮಾಡುವ ಮೂಲಕ ಆಚರಿಲಾಗುತ್ತದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಹಿಂದುಳಿದ ಜನಾಂಗದವರು,ದಲಿತರು ಹಾಗೂ ತಳ ಸಮುದಾಯದ ಶ್ರಮಿಕ ವರ್ಗದವರು ವರ್ಷಕ್ಕೊಮ್ಮೆ ತಮ್ಮ ದಿವಂಗತ ಹಿರಿಯರ ಆತ್ಮಗಳನ್ನೇ (ನಂಬಿಕೆ) ಮನೆಗೆ ಕರೆಸಿ ಅವರಿಗಿಷ್ಟವಾದ ಮಾಂಸಹಾರ, ಸಸ್ಯಾಹಾರಗಳ ಮೃಷ್ಟಾನ್ನ ಭೋಜನ ನೈವೇದ್ಯ ಮಾಡಿ ಬಂಧು ಮಿತ್ರರನ್ನು ಆಹ್ವಾನಿಸಿ ಔತಣಕೂಟ ಏರ್ಪಡಿಸಿ ಸಂತೋಷ ಪಟ್ಟು ಆಚರಿಸುವುದನ್ನು ಕಾಣುತ್ತೇವೆ.
‘ಮಾಳಪಕ್ಷ’ ಅಂದ್ರೆ ಇದು ಭಾದ್ರಪದ ಹುಣ್ಣಿಮೆಯ ಶುಕ್ಲ ಪಕ್ಷ ಕಳೆದು ಮಹಾ ನವಮಿ ಗಿಂತ ಮೊದಲಿನ ಕೃಷ್ಣ ಪಕ್ಷದ ಸಮಯದಲ್ಲಿ ಬರುವುದರಿಂದ ಇದನ್ನು ಮಹಾ ನವಮಿ ಪಕ್ಷವೆಂಬ ಪ್ರತೀತಿ. ಇದು ಜನರ ಆಡುಭಾಷೆಯಲ್ಲಿ ಮಾಳಪಕ್ಷ ಹಬ್ಬ ವಾಗಿರಬೇಕೆಂದು ಹಲವರ ಅನಿಸಿಕೆ. ಸಂಪ್ರದಾಯದ ಪ್ರಕಾರ ದಿವಂಗತ ಪಿತೃಗಳ ಆತ್ಮವನ್ನು ಅವರವರ ನಂಬಿಕೆಯಂತೆ ಈ ಪಕ್ಷದಲ್ಲಿ ಒಂದು ದಿನ ಮನೆಗೆ ಆಹ್ವಾ
ನಿಸಿ ಆತಿಥ್ಯವನ್ನು ನೀಡುವುದು ವಾಡಿಕೆ. ಈ ಮಾಸದಲ್ಲಿ ಕುಟುಂಬದಲ್ಲಿ ಮರಣ ಹೊಂದಿದ ಹಿಂದಿನ ಎಲ್ಲಾ ಹಿರಿಯರಿಗೂ ಒಂದೇ ದಿನ ಆಹ್ವಾನಿಸಿ, ಆರಾಧಿಸಿ,ಅವರಿಷ್ಟವಾದ ಭಕ್ಷ್ಯಭೋಜ್ಯಗಳ ಊಟನೀಡಿ ಕಳಿಸುವ ಸಂಪ್ರದಾಯದ ಆಚರಣೆ ಇದರ ವಿಶೇಷ. ಇದಕ್ಕಾಗಿ ಈ ಪಕ್ಷವನ್ನು ಸರ್ವ ಪಿತೃ ಪಕ್ಷ ಎಂದೂ ಹೇಳಲಾಗುತ್ತದೆ.

ನಮ್ಮ ನಾಡಿನ ಪ್ರತಿ ಹಬ್ಬಗಳಿಗೂ ಅದರದೇ ಆದ ವಿಶೇಷತೆ ಇರುತ್ತದೆ. ಹಾಗೆಯೇ ಈ ಮಾಳಪಕ್ಷ ಕೂಡ. ಇದರ ಆಚರಣೆ ಊರಿಂದೂರಿಗೆ ಭಿನ್ನತೆ ಎನಿಸಿದರೂ ಬಹುತೇಕ ಸಾಮ್ಯತೆಗಳೇ ಹೆಚ್ಚು.
ಹಬ್ಬದ ಸಡಗರ: ಹಬ್ಬದ ದಿನದಂದು ಸಂಜೆ ಹೊತ್ತು ಮುಳುಗಿದ ಮೇಲೆ ಮನೆಯ ಹೆಂಗಳೆಯರು ಮನೆಯ ಮುಂದೆ ಅಂಗಳದಲ್ಲಿ ಊಟಕ್ಕೆ ಕುಳಿತುಕೊಳ್ಳುವ ಮಣೆಯಿಟ್ಟು ಅದರ ಮೇಲೆ ಎರಡು ಕುಡಿ ಬಾಳೆಯೆಲೆಯಿಡುತ್ತಾರೆ. ನಂತರ ಒಂದು ತಂಬಿಗೆ ನೀರನ್ನು ಎಲೆಯ ಮೇಲೆ ಹಾಕಿ ಹಿರಿಯರ ಕಾಲು ತೊಳೆಯುವ ಶಾಸ್ತ್ರ ಮಾಡಿ ಮಣ್ಣಿನ ಹಣತೆಗೆ ಎಣ್ಣೆ ತುಂಬಿ ಎರಡು ಪ್ರತ್ಯೇಕ ಬತ್ತಿ ಇಟ್ಟು ದೀಪ ಹಚ್ಚಿ ಎರಡು ಹೂಗಳನ್ನ ಅಕ್ಕ ಪಕ್ಕದಲ್ಲಿಟ್ಟು ಉದುಬತ್ತಿ ಬೆಳಗಿ ದೀಪ ಆರದಂತೆ ನಿಧಾನವಾಗಿ ಮನೆಯೊಳಗೆ ಕರೆ ತರುವಾಗ ಮಕ್ಕಳಿಗೆಲ್ಲ “ಸರೀ ಪುಟ್ಟಾ ಸರೀರಿ ಮಕ್ಕಳೇ, ಹಿರೇರು ಬಂದ್ರು, ದಾರಿ ಬಿಡಿ” ಎನ್ನುತ್ತ ನಡಮನೆಗೆ ತಂದು ಚಾಪೆಹಾಸಿ ಮಣೆ ಸಮೇತವಾಗಿ ಬಾಳೆಎಲೆ ಇಡುತ್ತಾರೆ. ನಂತರ ಅದರ ಮುಂದೆ ಒಂದು ಲೋಟ ಬಿಸಿ ಬಿಸಿ ಚಹಾ ಚಕ್ಕುಲಿ, ಅಡಿಕೆ ಎಲೆ ಸುಣ್ಣ ಇಟ್ಟು ಮನೆ ಹಿರಿಯರು ಮನೆಗೆ ಬಂದ ಕೂಡಲೇ ಮಾಡುವ ಎಲ್ಲಾ ಅತಿಥ್ಯೋಪಚಾರ ಮಾಡುವುದು ಮೊದಲ ಸಂಪ್ರದಾಯ. ಅತ್ತ ಮದುವೆಯಾಗಿ ಹೋದ ಹೆಂಗಳೆಯರು ತವರು ಮನೆಗೆ ಬಂದು ತಮ್ಮ ಅಜ್ಜ ಮುತ್ತಜ್ಜ, ಮುತ್ತಜ್ಜಿಯರ ಹಳೆ ನೆನಪುಗಳನ್ನು ನೆನಪಿಸುತ್ತ “ಅತ್ತಿಗೇರು ಮಾವಾರಿಗೆ ಹಳ್ಳಿ ಕೋಳಿಮೊಟ್ಟೆ ಅಂದ್ರೆ ತುಂಬಾ ಇಷ್ಟ ಆಗಿತ್ತು. ಅದ್ಕೆ ನಮ್ಮನೆ ಹೆಂಟೆ ಹತ್ತು ಮೊಟ್ಟೆ ಇಟ್ಟಿತ್ತ ಕಣ್ರಿ . ಅದರ್ರಾಗ ಐದು ಬೇಯ್ಸ್ಗಿಂದು ತಂದಿನಿ. ಅದನ್ನು ಎಡಿಗೆ ಹಾಕಾಕ ಮರೆಬ್ಯಾಡ್ರಿ ತಿಳಿತಾ..” ಹೂ ಕಣ್ರಿ ಸುಸೀಲತ್ತಿಗೆ, ನಾನೂ ನಮ್ಮನ್ಯಾಗ ಅವ್ರಿಗೇಳಿ ಪ್ಯಾಟಿಂದ ಒಣಮಿನ ತರ್ಸಿದ್ದೆ. ನಮ್ಮನೆ ಅಪ್ಪಿ, ಪಕ್ಕದಮನೆ ನಮ್ ದೊಡ್ ಬಾವರ ಮಗಳು ರಕ್ಷಾ ಮೂರು ಜನಾ ಸೇರಿ ಹೊತ್ತಾರೆನೆ ಹೊಸ್ಕರೆ ಕಜ್ಜಾಯ, ಒಣಬಾಂಗ್ಡೆ ಗಟ್ಟಿ ಖಾರ ಮಾಡಿದ್ದೀವಿ. ಅದ್ನೆ ಒಂದ ಟಿಪನ್ ಬಾಸ್ಕೆಟ್ ತುಂಬ್ಕಿಂದು ತಂದಿನ ಕಣ್ರಿ.ನಮ್ಮ ಅತ್ತೇರಿಗೆ ಒಣಬಾಂಗ್ಡೆ ಕಾರ ತಂಬ್ಳಿ ಸಾರು ಇಷ್ಟ್ ಇದ್ಬಿಟ್ರೆ ಏನು ಬ್ಯಾಡಾಗಿತ್ತು ಕಣ್ರಿ, ಪಾಪ! ಮೊಮ್ಮಕ್ಕಳು ಕಾಣದ್ರೊಳ್ಗೆ ಹೋಗಿಬಿಟ್ರು. ದೇವ್ರಂತಿದ್ರು. ಒಂದಿನಾನೂ ನನ್ ಬೈದಿದ್ದೆ ಇಲ್ಲಾಗಿತ್ತು ತುಂಬಾ ಒಳ್ಳೆವರಾಗಿದ್ರಲ್ಲರಿ. ಇಷ್ಟ ಬ್ಯಾಗ ಹೋಗಬಾರದಿತ್ತು.” ಎನ್ನುವಷ್ಟರಲ್ಲಿ ತಂತಾನೆ ನಾಲ್ಕಾರು ಕಣ್ರೀರು ಕಳಚಿ ಬೀಳುವವು. ಸೆರಗಿನಿಂದ ಒರ್ಸಿಕೊಂಡು ಮುಂದಿನ ಕೆಲಸಕ್ಕೆ ಹೊಗ್ತಿದ್ರು. ಇಂತಾ ಮಾತುಗಳು ಶ್ರದ್ದೆಗಳು ಸರ್ವೇಸಾಮಾನ್ಯ. ಹೀಗೆ ಊರಿನ ಎಲ್ರೂ ಅವರವರ ಅಡುಗೆ ಮನೆಯಲ್ಲಿ ವೈವಿಧ್ಯಮಯ ಅಡುಗೆ ಮಾಡುವುದರಲ್ಲಿ ಮುಳುಗಿರುತ್ತಾರೆ.ಗಂಡಸರಿಗೆ ಹೊರಗಿನ ಕೆಲಸ ಹೆಚ್ಚಿದ್ರೂ ಈ ಹಬ್ಬದಲ್ಲಿ ಮಹಿಳೆಯರಿಗೆ ಹೆಚ್ಚಿನ ಕೈಜೋಡಿಸುತ್ತಾರೆ. ಅಡುಗೆ ಮನೆಯಲ್ಲಾ ಘಮಘಮಾ ಪರಿಮಳ!
ಮನೆಯ ಹಿರಿಯಜ್ಜಿ ಮೊಮ್ಮಕ್ಳನ್ ಕರದು ” ಮಗಾ ಮನೆಗೆ ನೆಂಟ್ರು-ಬೀಗರು ಬರೋ ಹೊತ್ತಾತು. ಕಾಲ ತೊಳೆಯಾಕ ಒಂದು ಬಕೆಟ್ ನೀರು ತಂಬಿಗಿ ತಕಹೋಗಿ ಮುಂದಿನ ಅಂಗಳ್ದಾಗಿಡು ತಿಳಿತಾ.ಹಂಗೆ ಬಂದರಿಗೆ ಕೈ ವರ್ಸಿಗಿನಾಕ ಒಂದ ಟವಲ್, ಕುಡಿಯಾಕ ನೀರು ತಂದಿಡು ಮಗಾ. ಜಾಣಲ್ವಾ ನೀನು.” ಎಂದು ಹುರಿದುಂಬಿಸುವುದರೊಳಗೆ ಅಂದಿನ ಶಾಲೆಗೆ ಚಕ್ಕರ್ ಹೊಡೆದ ಮೊಮ್ಮಕ್ಕಳು ರನಿಂಗ್ ರೇಸಿಗೆ ಬಿಟ್ ವರಂತೆ ಕ್ಷಣಾರ್ಧದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಯೇ ಬಿಟ್ಟಿರ್ತಾರೆ.
*ವಿಭಿನ್ನ ಅಲಂಕಾರ.ನೈವೇದ್ಯ*
ಅತ್ತ ಕತ್ತಲಾಗುತ್ತಲೇ ಮನೆಯ ಹೆಣ್ಣು ಮಕ್ಕಳು, ಅತ್ತೆ,ಸೊಸೆ,ಅತ್ತಿಗೆ ಸೇರಿ ಇಡುಕಲು ಅಂದರೆ ಕುಡಿಯುವ ನೀರಿನ ಹಂಡೆ, ಒಂದು ಕೊಡ ನೀರು ಇಡುವ ಜಾಗ. ಅಲ್ಲಿ ಹಂಡೆ,ಕೊಡಗಳಿಗೆ ಅಜ್ಜ ಅಜ್ಜಿಯರ ಉಡುಪು ತೊಡಿಸಿ ಪೇಟ ರುಮಾಲು ಸುತ್ತಿ ನೂರಾರು ಹೂವುಗಳ ಅಲಂಕಾರ ಮಾಡಿ ಸಿಂಗರಿಸಿರುತ್ತಾರೆ. ನಡುಮನೆಯಲ್ಲಿ ಕರೆತಂದು ಕೂಡ್ರಿಸಿದ ಹಿರಿಯರ ಪ್ರತಿರೂಪದ ಜೋಡು ಬಾಳೆ ಎಲೆಗಳಲ್ಲಿನ ಹಣತೆಯನ್ನು ಇಡುಕಲಿಗೆ ತಂದು ಗ್ರಾಮೀಣ ಜಾನಪದ ಪದ್ಧತಿಯಂತೆ ಪ್ರಾಣ ಪ್ರತಿಷ್ಠೆ ಮಾಡ್ತಾರೆ. ಆಮೇಲೆ ಅದರ ಮುಂದೆ ದೊಡ್ಡ ದೊಡ್ಡ ಬಾಳೆ ಎಲೆ ಇಟ್ಟು ಎಲ್ಲರೂ ತಂದಿರುವ ತಿಂಡಿತಿನಿಸು ಬಡಿಸಿ ದೂಪ,ದೀಪದ ಅಲಂಕಾರ ಮಾಡಿ ಪೂಜಿಸುತ್ತಾರೆ ಇನ್ನೊಂದು ವಿಶೇಷವೇನಂತೀರಾ ಒಂದೇ ಮಣ್ಣಿನ ಹಣತೆಯಲ್ಲಿ ಎರಡು ಪ್ರತ್ಯೇಕ ಹತ್ತಿಯ ಬತ್ತಿಗಳನ್ನು ಸಮೀಪದಲ್ಲೇ ಇಟ್ಟು ದೀಪ ಬೆಳಗಿಸಿದ್ರಲ್ವಾ. ಇಲ್ಲಿಯೂ ಒಂದು ವಿಚಿತ್ರ! ಏನ ಗೊತ್ತಾ. ಪ್ರತ್ಯೇಕವಾಗಿ ಹಚ್ಚಿದ ಎರಡೂ ದೀಪಗಳು ಕೆಲವು ಸಮಯದ ನಂತರ ಒಂದಾಗಿ ಉರಿಯಲು ಪ್ರಾರಂಭಿಸುತ್ತವೆ! ಇದರ ವೈಜ್ಞಾನಿಕ ಕಾರಣ ಎರಡೂ ದೀಪದ ಜ್ವಾಲೆಗಳು ಆಮ್ಲಜನಕ ಆಕರ್ಷಿಸುವುದರ ಪೈಪೋಟಿಯಿಂದ ಒಂದೆಡೆ ಸೇರುವುದೆಂಬುದು ವಿಜ್ಞಾನ ಶಿಕ್ಷಕರ ಅಂಬೋಣ. ಏನೇ ಇರಲಿ ಈ ದೀಪದ ಜ್ವಾಲೆಗಳು ಒಂದಾಗುವಿಕೆ ಯಾದ ಕೂಡಲೆ ಎಲ್ಲರ ಮುಖದಲ್ಲೂ ನಗು.ತಮ್ಮ ಕೈಲಾಸವಾಸಿ ಅಜ್ಜ- ಅಜ್ಜಿಯರ ಆತ್ಮಗಳು ಒಂದಾಗಿ ಊಟ ಮಾಡ್ಲಿಕ್ ಶುರು ಹಚ್ಕೊಂಡುವು ಅಂತಾ. “ಹಿರೇರು ನಮ್ಮ ಮ್ಯಾಕ್ ಏನೂ ಬೇಸರ ಮಾಡಿಕೊಂಡಿಲ್ಲ. ಕೂಡಿಕೊಂಡು ಊಟ ಮಾಡ್ತಿದ್ದರೆ ಒಂದು ಚಣ ಎಲ್ರೂ ಹೊರಗ ಬನ್ನಿ” ಅಂತಾ ಹೊರಗ ಬರತಾರೆ. ಆಮೇಲೆ ಒಳಗ. ಬಂದು “ಎಲ್ರೂ ಇನ್ನು ಮುಂದೆ ಊಟ ಮಾಡಬಹುದು. ಏಳಿ ಏಳ್ರಿ. ನೆಂಟ್ರನ್ನೆಲ್ಲ ಊಟಕ್ಕ ಕರೀರಿ” ಅಂತಾ ಊಟ ಕರದು ಬಡಿಸ್ತಾರೆ.
*ಊಟ ಅಂದ್ರೆ ಸುಮ್ನೆ ಮಾಮೂಲಿ ಊಟ ಅಲ್ಲ.!*
ಮಾಂಸಾಹಾರ ಪ್ರಮುಖ ಆಕರ್ಷಣೆ.ಮನೆತನದ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಬಂಧುಬಳಗದವರೆಲ್ಲ ಹಿರಿಯರಿಗೆ ನೈವೇದ್ಯಕ್ಕಾಗಿ ತಂದ ವಿವಿಧ ಖಾಧ್ಯಗಳು, ಸಿಹಿ ತಿಂಡಿ ಗಳನ್ನು ತಂದಿರುವುದನ್ನು ಬಂದವರೆಲ್ಲ ಸ್ವಲ್ಪ ಎಡೆಗೆ ಹಾಕಿ ನೈವೇದ್ಯಮಾಡಿ ಕೈ ಮುಗಿಯದು ಊಟಕ್ಕೆ ಬರುವುದು ವಾಡಿಕೆ. ಏನಿಲ್ಲವೆಂದರೂ ಒಂದು ಬಿಸ್ಕಿಟ್ ಪ್ಯಾಕ್, ಬೇಯಿಸಿದ ಮೊಟ್ಟೆಯನ್ಮಾದರೂ ತಂದು ಎಡಗೆ ಬಡಿಸಿ ಕೈ ಮುಗಿಯುವವರೂ ಇದ್ದಾರೆ.. ಕೆಲವು ಮನೆಗಳಲ್ಲಿ ಊಟದ ಜೊತೆಗೆ ಹಿರಿಯ ಆತ್ಮಗಳಿಗೆ ಸಂತೋಷವಾಗಿರಲೆಂದು ಮದ್ಯವನ್ನೂ ನೈವೇದ್ಯವಾಗಿಟ್ಟು ಅದನ್ನು ಮನೆಯ ಯಜಮಾನ ಅಥವಾ ಹಿರಿಯ ಅತಿಥಿಗೆ ನೀಡುವ ಸಂಪ್ರದಾಯವೂ ಇದೆ. ಅದೂ ಮಕ್ಕಳು ನೋಡಬಾರದಂತೆ ಗುಪ್ತವಾಗಿ. ಬಹಿರಂಗವಾಗಿ ಅಲ್ಲ!
ಈ ಹಬ್ಬಗಳ ದಿನದಂದು ಅಣ್ಣ- ತಂಗಿ ಅಕ್ಕ- ತಮ್ಮ, ಅತ್ತೆ- ಮಾವ, ಬಾವ-ನೆಂಟ,ಅಜ್ಜ- ಅಜ್ಜಿ ಬಂಧು-ಬಳಗ ಅಷ್ಟೇ ಅಲ್ಲ ಊರಿನ ಬೇರೆಬೇರೆ ಜನಾಂಗದವರು, ಹಬ್ಬ ಮಾಡದಿರುವವರನ್ನು ಮನೆ ಬಾಗಿಲಿಗೆ ಹೋಗಿ ಕರೆದು ಆಮಂತ್ರಿಸುವುದೂ ಸಹ ಒಂದು ಸಂಪ್ರದಾಯ. ಹೀಗೆ ಎಲ್ಲರನ್ನೂ ಒಂದೆಡೆ ಸೇರಿಸುವ , ಖುಷಿ, ಸಂಭ್ರಮ ಪಡುವ ನಂಬಿಕೆಯ ಸಾಂಸ್ಕೃತಿಕ ಜವಾಬ್ದಾರಿ ಹೆಚ್ಚಿಸುವ ಸುಸಮಯ ಸೃಷ್ಟಿಸಿವೆ ನಮ್ಮ ಗ್ರಾಮೀಣ ಕೃಷಿಕರು, ಶ್ರಮಿಕರಿಗೆ ಹೀಗೆ ವರ್ಷದಲ್ಲಿ ಎರಡ್ಮೂರು ಭಾರಿ ಈ ರೀತಿಯಲ್ಲಿ ನೆಂಟ್ರನ್ನೆಲ್ಲ ಕರ್ದು ಊಟ ಕೊಡುವುದರಲ್ಲಿ ಇರುವ ಖುಷಿ,ಸಂತೃಪ್ತಿ ‘ಲಕ್ಷ ಲಕ್ಷ ಬ್ಯಾಂಕ್ ಡಿಪಾಜಿಟ್’ ಮಾಡಿದ್ರೂನೂ ಸಿಗದು. ಅದೇ ಅಲ್ವೆ ಸುಖ,ಸಂತೃಪ್ತಿಯ ಸಹ ಭೋಜನದ “ಅತಿಥಿ ದೇವೋಭವ ಉಕ್ತಿಯ ಶಕ್ತಿ. ” ಹೀಗೆ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ವರ್ಷವಿಡೀ ಕಾಲಕಾಲಕ್ಕೆ ತಲೆ ತಲಾಂತರದಿಂದ ಒಂದಲ್ಲ ಒಂದು ರೀತಿಯ ವೈಶಿಷ್ಟ್ಯ ಪೂರ್ಣ ಹಬ್ಬ ಹರಿದಿನಗಳ ಆಚರಣೆ ಇರುವುದನ್ನು ಕಾಣುತ್ತೇವೆ. ತಮ್ಮ ಪೂರ್ವಿಕರನ್ನೆಲ್ಲ ಒಂದೇ ದಿನ ಮನೆಗೆ ಆಹ್ವಾನಿಸಿ ಆರಾಧಿಸಿ ಬಂಧು ಬಾಂಧವರೊಂದಿಗೆ ಸ್ಮರಿಸುವ ಈ ಮಾಳಪಕ್ಷ ಅಥವಾ ಪಿತ್ರಪಕ್ಷ ಹಬ್ಬವು ಇಂದಿನ ಕಾಲದ ಹೆತ್ತವರನ್ನೇ ಮರೆಯುವ, ಅನಾತಾಶ್ರಮ,ವೃದ್ದಾಶ್ರಮಕ್ಕೆ ತಳ್ಲುವ, ಬೀದಿಯಲ್ಲಿ ಬಿಟ್ಟುಹೋಗುವ, ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಜನತೆಗೆ ಕಿವಿಹಿಂಡಿ ಹಿರಿಯರ ಮೌಲ್ಯಗಳನ್ನು ಬಿತ್ತಿ ಬೆಳೆಸುತ್ತಿರುವುದು ನಿಜವಾಗಿಯೂ ವೀಶೆಷವಾದದ್ದು. ಈ ಹಬ್ಬ ಸಂಪ್ರದಾಯಗಳು ವಿವಿಧ ಜನಾಂಗದಲ್ಲಿ ವಿಭಿನ್ನತೆ ಇದ್ದರೂ ಗುರು ಹಿರಿಯರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಗೌರವ ಹೆಚ್ಚಿಸುವದಂತೂ ಸತ್ಯ.
ಇಂತಹ ಹಬ್ಬ ಆಚರಣೆಗಳು ಆಧುನಿಕ ಯುವ ಜನಾಂಗಕ್ಕೆ ನಮ್ಮ ಪೂರ್ವಜರ ಅಲಿಖಿತ ಸಂಸ್ಕೃತಿಯನ್ನು ಹೊತ್ತೊಯ್ಯುವ ರಾಯಭಾರಿ ಸಾಧನಗಳಾಗಿವೆ ಎನ್ನಬಹುದಲ್ಲವೇ…? ನೀವೆನಂತೀರಾ?
ಮುಂದಿನ ವಾರ ಮತ್ತೊಂದು ಹೊಸ ವಿಷಯದತ್ತ…
🖊 ಗೋಪಾಲ ನಾಯ್ಕ ಭಾಶಿ.
ಸಾಯಿನಗರ ಸಿದ್ದಾಪುರ (ಉತ್ತರಕನ್ನಡ)
