ಆದ್ಯೋತ್ ಸುದ್ದಿನಿಧಿ “ಹೊನ್ನ ಬಿತ್ತೇವು ಹೊಲಕೆಲ್ಲ ಅನ್ನ ಕೊಟ್ಟೇವು ಜಗಕೆಲ್ಲ” ಈ ಜಾನಪದ ಜೀವಾಳದ ಕೃಷಿ ಪರಂಪರೆಯ ನಾಣ್ನುಡಿಯನ್ನು ನಾವೆಲ್ಲರೂ ಕೇಳಿದ್ದೇವೆ.

ನಮ್ಮ ದೇಶ ಹಳ್ಳಿಗಳ ನಾಡು. ವೈವಿದ್ಯಮಯ ಜನಪದ ಸಂಸ್ಕೃತಿಗಳ ತವರೂರು. ಹಳ್ಳಿಗಳೆಂದರೆ ಬರಿ ಮನೆಗಳಲ್ಲ, ಗುಡಿ ಗುಂಡಾರಗಳ ತಾಣವಷ್ಟೇ ಅಲ್ಲ. ಹೊಲ-ಗದ್ದೆ,ತೋಟ- ತೊಪ್ಪಲುಗಳ ತಾಯ್ನಾಡು. ಸುತ್ತೆಲ್ಲ ಹಸಿರು ಸೊಬಗಿನ ಸಿರಿಸಂಪದ. ದೂರದ ಬೆಟ್ಟಗುಡ್ಡಗಳಿಂದ ಹರಿದುಬಂದ ನೀರನೊಡಲಲಿ ತುಂಬಿಕೊಂಡ ಕೆರೆ,ತೊರೆ,,ಝರಿ ಜಲಪಾತಗಳ ನೀರನ್ಹೀರಿ ಸುಳಿದು ಬರುವ ಸ್ವಚ್ಛಂದ ತಂಗಾಳಿ. ಈ ಸುಂದರ ಸ್ವರ್ಗದ ನೆಲೆವೀಡೇ ನಮ್ಮ ಕರುನಾಡ ಸೊಬಗಿನ ಒಳನಾಡು ಮಲೆನಾಡು.ಇಲ್ಲಿನ ಹಳ್ಳಿಗಳಲ್ಲಿ ಅರ್ಥಿಕ ಬಡತನ ವಿರಬಹುದು. ಆದರೆ ಹಬ್ಬ ಹರಿದಿನಗಳು, ಮದುವೆ, ಜಾತ್ರೆಗಳ ಆಚರಣೆಗೆ ಬರವಿಲ್ಲ. ಮಲೆನಾಡಿನ ಗ್ರಾಮೀಣರು ಕೇವಲ ಗುಡಿ ಗುಂಡಾರಗಳಲ್ಲಿ ಮಾತ್ರ ದೇವರನ್ನು ಕಾಣುವುದಿಲ್ಲ. ತಾವು ಮಾಡುವ ಪ್ರತಿ ಕಾಯಕದಲ್ಲೂ ದೈವವನ್ನು ಕಾಣುತ್ತಾರೆ. ಕಮ್ಮಾರನು ಕುಲುಮೆಯಲ್ಲೂ, ಚಮ್ಮಾರನು ಮೋಚಿಯಲ್ಲೂ, ಬಡಗಿಯು ಉಳಿಸುತ್ತಿಗೆಲ್ಲೂ, ನೇಕಾರನು ಮಗ್ಗದಲ್ಲೂ ದೇವರನ್ನು ಕಾಣುವಂತೆ ಮಲೆನಾಡಿನ ಕೃಷಿಕರು ತಮಗೆ ಅನ್ನ ನೀಡುವ ಹೊಲ-ಗದ್ದೆ- ತೋಟಗಳನ್ನೇ ಭೂತಾಯಿಯೆಂದು ಆರಾಧಿಸುವರು. ಹಾಗೆಯೇ ವರ್ಷಕ್ಕೊಮ್ಮೆ ಹಬ್ಬವನ್ನೂ ಮಾಡುವರು. ಅದೂ ಅಂತಿಂತ ಹಬ್ಬವಲ್ಲ! ಹೊನ್ನ ಬೀಜ ಬಿತ್ತಿ ಜಗದ ಜನರ ಹಸಿವು ನೀಗಿಸುವ ಚಿನ್ನಕ್ಕಿಂತ ಶ್ರೇಷ್ಠವಾದ ಅನ್ನ ಬೆಳೆಯುವ ಭೂತಾಯಿ ಹಬ್ಬ. ಅವಳ ಬಸಿರ ಬಯಕೆ ತೀರಿಸುವ ಹಬ್ಬ. ಅದೇ ಭೂಮಿ ಹುಣ್ಣುಮೆ ಅಥವಾ ಭೂಮಣ್ಣಿ ಹಬ್ಬ.

ಈ ಹಬ್ಬ ಆಚರಣೆ ಮಾಡ್ಲಿಕ್ಕೂ ನಮ್ಮ ಕೃಷಿಕರಲ್ಲಿ ವೈಶಿಷ್ಟ್ಯತೆ ಇದೆ. ಅನಾದಿಕಾಲದಿಂದಲೂ ನಮ್ಮಲ್ಲಿ ಒಂದು ಮಾತಿದೆ.” ಭೂಮ್ತಾಯಿ ಬಂಜೆಯಲ್ಲ. ಹೆತ್ತವ್ವ ವೈರಿಯಲ್ಲ. ಹಾಗೆಯೇ ‘ಭೂಮ್ಯಾಗ ಬಿದ್ದ ಬೀಜ, ಎದ್ಯಾಗ ಬಿದ್ದ ಅಕ್ಸರ ಒಂದಲ್ಲ ಒಂದು ದಿನ ಪೈರ್ ಕೊಟ್ಟೆ ಕೊಡ್ತದೆ’ .ಭೂಮಿ ನಂಬಿದವರನ್ನ ಆ ತಾಯಿ ಯಾವತ್ತೂ ಕೈ ಬಿಟ್ಟಿಲ್ಲ, ಸಣ್ಣಪುಟ್ಟ ರೋಗರುಜಿನ, ಅತಿವೃಷ್ಠಿ-ಅನಾವೃಷ್ಠಿ ಆಗಾಗ ಬರಬಹುದು. ಅದೇನೂ ಶಾಶ್ವತವಾಗಿ ಇರಲ್ಲ.ಇವತ್ತು ಬರ್ತದೆ,ನಾಳೆ ಹೋಗ್ತದೆ. ಮಗಾ ನೀ ಒಳ್ಳೆ ಮನ್ಸಿಂದಾ “ತಾಯಿ ನೀನೆ ಕಾಪಾಡವ್ವ, ನಿನ್ನ ಉತ್ತಿ-ಬಿತ್ತಿ,ಕಳೆ-ಕಸಾ ತೆಗೆಯೋದೊಂದೆ ನನ್ನ ಕೆಲಸ , ಬೆಳೆ ಕೊಡೋದೇನಿದ್ರೂ ನಿಂದೆ” ಅಂತಾ ತಿಳಕೊಂಡು ನಿತ್ಯ ದುಡಿದರೆ ಕಾಲಕಾಲಕ್ಕೆ ಮಳೆ-ಗಾಳಿ, ಬಿಸಿಲು-ನೆರಳನ್ನ ಆ ತಾಯಿನೇ ಆಗಾಗ ಕರ್ಸ್ಕೋತಾಳೆ. ಅದು ನಿಸರ್ಗ ನಿಯಮ. ಅದರ ಬಗ್ಗೆ ನೀ ತಲಿ ಕೆಡಿಸ್ಕೋ ಬ್ಯಾಡ ಅಂತಾ ಹಿರೇರ ಹೇಳೋ ಮಾತು ಈಗಲೂ ನಮ್ಮ ಗ್ರಾಮೀಣ ಯುವಜನತೆ ಕೇಳ್ಕೋತಾನೆ ಬೆಳೆದಾರೆ.

ನಿಸರ್ಗ ಪ್ರೀತಿಯ ನಂಬಿಕೆಯಲ್ಲೇ ಭಗವಂತನನ್ನು ಕಾಣುವ ಗ್ರಾಮೀಣ ಜನರು ಆಚರಿಸುವ ಬಹು ವೈಶಿಷ್ಟ್ಯ ಪೂರ್ಣ ಭೂಮಿ ಹುಣ್ಣಿಮೆ ಹಬ್ಬವನ್ನು ಗ್ರಾಮೀಣ ಪ್ರದೇಶದ ಎಲ್ಲಾ ಸಮುದಾಯದ ಕೃಷಿಕರು ಆಚರಿಸಿದರೂ ಮಲೆನಾಡಿನ ಶಿರಸಿ ಸಿದ್ಧಾಪುರ, ಸಾಗರ ಸೊರಬ ಒಳಗೊಂಡಂತೆ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳ ದೀವರ ಜನಾಂಗದವರು ತಮ್ಮ ಪಾರಂಪರಿಕ ಕಲೆಯಾದ ಭೂಮಣ್ಣಿ ಬುಟ್ಟಿಯಲ್ಲಿ (ದೀವರ ಸಾಂಸ್ಕೃತಿಕ ಚಿತ್ರ ಕಲಾ ಪ್ರಾಕಾರದ ) ಬಹಳ ವಿಶೇಷ ಪೂಜಾಕ್ರಮದಿಂದ ಆಚರಿಸುತ್ತಾರೆ. ಈ ಕಲೆಯನ್ನು ರಾಷ್ಟ್ರಾದ್ಯಂತ ಪರಿಚಯಿಸಿದ ತಾಲೂಕಿನ ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸುವಂತೆ ಇವರು ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದರೆ ಅವರ ಪತ್ನಿ ಸರಸ್ವತಿ ನಾಯ್ಕ, ಸಾಗರ ತಾಲೂಕಿನ ಚಂದ್ರಶೇಖರ ಶಿರವಂತೆ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ.

ಭೂಮಣ್ಣಿ ಬುಟ್ಟಿ ಚಿತ್ತಾರಕಲೆ ವಿಶೇಷತೆ:
ಭೂಮಿಹುಣ್ಣಿಮೆ ಇತರೆಲ್ಲಾ ಹಬ್ಬಗಳಿಗಿಂತಾ ಭಿನ್ನ. ಹೇಗಂತೀರಾ? ಈ ಹಬ್ಬಕ್ಕೆ ವಾರದ ಮೊದಲೇ ಅಂದರೆ ಮಹಾ ನವಮಿ ಮುಗಿತಿದ್ದಂಗೆ ಕಳೆದ ವರ್ಷ ಅಟ್ಟ ಸೇರಿದ ಭೂಮಣ್ಣಿ ಬುಟ್ಡಿಗಳನ್ನು ಕೆಳಗಿಳಿಸಿ ಸ್ವಚ್ಛವಾಗಿ ತೊಳ್ದು ಕೆಮ್ಮಣ್ಣು ಕಲಸಿದ ಬಟ್ಟೆಯಿಂದ ಬುಟ್ಟಿ ಹೊರಗೆಲ್ಲ ಲೇಪಿಸಿ ಬಿಸಲಲ್ಲಿ ಒಣಗಿಸಿಡ್ತಾರೆ. ಆಮೇಲೆ ಸ್ವಚ್ಚವಾಗಿ ತೊಳೆದ ಅಕ್ಕಿಯಿಂದ ಹಿಟ್ಟು ಮಾಡಿಕೊಂಡು ಸಣ್ಣದಾದ ನಾರಿನ ಬ್ರಷ್ ರೀತಿ ಮಾಡಿಕೊಂಡು ಸುತ್ತ ಎಳೆಎಳೆಯಾಗಿ ಜೋಡಿ ಗೆರೆ ಎಳೆದು ಅದರ ಮದ್ಯದ ನಾಲ್ಕೂ ಬದಿಗೆ ಕೃಷಿ ಪರಂಪರೆಯ ಎತ್ತು, ನೇಗಿಲು, ಬತ್ತದ ಸಸಿಗಳು, ಬಣವೆ, ಮರ, ಮನುಷ್ಯರ, ಶಿವಲಿಂಗ, ಭೂತಾಯಿ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸುತ್ತ ಪಕ್ಕದ ಮನೆಯ ಒಡನಾಡಿ, ಓರೆಗಿತ್ತಿ,ಅತ್ತೆ, ನಾದಿನಿಯರೊಂದಿಗಿನ ಮಾತುಕತೆ ಕೇಳತೀರಾ.. “ಅತ್ತೆಮ್ಮ ನಿಮ್ಮ ದೊಡ್ಡ ಬುಟ್ಟಿ ಯಾರಿ ಬರ್ದುದ್ದು ದೊಡ್ಡ ಅತ್ಗೇರನ್ರೀ. ಎಷ್ಟು ಚಂದ ಆಗೇತಲ್ರಿ? ” ಎಂದು ಪಕ್ಲದ ಮನೆ ಶಾರದಾ ಕೇಳಿದರೆ ಅದಕ್ಕೆ “ಅಲ್ಲ ಕಣೆ ಹುಡ್ಗಿ, ನಮ್ಮ ರಾಮನ ಮಗಳು ದೀಪು ಅಲ್ವೆನೆ. ಕಾಲೇಜಿಗ ಹೋಗಿಬಂದು ನಿನ್ನೆ ಮದ್ಯಾನ್ದಿಂದ ಬರ್ಯಾಕ ಕುಂತಳು… ಮುಗ್ಯಾತಂಕ ಬಿಡ್ಲೇ ಇಲ್ಲ. ನಿನ್ನೆ ಮುಗ್ಸೇ ರಾತ್ರಿ ಊಟ ಮಾಡಿದ್ಲು. ಬಾಳ ಚಲೋ ಬರ್ದಾಳಲ್ಲೆನೆ? ”

ಹೀಗೆ ಪ್ರತಿಯೊಬ್ಬರ ಮನೆಯಲ್ಲಿ ಮಾತಾಡುವ ನಿಷ್ಕಲ್ಮಶ ಮನಸ್ಸುಗಳು ಇತ್ತೀಚೆಗೆ ಧಾರಾವಾಹಿ, ಮೊಬೈಲ್ ಗೀಳಿನ ಮಧ್ಯೆ ತೀರ ವಿರಳವಾಗುತ್ತಿರುವುದು ತುಸು ಬೇಸರ!.
ಭೂಮಣ್ಣಿ ಬುಟ್ಟಿ ಚಿತ್ತಾರ ಬರೆಯುವುದು ಒಂದೆರಡು ದಿನಗಳಲ್ಲಿ ಮುಗಿಯದು. ವಾರದಲ್ಲಿ ತಮ್ಮ ನಿತ್ಯ ಕೆಲಸದಲ್ಲಿ ಬಿಡುವು ಮಾಡಿಕೊಂಡು ಮಧ್ಯಾಹ್ನ, ರಾತ್ರಿನೂ ಚಿತ್ರ ಬಿಡಿಸುವುದರಲ್ಲಿ ತಮ್ಮನ್ನ ತೊಡ್ಗಿಸ್ಕಿಂತಾರೆ. ಅಕ್ಕ ಪಕ್ಕದ ಒಡನಾಡಿಗಳೊಂದಿಗೆ ಜಾನಪದ ಹಾಡು,ಕಥೆಗಳ ಹಾಸ್ಯದ ಮಾತುಕತೆಯೊಂದಿಗೆ ತಮ್ಮ ಆಯಾಸ ಮರೆತು ಚಿತ್ರ ಬಿಡಿಸುವಲ್ಲಿ ನಿರತರಾಗುವುದು ಸಾಮಾನ್ಯ.

ಭೂತಾಯಿ ಬಸಿರ ಬಯಕೆಗೆ ವೈವಿಧ್ಯಮಯ ಖಾಧ್ಯ:
ಉಳಿದೆಲ್ಲ ಹಬ್ಬಗಳನ್ನು ಮನೆಯಲ್ಲೇ ಆಚರಿಸಿದರೆ ನಮ್ಮ ತಾಯಂದಿರು, ಸಹೋದರಿಯರು ಭೂಮಣ್ಣಿ ಹಬ್ಬಕ್ಕೆ ಮನೆಯಲ್ಲಿ ರಾತ್ರಿ ಬೆಳಗಾಗುವವರೆಗೂ ನಿದ್ರೆಯಿಲ್ಲದೆ ಹತ್ತು ಹಲವು ಖಾಧ್ಯಗಳ ಶುಚಿ ರುಚಿಯಾದ ಸಿಹಿ ಅಡುಗೆ ಮಾಡುವುದೇ ಅವರಿಗೊಂದು ಖುಷಿ. ಹಿತ್ಲು-ಕೊಪ್ಲು,ತೋಟಗದ್ದೆ, ಹೀಗೆ ಎಲ್ಲಾ ಕಡೆ ಸುತ್ತಿ ಹತ್ತು ಹಲವು ತರಕಾರಿ ಸೊಪ್ಪು ತಂದು ಮಡಿಬಟ್ಟೆ ತೊಟ್ಟು ಮಾಡೋದೆ ಚರಗ. ಅಥವಾ ಹಚ್ವಂಬಲಿ.( ಅಕ್ಕಿಯೊಂದಿಗೆ ಎಲ್ಲಾ ಬಗೆಯ ತರಕಾರಿ, ಸೊಪ್ಪುಗಳನ್ನು ಮಿಶ್ರಣ ಮಾಡಿ ಬೇಯಿಸಿದ ಅನ್ನ) ಬೆಳ್ಳಂಬೆಳಿಗ್ಗೆ ಹಕ್ಕಿಪಿಕ್ಕಿ ಏಳುವುದರೊಳಗೆ ಗದ್ದೆ- ತೋಟಕ್ಕೆ ಹೋಗಿ ಚರಗ ಬೀಸಿ ಮೊದಲ ಪೂಜೆ ಸಲ್ಲಿಸಿ ಬರುತ್ತಾರೆ. ನಂತರ ಎಂಟು ಗಂಟೆಗೆ ಮನೆ ಮಕ್ಕಳು, ಆಪ್ತರನ್ನೆಲ್ಲ ಕರ್ಕೊಂಡು ಹೋಗಿ ಗದ್ದೆ/ ತೋಟದಲ್ಲಿ ಎರಡನೇ ಪೂಜೆ. ಗದ್ದೆಲಿ ಮೂರು ಸಸಿಗಳನ್ನು ಜೋಡಿಸಿ ಕಟ್ಟಿ ಹೂಮಾಲೆ, ಮಾವಿನ ತೋರಣ ಕಟ್ಟುವುದು ಯಜಮಾನನ ಕಾಯಕ. ಮನೆಒಡತಿ ತನ್ನ ಕೊರಳಾಗಿನ ಬಂಗಾರದ ಪವನಸರಾನ ತೆಗೆದು “ಅಮ್ಮ, ಭೂಮಿತಾಯಿ ಇದೆಲ್ಲ ನೀ ಕೊಟ್ಟ ಕಾಣ್ಕೆ ತಾಯಿ. ನಮ್ನೆಲ್ಲ ಕಾಯವ್ವ. ಈ ವರ್ಸಾನೂ ಒಳ್ಳೆ ಬೆಳೆ ಕೊಡು ತಾಯಿ ” ಎಂದು ಅದಕ್ಕೆ ತೊಡಿಸುವುದು ತಮ್ಮ ಹೊಲ,ಗದ್ದೆ,ತೋಟದ ಮೇಲೆ ಇಟ್ಟ ಭಾವನಾತ್ಮಕ ನಂಬಿಕೆ ಮರೆಯಲಾರದ್ದು. ಜೊತೆಗೆ ರಾತ್ರಿಯಿಡೀ ಸಿದ್ದಪಡಿಸಿದ ಕಡುಬು, ಕಜ್ಜಾಯ, ಹೋಳಿಗೆ, ಕರ್ಜಿಕಾಯಿ,ಚಿತ್ರಾನ್ನ, ಮೊಸರುಬುತ್ತಿ, ಹತ್ತು ಹಲವು ಬಗೆಯ ತರಕಾರಿಗಳ ಪಲ್ಯ,ಪಟ್ಟಿಗಳನ್ನು ಭೂಮಿತಾಯಿ ಎಡೆಗೆ ಬಡಿಸಿ ತೆಂಗಿನ ಕಾಯಿ ಒಡೆದು ಕರ್ಪುರದ ಆರತಿ, ಕಲಸ ಬೆಳಗ್ತಿದ್ದಂಗೆ ಮನೆ ಗಂಡ ಹೈಕಳು ಅಲ್ಲೇ ಒಂದೆರಡು ಗರ್ನಾಲ್, ಪಟಾಕಿಗೆ ಊದಬತ್ತಿಂದ ಬೆಂಕಿ ಇಟ್ಟು ಡಂ,ಡಂ, ಭಾರಿಸುತ್ತ ಮಜಾ ಉಡಾಯ್ಸತಿದ್ರೆ . ಯಜಮಾನರು ” ಏ ಹುಶಾರ ಕಣಸಹಿಷ್ಣುಗಳು. ಇಲಿಗೆ, ಕಾಗೆ,ಗೂಳಿಗೆ ಎಡೆ ಕೊಟ್ ಬಾ. ಬೇಗ ಊಟ ಮಾಡಾನ” ಅಂತಿದ್ದಂಗೆ ಗದ್ದೆ ತಲೆವಾರದ ಮರದ ಕೆಳಗೆ ಎಲ್ರೂ ಕುಳಿತು ಊಟ ಮಾಡುವುದು ವಾಡಿಕೆ.

ಎಲ್ರೂ ಊಟ ಮುಗಿತಿದ್ದಂತೆ ಭೂಮಿತಾಯಿ ಪೂಜೆಗೆ ತೊಡಿಸಿದ ಬಂಗಾರದ ಸರ ತೆಗೆದು ಹಣ್ಣು ಕಾಯಿನ ಅದೇ ಭೂಮಣ್ಣಿ ಬುಟ್ಟಿ ತುಂಬಿ ಮನೆದಾರಿ ಹಿಡಿತಾರೆ. ಹಾಗೆ ಅಕ್ಕಪಕ್ಕದ ಗದ್ದೆ ತೋಟದಲ್ಲಿ ಹಬ್ಬ ಮಾಡಿದವರೂ ಸೇರಿ, ಉಭಯ ಕುಷಲೋಪರಿ ಮಾತಾಡ್ತಾಮನೆಗೆ ಬರತಾ ಇದ್ದುದ್ದರಲ್ಲಿ ಖುಷಿ ಕಾಣುವ ನಮ್ಮ ಕೃಷಿಕರು ಬಡತನವ ಮೀರಿದ ಸಂತೃಪ್ತರು. ವರ್ಷವಿಡೀ ಸಾಕಷ್ಟು ನೈಸರ್ಗಿಕ ವಿಕೋಪಗಳು, ಬೆಳೆಗಳನ್ನು ಕಾಡುವ ರೋಗರುಜಿನಗಳು, ಕಾಡುಪ್ರಾಣಿಗಳ ಉಪಟಳ ಎಲ್ಲವನ್ನೂ ಸಹಿಸುವ ಸಹಿಷ್ಣುಗಳು. ದೇಶಕ್ಕೆ ಅನ್ನ ನೀಡುವ ಅನ್ನದಾತರು ತಮಗೆ ದುಡಿಯಲು ತಾಣನೀಡಿ ಬೆಳೆ ನೀಡುವ ಭೂಮಿತಾಯಿಯ ಬಗ್ಗೆ ಇರುವ ಭಕ್ತಿ ಅಜರಾಮರ. ಇತ್ತೀಚೆಗೆ ನಗರವಾಸಿಗಳಾಗುತ್ತಿರುವ ರೈತರ ಮಕ್ಕಳು ಹಬ್ಬದ ದಿನವಾದರೂ ಬಂದು ಭೂಮಿತಾಯಿಗೆ ಬಸಿರ ಬಯಕೆ ತೀರಿಸುವಂತಾಗಲಿ. ಇರುವ ತುಂಡು ಭೂಮಿಯನ್ನು ಚಿಲ್ಲರೆ ಹಣದಾಸೆಗೆ ಮಾರಿ ದಿವಾಳಿಯಾಗದಿರಲೆಂದು ಹಾರೈಸೋಣ.
ಸಮಯಮಾಡಿಕೊಂಡು ಓದಿದ್ದಕ್ಕೆ ಧನ್ಯವಾದಗಳು.
ಓದಿ ಮುಂದೆ ನಿಮ್ಮ ಸ್ನೇಹಿತರಿಗೂ ಹಂಚಲು ಮರೆಯದಿರಿ.
ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಷಯದೊಂದಿಗೆ ಸೇರೋಣ.
ಗೋಪಾಲ ನಾಯ್ಕ ಭಾಶಿ.
ಅಧ್ಯಾಪಕರು.
ಸಿದ್ದಾಪುರ ಉ.ಕ.
8277742013/
