ಸಿದ್ದಾಪುರದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಬಿಜೆಪಿ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳು ಅರಣ್ಯ ಅತಿಕ್ರಮಣ ಸಾಗುವಳಿದಾರರ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ವನ್ನು ನಡೆಸುತ್ತಿದ್ದು ಸರ್ಕಾರ ಮತ್ತು ಶಾಸಕರು ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತಿಮ್ಮಪ್ಪ ನಾಯಕ ವೃತ್ತದಿಂದ ತಹಶೀಲ್ದಾರ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ ಎಂ ಆರ್ ಕುಲಕರ್ಣಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ,ಅತಿಕ್ರಮಣದಾರರು ಎನ್ನುವುದೇ ತಪ್ಪು ಶಬ್ದವಾಗಿದ್ದು ನಾವ್ಯಾರೂ ಅತಿಕ್ರಮಣದಾರಿಗಳಲ್ಲ.ನಮ್ಮ ತಂದೆ,ಅಜ್ಜ ಅವರಿಂದ ತಲೆತಲಾಂತರದಿಂದ ಬಂದ ಜಮೀನನ್ನೂ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದೆವೆ ಈಗ ಕಾನೂನಿನ ನೆಪ ಹೇಳಿ ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ನಾವು ಸುಮ್ಮನೆ ಇರುವುದಿಲ್ಲ.ಕಳೆದ ಮುರುವರ್ಷದಿಂದ ಯಾವುದೇ ಹೊಸ ಅರಣ್ಯ ಕಾನೂನು ಬಂದಿಲ್ಲ. ಹಿಂದೆ ಶಾಸಕರಾಗಿದ್ದ ವಿಶ್ವೆಶ್ವರ ಹೆಗಡೆ ಕಾಗೇರಿಯವರು ಯಾವುದೇ ಅತಿಕ್ರಮಣದಾರರನ್ನೂ ಒಕ್ಕಲೆಬ್ಬಿಸಬಾರದು ಹೊಸ ಅತಿಕ್ರಮಣವಾಗದಂತೆ ಬೇಕಾದರೆ ತಡೆಯಿರಿ ಎಂದು ಸೂಚಿಸಿದ್ದರು ಅದರಂತೆ ಜನರಿಗೆ ಯಾವುದೇ ತೊಂದರೆ ಇರಲಿಲ್ಲ ಆದರೆ ಈಗ ಇಲ್ಲಿಯ ಶಾಸಕರಿಗೆ ಉಸ್ತುವಾರಿ ಸಚೀವರಿಗೆ ಈ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವುದು ಗೊತ್ತಿಲ್ಲ ಇದರಿಂದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ ಇದು ನಿಲ್ಲದಿದ್ದರೆ ನಿರಂತರ ಪ್ರತಿಭಟನೆಯನ್ನು ಇಲಾಖೆಯವರು,ಸರಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಕಾರ್ಯ ಕಾರಣಿ ಸಮಿತಿ ಸದಸ್ಯ ಕೆ.ಜಿ ನಾಯ್ಕ್ ಮಾತನಾಡಿ. ನಾವು ಅರಣ್ಯದ ಮಧ್ಯದಲ್ಲೆ ವಾಸಿಸುತ್ತಿದ್ದೆವೆ ಹೀಗಾಗಿ ಅತಿಕ್ರಮಣದ ಪ್ರಶ್ನೆಯೇ ಇಲ್ಲ ನಾವು ಹೊಸ ಅತಿಕ್ರಮಣ ಮಾಡುತ್ತಿಲ್ಲ.ನಮ್ಮ ಬೆಟ್ಟದ ಜಾಗ,ಗೋಮಾಳ, ರೆವಿನ್ಯೂ ಪಡಾದ ಮೇಲೆ ಸರಕಾರ ಕಣ್ಣುಹಾಕುತ್ತಿದೆ.ಮಲೆನಾಡಿನ ಅರಣ್ಯದ ಬಗ್ಗೆ ಅರಿವಿಲ್ಲದ ಮೂರ್ಖ ಅರಣ್ಯಮಂತ್ರಿಯಿಂದಾಗಿ ರೈತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಹೇಳಿದರು

ನೆಗಿಲಯೋಗಿ ರೈತಸಂಘದ ರಾಜ್ಯಾಧ್ಯಕ್ಷ ಧರ್ಮರಾಜ ಚಂದ್ರಪ್ಪ ಗೌಡರ್ ಬೆಳಗಾವಿ ಮಾತನಾಡಿ,ನಾವು ರೈತರು ನಾವು ಯಾವುದನ್ನೂ ಅತಿಕ್ರಮಿಸುವುದಿಲ್ಲ ಜಮೀನಿನ ಅತಿಕ್ರಮಣದಾರರಲ್ಲ ಅನುಭೋಗದಾರರು.ರೈತರು ದಟ್ಟ ಕಾಡಿನ ಮಧ್ಯೆ ಜಮೀನು ಉಳುಮೆ ಮಾಡುತ್ತಿಲ್ಲ ಬಯಲು ಪ್ರದೇಶದಲ್ಲಿ ಮಾಡುತ್ತಿದ್ದಾರೆ ಜಮೀನಿನ ಪಕ್ಕದಲ್ಲೆ ಕಾಡನ್ನು ಬೆಳೆಸುತ್ತಿದ್ದಾರೆ ನಿಜವಾದ ಕಾಡಿನ ಸಂರಕ್ಷಕರು ರೈತರು, ಅರಣ್ಯ ಇಲಾಖೆಯವರಲ್ಲ ಇದನ್ನು ಸರಕಾರಗಳು,ರಾಜಕೀಯ ಪಕ್ಷಗಳು,ಅಧಿಕಾರಿಗಳು ಅರಿತರೆ ಒಳ್ಳೆಯದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ತಾಲೂಕು ಅಧ್ಯಕ್ಷ ಎಂ ಕೆ ತಿಮ್ಮಪ್ಪ ,ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳು ಅರಣ್ಯ ಅತಿಕ್ರಮಣ ಸಾಗುವಾಳಿದಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದು ಅಡಿಕೆ ಮರ ಕಡಿಯುವುದು,ಶುಂಠಿ ಅನಾನಸ್ ಕೀಳುವುದು ಮಾಡುತ್ತಿದ್ದರು. ಹಿಂದೆ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೊಸ ಅತಿಕ್ರಮಣಕ್ಕೆ ಅವಕಾಶ ಕೊಡಬೇಡಿ ಆದರೆಹಳೆ ಅತಿಕ್ರಮಣದಾರರ ತಂಟೆಗೆ ಹೋಗಬಾರದು ಎಂದು ಸೂಚಿಸಿದ್ದರು. ಆದರೆ ಈಗ ಎಲ್ಲರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೆವೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಬ್ರಷ್ಟಸರಕಾರವಾಗಿದೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ರೈತರ ಸ್ಥಿತಿ ಅಯೋಮಯವಾಗಿದೆ ನಮ್ಮ ಶಾಸಕರಿಗೆ ಅರಣ್ಯದ ಬಗ್ಗೆಯಾಗಲಿ,ಜಮೀನಿನ ಬಗ್ಗೆಯಾಗಲಿ ಯಾವುದೇ ತಿಳುವಳಿಕೆ ಇಲ್ಲ ಇದರಿಂದಾಗಿಯೇ ಅರಣ್ಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹೇಳಿದರು

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಡಾಶಶಿಭೂಷಣ ಹೆಗಡೆ,ಅನಂತಮೂರ್ತಿ ಹೆಗಡೆ,ಹರಿಪ್ರಕಾಶ ಕೋಣೆಮನೆ,ಎನ್‍ಎಸ್.ಹೆಗಡೆಕರ್ಕಿ ಮಾತನಾಡಿದರು
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಊಷಾ ಹೆಗಡೆ,ಗುರುಪ್ರಸಾದ ಹೆಗಡೆ,ಪ್ರಶಾಂತ ನಾಯ್ಕ,ಜೆಡಿಎಸ್‍ನ ಸತೀಶ ಹೆಗಡೆ ಬೈಲಳ್ಳಿ,ರೈತಸಂಘದ ಕೆರಿಯಪ್ಪ ನಾಯ್ಕ ಬೇಡ್ಕಣಿ ,ನಂದನ ಬೋರ್ಕರ,ಕೃಷ್ಣಮೂರ್ತಿ ನಾಯ್ಕ,ತನ್ವಿರ ಸೇಠ್,ಇಲಿಯಾಸ್ ಸಾಬ್ ಮುಂತಾದವರು ಉಪಸ್ಥಿತರಿದ್ದರು
ಇದಕ್ಕೂ ಮೊದಲು ತಿಮ್ಮಪ್ಪ ನಾಯಕವೃತ್ತದಿಂದ,ಬಸ್‍ನಿಲ್ದಾಣ ಮಾರ್ಗವಾಗಿ ತಹಸೀಲ್ದಾರ ಕಚೇರಿಯವರೆಗೆ ಮೆರವಣಿಗೆ ನಡೆಯಿತು.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹದಿನೈದು ನಿಮಿಷಗಳ ಕಾಲ ಮಾನವಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ತಹಸೀಲ್ದಾರ ಎಂ.ಆರ್.ಕುಲಕರ್ಣಿ ತಮ್ಮ ಕಚೇರಿಯಲ್ಲಿ ಪ್ರತಿಭಟನಾಕಾರರ ಜೊತೆಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರತಾಳು ಹಾಲಪ್ಪ,ಅಧಿಕಾರಿಗಳು ಎಲ್ಲವನ್ನೂ ಕಾನೂನು ಪ್ರಕಾರ ಮಾಡಲು ಬರುವುದಿಲ್ಲ ಮಾನವೀಯತೆಯಿಂದಲೂ ಕೆಲಸ ಮಾಡಬೇಕು. ಜನರು ತಮ್ಮ ಜೀವನಕ್ಕಾಗಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ ಅವರು ಬೆಳೆದಂತಹ ಬೆಳೆಯನ್ನು ಅತಿಕ್ರಮಣ ಖುಲ್ಲಾ ಹೆಸರಿನಲ್ಲಿ ಹಾಳುಗೆಡುವಿದರೆ ನಾವು ಸುಮ್ಮನಿರುವುದಿಲ್ಲ. ಅರಣ್ಯ ಅಧಿಕಾರಿಗಳು ರೈತವರ್ಗದಿಂದಲೇ ಬಂದವರಾಗಿದ್ದೀರಿ ಹೀಗಿರುವಾಗ ರೈತರ ಬೆಳೆಯನ್ನು ಯಾಕೆ ನಾಶಮಾಡುತ್ತೀರಿ? ಇಲ್ಲಿಯ ಜನರು ಸುಸಂಸ್ಕೃತರು,ತಾಳ್ಮೆಯುಳ್ಳವರು ಇಂತಹ ಘಟನೆ ಬೇರೆ ಕಡೆಯಲ್ಲಿ ಆಗಿದ್ದರೆ ದಂಗೆಗಳಾಗುತ್ತಿತ್ತು ಈಗಲೂ ಅಧಿಕಾರಿಗಳು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಜನರ ಜೊತೆಗೆ ಸವಹಾರ್ಧವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ಧರ್ಮರಾಜ್ ಚಂದ್ರಪ್ಪ ಗೌಡರ್ ಮಾತನಾಡಿ,ರಾಜ್ಯದ ಬೇರೆ ಬೇರೆ ಭಾಗದಲ್ಲಿ ರೈತರ ಹೋರಾಟವನ್ನು ಅಧಿಕಾರಿಗಳು ಗಮನಿಸಿದ್ದೀರಿ ಈ ಭಾಗದಲ್ಲಿ ಶಾಂತವಾಗಿ ಹೋರಾಟ ಮಾಡುತ್ತಿದ್ದಾರೆ ಅಧಿಕಾರಿಗಳು ರೈತರ ತಾಳ್ಮೆಯನ್ನು ಪರೀಕ್ಷಿಸಬಾರದು ಎಲ್ಲರೂ ಹೊಂದಿಕೊಂಡು ಹೋದರೆ ಒಳ್ಳೆಯದಾಗುತ್ತದೆ ಮುಂದಿನ ದಿನಗಳಲ್ಲಿ ರೈತರ ಮೇಲಿನ ದಬ್ಬಾಳಿಕೆ ಮುಂದುವರಿದರೆ ಉಗ್ರಸ್ವರೂಪದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ತಹಸೀಲ್ದಾರ ಎಂ.ಆರ್.ಕುಲಕರ್ಣಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈಸಂದಭ್ದಲ್ಲಿ ಕ್ಯಾದಗಿವಲಯ ಅರಣ್ಯಾಧಿಕಾರಿ ಮಹೇಶ ದೇವಾಡಿಗ,ಸಿಪಿಐ ಸೀತಾರಾಮ ಉಪಸ್ಥಿತರಿದ್ದರು.

About the author

Adyot

Leave a Comment