ಆದ್ಯೊತ್ ಸುದ್ದಿನಿಧಿ:
ಅಘನಾಶಿನಿ ನದಿ ತಿರುವ ಯೋಜನೆ ವಿರೋಧಿಸಿ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಾವಿರಾರು ಜನರು ಸೋಮವಾರ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿಯಲ್ಲಿ ಬೃಹತ ಸಭೆ ನಡೆಸಿ, ಡ್ಯಾಂ ನಿರ್ಮಾಣವಾಗುವ ಬಾಳೆಕೊಪ್ಪ ಗೇಜ್ಕಟ್ಟೆಯವರೆಗೆ ಪಾದಯಾತ್ರೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ರವಿಂದ್ರ ನಾಯ್ಕ,ನಮ್ಮ ಜಿಲ್ಲೆಯ ಮೇಲೆ ನಿರಂತರವಾಗಿ ಯೋಜನೆಗಳನ್ನು ಹೇರುತ್ತಿದ್ದು ಇದರಿಂದ ಇಲ್ಲಿಯ ಪರಿಸರ ಹಾಳಾಗುವುದರ ಜೊತೆಗೆ ನಮ್ಮ ಅಸ್ತಿತ್ವವನ್ನೆ ಅಲುಗಾಡಿಸುತ್ತಿದೆ ಹೀಗಾಗಿ ಇಂತಹ ಯೋಜನೆಗಳ ವಿರುದ್ದ ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ.



ಪವಿತ್ರವಾದ ನೀರಿನಿಂದ ಹುಟ್ಟಿ ಪವಿತ್ರವಾಗಿಯೆ ಸಮುದ್ರಕ್ಕೆ ಸೇರುವ ಏಕೈಕ ನದಿ ಅಘನಾಶಿನಿ ನದಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ೬೪೩೫೪ ಹೆಕ್ಟೇರ್ ಅರಣ್ಯ ಭೂಮಿ ಯೋಜನೆಗಳಿಗೆ ನೀಡಲಾಗಿದೆ.ಆದರೆ ಇಲ್ಲಿಯ ಅರಣ್ಯ ವಾಸಿಗಳಿಗೆ ನೀಡಲು ಸರ್ಕಾರದ ಬಳಿ ಭೂಮಿ ಇಲ್ಲ ಇಂತಹ ವಿಪರ್ಯಾಸದಿಂದ ಜನಸಾಮಾನ್ಯರ ಜೀವನ ಕಷ್ಟವಾಗಿದೆ.ಅಘನಾಶಿನಿ ಯೋಜನೆಯ ಪಿಸಿಬಿಲಿಟಿ ರಿಪೋರ್ಟ್ ಕಳೆದ ಅಕ್ಟೋಬರ್ ತಿಂಗಳಲ್ಲಿ ಬಂದಿದೆ. ಈ ನದಿ ಜೋಡಣೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿದೆ. ಇದು ಕೇವಲ ಮನುಷ್ಯರಿಗಲ್ಲ ಇಲ್ಲಿಯ ಸಸ್ಯ,ಪ್ರಾಣಿಸಂಕುಲಕ್ಕೆ ಹಾಗೂ ಸಣ್ಣ ಪುಟ್ಟ ಹಳ್ಳಕೊಳ್ಳಗಳಿಗೂ ಮಾರಕವಾಗಿದೆ ಹೀಗಾಗಿ ಇಂತಹ ಯೋಜನೆಯ ವಿರುದ್ದ ಹೋರಾಟಕ್ಕೆ ಇಳಿಯಲಾಗುತ್ತಿದೆ.

ಸರಕಾರ ಯೋಜನೆಯನ್ನು ಕೈಬಿಡುವವರೆಗೂ ಜನಜಾಗೃತಿ , ಪಾದಯಾತ್ರೆ , ಆಕ್ಷೇಪ ಸಲ್ಲಿಕೆ ,ವಿಧಾನ ಸೌಧದ ಮುಂದೆ ಹೋಗಿ ನಮ್ಮ ಎದೆಯ ಮೇಲೆ ಕಲ್ಲಿಟ್ಟು ಯೋಜನೆ ಕೈಗೊಳ್ಳಿ ಎಂದು ಪ್ರತಿಭಟನೆ ಮಾಡಲೂ ಬೇಕಾಗಬಹುದು.ನಾವು ಜನಜಾಗೃತಿ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಬೇಕಾಗಿದೆ. ನಮಗೆ ಮೂರು ಶ್ರೀ ಗಳ ಆಶೀರ್ವಾದ,ಬೆಂಬಲ ಇದೆ. ಜಾಗೃತಿ ಮೂಡಿಸಲು ಈಗಾಗಲೇ ಶ್ರೀ ಗಳು ಕರೆ ನೀಡಿದ್ದಾರೆ ಅದರಂತೆ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೆವೆ ಎಂದು ಹೇಳಿದರು

ಮಾಜಿ ಜಿಪಂ ಸದಸ್ಯ ಎನ್.ವಿ.ಹೆಗಡೆ ಮುತ್ತಗಿ ಮಾತನಾಡಿ, ಕೇವಲ ಹೋರಾಟದ ಕಿಚ್ಚು ಹಚ್ಚಿದರೆ ಸಾಲುವುದಿಲ್ಲ ಗುರಿಯನ್ನು ಮುಟ್ಟುವವರೆಗೂ ಹೋರಾಟ ಮಾಡಬೇಕು ನಮ್ಮಲ್ಲಿನ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಈಗ ನಾವು ಒಗ್ಗಟ್ಟಾಗಬೇಕು ಇದರಿಂದ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.


ಸಭೆಯಲ್ಲಿ ಭಾಗವಹಿಸಿದ್ದ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ತಾಲೂಕು ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ,ಮಾಜಿ ಜಿಪಂ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ,ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ ಮಾತನಾಡಿದರು.



ನಾಗಪತಿ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಆರ್ ನಾಯ್ಕ ಅಘನಾಶಿನಿ ಗೀತೆ ಹಾಡಿದರು.ಚಂದ್ರಶೇಖರ ಗೌಡ ಸ್ವಾಗತಿಸಿದರು ಮಂಜುನಾಥ ನಾಯ್ಕ ನಿರೂಪಣೆ ಮಾಡಿದರು.
