ಅದ್ಯೊತ್ ಸುದ್ದಿನಿಧಿ;
ಜಿಲ್ಲೆಯ ಪರಿಸರ ಸಂರಕ್ಷಣೆ ಮಾಡಬೇಕಾದ ಸರಕಾರಗಳು ಇಲ್ಲಿಯ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಲವು ಯೋಜನೆಗಳನ್ನು ತಂದು ಹೇರುತ್ತಿದೆ. ಈಗ ಬೇಡ್ತಿ-ವರದಾ ನದಿ ಜೋಡಣೆ,ಅಘನಾನಿ-ವೇದಾವತಿ ನದಿ ಜೋಡಣೆಗೆ ಸರಕಾರ ಮುಂದಾಗಿದ್ದು ಇಂತಹ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಜಿಲ್ಲೆಯ ಜನರು ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದು ಮಂಗಳವಾರ ಯಲ್ಲಾಪುರದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಜನರ ಸಮಾವೇಶ ನಡೆಸಿ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸರಕಾರಕ್ಕೆ ಬಿಸಿ ಮುಟ್ಟಿಸಿದರು.

ಸಮಾವೇಶದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ,ಬೇಡ್ತಿ, ಅಘನಾಶಿನಿ ಮತ್ತು ಶರಾವತಿ ನದಿ ಯೋಜನೆಗಳ ಪ್ರಸ್ತಾಪ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯು ಹಲವು ಯೋಜನೆಗಳಿಂದ ತೊಂದರೆ ಅನುಭವಿಸಿದೆ. ಮೊದಲು ಜಿಲ್ಲೆಯ ಧಾರಣಾ ಸಾಮರ್ಥ್ಯದ ಕುರಿತು ಸಮಗ್ರ ಅಧ್ಯಯನ ನಡೆಯಬೇಕು. ಅದನ್ನು ಹೊರತುಪಡಿಸಿ ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸಬಾರದು. ಜನಶಕ್ತಿಯೇ ಅಂತಿಮ ನಿರ್ಣಯವಾಗಲಿದೆ. ಸ್ವರ್ಣವಲ್ಲೀ ಶ್ರೀಗಳ ನಿರ್ಣಯದಂತೆ ಹೋರಾಟ ಮುಂದುವರಿಯಲಿದ್ದು, ರಾಜಕೀಯ ಒತ್ತಡದ ಜೊತೆಗೆ ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದರು.

ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಯಾವುದೇ ಕಾರಣಕ್ಕೂ ಹೊಳೆ ತಿರುವು ಯೋಜನೆಗೆ ಅವಕಾಶ ನೀಡುವುದಿಲ್ಲ ಮಳೆಗಾಲದಲ್ಲಿ ಮಾತ್ರ ಬೇಡ್ತಿ ನದಿಯಲ್ಲಿ ನೀರು ಹರಿಯುತ್ತದೆ. ಉಳಿದ ದಿನಗಳಲ್ಲಿ ನದಿಯಲ್ಲಿ ನೀರಿನ ಹರಿವು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀರಿಲ್ಲದ ನದಿಯ ತಿರುವು ಯೋಜನೆ ವ್ಯರ್ಥ ಪ್ರಯತ್ನವಾಗಲಿದೆ. ನೈಜ ಸ್ಥಿತಿಯನ್ನು ಅರಿತು ಸರ್ಕಾರ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.


ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನ ಮತ್ತು ಆದೇಶದಂತೆ ನಾವು ಹೋರಾಟದಲ್ಲಿ ಮುಂದುವರಿಯುತ್ತೇವೆ. ಹೋರಾಟವು ರಾಜಕೀಯವನ್ನು ಬದಿಗಿಟ್ಟು ನಡೆಯಬೇಕು. ತಮ್ಮ ಉದ್ಯೋಗಕ್ಕೂ ಈ ಯೋಜನೆಗೂ ಸಂಬಂಧವಿದೆ ಎಂದು ಕೆಲವರು ಆರೋಪಿಸುತ್ತಿದ್ದು, ತಮ್ಮ ಉದ್ಯೋಗಕ್ಕೂ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಹೆಬ್ಬಾರ್ ಸಂಸದರೊಂದಿಗೆ ಕೈಜೋಡಿಸಿ ಜನರು ಹೋರಾಟ ನಡೆಸಬೇಕು. ಕಾನೂನು ಹೋರಾಟಕ್ಕೂ ಆದ್ಯತೆ ನೀಡಬೇಕು. ರಾಜಕೀಯದಿಂದ ದೂರವಿದ್ದು, ಯಾವುದೇ ಉದ್ವೇಗಕ್ಕೆ ಒಳಗಾಗದೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಾಗಿ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಯೋಜನೆಯ ಸಾಧಕ-ಬಾಧಕಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಯೋಜನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗುವುದು ಎಂದರು.
ಪರಿಸರ ತಜ್ಞ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಯೋಜನೆ ವಿರುದ್ಧ ಹೋರಾಟ ನಡೆಯುತ್ತಿದ್ದರೂ, ಯೋಜನೆಯನ್ನು ತಡೆಯುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ ಎಂದು ಆರೋಪಿಸಿದ ಅವರು, ತುರ್ತಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.


ಈ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾಗೇರಿ, ಮತದಾರರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಜನರ ಧ್ವನಿಯಾಗಲು ನಾವು ಎಂದಿಗೂ ಹಿಂದೆ ಬಿದ್ದಿಲ್ಲ. ಯೋಜನೆ ಬೇಕೆಂದು ಪ್ರತಿಪಾದಿಸುವವರು ನಿಮ್ಮಂತಹ ವಿಜ್ಞಾನಿಗಳೇ ಆಗಿದ್ದಾರೆ ಎಂದು ತಿರುಗೇಟು ನೀಡಿದ ಕಾಗೇರಿ ನಿಮ್ಮ ಮಾತು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಕೇವಲ ಉಪದೇಶ ನೀಡುವುದು ಸರಿಯಲ್ಲ. ನಮ್ಮ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿ.ಎಸ್. ಪಾಟೀಲ, ರವೀಂದ್ರ ನಾಯ್ಕ, ಶಿರಸಿ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರು, ಅಲ್ಲಯ್ಯನವರಮಠ, ಎಲ್.ಟಿ. ಪಾಟೀಲ, ಅನಂತಮೂರ್ತಿ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ಸುಪಾ, ನಾಗಝರಿ, ಬೊಮ್ಮನಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳು, ಶರಾವತಿ ಟೈಲರೇಸ್ ಯೋಜನೆ ಹಾಗೂ ಟಿಬೆಟಿಯನ್ ಕಾಲೋನಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಜಿಲ್ಲೆಯ ಜನತೆ ಸಾವಿರಾರು ಎಕರೆ ಭೂಮಿ ಹಾಗೂ ಲಕ್ಷಾಂತರ ಜನರು ತಮ್ಮ ಮನೆ-ಮಠಗಳನ್ನು ತ್ಯಾಗ ಮಾಡಿದ್ದಾರೆ. ಇಷ್ಟೆಲ್ಲ ತ್ಯಾಗ ಮಾಡಿದ ಜಿಲ್ಲೆಯ ಜನರು ಮತ್ತಷ್ಟು ಬೃಹತ್ ಯೋಜನೆಗಳಿಗಾಗಿ ಭೂಮಿ ಮತ್ತು ಬದುಕನ್ನು ಕಳೆದುಕೊಳ್ಳಲು ಸಿದ್ಧರಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
೧. ಜನಶಕ್ತಿಗೆ ಆದ್ಯತೆ: ಇಂದಿನ ಸಭೆ ಜನಶಕ್ತಿ ಕೇಂದ್ರಿತ ಸಭೆಯಾಗಿದ್ದು, ಜನಪ್ರತಿನಿಧಿ ಕೇಂದ್ರಿತ ಸಭೆಯಲ್ಲ. ಆದರೂ ಜಿಲ್ಲೆಯ ಸಂಸ್ಕೃತಿ ಮತ್ತು ಸಭ್ಯತೆಗೆ ಅನುಗುಣವಾಗಿ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರಿಗೆ ಗೌರವ ನೀಡಲಾಗಿದೆ.
೨. ಜನಪ್ರತಿನಿಧಿಗಳ ಒಗ್ಗಟ್ಟಿಗೆ ಆಗ್ರಹ: ಜಿಲ್ಲೆಯ ಎಲ್ಲಾ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಒಂದಾಗಿ, ಪ್ರಸ್ತಾವಿತ ಯೋಜನೆಗೆ ತಡೆ ನೀಡುವ ಕುರಿತು ಮುಂದಿನ ೧೫ ದಿನಗಳೊಳಗೆ ಗಟ್ಟಿಯಾದ ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಜನರೇ ನಿರ್ಧರಿಸಲಿದ್ದಾರೆ.
೩. ಸಾರ್ವಜನಿಕ ಕಾರ್ಯಕ್ರಮಗಳ ಬಹಿಷ್ಕಾರ: ಜನರ ಆತಂಕಕ್ಕೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯದ ಮಂತ್ರಿಗಳು ಹಾಗೂ ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕಾದೀತು.
೪. ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಸಂರಕ್ಷಣೆಗೆ ಸ್ಪಂದನೆ ದೊರೆಯದಿದ್ದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೂ ಜನರು ಮುಂದಾಗಬೇಕಾಗಬಹುದು.
೫. ಜಿಲ್ಲೆಯ ಹಿತವೇ ಮುಖ್ಯ: ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಜಿಲ್ಲೆಯ ಜನರ ಹಿತವನ್ನು ಕಾಪಾಡಲು ಒಮ್ಮತದ ನಿರ್ಧಾರ ಕೈಗೊಳ್ಳುವುದಾಗಿದೆ
