ಮೋಡಿ ಮಾಡಿದ ಮೂಡಿಸ್ ಶ್ರೇಯಾಂಕ!

ಮೂಡಿಸ್ ಅಪ್‍ಗ್ರೇಡ್ ಬಗ್ಗೆ ಭಾರತ ಮಾತನಾಡುತ್ತಿದೆ – ಸರಕಾರದ ಆರ್ಥಿಕ ನೀತಿಗಳ ಕುರಿತಾಗಿ, ಪರಿಣಾಮಗಳ ಕುರಿತಾಗಿ ಮೊದಲ ಬಾರಿಗೆ ಈ ನಾಡಿನ ಜನತೆ ಚರ್ಚಿಸತೊಡಗಿದ್ದಾರೆ. ನರೇಂದ್ರ ಮೋದಿಯವರ ಮೇಲೆ ಈ ರಾಷ್ಟ್ರದ ಜನತೆ ಇಟ್ಟಿರುವ ನಂಬಿಕೆ ಮತ್ತು ಭರವಸೆ ಎರಡೂ ಅಭಾದಿತ. ಜನರ ನಿರೀಕ್ಷೆ ಕುಸಿಯದಂತೆ ಕಾಪಾಡಿಕೊಳ್ಳುವಲ್ಲಿ ಅಧಿಕಾರಯುಕ್ತ ಬಿಜೆಪಿ (ಎನ್.ಡಿ.ಎ) ಸರಕಾರದ ನಿರ್ಧಾರಗಳು ಯಶಸ್ವಿಯಾಗುತ್ತಿವೆ.

ಬರೋಬ್ಬರಿ 13 ವರ್ಷಗಳ ನಂತರ, ಪ್ರಭಲ ಆರ್ಥಿಕ ಶಕ್ತಿಗಳೆಂದು ಕರೆಯಿಸಿಕೊಂಡಿರುವ ದೇಶಗಳಾದ ರಷ್ಯಾ, ಬ್ರೆಜಿಲ್, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಚೀನಾ ಕೂಡ ಮಂಕಾಗಿ ಕುಳಿತಿರುವಾಗ; ಒಂದು ಭಾರತ ತನ್ನ ಮೂಡಿಸ್ ಶ್ರೇಯಾಂಕವನ್ನು ಹೆಚ್ಚಿಸಿಕೊಂಡು ಬೀಗಿದೆ. ನೆನಪಿರಲಿ 2008ರ ಆರ್ಥಿಕ ಮಹಾ ಕುಸಿತದ ನಂತರ ಇತರ ದೇಶಗಳಿನ್ನೂ ಚೇತರಿಕೆಯ ಲಕ್ಷಣವನ್ನು ತೋರ್ಪಡಿಸಲಿಕ್ಕೇ ಹೆಣಗಾಡುತ್ತಿರುವಾಗ, ಭಾರತದ ಈ ಸಾಧನೆ ಕಡಿಮೆಯೇನಲ್ಲ.

ಗೋಜಲುಗಳಿಂದ ಕೂಡಿದ್ದ ನೀತಿಗಳಿಂದ – ಆರ್ಥಿಕ ಶಿಸ್ತಿನ ಕಡೆಗೆ ಕಳೆದ 3.5 ವರ್ಷಗಳಲ್ಲಿ ಭಾರತವು ಮುಖಮಾಡಿದೆ. ವಿಶ್ವ ಬ್ಯಾಂಕ್ ಕೊಡಮಾಡುವ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ (ವ್ಯಾಪಾರ ಪೂರಕ ವಾತಾವರಣ) ಶ್ರೇಯಾಂಕವು 2014ರಲ್ಲಿ 142 ಇದ್ದದ್ದು 100ಕ್ಕೆ ಬಂದಿದೆ, ಕಳೆದ ವರ್ಷ 130 ಇತ್ತು. ಸನ್ಮಾನ್ಯ ಪ್ರಧಾನಿಯವರು ನಾವು ಟಾಪ್ 50ರ ಒಳಗೆ ಇರಬೇಕೆಂಬ ಬಯಕೆ ಹೊಂದಿದ್ದಾರೆಂದು ಇತ್ತೀಚೆಗಷ್ಟೇ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ!

ನಿಯತ್ತಾಗಿ ತೆರಿಗೆ ಕಟ್ಟುವವರ ಸಂಖ್ಯೆಯೂ ಜಾಸ್ತಿಯಾಗಿದೆ, ಯಾರು ಕೇಳ್ತಾರೆ ಬಿಡು ಎಂದು ಮುಗುಮ್ಮಾಗಿದ್ದ ವ್ಯವಹಾರಸ್ಥರೂ ಕೂಡ ಈ ಬಾರಿ ಆದಾಯ ತೆರಿಗೆ ರಿಟರ್ನ ಫೈಲ್ ಮಾಡಿದ್ದಾರೆ. ಬಹು ಚರ್ಚಿತ ಜಿ.ಎಸ್.ಟಿಯು ಮೇಜಿನ ಕೆಳಗೆ ನಡೆಯುತ್ತಿದ್ದ ವ್ಯವಹಾರಗಳಿಗೆ ಮುಂದಿನ ದಿನಗಳಲ್ಲಿ ಕೊಡಲಿ ಪೆಟ್ಟು ನೀಡಲಿದೆ ಎಂಬುದಂತೂ ಸತ್ಯ. ಅಂಕಿ-ಅಂಶಗಳ ಪ್ರಕಾರ ತೆರಿಗೆ ಪಾವತಿ ಶ್ರೇಯಾಂಕವು 172 ರಿಂದ 119ಕ್ಕೆ ಬಂದಿದೆ, ಬರೋಬ್ಬರಿ 53 ಸ್ಥಾನಗಳ ನೆಗೆತ. ವ್ಯಾಪಾರ-ವ್ಯವಹಾರ ಮಾಡುವವರಿಗೆ ಸಾಲ ದೊರಕುವ ಪರಿಮಾಣ ಕೂಡ 44 ರಿಂದ 29ಕ್ಕೆ ಬಂದಿದೆ, ಹದಿನೈದು ಸ್ಥಾನಗಳ ಈ ಚೇತರಿಕೆಯು ಹೊಸ ಉದ್ದಿಮೆ ಪ್ರಾರಂಭಿಸುವವರಿಗೆ ಆಶಾದಾಯಕವಾಗಿ ಪರಿಣಮಿಸಲಿದೆ.

“ಭಾರತ ಬದಲಾಗುತ್ತಿದೆ ಮತ್ತು ಜಗತ್ತು ಈ ಬದಲಾವಣೆಯನ್ನು ಬೆರಗುಗಣ್ಣಿನಿಂದ ಗಮನಿಸುತ್ತಿದೆ” – ಎಂಬುದು ಫೇರ್ ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ನ ಚೇರ್ಮನ್ ಪ್ರೇಮ್ ವಾತ್ಸಾ ಅವರ ಆಂಬೋಣ. ಅಂದಹಾಗೆ 67ರ ಹರೆಯದ ಐಐಟಿ ಮದ್ರಾಸಿನ ಪದವೀಧರ ಪ್ರೇಮ್ ವಾತ್ಸಾ ಅಂತಾರಾಷ್ಟ್ರೀಯ ವ್ಯಾಪಾರ ಜಗತ್ತಿನಲ್ಲಿ ದೊಡ್ಡ ಹೆಸರು, ತನ್ನ 22ನೆಯ ವಯಸ್ಸಿಗೆ ಭಾರತವನ್ನು ಬಿಟ್ಟವರು ಈಗ ಪುನಃ ಭಾರತದತ್ತ ಗಮನ ಹರಿಸಿದ್ದಾರೆ.

67 ವರ್ಷಗಳಿಂದ ಕ್ಲಿಷ್ಟಕರ ಪ್ರಕ್ರಿಯೆಗಳ ಗೂಡಾಗಿದ್ದ ಸ್ವಾತಂತ್ರ್ಯೋತ್ತರ ಬಾರತದ ನೀತಿಗಳು ಹಾಗೂ ವ್ಯವಸ್ಥೆಯು ಕಳೆದ 3.5 ವರ್ಷಗಳ ನರೇಂದ್ರ ಮೋದಿಯವರ ಆಡಳಿತದಲ್ಲಿ ಸರಳವಾಗಿದೆ – ಬದಲಾಗಿದೆ. ಎನ್ನಾರೈಗಳು ಇಂದು ಭಾರತದಲ್ಲಿ ವ್ಯವಹರಿಸಲು ಉತ್ಸುಕರಾಗಿರುವುದೂ ಇದೇ ಕಾರಣದಿಂದಲೇ. ಬೃಷ್ಟಾಚಾರ ಇದ್ದದ್ದು ತಿಳಿದೇ ಇತ್ತು, ಅದು ಮಾರಕ ಎಂಬುದೂ ಗೊತ್ತಿತ್ತು, ಸರಿಪಡಿಸುವ ಕೆಲಸ ಆಗಿರಲೇ ಇಲ್ಲವಲ್ಲ; ಒಬ್ಬ ಮೋದಿ ಬಂದ ಮೇಲೆ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ರಾಷ್ಟ್ರಹಿತಕ್ಕಿಂತ ಮಿಗಿಲಾದ ಪ್ರೇರಣೆ ಪ್ರಧಾನಿ ಮೋದಿಯವರಿಗೆ ಬೇರೊಂದಿಲ್ಲ ಎಂದಿದ್ದಾರೆ ಪ್ರೇಮ್ ವಾತ್ಸಾ!

ರೇರಾ ಕಾಯಿದೆ, ಜಿ.ಎಸ್.ಟಿ, ಡಿಜಿಟಲ್ ಪಾವತಿಗೆ ಉತ್ತೇಜನ, ಆಧಾರ್ ಲಿಂಕೇಜ್, ಅಪನಗದೀಕರಣ, ಬ್ಯಾಂಕುಗಳ ಮರುಬಂಡವಾಳೀಕರಣ ಹಾಗೂ ಆರ್ಥಿಕತೆಯೊಳಕ್ಕೆ ಎಲ್ಲರನ್ನೂ ತರುವ ಸರ್ವ ಪ್ರಯತ್ನ ಮೊದಲಾದ ಸುಧಾರಣೆಯ ಕ್ರಮಗಳನ್ನ ತೆಗೆದುಕೊಂಡಿದ್ದೇ ಮೂಡಿಸ್ ಶ್ರೇಯಾಂಕ ಹೆಚ್ಚಳವಾಗಲು ಕಾರಣ. ಈ ಆರ್ಥಿಕ ಸ್ಥಿತ್ಯಂತರ ಪರ್ವದಲ್ಲಿ ಬೊಬ್ಬೆ ಹಾಕುವವರಿಗೆ ಕಾಣಸಿಗುತ್ತಿರುವುದು ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಬೇಕಾದ ಕೆಲವು ಸಂಗತಿಗಳಷ್ಟೇ.

ಪರಿಣಾಮಗಳು: ಜಗತ್ತಿನ ಆರ್ಥಿಕ ಶಕ್ತಿಗಳು, ಉದ್ದಿಮೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಕಾದಿದ್ದವು, ಆದರೆ ಕಳಪೆ ಶ್ರೇಯಾಂಕದ ಕಾರಣದಿಂದಾಗಿ ಇದುವರೆಗೆ ಹಿಂದೇಟು ಹಾಕುತ್ತಿದ್ದವು, ಈಗ ಚಿತ್ರಣ ಬದಲಾಗಲಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯೂ ಹೆಚ್ಚಳವಾಗಲಿದೆ. ತೆರಿಗೆ – ಜಿಡಿಪಿ ಅನುಪಾತವು 17.7 ರಿಂದ 20ಕ್ಕೆ ಹೆಚ್ಚಲಿದೆಯೆಂಬ ಆಶಾಭಾವ ಮೂಡತೊಡಗಿದೆ; ಇದು ಹೆಚ್ಚಿದ್ದಷ್ಟೂ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಹೂಡಿಕೆಗೆ ಆನೆಬಲ. ಸರಕು ಅಥವಾ ಸೇವೆ ಒದಗಿಸಲು ಮುಂಗಡ ಪಡೆದಾಗ ತುಂಬಬೇಕಿದ್ದ ಜಿ.ಎಸ್.ಟಿಯನ್ನು ಕೇಂದ್ರ ಸರಕಾರವು ಇತ್ತೀಚೆಗೆ ಬದಲಿಸಿ ಪೂರೈಕೆಯ ನಂತರವಷ್ಟೇ ಕಟ್ಟಿ ಎಂದಿದೆ, ಉದ್ದಿಮೆದಾರರು ನಿರಾತಂಕಗೊಂಡಿದ್ದಾರೆ. ನವೆಂಬರ್ 16ರಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿ.ಎಸ್.ಟಿ ತೆರಗೆ ಲಾಭವು ನೇರವಾಗಿ ಗ್ರಾಹಕರಿಗೆ ದೊರಕಿಸುವುದಕ್ಕೆ ಎನ್.ಎ.ಎ (National Anti-profiteering Authority) ಎಂಬ ಪ್ರಾಧಿಕಾರವನ್ನು ರಚಿಸಲಾಗಿದೆ. ಇದು ಖರೀದಿದಾರರಿಗೆ ವಸ್ತುಗಳು ಅಗ್ಗದ ಬೆಲೆಗೆ ದೊರಕುವುದನ್ನು ಖಾತ್ರಿಗೊಳಿಸಲಿಕ್ಕಾಗಿಯೇ ಕೇಂದ್ರ ಸರಕಾರವು ಮಾಡಿರುವ ಪ್ರತ್ಯೇಕ ವ್ಯವಸ್ಥೆ.

ರಾಜಕೀಯ ವಿರೋಧಿಗಳಿಗೆ ಸಿಗುತ್ತಿರುವುದು ಆ ಕ್ಷಣಕ್ಕೆ ಹುಯಿಲೆಬ್ಬಿಸಬಹುದಾದ ಹುರುಳಿಲ್ಲದ ಸಂಗತಿಗಳು. ಮನಮೋಹನ ಸಿಂಗ್ ಹಾಗೂ ಪಿ ಚಿದಂಬರಂ ಕೂಡ ಅಲವತ್ತುಕೊಂಡದ್ದು ರಾಜಕೀಯ ಅನಿವಾರ್ಯತೆಯ ಕಾರಣಕ್ಕಾಗಿಯೇ ಎಂಬುದು ಸ್ಪಷ್ಟ. ಮೂಡಿಸ್ ಶ್ರೇಯಾಂಕದ ಹೆಚ್ಚಳ ತಿಳಿದು ಸಮಸ್ತ ರಾಷ್ಟ್ರಕರು ಸಂಭ್ರಮಿಸುತ್ತಿದ್ದರೆ ಕೇರಳದ ಸಿಪಿಐ(ಎಂ) ವಿರೋಧಿಸುವ ಭರದಲ್ಲಿ ಕ್ರಿಕೆಟಿಗ ಟಾಮ್ ಮೂಡಿಯನ್ನು ತಪ್ಪಾಗಿ ಅರ್ಥೈಸಿಕೊಂಡು ದೂಷಿಸಿ ಕೊನೆಗೆ ತಾನೇ ನಗೆಪಾಟಲಿಗೀಡಾಯಿತು. ಇನ್ನು ಪಟ್ಟಾಭಿಷೇಕದ ಹೊಸ್ತಿಲಿನಲ್ಲಿರುವ ರಾಹುಲ್ ಮಾತ್ರ ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ – ಇನ್ನೊಂದು ಕಡೆಯಿಂದ ಬಂಗಾರದ ಗಟ್ಟಿಗಳು ಉದುರುವ ಮಷಿನ್ ಕಂಡು ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ, ಶುಭವಾಗಲಿ!

About the author

Adyot

Leave a Comment