ಗದ್ದುಗೆಗೇರುವ ಕನಸಿನಲ್ಲಿ ಕಾಂಗ್ರೆಸ್..! ಮತ್ತೆ ಪಾದಯಾತ್ರೆಗೆ ಸಿದ್ದರಾಮಯ್ಯ ರೆಡಿ..?

ರಾಜ್ಯ ಕಾಂಗ್ರೆಸ್ ಮತ್ತೊಮ್ಮೆ ಪುಟಿದೇಳಲು ಹವಣಿಸುತ್ತಿದೆ. ಬಿಜೆಪಿ ಸರ್ಕಾರದ ವೈಫಲ್ಯವನ್ನೇ ಜನರ ಮುಂದೆ ತೆಗೆದುಕೊಂಡು ಹೋಗುವ ಮೂಲಕ ಗದ್ದುಗೆಗೇರುವ ಕನಸು ಕಾಣುತ್ತಿದೆ. ಅದೇ ಕಾರಣಕ್ಕೆ ಇದೀಗ ಕೈಪಾಳಯದಲ್ಲಿ ಪಾದಯಾತ್ರೆ ವಿಷಯ ಜೋರಾಗಿಯೇ ಚರ್ಚೆಯಾಗುತ್ತಿದೆ. ಸರ್ಕಾರ ಎಷ್ಟು ದಿನ ಇರಲಿದೆಯೋ ಇಲ್ಲವೋ. ಹಾಗಾಗಿ ಈಗಿನಿಂದಲೇ ಬಿಜೆಪಿ ವಿರುದ್ಧ ಹೋರಾಡಲು ಅಣಿಯಾಗುತ್ತಿದೆ. ಅದೂ ಪಾದಯಾತ್ರೆಯ ಅಸ್ತ್ರದೊಂದಿಗೆ.

ಅಂದು ಭ್ರಷ್ಟಾಚಾರದ ವಿರುದ್ಧ ಬಳ್ಳಾರಿ ಪಾದಯಾತ್ರೆ..!

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ರೆಡ್ಡಿ ಸಹೋದರರು ಸಿದ್ದರಾಮಯ್ಯಗೆ ಸವಾಲು ಹಾಕಿದ್ದರು. ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ವಿಧಾನಸಭೆಯಲ್ಲೇ ಸವಾಲು ಹಾಕಿದ್ದರು. ಬಳ್ಳಾರಿ ಗಣಿಧಣಿಗಳ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಭುಜತಟ್ಟಿ ಸವಾಲು ಸ್ವೀಕರಿಸಿದ್ದರು. ನಾವು ಬಳ್ಳಾರಿಗೆ ಬಂದೇ ಬರುತ್ತೇವೆ. ನಡೆದುಕೊಂಡೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದ ಮರು ಸವಾಲು ಹಾಕಿದ್ದರು.

ಕಳೆದ ೨೦೧೦ ಜುಲೈ ೨೫ರಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಿತ್ತು. ಬೆಂಗಳೂರಿನಿಂದ ಸುಡುವ ಬಿಸಿಲಿನಲ್ಲೇ ಇಪ್ಪತ್ತು ದಿನ ಬಳ್ಳಾರಿವರೆಗೂ ನಾಯಕರು ಪಾದಯಾತ್ರೆ ನಡೆಸಿದ್ದರು. ಬಳ್ಳಾರಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಬೃಹತ್ ಸಮಾವೇಶ ನಡೆಸಿದ್ದರು. ಈ ಮೂಲಕ ಗಣಿಧಣಿಗಳು ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಬ್ಬರಿಸಿದ್ದರು.

ಈಗ ಪ್ರವಾಹ ಪರಿಹಾರ ವೈಫಲ್ಯ ಖಂಡಿಸಿ ಪಾದಯಾತ್ರೆ..?

ಹೌದು.. ಅಂದು ವಿಪಕ್ಷ ನಾಯಕರಾಗಿದ್ದಾಗ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ಸಿದ್ದರಾಮಯ್ಯ ಈಗ ಕೂಡ ಶಸ್ತ್ರಸಜ್ಜಿತರಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅಂದೂ ವಿಪಕ್ಷ ನಾಯಕ ಇಂದೂ ಸಹ ವಿಪಕ್ಷ ನಾಯಕರೇ. ಅಂದು ಬಿಜೆಪಿ ಸರ್ಕಾರವೇ, ಇಂದೂ ಸಹ ಅದೇ ಸರ್ಕಾರ. ವ್ಯತ್ಯಾಸ ಇಷ್ಟೇ ಅಂದು ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ಮಾಡಿದ್ದರು. ಇಂದು ಪ್ರವಾಹ ಪರಿಹಾರ ವೈಫಲ್ಯ ಅಸ್ತ್ರದೊಂದಿಗೆ ಅಖಾಡಕ್ಕೆ‌ ಇಳಿಯುತ್ತಿದ್ದಾರೆ. ಅಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರೆ ಈಗ ಪ್ರವಾಹದಿಂದ ತತ್ತರಿಸಿರುವ ಬೆಳಗಾವಿಯಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆದಿದೆ.

ಅಂದು ಪಾದಯಾತ್ರೆ ನಡೆಸಿದ್ದರಿಂದಲೇ ಕಾಂಗ್ರೆಸ್ ಬಲ ಹೆಚ್ಚಾಗಿತ್ತು. ಅದೇ ಸನ್ನಿವೇಶ ಈಗಲೂ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿದೆ. ಮತ್ತೆ ಪಾದಯಾತ್ರೆ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯ ಕೈಪಾಳಯದಲ್ಲಿ ವ್ಯಕ್ತವಾಗಿದೆ.

ಪಾದಯಾತ್ರೆಗೆ ಕೈಪಾಳಯದಲ್ಲೇ ಗೊಂದಲ..?

ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಕನಸು ಕಾಣುತ್ತಿದೆ. ನೆರೆ ಪರಿಹಾರ ವಿಚಾರದಲ್ಲಿ ಪಕ್ಷದ ನಾಯಕರಲ್ಲಿ ಸಹಮತ‌ ಮೂಡಿಲ್ಲ ಎನ್ನಲಾಗುತ್ತಿದೆ. ಪಾದಯಾತ್ರೆ ನೇತೃತ್ವ ಯಾರು ಹೊರಬೇಕು ಎಂಬ ಬಗ್ಗೆ ಗೊಂದಲ ಮೂಡಿದೆ.

ಬೆಳಗಾವಿ ಮತ್ತು ಬೆಂಗಳೂರಿನ ನಡುವೆ 500 ಕಿಲೋಮೀಟರ್ ಅಂತರವಿದೆ. ಎಂಟು ಜಿಲ್ಲೆ, 25ಕ್ಕೂ ವಿಧಾನಸಭಾ ಕ್ಷೇತ್ರ ಹಾದು ಬರಬಹುದು. ಆದರೆ, ಈ ಅಂತರ ಹೆಚ್ಚಾಯ್ತು, ಬಳ್ಳಾರಿ ಪಾದಯಾತ್ರೆಯೇ ಹೈರಾಣಾಗಿಸಿತು. ಈಗ ಅಂಥ ಸಾಹಸ ಮಾಡುವ ಮುನ್ನ ಯೋಚಿಸುವುದು ಅಗತ್ಯವಿದೆ ಎಂದು ಕೆಲ ನಾಯಕರು ಚರ್ಚೆ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲೇ ಪಾದಯಾತ್ರೆ ನಡೆಸಿದರೆ ಒಳ್ಳೆಯದು, ಬೆಳಗಾವಿ ಇಲ್ಲವೇ ಬಾಗಲಕೋಟೆ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಬಹುದು ಎಂಬ ಅಭಿಪ್ರಾಯವನ್ನು ಕೆಲ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬಳ್ಳಾರಿ ಪಾದಯಾತ್ರೆಯಲ್ಲಿ ಸಿದ್ದು ಜೊತೆ ಮುಂಚೂಣಿಯಲ್ಲಿದ್ದ ನಾಯಕರೆಲ್ಲರೂ ಒಂದೊಂದು ಸಮಸ್ಯೆಯಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಪರಮೇಶ್ವರ್ ಆದಾಯ ತೆರಿಗೆ ಸುಳಿಯಲ್ಲಿ ಸಿಲುಕಿದ್ದಾರೆ. ಅಷ್ಟೇ ಏಕೆ ಸಿದ್ದರಾಮಯ್ಯ ಅವ್ರಿಗೂ ವಯಸ್ಸು ಎಪ್ಪತ್ತರ ಗಡಿ ದಾಟಿದೆ. ಹೀಗಾಗಿ ಬಳ್ಳಾರಿಯಂತೆ ಬೆಳಗಾವಿ ಪಾದಯಾತ್ರೆ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಒಟ್ಟಾರೆ, ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ ಎಂಬ ಮಾತುಗಳ ನಡುವೆಯೂ ಮಹಾರಾಷ್ಟ್ರ ಹಾಗೂ ಹರಿಯಾಣ ಫಲಿತಾಂಶ ಕಾಂಗ್ರೆಸ್ ಗೆ ಒಂದಷ್ಟು ಭರವಸೆ ಮೂಡಿಸಿದೆ. ಹಾಗಾಗಿಯೇ ಸಿದ್ದು ತಮ್ಮ ಯಾತ್ರೆಯ ತಂತ್ರದಿಂದ ಮತ್ತೆ ಅಧಿಕಾರಕ್ಕೇರುತ್ತಾರಾ ಎಂಬುದು ಸದ್ಯದ ಪ್ರಶ್ನೆ.

About the author

Adyot

Leave a Comment