ಆದ್ಯೊತ್ ಸುದ್ದಿನಿಧಿ:
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ‘ ಕಾರ್ಯಕ್ರಮದ ಎರಡನೇ ದಿನ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದರು.

ಪುರಾಣ ಎಂದರೆ ಜನಸಾಮನ್ಯರ ಭಾಷೆಯಲ್ಲಿ ಕಿರಿಕಿರಿ, ರಗಳೆ ಎನ್ನುವು ಹಗುರವಾದ ಮಾತುಗಳು ಇವೆ. ಆದರೆ ನಿಜವಾಗಿ ಪುರಾಣವನ್ನು ಅನುಸಂಧಾನ ಮಾಡಿದಾಗ ಈ ಪ್ರಪಂಚದ ಕಿರಿಕಿರಿ – ರಗಳೆಗಳಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಬಹುದು ಎಂದು ರಾಘವೇಶ್ವರ ಶ್ರೀ ಗಳು ಹೇಳಿದರು.

ಪುರಾಣಗಳು ಹಳತಾದರೂ ಅದು ಇಂದಿಗೂ ಹೊಸತಾದ ವಿಷಯಗಳನ್ನು ಹೊಂದಿದೆ. ಎಲ್ಲಾ ಕಾಲಕ್ಕೂ ಪ್ರಸ್ತುತ ವಿಚಾರಗಳನ್ನು ಹೊತ್ತಿರುವುದು ಪುರಾಣಗಳ ಹೆಚ್ಚುಗಾರಿಕೆಯಾಗಿದೆ. ವೇದಾಂತದಲ್ಲಿನ ವಿಚಾರಗಳನ್ನು ಇನ್ನೊಂದು ರೀತಿಯಲ್ಲಿ ಪ್ರಸ್ತುತ ಪಡಿಸಿ, ಎಲ್ಲಾ ವರ್ಗದ ಜನರನ್ನೂ ಸುಲಭವಾಗಿ ತಲುಪುವ ಮಾಧ್ಯಮ ಪುರಾಣಗಳಾಗಿವೆ. ಯಾವುದೇ ಭೇದ ಭಾವಗಳಿಲ್ಲದೇ ಎಲ್ಲರೂ ಕೂಡ ಪುರಾಣಗಳನ್ನು ಅನುಸಂಧಾನ ಮಾಡಬಹುದಾಗಿದ್ದು, ಪುರಾಣಗಳ ಮೂಲಕ ಸುಲಭವಾಗಿ ತತ್ವ್ತಗಳನ್ನು ಅರಿತುಕೊಳ್ಳಬಹುದು ಎಂದು ಶ್ರೀ ಗಳು ಅಭಿಪ್ರಾಯಪಟ್ಟರು.

ದೊಡ್ಡ ಬ್ರಹ್ಮಾಂಡದಲ್ಲಿ ನಾವು ಚಿಕ್ಕ ಬಿಂದುವಾಗಿದ್ದು, ಸೃಷ್ಟಿಯಲ್ಲಿ ಏನಾಗುತ್ತದೆಯೋ ಅದರ ಪರಿಣಾಮ ನಮ್ಮ ಮೇಲೂ ಆಗುತ್ತದೆ. ಈ ಶರತ್ಕಾಲದಲ್ಲಿ ಆಕಾಶವೂ ನಿರ್ಮಲ, ಭೂಮಿಯೂ ನಿರ್ಮಲ, ಗಾಳಿಯೂ ಶಾಂತ ಎಂಬಂತೆ ಎಲ್ಲವೂ ನಿರ್ಮಲವಾಗಿರುತ್ತದೆ. ನಾವು ಪ್ರಕೃತಿಗೆ ಪೂರಕವಾಗಿದ್ದಾಗ ಈ ನಿರ್ಮಲತೆ ನಮ್ಮ ಮೇಲೂ ಪರಿಣಾಮವನ್ನು ಉಂಟುಮಾಡುತ್ತದೆ. ನಿರ್ಮಲತೆಯೇ ಮುಕ್ತಿಗೆ ಮೆಟ್ಟಿಲಾಗಿದೆ .ಎಲ್ಲಾ ದೇವರ ಜೊತೆ ದೇವಿಯ ಸ್ವರೂಪವಾದ ಶಕ್ತಿಯೂ ಇದ್ದು, ಶಕ್ತಿಯೇ ದೇವರ ಶಕ್ತಿಯಾಗಿದೆ. ಶಕ್ತಿಯನ್ನು ಬಿಟ್ಟು ದೇವರಿಲ್ಲ. ಹಾಗಾಗಿ ಶಕ್ತಿಯ ರೂಪವಾದ ದೇವಿಯ ಆರಾಧಾನೆಗೆ ಯಾವುದೇ ಭೇದವಿಲ್ಲ. ವೈಷ್ಣವ, ಶಾಕ್ತ, ಗಾಣಪತ್ಯ ಇತ್ಯಾದಿ ಯಾವ ದೇವರ ಉಪಾಸಕರಾದರೂ ದೇವಿಯನ್ನು ಆರಾಧಿಸಬಹುದು. ದೇವಿಯನ್ನು ಪ್ರಪಂಚದಲ್ಲಿ ವಿವಿಧ ರೂಪದಲ್ಲಿ ಪೂಜಿಸಿವ ಕ್ರಮವಿದ್ದು, ನವರಾತ್ರದ ಉಪಾಸನೆಯಿಂದ ನಮ್ಮಲ್ಲಿ ನಾವು ಶಕ್ತಿಯನ್ನು ಸಂಚಯಿಸಿಕೊಳ್ಳಬಹುದು ಎಂದರು


ದುರ್ಗಾಮಂಟಪದಲ್ಲಿ ಮೃಣ್ಮಯ ರಾಜರಾಜೇಶ್ವರಿ ದೇವಿಗೆ ಪೂಜೆ, ಶ್ರೀಭದ್ರಕಾಳಿ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ಭಜನಾ ಮಂಡಳಿಗಳಿಂದ ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಸಂಯೋಜಕರಾದ ವಾದಿರಾಜ ಸಾಮಗ, ಶ್ರೀವತ್ಸ ಮುಡಗೋಡು, ದೀಪಕ ಹೆಗಡೆ ಗೋಳಿಕೈ, ಗಾಯತ್ರೀ ಭಾಗ್ವತ್, ಶಿವರಾಜ ಪೆರ್ಮುಖ, ಮಹಾಬಲಗಿರಿ ಕಲ್ಲುಕೊಪ್ಪ, ವಿಠ್ಠಲ ಹೆಗಡೆಕಟ್ಟೆ, ದಿನಪ್ರಧಾನರಾಗಿ ಸತೀಶ ಹೆಗಡೆ ಅಲ್ಮನೆ ದಂಪತಿಗಳು ಉಪಸ್ಥಿತರಿದ್ದರು.
