ಆದ್ಯೊತ್ ಸುದ್ದಿನಿಧಿ::
ರಾಜ್ಯಾದ್ಯಂತ ಆನೆ- ಮನುಷ್ಯನ ನಡುವೆ ಸಂಘರ್ಷ ನಡೆಯುತ್ತಿದ್ದು ಅನೇಕ ಜನರು ಆನೆಯ ದಾಳಿಗೆ ಸಾವನ್ನಪ್ಪಿದ್ದಾರೆ.ಆದರೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಗಾಂವ ಗ್ರಾಮದಲ್ಲಿ ಭತ್ತದ ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು 20 ರಿಂದ 22 ವರ್ಷ ವಯಸ್ಸಿನ ಗಂಡು ಕಾಡಾನೆ ಸಾವನ್ನಪ್ಪಿದೆ.

ಮಳಲಗಾಂವ ಗ್ರಾಮದ ಮಾಲ್ಕಿ ಸರ್ವೆ ನಂ. 72/1 ರ ಜಮೀನಿನ ಸುತ್ತ ಕಾಡಾನೆಗಳ ಹಾವಳಿ ತಡೆಯಲು ಹಾಕಿದ್ದ ತಂತಿಬೇಲಿಗೆ ವಿದ್ಯುತ್ ಲೈನ್ನಿಂದ ನೇರವಾಗಿ ಅನಧಿಕೃತ ಸಂಪರ್ಕ ಕಲ್ಪಿಸಲಾಗಿತ್ತು. ಈ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಸ್ಪರ್ಶಿಸಿದ ಆನೆ ಸ್ಥಳದಲ್ಲೇ ಕೊನೆಯುಸಿರೆಳೆದಿದೆ
ಎಂದು ಅರಣ್ಯ ಇಲಾಖೆಯವರು ಆರೋಪಿಸಿದ್ದಾರೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಬನವಾಸಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ವಿದ್ಯುತ್ ತಂತಿಯನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬನವಾಸಿ ವಲಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (WLOR No. 03/2026-27) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಂಡ ಅಧಿಕಾರಿಗಳು ಮಳಲಗಾಂವ ನಿವಾಸಿಗಳಾದ ಶಿವಪ್ಪ ಬಂಗಾರ್ಯ ನಾಯ್ಕ (75) ಮತ್ತು ಅವರ ಪುತ್ರ ನಾಗರಾಜ ಶಿವಪ್ಪ ನಾಯ್ಕ (43) ಅವರನ್ನು ಸೋಮವಾರ (ನ. 23) ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ, ಗದ್ದೆಯ ಬೇಲಿಗೆ ನೇರ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಳಿಕ ಇಬ್ಬರನ್ನೂ ಶಿರಸಿಯ ಜೆ.ಎಮ್.ಎಫ್.ಸಿ (JMFC) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಅಪರಾಧಕ್ಕೆ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, ಡಿಸಿಎಫ್ ಸಂದೀಪ್ ಸೂರ್ಯವಂಶಿ ಹಾಗೂ ಶಿರಸಿ ಉಪ ವಿಭಾಗದ ಎಸಿಎಫ್ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಬನವಾಸಿ ಆರ್ಎಫ್ಒ ಕಾರ್ತಿಕ ಕಂಬಳಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಎಕ್ಕಂಬಿ ಮತ್ತು ದಾಸನಕೊಪ್ಪ ಶಾಖೆಗಳ ಉಪ ವಲಯ ಅರಣ್ಯಾಧಿಕಾರಿಗಳಾದ ಗಜೇಂದ್ರ ಮೊಗೇರ ಮತ್ತು ಲಕ್ಷ್ಮಣ ವಡ್ಡರ, ವಿವಿಧ ಶಾಖೆಗಳ ಗಸ್ತು ಅರಣ್ಯ ಪಾಲಕರಾದ ಬೋಜು ಚವ್ಹಾಣ (ಬಿಸಲಕೊಪ್ಪ), ಗುಡ್ಡಪ್ಪ ಸೊಪ್ಪಿನ (ದಾಸನಕೊಪ್ಪ), ಮಲ್ಲಿಕಾರ್ಜುನ ಗುದಗಿ (ಶಿವಳ್ಳಿ), ಕನಕಪ್ಪ ತಳವಾರ (ಎಕ್ಕಂಬಿ), ರವಿ ಜಾಡರ (ಸುಗಾವಿ) ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಹೆಚ್.ಎಸ್. ಈಶ್ವರಪ್ಪ ಪಾಲ್ಗೊಂಡಿದ್ದರು.

ಕಳೆದ ಒಂದು ತಿಂಗಳಿನಿಂದ ಶಿರಸಿ ಮತ್ತು ಮುಂಡಗೋಡ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಇಲಾಖೆಯ ಸಿಬ್ಬಂದಿ ಅವುಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡುತ್ತಿದ್ದರೂ ಮತ್ತೆ ಜಮೀನುಗಳತ್ತ ಬರುತ್ತಿವೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆ ರಕ್ಷಣೆಗೆ ಸುರಕ್ಷಿತ ಹಾಗೂ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು. ಅದನ್ನು ಬಿಟ್ಟು ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್ ಹರಿಸಿ ವನ್ಯಜೀವಿಗಳ ಸಾವಿಗೆ ಕಾರಣವಾದರೆ, ಸಂಬಂಧಪಟ್ಟ ಜಮೀನಿನ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
