ಬೆಂಗಳೂರಿನ ಕಿರುಚಿತ್ರೋತ್ಸವದಲ್ಲಿ ಪೂರ್ಣಚಂದ್ರ ಹೆಗಡೆ ನಿರ್ದೇಶನದ “ದಿ ಲಾಸ್ಟ್ ಬ್ರೆಥ್” ಚಿತ್ರಕ್ಕೆ ಪ್ರಥಮ ಸ್ಥಾನ

ಆದ್ಯೊತ್ ಸುದ್ದಿನಿಧಿ:
ಬೆಂಗಳೂರಿನ ಡಾ. ಪುನೀತ್ ರಾಜಕುಮಾರ್
ಆಡಿಟೋರಿಯಂನಲ್ಲಿ ನಡೆದ “ಸಿನಿ ಮಿನಿ” ಕನ್ನಡ ಕಿರುಚಿತ್ರೋತ್ಸವದಲ್ಲಿ ಉತರಕನ್ನಡ ಜಿಲ್ಲೆಯ ಸಿದ್ದಾಪುರದ ಪೂರ್ಣಚಂದ್ರ ಹೆಗಡೆ ಹುಲಿಮನೆ ಕಥೆ ಬರೆದು ನಿರ್ದೇಶಿಸಿದ “ದಿ ಲಾಸ್ಟ್ ಬ್ರೆಥ್”” ಕಿರುಚಿತ್ರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.

ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸತ್ಯ ಹೆಗಡೆ ಆಯೋಜಿಸಿದ್ದ ಸಿನಿ ಮಿನಿ ಕನ್ನಡ ಕಿರುಚಿತ್ರೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಿರುಚಿತ್ರಗಳು ಭಾಗವಹಿಸಿದ್ದವು.


ಯುವ ನಿರ್ದೇಶಕ ಪೂರ್ಣಚಂದ್ರ ಹೆಗಡೆ ಹುಲಿಮನೆ ಅವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಈ ಗೌರವಕ್ಕೆ ಭಾಜನವಾಗಿದೆ.ಪ್ರೇಮದ ಊರಲಿ ಚಲನಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಪೂರ್ಣಚಂದ್ರ ಹೆಗಡೆ ಹುಲಿಮನೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ, ನಿರ್ದೇಶಕ ತರುಣ್ ಸುಧೀರ್, ಶ್ರೀನಿಧಿ ಬೆಂಗಳೂರು, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳು ಹೊಸ ಪ್ರತಿಭೆಗಳಿಗೆ ತಮ್ಮ ಸೃಜನಶೀಲತೆ ಹಾಗೂ ಸಿನಿಮಾ ನಿರ್ಮಾಣದ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತಿವೆ. ಅದರಲ್ಲಿಯೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡುವ ಪ್ರಯೋಗಗಳು ಚಿತ್ರರಂಗದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ. ಈ ಹಿನ್ನೆಲೆಯಲ್ಲಿ ದಿ ಲಾಸ್ಟ್ ಬ್ರೆಥ್ ಚಿತ್ರದ ಸಾಧನೆ ವಿಶೇಷ ಗಮನ ಸೆಳೆದಿದೆ.


ಕಥೆ ಬರವಣಿಗೆ ಮತ್ತು ನಿರ್ದೇಶನದ ಮೂಲಕ ತಮ್ಮದೇ ಆದ ಸಿನಿಮಾ ಭಾಷೆಯನ್ನು ರೂಪಿಸಿಕೊಳ್ಳುತ್ತಿರುವ ಪೂರ್ಣಚಂದ್ರ ಹೆಗಡೆ ಹುಲಿಮನೆ ಕಿರುಚಿತ್ರ ಹಾಗೂ ಎಐ ಆಧಾರಿತ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದು ಸಿನಿಮಿನಿ ಚಿತ್ರೋತ್ಸವದಲ್ಲಿ ಪ್ರಥಮ ಸ್ಥಾನಗಳಿಸಿರುವುದು ಮಹತ್ವದ ಮೈಲುಗಲ್ಲಾಗಿದೆ.

About the author

Adyot

Leave a Comment