ಸಿದ್ದಾಪುರ:ಟಿಎಂಎಸ್ ಸರ್ವಸಾದಾರಣಾ ಸಭೆ

ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಶನಿವಾರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಸರ್ವಸಾಧಾರಣಾ ಸಭೆ ನಡೆಯಿತು.


ಸಭೆಯ ಅಧ್ಯಕ್ಷತೆವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ,ಕಳೆದ ೭೯ ವರ್ಷಗಳಿಂದ ಉತ್ತಮವಾಗಿ ಬೆಳೆಯುತ್ತಿರುವ ಸಂಘವು ಇನ್ನಷ್ಟು ಬೆಳೆಯಲು ಎಲ್ಲರ ಸಹಕಾರ ಬೇಕು. ಎಲೆಚುಕ್ಕಿರೋಗ ಸೇರಿದಂತೆ ಅಡಿಕೆಗೆ ಹಲವು ರೋಗಗಳು ಕಾಡುತ್ತಿದೆ ಬೆಲೆಯ ಅನಿಶ್ಚಿತೆಯಿಂದ ಅಡಿಕೆ ಬೆಳೆಯುವುದು ಲಾಭದಾಯಕವಲ್ಲ ಎಂಬಂತಾಗಿದೆ ಇಂತಹ ಸಮಯದಲ್ಲಿ ಪರ್ಯಾಯ ಬೆಳೆಗಳ ಬಗ್ಗೆ ಯೋಚಿಸಬೇಕಾಗಿದೆ. ನಮ್ಮ ಸಹಕಾರಿ ಸಂಘದಲ್ಲಿ ಸದಸ್ಯರ ಸಾಲ ೧೫೦ಕೋಟಿರೂ.ಗಿಂತ ಹೆಚ್ಚಿದೆ ಉಳಿದ ಸಹಕಾರಿ ಸಂಘ,ಬ್ಯಾಂಕ್ ಸೇರಿದಂತೆ ತಾಲೂಕಿನಲ್ಲಿ ೧೦೦೦ಕೋಟಿರೂ.ಗಿಂತ ಹೆಚ್ಚಿಗೆ ಸಾಲವನ್ನು ನಮ್ಮ ರೈತರು ಮಾಡಿದ್ದಾರೆ ಇದು ಆತಂಕ ಪಡುವ ವಿಷಯವಾಗಿದೆ. ಇದರಲ್ಲಿ ಅನುತ್ಪಾದಕ ಸಾಲವೇ ಹೆಚ್ಚಾಗಿದ್ದು ಇದನ್ನು ಕಡಿಮೆ ಮಾಡುವ ಬಗ್ಗೆ ರೈತರು ಯೋಚಿಸಬೇಕಾಗಿದೆ. ಅವಶ್ಯಕತೆ ಇಲ್ಲದಿದ್ದರೂ ಸಾಲ ಮಾಡಿ ಕಾರು,ಬೈಕ್‌ನಂತಹ ಅನುತ್ಪಾದಕ ವಸ್ತುವನ್ನು ಖರೀದಿ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.


ಟಿಎಂಎಸ್ ಸಂಸ್ಥೆಯು ಸದಸ್ಯರ ಹಿತಕಾಪಾಡುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ವಯಕ್ತಿಕವಾಗಿ ಸದಸ್ಯರಿಗೆ ಸಾಲ ನೀಡಿರುವುದಲ್ಲದೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಮೂಲಕವೂ ಸಾಲ ನೀಡಲಾಗಿದೆ.ಮರಣ ಹೊಂದಿದ ಸದಸ್ಯರಿಗೆ ಹತ್ತುಸಾವಿರರೂ.ನಂತೆ ೫೪ ಜನ ಮರಣ ಹೊಂದಿದ ಸದಸ್ಯರಿಗೆ ನೀಡಲಾಗಿದೆ. ಅನಾರೋಗ್ಯ ಪೀಡಿತ ಸದಸ್ಯರಿಗೆ ೪೧ಲಕ್ಷರೂ. ನೀಡಲಾಗಿದೆ. ಹೀಗೆ ಸದಸ್ಯರ,ರೈತರ ಹಿತ ಕಾಪಾಡುವಲ್ಲಿ ಟಿಎಂಎಸ್ ಮಂಚೂಣಿಯಲ್ಲಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು, ಸಂಘದಲ್ಲಿ ಅತಿ ಹೆಚ್ಚು ವ್ಯವಹಾರ ಮಾಡಿದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಟಿಎಂಎಸ್ ಜೊತೆಗೆ ಉತ್ತಮ ವ್ಯವಹಾರ ನಡೆಸಿದ ದೊಡ್ಮನೆ,ತಾರೇಹಳ್ಳಿ ಕಾನಸೂರು,ಹೆಗ್ಗರಣೆ ಸೇವಾಸಹಕಾರಿ ಸಂಘಗಳಿಗೆ ಸಹಾಯಧನದ ಜೊತೆಗೆ ಸನ್ಮಾನಿಸಲಾಯಿತು.
ಸಭೆಯಲ್ಲಿಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ,
ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಕೆ.ಜಿ.ನಾಗರಾಜ,ವ್ಯವಸ್ಥಾಪಕ ಸತೀಶ ಹೆಗಡೆ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು
ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಜಿ.ಜಿ.ಹೆಗಡೆ ಬಾಳಗೋಡು,ಟಿಎಂಎಸ್ ಉಪವ್ಯವಸ್ಥಾಪಕ ಪ್ರಸನ್ನ ಭಟ್ ನಿರೂಪಣೆ ಮಾಡಿದರು. ನಿರ್ದೇಶಕ ಜಿ.ಎಂ.ಭಟ್ ಕಾಜಿನಮನೆ ವಂದನಾರ್ಪಣೆ ಮಾಡಿದರು.

About the author

Adyot

Leave a Comment