ಆದ್ಯೊತ್ ಸುದ್ದಿನಿಧಿ:
ಅಂಕೋಲಾ ಪಟ್ಟಣದಲ್ಲಿ ಬುಧವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ಯಾಲೆಸ್ಟಿನ್ ರಾಷ್ಟ್ರಧ್ವಜ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕೇಣಿ ಕ್ರಾಸ್ ಹಾಗೂ ಬಂಡಿ ಬಜಾರ್ ರಸ್ತೆಯ ಬಳಿ ಮೆರವಣಿಗೆ ಸಾಗುತ್ತಿದ್ದ ವೇಳೆ, ಕೃಷ್ಣಾಪುರದ ವಿಠ್ಠಲ್ ಘಾಟ್ ಪ್ರದೇಶದ ನಿವಾಸಿ ಮೊಹಮ್ಮದ್ ರಜಾ ಶೇಖ್ (29) ಎಂಬಾತ ಉದ್ದೇಶಪೂರ್ವಕವಾಗಿ ಪ್ಯಾಲೆಸ್ಟಿನ್ ಧ್ವಜವನ್ನು ಪ್ರದರ್ಶಿಸಿದ್ದಾನೆ. ಇದನ್ನು ತಕ್ಷಣವೇ ಗಮನಿಸಿದ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ಅವರು ಸಮಯಪ್ರಜ್ಞೆ ಮೆರೆದು ಸ್ಥಳದಲ್ಲೇ ಮಧ್ಯಪ್ರವೇಶಿಸಿದ್ದಾರೆ. ಅಲ್ಲದೆ, ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರ ಸಹಕಾರದೊಂದಿಗೆ ಆತನ ಬಳಿಯಿದ್ದ ಧ್ವಜವನ್ನು ತ್ವರಿತವಾಗಿ ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪೊಲೀಸರ ತ್ವರಿತ ಕ್ರಮದಿಂದಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ ಮೆರವಣಿಗೆಯು ಸಂಪೂರ್ಣ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಈ ಕುರಿತು ಅಂಕೋಲಾ ಪೊಲೀಸ್ ನಿರೀಕ್ಷಕರು ನೀಡಿದ ಸ್ವಯಂಪ್ರೇರಿತ (ಸುಮೋಟೋ) ದೂರಿನನ್ವಯ, ಬಿ.ಎನ್.ಎಸ್ (BNS) ಕಲಂ 196(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
