ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ವೆಂಕಟೇಶ ನಾಯಕ ಕುಮಟಾ ಆಯ್ಕೆ

ಶಿರಸಿ : ರಾಜ್ಯಾದ್ಯಂತ 36 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ – ಜಿಲ್ಲಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ವೆಂಕಟೇಶ ನಾಯಕ ಕುಮಟಾ ಆಯ್ಕೆಯಾಗಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಪದಾಧಿಕಾರಿಗಳ ಮೂರು ವರ್ಷಗಳ (2016-2019) ಅವಧಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ, 2019ರ ಅಂತ್ಯದಲ್ಲಿ ಸಂಘಟನೆಯ ಪುನಾರಚನೆಯ ಪ್ರಕ್ರಿಯೆ ಆರಂಭವಾಗಿತ್ತು. ಮೊಬೈಲ್ ಮಿಸ್ಡ್ ಕಾಲ್ ಮೂಲಕ ಈ ಬಾರಿಯೂ ಹೆಚ್ಚುವರಿಯಾಗಿ ಸದಸ್ಯರನ್ನು ಸೇರಿಸಿಕೊಂಡ ಬಿಜೆಪಿ ಪಾಳಯದಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ಯಕರ್ತರಿಗೆ ಹೊಸದಾಗಿ ಅಧಿಕಾರ ನೀಡುವ ಪದ್ಧತಿಯಿದೆ.

ಅಂತೆಯೇ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿ ಇತ್ತೀಚೆಗೆ ಜೆ ಪಿ ನಡ್ಡಾ ಆಯ್ಕೆಯಾಗಿದ್ದರು. ಜೊತೆ-ಜೊತೆಗೆ 36 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಕಾರ್ಯ ಕೂಡ ಆರಂಭವಾಗಿದ್ದು – ಈಗಾಗಲೇ 18 ಜಿಲ್ಲೆಗಳ ಅಧ್ಯಕ್ಷರುಗಳ ಆಯ್ಕೆ ಆಗಿತ್ತು. ಉತ್ತರ ಕನ್ನಡ ಸೇರಿದಂತೆ ಬಾಕಿ ಉಳಿದ ಜಿಲ್ಲೆಗಳಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯ, ಕುಮಟಾ ತಾಲೂಕಿನ ವೆಂಕಟೇಶ ನಾಯಕ ಅವರು ಜಿಲ್ಲಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಜಿಲ್ಲೆ ಹಾಗೂ ರಾಜ್ಯ ಸಮಿತಿಗಳ ಪದಾಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಬಳಿಕ ಇಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಾಗಿದೆ.

ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಕೆ ಜಿ ನಾಯ್ಕ ಹಣಜಿಬೈಲ್ ಅವಧಿ ಪೂರ್ಣಗೊಂಡಿತ್ತು. ಇವರ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದಿಂದ ನಾಲ್ವರು ಶಾಸಕರು ಆಯ್ಕೆಗೊಂಡಿದ್ದು, ನಂತರ ನಡೆದ ಉಪಚುನಾವಣೆಯಲ್ಲೂ ಕೂಡ ಒಬ್ಬರು ಶಾಸಕರು ಆಯ್ಕೆಗೊಂಡಿದ್ದರು.

ಬಿಜೆಪಿ ಪಕ್ಷದಲ್ಲಿ ಒಂದು ಅವಧಿಗೆ ಅಧ್ಯಕ್ಷ ಸ್ಥಾನ ಪೂರ್ಣಗೊಂಡ ನಂತರ ಇನ್ನೊಂದು ಅವಧಿಗೆ ಅವರನ್ನ ಮುಂದುವರೆಸುವ ಪ್ರಕ್ರಿಯೆ ಇಲ್ಲದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ ನಾಯಕ ಕುಮಟಾ ಅವರನ್ನು ಆಯ್ಕೆ ಮಾಡಲಾಗಿದೆ.

About the author

Adyot

Leave a Comment